ರಾಜ್ಯ ಸರ್ಕಾರವು ಹೊಸ ವರ್ಷದ ಆರಂಭದಲ್ಲಿ ಸ್ವಾಗತಾರ್ಹ ಆದೇಶವೊಂದನ್ನು ಹೊರಡಿಸಿದೆ. 10 ಜನರಿಗಿಂತ ಹೆಚ್ಚಿನ ಕೆಲಸಗಾರರನ್ನು ಹೊಂದಿರುವ ಅಂಗಡಿಗಳು ಮತ್ತು ವಾಣಿಜ್ಯ ಸಂಕೀರ್ಣಗಳು ದಿನದ ಇಪ್ಪತ್ತನಾಲ್ಕು ಗಂಟೆಗಳೂ ತೆರೆದಿರಬಹುದು, ವಾಣಿಜ್ಯ ಚಟುವಟಿಕೆಗಳನ್ನು ನಡೆಸಬಹುದು ಎಂಬುದು ಈ ಆದೇಶದ ಪ್ರಮುಖ ಅಂಶ. ಮಾರುಕಟ್ಟೆಯಲ್ಲಿ ಪ್ರಭುತ್ವದ ಹಸ್ತಕ್ಷೇಪ ಆದಷ್ಟೂ ಕಡಿಮೆಯಾಗಬೇಕು, ವ್ಯಾಪಾರ ವಹಿವಾಟುಗಳು ಮುಕ್ತವಾಗಿ ನಡೆಯಬೇಕು ಎಂಬ ವ್ಯವಸ್ಥೆಯತ್ತವಾಲಿರುವ, ಆ ವ್ಯವಸ್ಥೆಯ ಮೂಲಕವೇ ಸಂಪತ್ತು ಸೃಷ್ಟಿಸಿಕೊಳ್ಳಲು ಹೊರಟಿರುವ ಸಮಾಜ ನಮ್ಮದು. ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಬಿದ್ದ ಭಾರಿ ಏಟು ಲಾಕ್‌ಡೌನ್. ಇದರಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಹೊರಬರುವ ಹಾದಿಯಲ್ಲಿ ಸಮಾಜ ಇದೆ ಎಂಬ ಸೂಚನೆ ಗಟ್ಟಿಯಾಗಿ ಕಾಣಿಸಲು ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಈ ಆದೇಶವನ್ನು ಹೊರಡಿಸಿದೆ. ವಾಣಿಜ್ಯ ಮಳಿಗೆಗಳು ಹಾಗೂ ಅಂಗಡಿಗಳು ದಿನದ ಇಪ್ಪತ್ತನಾಲ್ಕು ಗಂಟೆಗಳೂ ಕಾರ್ಯನಿರ್ವಹಿಸಲು ಅವಕಾಶ ಇರಬೇಕು ಎಂಬ ಒತ್ತಾಯ ಕೋವಿಡ್–19 ಸಾಂಕ್ರಾಮಿಕ ಅಪ್ಪಳಿಸುವ ಮೊದಲು ಕೂಡ ಇತ್ತು. ಅದು ಈಗ ಸಾಕಾರಗೊಂಡಿದೆ. ಬೆಂಗಳೂರಿನಂತಹ ಮಹಾನಗರಗಳಿಗೆ ‘ನೈಟ್‌ಲೈಫ್’ ಬೇಕು, ವಾಣಿಜ್ಯ ಮಳಿಗೆಗಳು, ಹೋಟೆಲ್ ಹಾಗೂ ಅಂಗಡಿಗಳನ್ನು ರಾತ್ರಿ ಸಂದರ್ಭದಲ್ಲಿ ಮುಚ್ಚಲೇಬೇಕು ಎಂಬ ಬಲವಂತ ಸಲ್ಲದು, ಈ ಬಗೆಯ ಬಲವಂತದಿಂದ ಮಹಾನಗರದ ಆರ್ಥಿಕ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಂತೆ ಆಗುವುದಿಲ್ಲ ಎಂಬ ವಾದಕ್ಕೆ ಪೂರಕವಾಗಿಯೂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಈಗ ಹೊರಡಿಸಿರುವ ಆದೇಶವನ್ನು ಗ್ರಹಿಸಬಹುದು. ಆದೇಶದಲ್ಲಿ ಇರುವ ವಿವರಗಳನ್ನು ಗಮನಿಸಿದರೆ, ಅವು ಕಾರ್ಮಿಕರ ವಿರೋಧಿ ಆಗಿರುವಂತೆ ಮೇಲ್ನೋಟಕ್ಕೆ ಕಾಣುವುದಿಲ್ಲ. ಹೀಗಿದ್ದರೂ, ದಿನದ ಇಪ್ಪತ್ತನಾಲ್ಕು ಗಂಟೆ ವಹಿವಾಟು ನಡೆಸಲು ಬಯಸುವ ಅಂಗಡಿ ಅಥವಾ ವಾಣಿಜ್ಯ ಮಳಿಗೆಗಳ ಮಾಲೀಕರು ತಮ್ಮ ಕಾರ್ಮಿಕರನ್ನು ಅವಿಶ್ರಾಂತವಾಗಿ ದುಡಿಮೆಗೆ ಹಚ್ಚದೆ, ಮಾನವೀಯವಾಗಿ ವರ್ತಿಸುವ ನೈತಿಕ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ.
ಉದ್ದಿಮೆಗಳಿಗೆ, ವಾಣಿಜ್ಯ ಮಳಿಗೆಗಳಿಗೆ ಹೆಚ್ಚೆಚ್ಚು ವಹಿವಾಟು ನಡೆಸಲು ಮುಕ್ತ ಅವಕಾಶ ಕಲ್ಪಿಸಿದಂತೆಲ್ಲ ಹಣದ ಚಲಾವಣೆ ಹೆಚ್ಚುತ್ತದೆ. ಅದರ ಪರಿಣಾಮವಾಗಿ ಸಂಪತ್ತು ಸೃಷ್ಟಿಯೂ ಹೆಚ್ಚಾಗುತ್ತದೆ ಎಂಬುದು ಆ್ಯಡಂ ಸ್ಮಿತ್‌ನ ಸಿದ್ಧಾಂತವಷ್ಟೇ ಅಲ್ಲ; ಅದು ಈಗ ಸಮುದಾಯದ ಅನುಭವವೂ ಹೌದು. ಈ ತಾತ್ವಿಕ ನೆಲೆಯಿಂದ ನೋಡಿದಾಗ, ಈಗ ಹೊರಡಿಸಿರುವ ಆದೇಶದ ಪರಿಣಾಮವಾಗಿ ರಾಜಧಾನಿ ಬೆಂಗಳೂರಿನ ಆರ್ಥಿಕ ಚಟುವಟಿಕೆಗಳಿಗೆ ಒಂದಿಷ್ಟು ಹೆಚ್ಚಿನ ಉತ್ತೇಜನ ಖಂಡಿತ ಸಿಗುತ್ತದೆ ಎನ್ನಲು ಅಡ್ಡಿಯಿಲ್ಲ. ಬೆಂಗಳೂರಿನಲ್ಲಿ ಐ.ಟಿ., ಬಿಪಿಒ, ಸಾರಿಗೆಯಂತಹ ಉದ್ಯಮಗಳು ದಿನದ ಬಹುತೇಕ ಅವಧಿ ಕಾರ್ಯಾಚರಣೆ ನಡೆಸುತ್ತಿರುತ್ತವೆ. ಈ ಉದ್ಯಮಗಳಲ್ಲಿ ಕೆಲಸ ಮಾಡುವವರಿಗೆ ಊಟ, ತಿಂಡಿ, ಚಹಾ, ಮನರಂಜನೆಯಂತಹ ಅಗತ್ಯ ಸೌಲಭ್ಯಗಳು ರಾತ್ರಿ ವೇಳೆಯಲ್ಲೂ ಸಿಗುವಂತಿರಬೇಕು. ಕೋವಿಡ್–19 ಕಾರಣದಿಂದಾಗಿ ‘ಎಲ್ಲಿಂದ ಬೇಕಿದ್ದರೂ ಕೆಲಸ’ ಎಂಬ ಹೊಸ ಸಂಸ್ಕೃತಿಯೊಂದು ಜೀವ ತಳೆದಿರುವ ಕಾರಣ ಮಂಗಳೂರು, ಹುಬ್ಬಳ್ಳಿ, ಮೈಸೂರು, ಕಲಬುರ್ಗಿ, ದಾವಣಗೆರೆಯಂತಹ ನಗರಗಳು ಕೂಡ ಐ.ಟಿ., ಬಿಪಿಒ ಉದ್ಯಮಗಳಿಗೆ ಭವಿಷ್ಯದಲ್ಲಿ ಇಂದಿಗಿಂತ ದೊಡ್ಡ ನೆಲೆ ಒದಗಿಸಬಲ್ಲವು ಎಂಬ ವಾದ ಇದೆ. ಹೀಗಾದಾಗ ಆ ನಗರಗಳಲ್ಲಿಯೂ ರಾತ್ರಿ ಹೊತ್ತಿನಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ತೆರೆದಿರಿಸಬೇಕು ಎಂಬ ಆಗ್ರಹ ಬರುವ ಸಾಧ್ಯತೆ ಇದ್ದೇ ಇತ್ತು. ಕೋವಿಡ್–19 ಪರಿಣಾಮವಾಗಿ ಉದ್ಯಮ ಮತ್ತು ಕೆಲಸದ ಸಂಸ್ಕೃತಿಯಲ್ಲಿ ಆಗಿರುವ ಪಲ್ಲಟಗಳಿಗೆ ಸ್ಪಂದಿಸುವ ಶಕ್ತಿ ಹೊಸ ಆದೇಶಕ್ಕೆ ಇರುವಂತೆ ಕಾಣುತ್ತಿದೆ. ಮನೆಯಿಂದಲೇ ಕೆಲಸ ಮಾಡುವ ಹೊಸ ಸಂಸ್ಕೃತಿಗೆ ಕಾನೂನಿನ ಮಾನ್ಯತೆ ಕೂಡ ಸಿಗಬಹುದು. ಹೀಗೆ ಆದಾಗ, ಎರಡನೆಯ ಹಂತದ ನಗರಗಳಲ್ಲಿ ಮಾತ್ರವೇ ಅಲ್ಲದೆ, ತಾಲ್ಲೂಕು ಅಥವಾ ಹೋಬಳಿ ಕೇಂದ್ರಗಳಿಂದಲೂ ಸೇವಾ ವಲಯದ ಕೆಲಸಗಳನ್ನು ನಿರ್ವಹಿಸಬಹುದಾದ ಅವಕಾಶಗಳು ಲಭ್ಯವಾಗುತ್ತವೆ. ಅಲ್ಲಿಂದ ಆಗುವ ಕೆಲವು ಕೆಲಸಗಳಿಗೆ ಹಗಲು–ರಾತ್ರಿ ಎಂಬ ಭೇದಗಳು ಇರುವುದಿಲ್ಲ. ಆಗ ಸಣ್ಣ ಊರುಗಳಲ್ಲಿಯೂ ವಾಣಿಜ್ಯ ವಹಿವಾಟುಗಳಿಗೆ ಈಗಿನ ಪ್ರಮಾಣಕ್ಕಿಂತ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳಬಹುದು. ಸಣ್ಣ ಊರುಗಳಲ್ಲಿಯೂ ಉತ್ತಮ ವೇಗದ ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಉದ್ದೇಶದ ‘ಪಿಎಂ–ವಾಣಿ’ ಯೋಜನೆ, ಎಲ್ಲಿಂದಲಾದರೂ ಕೆಲಸ ಮಾಡಬಹುದಾದ ಸಂಸ್ಕೃತಿ ಹಾಗೂ ಇಪ್ಪತ್ತನಾಲ್ಕು ಗಂಟೆಗಳೂ ವಾಣಿಜ್ಯ ವಹಿವಾಟುಗಳಿಗೆ ಅವಕಾಶ ಕಲ್ಪಿಸುವ ತೀರ್ಮಾನವು ಸೂತ್ರಬದ್ಧವಾಗಿ, ಒಟ್ಟಾಗಿ ಅನುಷ್ಠಾನಕ್ಕೆ ಬಂದರೆ ಅರ್ಥವ್ಯವಸ್ಥೆಯು ಮತ್ತಷ್ಟು ಬಲ ಪಡೆಯುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.