ಕರ್ನಾಟಕದ ನೆರೆ ಸಂತ್ರಸ್ತರಿಗೆ ಬದುಕು ಕಟ್ಟಿಕೊಳ್ಳಲು ನೆರವಿನಹಸ್ತ ಚಾಚುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಾಮೌನಿಯಾಗಿಯೇ ಉಳಿದಿದ್ದಾರೆ. ತಮ್ಮದೇ ಪಕ್ಷವನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯು ಸಾವಿರಾರು ರೈತರ ಎದುರು ‘ನಮ್ಮ ನೆರವಿಗೆ ಬನ್ನಿ’ ಎಂದು ದಯನೀಯವಾಗಿ ಯಾಚಿಸಿದರೂ ಅವರ ಹೃದಯ ಕರಗದೇ ಹೋದುದು ಕೆಲವರಲ್ಲಾದರೂ ಸಂಶಯದ ಬೀಜ ಬಿತ್ತಿದೆ.
ನಿಯಮಿತವಾಗಿ ವಿದೇಶ ಪ್ರಯಾಣ ಬೆಳೆಸುವ ಪ್ರಧಾನಿ, ಕಷ್ಟದಲ್ಲಿರುವ ರಾಷ್ಟ್ರಗಳಿಗೆ ಸಾಲದ ರೂಪದಲ್ಲೋ ನೆರವಿನ ರೂಪದಲ್ಲೋ ಬಹುಕೋಟಿ ಹಣವನ್ನು ಧಾರೆಯೆರೆದು ಔದಾರ್ಯ ತೋರಿದ ನಿದರ್ಶನಗಳೂ ಇವೆ. ಆರ್ಥಿಕತೆಯಲ್ಲಿ ಭಾರತ ಬಲಿಷ್ಠವಾಗಿದೆ ಎಂದು ತೋರಿಸಲು ಇಂತಹ ಉಪಕ್ರಮ ಅನುಚಿತವೇನಲ್ಲ. ನೆರೆಯ ದೇಶಗಳಿಗೆ ಉದಾರಿಯಾಗುವ ಪ್ರಧಾನಿಯವರು ತಾವೇ ಕೈಹಿಡಿದು ನಡೆಸಬೇಕಾದ ರಾಜ್ಯವೊಂದು ಪ್ರವಾಹದಿಂದ ಏಟು ತಿಂದಾಗ, ಆರ್ಥಿಕ ನಷ್ಟದ ಹೊಡೆತದಿಂದ ಜರ್ಜರಿತವಾದಾಗ ಊರುಗೋಲು ಆಗುವುದು ಕೇವಲ ಔದಾರ್ಯವಲ್ಲ; ಸಾಂವಿಧಾನಿಕ ಜವಾಬ್ದಾರಿ ಕೂಡ.
ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. ಆ ಹೊತ್ತಿನಲ್ಲಿ ಮತ ಕೇಳಲು ರಾಜ್ಯಕ್ಕೆ ಬಂದಿದ್ದ ಮೋದಿ, ‘ಕೇಂದ್ರ- ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ರಾಜ್ಯದ ಭಾಗ್ಯದ ಬಾಗಿಲು ತೆರೆಯುತ್ತದೆ’ ಎಂದು ಭರವಸೆ ಇತ್ತಿದ್ದರು. ‘ಒಂದು ಮತ, ಎರಡು ಸರ್ಕಾರ’ ಎಂಬ ಘೋಷಣೆಯನ್ನು ಬಿಜೆಪಿಯ ಮತ್ತೊಬ್ಬ ಪ್ರಮುಖ ನಾಯಕ ಕೊಟ್ಟಿದ್ದರು. ಅದನ್ನು ನಂಬಿದ ರಾಜ್ಯದ ಜನರು 25 ಕ್ಷೇತ್ರಗಳಲ್ಲಿ ಬಿಜೆಪಿಯನ್ನೇ ಗೆಲ್ಲಿಸಿದರು. ಅದಾದ ಬಳಿಕ ಬಿಜೆಪಿ ನೇತೃತ್ವದ ಸರ್ಕಾರಕ್ಕೂ ಜೀವ ಕೊಡಲಾಯಿತು. ಸ್ಥಿರ ಸರ್ಕಾರದಿಂದ ಅಭಿವೃದ್ಧಿ ಸಾಧ್ಯ ಎಂದು ನಂಬಿದ್ದ ಮತದಾರರು ಉಪಚುನಾವಣೆಯಲ್ಲಿ ಕೂಡ 12 ಸ್ಥಾನಗಳನ್ನು ಬಿಜೆಪಿಗೆ ಧಾರೆ ಎರೆದರು. ಮೋದಿ ಅವರು ಹೇಳಿದಂತೆ ಒಂದೇ ಪಕ್ಷದ ಸರ್ಕಾರ ಎರಡೂ ಕಡೆ ಅಸ್ತಿತ್ವದಲ್ಲಿದೆ. ಆದರೆ, ರಾಜ್ಯದ ಭಾಗ್ಯದ ಬಾಗಿಲು ತೆರೆಯಲಿಲ್ಲ.
ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಹೊತ್ತಿನಲ್ಲೇ ಹಿಂದೆಂದೂ ಕಂಡಿರದಂತಹ ಮಹಾಮಳೆ, ಭಯಾನಕ ಪ್ರವಾಹಕ್ಕೆ ಊರೂರೇ ಕೊಚ್ಚಿ ಹೋಯಿತು. ಕಳೆದ ವರ್ಷದ ಆಗಸ್ಟ್‌ನಲ್ಲಿ ಶುರುವಾದ ಮಳೆಗೆ ಎಂಟು ಜಿಲ್ಲೆಗಳು ತಿಂಗಳುಗಟ್ಟಲೇ ನೆರೆನೀರಿನಿಂದ ಆವೃತವಾಗಿದ್ದವು.
ಸರ್ಕಾರವೇ ಅಂದಾಜಿಸಿದಂತೆ ₹38,451 ಕೋಟಿ ನಷ್ಟ ಸಂಭವಿಸಿತು. 8.88 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿದ್ದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನೆಲಕಚ್ಚಿದವು. 2.47 ಲಕ್ಷ ಮನೆಗಳಿಗೆ, ಸುಮಾರು 11 ಸಾವಿರ ಸರ್ಕಾರಿ ಕಟ್ಟಡಗಳಿಗೆ ಹಾನಿಯಾಯಿತು. 21,818 ಕಿ.ಮೀ. ಉದ್ದದಷ್ಟು ರಸ್ತೆ ತೀವ್ರ ಹಾನಿಗೊಳಗಾಯಿತು. ಹಿಂದೆ ಇಂತಹ ಅನಾಹುತ ಸಂಭವಿಸಿದಾಗ ಪ್ರಧಾನಿಯವರೇ ಖುದ್ದು ಭೇಟಿ ನೀಡಿದ್ದ ಪರಿಪಾಟವನ್ನು ರಾಜ್ಯ ಕಂಡಿತ್ತು. ಈ ಬಾರಿಯೂ ಅಂತಹುದೇ ಅಪೇಕ್ಷೆ ಮೂಡಿತ್ತು. ಆದರೆ, ಪ್ರಧಾನಿ ಬರಲಿಲ್ಲ. ಕೇಂದ್ರ ಗೃಹ ಸಚಿವರು ಹಾಗೂ ಹಣಕಾಸು ಸಚಿವರು ಬಂದುಹೋದರೂ ಆ ಕ್ಷಣದಲ್ಲಿ ನೆರವು ಘೋಷಿಸಲಿಲ್ಲ.ರಾಷ್ಟ್ರೀಯ ನೈಸರ್ಗಿಕ ವಿಕೋಪ ಪರಿಹಾರ ನಿಧಿಯ ಮಾರ್ಗಸೂಚಿಯನ್ವಯ ₹3,818 ಕೋಟಿ ತಕ್ಷಣದ ನೆರವು ನೀಡುವಂತೆ ಕೇಂದ್ರವನ್ನುರಾಜ್ಯ ಸರ್ಕಾರ ಕೋರಿತು. ನೈಸರ್ಗಿಕ ವಿಕೋಪದ ಹಾನಿ ಘಟಿಸಿ ನಾಲ್ಕು ತಿಂಗಳು ಕಳೆದಿದೆ. ಇಲ್ಲಿಯವರೆಗೆ ₹1,200 ಕೋಟಿ ಪರಿಹಾರವನ್ನು ಕೇಂದ್ರ ಬಿಡುಗಡೆ ಮಾಡಿದೆ. ಉಳಿದ ಮೊತ್ತಕ್ಕೆ ಕರ್ನಾಟಕ ಇನ್ನೂ ಚಾತಕಪಕ್ಷಿಯಂತೆ ಎದುರು ನೋಡುತ್ತಿದೆ.
ಕೇಂದ್ರದ ನೆರವಿನಿಂದ ನಡೆಯುವ ಉದ್ಯೋಗ ಖಾತರಿ ಯೋಜನೆಯಡಿ ₹2,784 ಕೋಟಿ ಬಾಕಿ ಬರಬೇಕಿದ್ದು, ಬೆವರು ಹರಿಸಿ ದುಡಿದವರಿಗೆ ಮೂರು ತಿಂಗಳಿನಿಂದ ಕೂಲಿಯೂ ಸಿಕ್ಕಿಲ್ಲ. ತುಮಕೂರಿನಲ್ಲಿ ರೈತ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಧಾನಿಯವರನ್ನು ನೆರವು ನೀಡುವಂತೆ ಮುಖ್ಯಮಂತ್ರಿ ಕೋರಿದರು. ಅದು ಅವರ ಕರ್ತವ್ಯವೂ ಆಗಿತ್ತು. ಆದರೆ, ಅದಕ್ಕೆ ಅವರಿಂದ ಸ್ಪಂದನೆ ವ್ಯಕ್ತವಾಗದಿದ್ದುದು ಆಶ್ಚರ್ಯದ ಸಂಗತಿ.
ಮುಖ್ಯಮಂತ್ರಿಯೊಬ್ಬರು ಬಹಿರಂಗ ವೇದಿಕೆಯಲ್ಲಿ ಕೇಳಿದಾಗಲಾದರೂ ಪರಿಶೀಲಿಸುವ ಭರವಸೆ ನೀಡುವ ಕೆಲಸವನ್ನಾದರೂ ಪ್ರಧಾನಿ ಅಲ್ಲಿ ಮಾಡಬೇಕಿತ್ತು. ಆ ಸೌಜನ್ಯವೂ ಕಾಣಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಸಹಾಯಹಸ್ತ ಚಾಚಲು ಪ್ರಧಾನಿ ಈಗಲಾದರೂ ಮುಂದಾಗಬೇಕು. ನೆರೆಯಿಂದ ಬದುಕು ಕಳೆದುಕೊಂಡು ಕುಳಿತಿರುವ ಜನರಿಗೆ ನೆಮ್ಮದಿಯ ಆಸರೆ ದೊರಕಿಸಿಕೊಡುವ ಕೆಲಸಕ್ಕೆ ನೆರವಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.