ದೇಶದ ಬಾಹ್ಯಾಕಾಶ ವಲಯದಲ್ಲಿ ಹೆಚ್ಚಿನ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ ಹೆಜ್ಜೆ. ಇದು ಈಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ನೀತಿಯ ಸಹಜ ಫಲ. ಉಪಗ್ರಹ ತಯಾರಿಕೆ, ಉಪಗ್ರಹ ನಿರ್ವಹಣೆ ಹಾಗೂ ಉಪಗ್ರಹ ದತ್ತಾಂಶಕ್ಕೆ ಸಂಬಂಧಿಸಿದ ಉತ್ಪನ್ನಗಳ ವಲಯದಲ್ಲಿ ಶೇ 74ರಷ್ಟು ವಿದೇಶಿ ಬಂಡವಾಳದ ನೇರ ಹೂಡಿಕೆಗೆ ಹೊಸ ನೀತಿಯು ಅವಕಾಶ ಕಲ್ಪಿಸುತ್ತದೆ. ಉಪಗ್ರಹ ಉಡಾವಣಾ ವಾಹನಗಳ ವಲಯದಲ್ಲಿ ಶೇ 49ರಷ್ಟು ವಿದೇಶಿ ನೇರ ಬಂಡವಾಳಕ್ಕೆ ಹಾಗೂ ಉಪಗ್ರಹ ವಲಯದ ಬಿಡಿಭಾಗಗಳ ತಯಾರಿಕೆಯಲ್ಲಿ ಶೇ 100ರವರೆಗೆ ಎಫ್‌ಡಿಐಗೆ ಇದು ಅವಕಾಶ ನೀಡುತ್ತದೆ. ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶ ಕಲ್ಪಿಸಿದ ಸುಧಾರಣಾ ಕ್ರಮಗಳ ಮುಂದುವರಿಕೆಯ ಭಾಗ ಇದು. ಅಲ್ಲದೆ, ಇದು ಈ ವಲಯದಲ್ಲಿ ಸರ್ಕಾರದ ಹಿಡಿತವನ್ನು ತಗ್ಗಿಸುವ ಒಂದು ಕ್ರಮವೂ ಹೌದು. 2023ರ ಭಾರತೀಯ ಬಾಹ್ಯಾಕಾಶ ನೀತಿಯು ‘ಬಾಹ್ಯಾಕಾಶ ವಲಯದಲ್ಲಿ ವಾಣಿಜ್ಯಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ’ ಪ್ರಸ್ತಾವ ಹೊಂದಿದೆ ಹಾಗೂ ಆ ನೀತಿಯು ಬಾಹ್ಯಾಕಾಶಕ್ಕೆ ಸಂಬಂಧಿಸಿದ ಆರ್ಥಿಕ ಚಟುವಟಿಕೆಗಳಲ್ಲಿ ಖಾಸಗಿ ವಲಯವನ್ನು ಮಹತ್ವದ ಪಾಲುದಾರ ಎಂದು ಗುರುತಿಸುತ್ತದೆ. ನೀತಿಯ ಅನುಷ್ಠಾನಕ್ಕೆ ಶಾಸನಾತ್ಮಕವಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಸ್ತಾವಗಳಿಗೆ ಒಂದೇ ಕಡೆಯಲ್ಲಿ ಅನುಮೋದನೆ ನೀಡಲು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ದೃಢೀಕರಣ ಕೇಂದ್ರದ ಪರಿಕಲ್ಪನೆಯನ್ನು ರೂಪಿಸಲಾಗಿದೆ.
ಹೊಸ ನೀತಿಯು ಬಾಹ್ಯಾಕಾಶ ವಲಯಕ್ಕೆ ಹೊಸ ತಂತ್ರಜ್ಞಾನ ಹಾಗೂ ಹೊಸ ಬಂಡವಾಳವನ್ನು ಆಕರ್ಷಿಸುವ ನಿರೀಕ್ಷೆ ಇದೆ. ಈ ವಲಯವು ಹೆಚ್ಚಿನ ಬಂಡವಾಳವನ್ನು ಬಯಸುವಂಥದ್ದು ಹಾಗೂ ಇಲ್ಲಿಗೆ ಅಗತ್ಯವಿರುವ ತಂತ್ರಜ್ಞಾನಗಳು ಬಹಳ ಸಂಕೀರ್ಣವಾದವೂ ಹೌದು. ದೇಶದ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಜಗತ್ತಿನ ಪ್ರಮುಖ ಕಂಪನಿಗಳು ತೊಡಗಿಸಿಕೊಳ್ಳಬೇಕು ಎಂಬುದು ಈ ನೀತಿಯ ಉದ್ದೇಶ. ಅಂದರೆ, ದೊಡ್ಡ ಹಾಗೂ ಸಣ್ಣ ಕಂಪನಿಗಳು, ಹೂಡಿಕೆದಾರರು, ತಂತ್ರಜ್ಞಾನ ಅಭಿವೃದ್ಧಿಪಡಿಸು
ವವರು ಇಲ್ಲಿಗೆ ಬರಬೇಕು ಎಂಬುದು ನೀತಿಯ ಅನುಷ್ಠಾನದ ಹಿಂದಿನ ಬಯಕೆ. ಉಪಗ್ರಹಗಳ ಉಡ್ಡಯನಕ್ಕೆ ಬಳಸುವ ವಾಹನಗಳ ತಯಾರಿಕೆ ಹಾಗೂ ಆ ವಾಹನಗಳ ಬಿಡಿಭಾಗಗಳ ತಯಾರಿಕೆಯು ಇನ್ನು ಮುಂದೆ ದೇಶದಲ್ಲಿ ಹೆಚ್ಚು ಚುರುಕು ಪಡೆದುಕೊಳ್ಳಬಹುದು ಎಂಬ ನಿರೀಕ್ಷೆ ಇದೆ. ಏಕೆಂದರೆ ಈ ವಲಯದ ಕಂಪನಿಗಳು ಇನ್ನು ಮುಂದೆ ವಿದೇಶಿ ಬಂಡವಾಳವನ್ನು ಪಡೆಯಲು ಸಾಧ್ಯವಾಗುತ್ತದೆ, ಅದನ್ನು ಬಳಸಿ ತಮ್ಮ ತಯಾರಿಕಾ ಸಾಮರ್ಥ್ಯವನ್ನು ಹೆಚ್ಚುಮಾಡಿಕೊಳ್ಳಲು ಆಗುತ್ತದೆ. ಉಡ್ಡಯನ ವಾಹನ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಶೇ 49ಕ್ಕೆ ಮಿತಿಗೊಳಿಸಿರುವುದು, ವಿದೇಶಿ ಹೂಡಿಕೆ ಆಕರ್ಷಿಸುವ ಅಗತ್ಯ ಹಾಗೂ ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಬಿಂಬಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ. ಈ ಪ್ರಮಾಣದ ವಿದೇಶಿ ನೇರ ಬಂಡವಾಳದಿಂದ ದೇಶದ ಕಂಪನಿಗಳಿಗೆ ನಿರ್ಣಯ ಕೈಗೊಳ್ಳುವ ವಿಚಾರದಲ್ಲಿ ಸ್ವಾತಂತ್ರ್ಯ ಹೊಂದಿರುವುದಕ್ಕೆ ಸಾಧ್ಯವಾಗುತ್ತದೆ; ಅದರ ಜೊತೆಯಲ್ಲೇ, ಕಂಪನಿಗಳಿಗೆ ವಿದೇಶಿ ಹೂಡಿಕೆ, ವಿದೇಶಿ ತಂತ್ರಜ್ಞಾನ ಹಾಗೂ ವಿದೇಶಿ ಕಂಪನಿಗಳ ಪರಿಣತಿಯ ನೆರವು ಪಡೆಯಲೂ ಅವಕಾಶ ಸಿಗುತ್ತದೆ.
ಜಾಗತಿಕ ಮಟ್ಟದಲ್ಲಿ ಬಾಹ್ಯಾಕಾಶ ಚಟುವಟಿಕೆಗಳ ಸುತ್ತ ನಿರ್ಮಾಣ ಆಗಿರುವ ಮಾರುಕಟ್ಟೆಯಲ್ಲಿ
ಭಾರತದ ಪಾಲು ಈಗ ಶೇಕಡ 2ರಷ್ಟು ಇದೆ. ಇದನ್ನು 2032ರ ಸುಮಾರಿಗೆ ಐದು ಪಟ್ಟು ಹೆಚ್ಚು ಮಾಡಬೇಕು ಎಂಬ ಗುರಿಯನ್ನು ಕೇಂದ್ರವು ಹೊಂದಿದೆ. ಈ ಗುರಿಗೆ ಅನುಗುಣವಾಗಿ, ಈ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಬಾಹ್ಯಾಕಾಶ ಚಟುವಟಿಕೆಗಳ ಸುತ್ತಲಿನ ಅರ್ಥ ವ್ಯವಸ್ಥೆಯು ಆ ಹೊತ್ತಿಗೆ 47.3 ಬಿಲಿಯನ್ ಡಾಲರ್ (ಅಂದಾಜು ₹ 3.92 ಲಕ್ಷ ಕೋಟಿ) ಆಗಲಿದೆ ಎಂಬ ನಿರೀಕ್ಷೆ ಇದೆ. ಕೇಂದ್ರವು ಈಗ ಕೈಗೊಂಡಿರುವ ತೀರ್ಮಾನವನ್ನು ಉದ್ಯಮ ವಲಯವು ಸ್ವಾಗತಿಸಿದೆ. ಅಲ್ಲದೆ, ಮುಂದಿನ ಹತ್ತು ವರ್ಷಗಳಲ್ಲಿ ಈ ತೀರ್ಮಾನದ ಕಾರಣದಿಂದಾಗಿ ಹೊಸದಾಗಿ ₹ 2 ಲಕ್ಷ ಕೋಟಿಯಷ್ಟು ಬಂಡವಾಳ ಹರಿದುಬರಬಹುದು ಎಂದು ಅಂದಾಜು ಮಾಡಿದೆ. ಕೆಲವು ವಲಯಗಳಲ್ಲಿ ಶೇ 74ರಷ್ಟು ಮಾತ್ರ ಎಫ್‌ಡಿಐ ಹೂಡಿಕೆಗೆ ಅವಕಾಶ ಕಲ್ಪಿಸಿರುವುದು ಜಾಗತಿಕ ಬಂಡವಾಳ ಆಕರ್ಷಣೆಗೆ ಸಾಕಾಗುವುದಿಲ್ಲ ಎಂಬ ಅಭಿಪ್ರಾಯ ಒಂದೆಡೆ ಇದೆ. ಅದೇನೇ ಇದ್ದರೂ, ಕೇಂದ್ರವು ತೆಗೆದುಕೊಂಡಿರುವ ತೀರ್ಮಾನದ ವಿಚಾರವಾಗಿ ಒಟ್ಟಾರೆ ಅಭಿಪ್ರಾಯವು ಸಕಾರಾತ್ಮಕವಾಗಿಯೇ ಇದೆ. ಈ ತೀರ್ಮಾನವು ವಾಣಿಜ್ಯ ಉದ್ದೇಶಗಳನ್ನು ಮಾತ್ರ ಗಮನದಲ್ಲಿ ಇರಿಸಿಕೊಂಡಿದೆ ಎಂದು ಭಾವಿಸಬೇಕಿಲ್ಲ. ಯುದ್ಧತಂತ್ರಗಳ ದೃಷ್ಟಿಯಿಂದಲೂ ಮಹತ್ವದ್ದಾಗಿರುವ ಕೆಲವು ವಲಯಗಳಲ್ಲಿ ದೇಶವು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಇದು ನೆರವಾಗಬಲ್ಲದು. ಮುಂದಿನ ಕೆಲವು ವರ್ಷಗಳವರೆಗೆ ಭಾರತವು ಮಹತ್ವಾಕಾಂಕ್ಷೆಯ ಹಲವು ಬಾಹ್ಯಾಕಾಶ ಯೋಜನೆಗಳನ್ನು ಹಮ್ಮಿಕೊಂಡಿದೆ. ಆ ಯೋಜನೆಗಳಿಗೆ ಬೆಂಬಲವಾಗಿ ನಿಲ್ಲುವ ನೀತಿಗಳು ಇಡೀ ವಲಯದ ಶಕ್ತಿಯನ್ನು ಹೆಚ್ಚಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.