ADVERTISEMENT

ಫೋನಿ ಚಂಡಮಾರುತ: ಪರಿಹಾರ ಕಾರ್ಯಕ್ಕೆ ಕೈಜೋಡಿಸಬೇಕಿದೆ

​ಪ್ರಜಾವಾಣಿ ವಾರ್ತೆ
Published 5 ಮೇ 2019, 20:15 IST
Last Updated 5 ಮೇ 2019, 20:15 IST
.
.   

ನೈಸರ್ಗಿಕ ವಿಕೋಪಗಳನ್ನು ತಡೆಯಲು ಸಾಧ್ಯವಾಗದು. ಆದರೆ ಅವುಗಳು ಯಾವಾಗ, ಹೇಗೆ ಉಂಟಾಗಬಹುದು ಎಂಬುದನ್ನು ಗ್ರಹಿಸುವಷ್ಟು ವಿಜ್ಞಾನ ಬೆಳೆದಿದೆ. ಅದರ ಆಧಾರದ ಮೇಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು, ಮನುಷ್ಯನ ಸಾಮರ್ಥ್ಯದ ಪರಿಧಿಯನ್ನು ಮೀರಿದ ಕಾರ್ಯವೇನಲ್ಲ. ಇದರಿಂದ, ಜೀವಹಾನಿ ಹಾಗೂ ಸಂಪನ್ಮೂಲ ನಷ್ಟದ ಪ್ರಮಾಣವನ್ನು ಸಾಧ್ಯವಾದಷ್ಟೂ ತಗ್ಗಿಸಲು ಸಾಧ್ಯ.

ಅತಿವೃಷ್ಟಿ, ಪ್ರವಾಹ, ಚಂಡಮಾರುತ, ಬರ, ಭೂಕಂಪದಂತಹ ವಿಪತ್ತುಗಳು ಸಂಭವಿಸಿದಾಗಲೆಲ್ಲ ಮುಂಜಾಗ್ರತೆ ಒತ್ತಟ್ಟಿಗಿರಲಿ, ಮಾನವನಿರ್ಮಿತ ಅವಘಡಗಳೂ ಅದರೊಟ್ಟಿಗೆ ಸೇರಿ, ಪರಿಸ್ಥಿತಿ ಬಿಗಡಾಯಿಸುವುದು ಸರ್ವೇಸಾಮಾನ್ಯ. ಇಂತಹ ಭೀಕರ ದುರಂತಗಳಿಂದ ಜನಜೀವನ ಪದೇಪದೇ ತೀವ್ರ ಅಸ್ತವ್ಯಸ್ತಗೊಂಡರೂ ಪಾಠ ಕಲಿಯದಿರುವುದು ನಮ್ಮ ಆಡಳಿತಗಳ ವೈಫಲ್ಯಕ್ಕೆ ನಿದರ್ಶನ. ಆದರೆ, ಈಗ ಅಪ್ಪಳಿಸಿರುವ ಫೋನಿ ಚಂಡಮಾರುತವನ್ನು ಎದುರಿಸಲು ಒಡಿಶಾ ಸನ್ನದ್ಧವಾದ ರೀತಿ, ದೇಶ ಮಾತ್ರವಲ್ಲ ಜಗತ್ತಿನ ಗಮನವನ್ನೂ ಸೆಳೆದಿದೆ.

ಪ್ರಬಲ ಚಂಡಮಾರುತದಿಂದ ಒಡಿಶಾದ 14 ಜಿಲ್ಲೆಗಳು ತತ್ತರಿಸಿವೆ. ಲಕ್ಷಾಂತರ ಜನ ನಿರ್ಗತಿಕರಾಗಿದ್ದಾರೆ. ಎಷ್ಟೋ ಕಟ್ಟಡಗಳ ಚಾವಣಿಗಳೇ ಎಗರಿಹೋಗಿವೆ. ಗುಡಿಸಿಲುಗಳು ಕುರುಹೇ ಇಲ್ಲದಂತೆ ಕುಸಿದಿವೆ. ಲಕ್ಷಾಂತರ ಮರಗಳು ಧರೆಗುರುಳಿವೆ. ಅಷ್ಟಾದರೂ ಜೀವಹಾನಿಯ ಪ್ರಮಾಣ ಕಡಿಮೆ ಎಂಬುದು ಸಮಾಧಾನದ ಸಂಗತಿ. ರಾಜ್ಯ ಸರ್ಕಾರ ಅತ್ಯಂತ ಜವಾಬ್ದಾರಿಯುತವಾಗಿಕೆಲಸ ಮಾಡಿರುವುದೇ ಇದಕ್ಕೆ ಕಾರಣ. ಒಡಿಶಾಗೆ ಚಂಡಮಾರುತ ಹೊಸದೇನಲ್ಲ. ವರ್ಷಂಪ್ರತಿ ಇಲ್ಲಿನ ಜನರ ಬದುಕು ಬಿರುಗಾಳಿಯಿಂದ ತತ್ತರಿಸುತ್ತದೆ. 50 ವರ್ಷಗಳಲ್ಲಿ 7 ಪ್ರಮುಖ ಚಂಡಮಾರುತಗಳು ರಾಜ್ಯವನ್ನು ಇನ್ನಿಲ್ಲದಂತೆ ನಲುಗಿಸಿವೆ. 1971ರಲ್ಲಿ ಸುಮಾರು 10 ಸಾವಿರ ಜನ ಪ್ರಾಣ ಕಳೆದುಕೊಂಡಿದ್ದರು.

ADVERTISEMENT

10 ಲಕ್ಷ ಮಂದಿ ನಿರಾಶ್ರಿತರಾಗಿದ್ದರು. ಚಂಡಮಾರುತದಿಂದ ಆದ ‍ಹಾನಿಯನ್ನು ಆಗ ಪರಿಣಾಮಕಾರಿಯಾಗಿ ತಡೆಯಲು ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಆದರೆ, ಸುಮಾರು ಇಷ್ಟೇ ಪ್ರಮಾಣದ ಜನರನ್ನು ಬಲಿ ತೆಗೆದುಕೊಂಡ 1999ರ ಪ್ರಬಲ ಚಂಡಮಾರುತ ಮಾತ್ರ ಸರ್ಕಾರದ ಅಂತಃಪ್ರಜ್ಞೆಯನ್ನು ಬಡಿದೆಬ್ಬಿಸಿತು. ಕೂಡಲೇ ಕಾರ್ಯಪ್ರವೃತ್ತವಾದ ಸರ್ಕಾರವು ಹವಾಮಾನ ಇಲಾಖೆ ಹಾಗೂ ಇಸ್ರೊದಂತಹ ಸಂಸ್ಥೆಗಳ ನೆರವಿನೊಂದಿಗೆ ಸಮರ್ಥ ವಿಪತ್ತು ನಿರ್ವಹಣಾ ವ್ಯವಸ್ಥೆಯೊಂದನ್ನು ರೂಪಿಸಿತು. ಅದರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆಯಿತು.

ಅತ್ಯಾಧುನಿಕ ವಿದೇಶಿ ತಂತ್ರಜ್ಞಾನ, ಉಪಗ್ರಹಗಳ ನೆರವಿನಿಂದ ಚಂಡಮಾರುತದ ಗತಿಯನ್ನು ಕರಾರುವಾಕ್ಕಾಗಿ ಅರಿಯುವುದು ಸುಲಭವಾಯಿತು. ಬರೀ ಅರಿತರಷ್ಟೇ ಸಾಲದು ಎಂಬ ಕರ್ತವ್ಯಪ್ರಜ್ಞೆಯಿಂದಾಗಿ ಅಪಾಯಕಾರಿ ಪ್ರದೇಶಗಳಲ್ಲಿ ಮಣ್ಣಿನ ಮನೆಗಳ ಜಾಗದಲ್ಲಿ ಕಾಂಕ್ರೀಟ್‌ ಮನೆಗಳು ತಲೆ ಎತ್ತಿದವು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಳೀಯ ಯುವಪಡೆಗಳನ್ನು ರಚಿಸಿ, ದುರಂತ ಎದುರಿಸುವ ಮನೋಬಲವನ್ನು ಅವರಲ್ಲಿ ತುಂಬಿ, ತುರ್ತುಸ್ಥಿತಿ ಕಾರ್ಯಾಚರಣೆಯ ತರಬೇತಿ ಕೊಡಲಾಯಿತು. ಜನರ ದಿಢೀರ್‌ ಸ್ಥಳಾಂತರಕ್ಕೆ ಅನುವಾಗುವಂತೆ ಉತ್ತಮ ಗುಣಮಟ್ಟದ ರಸ್ತೆ, ಸೇತುವೆಗಳನ್ನು ನಿರ್ಮಿಸಲಾಯಿತು. ಹೀಗಾಗಿಯೇ, ಈ ಬಾರಿಯೂ ಸುಮಾರು 12 ಲಕ್ಷ ಜನರನ್ನು ರಾತ್ರೋರಾತ್ರಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಸಾಧ್ಯವಾಯಿತು.

ಇಷ್ಟೆಲ್ಲ ಮುಂಜಾಗ್ರತೆಯ ನಡುವೆಯೂ ದುರಂತ ನಂತರದ ಸಂಕಷ್ಟಗಳ ಬೃಹತ್‌ ಸವಾಲು ಈಗ ಒಡಿಶಾ ಮುಂದಿದೆ. ರಾಜ್ಯದ ಒಟ್ಟಾರೆ ಮೂಲಸೌಕರ್ಯದ ಪ್ರಮಾಣ ಉತ್ತಮವಾಗೇನೂ ಇಲ್ಲ. ಪದೇಪದೇ ಚಂಡಮಾರುತದ ಹೊಡೆತಕ್ಕೆ ಸಿಲುಕುವ ಆಸ್ಪತ್ರೆ, ರಸ್ತೆ, ಸೇತುವೆಯಂತಹವುಗಳನ್ನು ಪುನರ್‌ ನಿರ್ಮಿಸುವುದು ಸುಲಭವೇನಲ್ಲ. ಜತೆಗೆ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವೂ ಇದೆ. ಇಂತಹ ಸಂದರ್ಭದಲ್ಲಿ ಜನರ ಆರೋಗ್ಯ ಕಾಪಾಡಬೇಕಾದ ಗುರುತರ ಹೊಣೆಗಾರಿಕೆಯೂ ಇದೆ. ಬಡವರ ಬದುಕಿನ ಮೇಲೆ ಬೀಳುವ ಬರೆಯು ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿಯುವಂತೆ ಮಾಡುತ್ತದೆ, ಜನರ ವಲಸೆ ಪ್ರಮಾಣವನ್ನು ಹೆಚ್ಚಿಸುತ್ತದೆ.

ಇವೆಲ್ಲವನ್ನೂ ನಿಯಂತ್ರಿಸಿ, ಜನ ಮತ್ತೆ ತಮ್ಮ ಬದುಕು ಕಟ್ಟಿಕೊಳ್ಳಲು ನೆರವಾಗಬೇಕಾಗಿದೆ. ಪ್ರತಿ ವರ್ಷವೂ ಲಕ್ಷಾಂತರ ಮರಗಳು ಉರುಳುವುದರಿಂದ, ಜೀವವೈವಿಧ್ಯದ ಮೇಲಾಗುವ ಪರಿಣಾಮ ಸಹ ಅಪಾರ. ಇದನ್ನು ಸರಿದೂಗಿಸಲು, ಅಷ್ಟೇ ಪ್ರಮಾಣದಲ್ಲಿ ಪರಿಸರಪೂರಕ ಕ್ರಮಗಳನ್ನು ಕೈಗೊಳ್ಳಬೇಕಾ ಗುತ್ತದೆ. ಯಾವುದೇ ರಾಜ್ಯವಾದರೂ ಇವೆಲ್ಲವನ್ನೂ ಏಕಾಂಗಿಯಾಗಿ ನಿರ್ವಹಿಸುವುದು ಅಸಾಧ್ಯ. ಎಲ್ಲ ರಾಜ್ಯಗಳೂ ಒಡಿಶಾದ ಪುನರ್‌ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಪಾತ್ರ ಹಿರಿದು. ಕೇಂದ್ರದ ಉದಾರ ನೆರವು ಒಡಿಶಾಕ್ಕೆ ಈಗ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.