ADVERTISEMENT

ಫುಟ್‌ಬಾಲ್ ಜಗತ್ತಿನಲ್ಲಿ ಪುಟಿದೆದ್ದ ಹೊಸತನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2018, 19:41 IST
Last Updated 16 ಜುಲೈ 2018, 19:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಫ್ರಾನ್ಸ್‌ ದೇಶದ ಬೀದಿಗಳಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಆರಂಭವಾಗಿರುವ ವಿಜಯೋತ್ಸವ, ಸಂಭ್ರಮಗಳ ಭರಾಟೆ ಕರಗಲು ಇನ್ನೂ ಕೆಲವು ದಿನಗಳು ಬೇಕು. ರಷ್ಯಾದಲ್ಲಿ ನಡೆದ 21ನೇ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಹ್ಯುಗೊ ಲಾರಿಸ್ ನಾಯಕತ್ವದ ಫ್ರಾನ್ಸ್‌ ತಂಡದ ವಿಜಯವು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯಲಿದೆ.20 ವರ್ಷಗಳ ನಂತರ ಫ್ರಾನ್ಸ್‌ ಫುಟ್‌ಬಾಲ್ ತಂಡವು ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. ಈ ಕಾಲದ ಫುಟ್‌ಬಾಲ್‌ನಲ್ಲಿ ಯಾವ ತಂಡವೂ ದುರ್ಬಲ ಅಲ್ಲ ಎಂಬುದನ್ನು ತೋರಿಸಿಕೊಟ್ಟ ಈ ಟೂರ್ನಿಯಲ್ಲಿ ಜಯಿಸಿದ್ದು ಮಹಾಸಾಧನೆಯೇ ಸರಿ. ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಕ್ರೊವೇಷ್ಯಾ ತಂಡವು ಇದಕ್ಕೆ ಉತ್ತಮ ನಿದರ್ಶನ. ವಿಶ್ವಕಪ್ ಆರಂಭಕ್ಕೂ ಮುನ್ನ ಕ್ರೊವೇಷ್ಯಾ ಬಗ್ಗೆ ಫುಟ್‌ಬಾಲ್ ಪಂಡಿತರು ಮಾತನಾಡಿದ್ದೇ ಕಡಿಮೆ. ಆದರೆ, ಲೂಕಾ ಮಾಡ್ರಿಚ್ ನಾಯಕತ್ವದ ಕ್ರೊವೇಷ್ಯಾ ಬಲಾಢ್ಯ ತಂಡಗಳಿಗೆ ನೀರು ಕುಡಿಸಿ ಫೈನಲ್‌ ಪ್ರವೇಶಿಸಿತು. ಆಗ ಕ್ರೊವೇಷ್ಯಾ ಗೆಲ್ಲಲಿ ಎಂದು ಭಾರತವೂ ಸೇರಿದಂತೆ ಹಲವು ದೇಶಗಳ ಅಭಿಮಾನಿಗಳು ಹಾರೈಸಿದ್ದರು. ಅಂತಿಮ ಹಣಾಹಣಿಯಲ್ಲಿಯೂ ಕ್ರೊವೇಷ್ಯಾ ದಿಟ್ಟತನದಿಂದಲೇ ಹೋರಾಡಿತು. ಆದರೆ, ಫ್ರಾನ್ಸ್‌ ತಂಡಕ್ಕೆ ಪಾಲ್ ಪೋಗ್ಬಾ, ಆ್ಯಂಟೋನ್ ಗ್ರೀಜ್‌ಮನ್, ಕೈಲಿಯನ್ ಬಾಪೆ ಅವರು ಗಳಿಸಿದ ಗೋಲುಗಳು ಜಯದ ಹಾದಿ ತೋರಿದವು. ಕ್ರೊವೇಷ್ಯಾ ಕೂಡ ಎರಡು ಗೋಲುಗಳನ್ನು ಗಳಿಸಿತು. ಆದರೆ ಒಂದು ‘ಉಡುಗೊರೆ’ ಗೋಲು ಕೊಟ್ಟು ಕೈಸುಟ್ಟುಕೊಂಡಿತು. ಅದೇನೆ ಇರಲಿ, ಯುದ್ಧ ನಿರಾಶ್ರಿತರ ಶಿಬಿರಗಳಲ್ಲಿ ಬಾಲ್ಯ ಕಳೆದ ಲೂಕಾ ಮಾಡ್ರಿಚ್ ಈಗ ತಮ್ಮ ದೇಶದ ಯುವಜನಾಂಗದ ಕಣ್ಮಣಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ರನ್ನರ್ಸ್ ಅಪ್ ಆಗಿರುವ ತಂಡವು ಮುಂದೊಂದು ದಿನ ವಿಶ್ವಕಪ್ ಗೆಲ್ಲುವುದು ಖಚಿತ. ಪ್ರಶಸ್ತಿ ಜಯಿಸುವ ನೆಚ್ಚಿನ ತಂಡಗಳಾಗಿ ಕಣಕ್ಕಿಳಿದಿದ್ದ ಅರ್ಜೆಂಟೀನಾ, ಬ್ರೆಜಿಲ್, ಪೋರ್ಚುಗಲ್, ಸ್ಪೇನ್ ತಂಡಗಳು ಬೇಗನೆ ಹೊರಬಿದ್ದವು. ಇದು ಆ ದೇಶಗಳಿಗೆ ಎಚ್ಚರಿಕೆಯ ಗಂಟೆಯೂ ಹೌದು.

ಫ್ರಾನ್ಸ್‌ನ ಕ್ರೀಡಾರಂಗ ಮತ್ತು ಸಾಮಾಜಿಕ ವಲಯಗಳಲ್ಲಿ ಈ ವಿಶ್ವಕಪ್ ವಿಜಯವು ಹೊಸ ಸುಧಾರಣೆಗಳಿಗೆ ಕಾರಣವಾದರೆ ಅಚ್ಚರಿಯಿಲ್ಲ. ಕ್ಯಾಮರೂನ್‌ನಿಂದ ವಲಸೆ ಬಂದು ನೆಲೆಸಿರುವ ಕಪ್ಪು ಜನಾಂಗದ ಪ್ರತಿಭೆಗಳು ಇವತ್ತು ಫ್ರೆಂಚರ ನಾಡಿಗೆ ಕಿರೀಟ ತೊಡಿಸಿದ್ದಾರೆ. ಫೈನಲ್ ಪಂದ್ಯದ ನಂತರ ಫ್ರಾನ್ಸ್‌ ದೇಶದ ಆಟಗಾರರು ಕ್ರೊವೇಷ್ಯಾದವರನ್ನು ಅಭಿನಂದಿಸಿದ ರೀತಿ, ಗಣ್ಯರ ಗ್ಯಾಲರಿಯಲ್ಲಿ ಉಭಯ ದೇಶಗಳ ಅಧ್ಯಕ್ಷರು ಪರಸ್ಪರ ಅಭಿನಂದಿಸಿದ ರೀತಿಯು ಕ್ರೀಡಾ ಸ್ಫೂರ್ತಿಯ ದ್ಯೋತಕವಾಗಿತ್ತು. 2006ರ ವಿಶ್ವಕಪ್ ಫೈನಲ್‌ನಲ್ಲಿ ಫ್ರಾನ್ಸ್‌ನ ಜಿನೆದಿನ್ ಜಿದಾನ್, ಎದುರಾಳಿ ತಂಡದ ಆಟಗಾರನಿಗೆ ಡಿಚ್ಚಿ ಹೊಡೆದು ಬೀಳಿಸಿದ್ದ ಘಟನೆಯ ಕಳಂಕವನ್ನು ಈ ಸಲದ ಬಳಗವು ತೊಳೆದುಹಾಕಿದೆ. ಎರಡು ವರ್ಷಗಳ ಹಿಂದೆ ಭ್ರಷ್ಟಾಚಾರದ ಹಗರಣದಲ್ಲಿ ಬಸವಳಿದಿದ್ದ ಫಿಫಾ ಕೂಡ ಈಗ ಪುಟಿದೆದ್ದು ನಿಂತಿದೆ. ಇಷ್ಟೆಲ್ಲದರ ನಡುವೆ ಈ ಟೂರ್ನಿಯ ಆತಿಥ್ಯ ವಹಿಸಿದ್ದ ರಷ್ಯಾದ ಸಾಮರ್ಥ್ಯ ಈಗ ವಿಶ್ವದೆಲ್ಲೆಡೆಯಿಂದ ಮೆಚ್ಚುಗೆ ಗಳಿಸುತ್ತಿದೆ. ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ರಷ್ಯಾ ವಿಶ್ವಮಟ್ಟದಲ್ಲಿ ಗೌರವ ಕಳೆದುಕೊಂಡಿತ್ತು. ರಿಯೊ ಒಲಿಂಪಿಕ್ಸ್‌ ಸಂದರ್ಭದಲ್ಲಿ ಬಹಿಷ್ಕಾರದ ಭೀತಿ ಎದುರಿಸಿತ್ತು. ಆದರೆ ಈಗ ಪುಟಿದೆದ್ದಿದೆ. ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನಾಯಕತ್ವ ಗಮನ ಸೆಳೆದಿದೆ. ಬೇರೆ ದೇಶಗಳ ಜೊತೆಗೆ ವಾಣಿಜ್ಯ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಬೆಸೆಯಲು ಅವರು ಈ ವೇಳೆಯನ್ನು ಬಳಸಿಕೊಂಡಿದ್ದು ವಿಶೇಷ. ರಷ್ಯಾ ಫುಟ್‌ಬಾಲ್ ತಂಡವು ನಿರೀಕ್ಷೆಗೂ ಮೀರಿದ ಸಾಧನೆ ಮಾಡಿತು. ಕ್ವಾರ್ಟರ್‌ ಫೈನಲ್‌ವರೆಗೂ ಪ್ರವೇಶಿಸಿತು. ಜೂನ್ 14 ರಿಂದ ಜುಲೈ 15ರವರೆಗೆ ನಡೆದ ಈ ಟೂರ್ನಿಯಲ್ಲಿ ದೊಡ್ಡ ಮಟ್ಟದ ದಾಂದಲೆ, ಹಿಂಸಾಚಾರಗಳು ವರದಿಯಾಗಲಿಲ್ಲ. ಟಿ.ವಿ. ವರದಿಗಾರ್ತಿಯರಿಗೆ ಚುಂಬನ ನೀಡಿದ ಕೆಲವು ಪ್ರಕರಣಗಳು ಬೇಸರ ತರಿಸಿದ್ದು ನಿಜ. ಈ ಸಲವೂ ಭಾರತದ ಫುಟ್‌ಬಾಲ್ ತಂಡವು ಟೂರ್ನಿಗೆ ಅರ್ಹತೆ ಪಡೆಯಲಿಲ್ಲ. ಮೂರೂವರೆ ಲಕ್ಷ ಜನಸಂಖ್ಯೆ ಇರುವ ಐಸ್‌ಲ್ಯಾಂಡ್, 44 ಲಕ್ಷ ಜನರು ವಾಸಿಸುವ ಕ್ರೊವೇಷ್ಯಾ ದೇಶಗಳು ಜಗವೇ ನಿಬ್ಬೆರಗಾಗುವಂತಹ ಸಾಧನೆ ಮಾಡುತ್ತಿವೆ. ನೂರು ಕೋಟಿಗೂ ಹೆಚ್ಚಿನ ಜನಸಂಖ್ಯೆ, ಅಗಾಧ ಯುವಶಕ್ತಿ ಇರುವ ನಮ್ಮ ದೇಶಕ್ಕೆ ಇದು ಯಾಕೆ ಸಾಧ್ಯವಾಗುತ್ತಿಲ್ಲ? ಏಷ್ಯನ್ ಗೇಮ್ಸ್‌ಗೆ ಫುಟ್‌ಬಾಲ್ ತಂಡವನ್ನು ಕಳಿಸಲು ಹಿಂದೆ ಮುಂದೆ ನೋಡುತ್ತಿರುವ ಸಂಬಂಧಪಟ್ಟ ಸಂಘಟನೆಗಳು ಆತ್ಮಾವಲೋಕನ
ಮಾಡಿಕೊಳ್ಳಬೇಕಾದ ಕಾಲ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT