ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ ಪರವಾಗಿ ನಡೆದ ಅಭಿಯಾನದ ನೇತೃತ್ವ ವಹಿಸಿದ್ದ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಈ ಕಂಪನಿಗಳು ಭಾರತದಲ್ಲಿ ಕೆಲಸ ಮುಂದುವರಿಸಬೇಕು ಎಂದಾದಲ್ಲಿ ಅವು ಭಾರತದ ಕಾನೂನುಗಳನ್ನು ಪಾಲಿಸಬೇಕು ಎಂದು ಸಚಿವ ಪ್ರಸಾದ್ ಹೇಳಿದ್ದಾರೆ. ಹೊಸ ಐ.ಟಿ. ನಿಯಮಗಳು ಹಿಂದಿನ ತಿಂಗಳು ಜಾರಿಗೆ ಬಂದಿವೆ.
ಈ ನಿಯಮಗಳಲ್ಲಿ ಇರುವ ಕೆಲವು ಅಂಶಗಳ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಸಾಮಾಜಿಕ ಜಾಲತಾಣ ಕಂಪನಿಗಳ ನಡುವೆ ಹಗ್ಗಜಗ್ಗಾಟ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುವ ಅನಿಸಿಕೆ, ಅಭಿಪ್ರಾಯಗಳನ್ನು, ಡಿಜಿಟಲ್ ಸುದ್ದಿ ಮಾಧ್ಯಮಗಳನ್ನು ನಿಯಂತ್ರಣಕ್ಕೆ ತರುವ ಅವಕಾಶ ಈ ನಿಯಮಗಳ ಅಡಿ ಇದೆ. ಸಾಮಾಜಿಕ ಜಾಲತಾಣಗಳನ್ನು ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮ ಗಳನ್ನು ಸರ್ಕಾರದ ಮೇಲ್ವಿಚಾರಣೆಯ ಅಡಿ ತರುವ ಉದ್ದೇಶ ಇದು. ಈ ಬಗೆಯ ನಿಯಂತ್ರಣ ಹಾಗೂ ಮೇಲ್ವಿಚಾರಣೆ ವಿಚಾರದಲ್ಲಿ ಇರುವ ಪ್ರಮುಖ ತಕರಾರು ಇವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತವೆ ಎಂಬುದು. ಭಾರತದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಸಾಮಾಜಿಕ ಜಾಲತಾಣ ಕಂಪನಿಗಳಲ್ಲಿ ಹೆಚ್ಚಿನವು ವಿದೇಶಿ ಮೂಲದವಾಗಿದ್ದರೂ, ಅವುಗಳನ್ನು ಬಳಸಿಕೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುವವರು ಭಾರತದ ಪ್ರಜೆಗಳು. ಅಂದರೆ, ಈ ಕಂಪನಿಗಳು ನಡೆಸುವ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ವಸ್ತು–ವಿಷಯಗಳನ್ನು ನಿಯಂತ್ರಿಸುವುದು ದೇಶದ ಪ್ರಜೆಗಳ ಹಕ್ಕುಗಳಿಗೆ ಅಡ್ಡಿ ಉಂಟು ಮಾಡುವಂಥದ್ದಾಗುತ್ತದೆ.
‘ಅಭಿವ್ಯಕ್ತಿ ಸ್ವಾತಂತ್ರ್ಯ’ ಹಾಗೂ ‘ಪ್ರಜಾತಂತ್ರ’ದ ಬಗ್ಗೆ ಭಾರತಕ್ಕೆ ಪಾಠ ಹೇಳಿಕೊಡಲು ಬರಬೇಡಿ ಎಂದು ಸಚಿವರು ಸಾಮಾಜಿಕ ಜಾಲತಾಣ ಕಂಪನಿಗಳಿಗೆ ತಾಕೀತು ಮಾಡಿದ್ದಾರೆ. ಕಂಪನಿಗಳು ಭಾರತದಲ್ಲಿ ತಮ್ಮ ವಾಣಿಜ್ಯ ವಹಿವಾಟು ಮುಂದು ವರಿಸಬೇಕು ಎಂದಾದರೆ ‘ಭಾರತದ ಸಂವಿಧಾನ ಹಾಗೂ ಭಾರತದ ಕಾನೂನುಗಳನ್ನು’ ಪಾಲಿಸಬೇಕು ಎಂದೂ ಸಚಿವರು ಹೇಳಿದ್ದಾರೆ. ನಿಜ, ವಿದೇಶಿ ಕಂಪನಿಗಳು ಭಾರತದ ಕಾನೂನುಗಳನ್ನು ಪಾಲಿಸಲೇಬೇಕು. ಅವು ಭಾರತೀಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಪ್ರಜಾತಂತ್ರದ ಬಗ್ಗೆ ಬೋಧನೆ ಮಾಡಬೇಕಾದ ಅಗತ್ಯ ಇಲ್ಲ. ಆದರೆ, ಟೂಲ್‌ಕಿಟ್ ಬಗ್ಗೆ ಅಥವಾ ಜನರ ಮೇಲೆ ದಾಳಿ ನಡೆದಾಗ ಟ್ವೀಟ್ ಮಾಡಿದ್ದಕ್ಕೆ, ಕೆಲವು ಘಟನೆಗಳ ಬಗ್ಗೆ ವರದಿ ಮಾಡಿದ್ದಕ್ಕೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾದಾಗ ದೇಶದ ಜನ ಕಳವಳಗೊಳ್ಳಬೇಕಾಗುತ್ತದೆ. ಕಂಪನಿಗಳು ಭಾರತದ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು.
ಹಾಗೆಯೇ, ಕಂಪನಿಗಳು ಪಾಲಿಸಬೇಕಿರುವ ಕಾನೂನುಗಳನ್ನು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರೂಪಿಸಬೇಕಾಗುತ್ತದೆ. ಹಾಗೆ ರೂಪಿಸದೆ ಇದ್ದರೆ, ಅವುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಂದೇಶದ ಮೂಲ ಎಲ್ಲಿದೆ ಎಂಬುದನ್ನು ಬಹಿರಂಗಪಡಿಸಬೇಕಾಗುತ್ತದೆ ಎನ್ನುವ ಬೇಡಿಕೆಯು, ಸಂವಿಧಾನ ಖಾತರಿಪಡಿಸಿರುವ ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ಹೇಳಲಾಗುತ್ತಿದೆ. ಐ.ಟಿ. ನಿಯಮಗಳು ಮಾಹಿತಿ ತಂತ್ರ ಜ್ಞಾನ ಕಾಯ್ದೆಯ ವ್ಯಾಪ್ತಿಯನ್ನೂ ಮೀರಿದ್ದಾಗಿವೆ, ಈ ನಿಯಮಗಳಿಗೆ ಶಾಸನಾತ್ಮಕ ಬೆಂಬಲ ಇಲ್ಲ ಎಂಬ ಮಾತುಗಳು ಇವೆ. ಇಂತಹ ಕೆಲವು ವಿಚಾರಗಳು ಈಗ ನ್ಯಾಯಾಲಯದ ಅಂಗಳದಲ್ಲಿ ಇವೆ. ನ್ಯಾಯಾಲಯದ ತೀರ್ಮಾನ ಪ್ರಕಟ ಆಗುವವರೆಗೆ ಸಚಿವರು ಕಾಯಬೇಕು.
‘ಭಾರತದಲ್ಲಿ ಚುನಾವಣೆಗಳು ಮುಕ್ತವಾಗಿಯೂ ನ್ಯಾಯಸಮ್ಮತವಾಗಿಯೂ ನಡೆಯುತ್ತವೆ. ಇಲ್ಲಿ ಸ್ವತಂತ್ರವಾದ ನ್ಯಾಯಾಂಗ ಇದೆ. ಮಾಧ್ಯಮಗಳು ಹಾಗೂ ನಾಗರಿಕ ಸಮಾಜ ಇಲ್ಲಿ ಸ್ವತಂತ್ರವಾಗಿ ಕೆಲಸ ಮಾಡುತ್ತಿವೆ’ ಎಂದು ಸಚಿವರು ಹೇಳಿದ್ದಾರೆ. ಇಂತಹ ಮಾತುಗಳ ಆಶಯಕ್ಕೆ ವಿರುದ್ಧವಾಗಿರುವ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಆಗುವುದಿಲ್ಲ. ಅವರು ಆಡಿರುವ ಮಾತುಗಳಲ್ಲಿ ಸತ್ಯವೆಷ್ಟಿದೆ, ಸುಳ್ಳು ಎಷ್ಟಿದೆ ಎಂಬುದು ಈಗ ಹಲವೆಡೆ ಪ್ರಶ್ನೆಗೆ ಒಳಗಾಗಿದೆ. ಹೊಸ ಐ.ಟಿ. ನಿಯಮಗಳು ಸಾಮಾಜಿಕ ಜಾಲತಾಣಗಳನ್ನು ‘ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಮಾತ್ರ ಅನ್ವಯಿಸುತ್ತವೆ’ ಎಂದು ಸಚಿವರು ಹೇಳಿರುವ ಮಾತು ವಿಶ್ವಾಸಾರ್ಹವಾಗಿಲ್ಲ. ಅವು ಕೊನೆಯಲ್ಲಿ ಸರ್ಕಾರವು ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ದಾರಿ ಮಾಡಿಕೊಡಬಹುದು.
ಕೇಂದ್ರ ಸರ್ಕಾರವು ತನ್ನ ಕೆಲವು ಕ್ರಮಗಳಿಗೆ ವಿರುದ್ಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೀಕ್ಷ್ಣ ಅಭಿಪ್ರಾಯಗಳು ವ್ಯಕ್ತವಾಗುವುದು ಆರಂಭವಾದ ನಂತರ ಈ ನಿಯಮಗಳನ್ನು ಜಾರಿಗೆ ತಂದಿದೆ, ನಿಯಮಗಳನ್ನು ಕಂಪನಿಗಳು ಪಾಲಿಸಲೇಬೇಕು ಎಂದು ಖಡಾಖಂಡಿತವಾಗಿ ಹೇಳುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ, ಕೃಷಿಗೆ ಸಂಬಂಧಿಸಿದ ಮೂರು ಕಾನೂನುಗಳು, ಕಾಶ್ಮೀರ ಸಮಸ್ಯೆಯನ್ನು ಕೇಂದ್ರವು ನಿಭಾಯಿಸಿದ ಬಗೆ, ದೇಶದ ಅರ್ಥ ವ್ಯವಸ್ಥೆಯಲ್ಲಿ ಕಂಡುಬಂದಿರುವ ಕುಸಿತ... ಇಂಥವುಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜನರ ಅಭಿಪ್ರಾಯವು ಜಗತ್ತಿನ ಹಲವೆಡೆ ಅನುರಣಿಸುತ್ತಿದೆ. ಇದು ಕೇಂದ್ರ ಸರ್ಕಾರಕ್ಕೆ ರುಚಿಸದಂತೆ ಆಯಿತೇ? ಭಾರತೀಯ ಸಮಾಜದ ನಿರ್ದಿಷ್ಟ ಸಮುದಾಯವೊಂದನ್ನು ಉದ್ದೇಶಿಸಿ ದ್ವೇಷ ಹರಡುವ ವಸ್ತು–ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹೇರಳವಾಗಿ ಹರಿದಾಡುತ್ತವೆ. ಇವು ದೇಶದ ಸಾಮರಸ್ಯ ಕದಡುವ ಶಕ್ತಿ ಹೊಂದಿವೆ. ಆದರೆ, ಇಂತಹ ಸಂದೇಶಗಳ ವಿಚಾರದಲ್ಲಿ ಕೇಂದ್ರದ ಸಚಿವರು ವೀರಾವೇಶದಿಂದ ಮಾತನಾಡಿದ ನಿದರ್ಶನಗಳು ನಗಣ್ಯ. ಇದು ಏನನ್ನು ಸೂಚಿಸುತ್ತದೆ? ಇಬ್ಬಂದಿತನವನ್ನೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.