ADVERTISEMENT

ಬರಹಗಾರರು– ಕಲಾವಿದರ ಮೇಲೆ ಸರ್ಕಾರದ ನಿಯಂತ್ರಣ ಸಲ್ಲದು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 20:00 IST
Last Updated 7 ಆಗಸ್ಟ್ 2019, 20:00 IST
   

ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಅಕಾಡೆಮಿ–ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕವನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ. ಈ ನಿರ್ಧಾರ, ಕರ್ನಾಟಕಕ್ಕೊಂದು ಸ್ಪಷ್ಟವಾದ ಸಾಂಸ್ಕೃತಿಕ ನೀತಿ ಇಲ್ಲದಿರುವುದರ ಫಲವಾಗಿದೆ. ಪ್ರತಿ ಬಾರಿ ಹೊಸ ಸರ್ಕಾರ ಬಂದಾಗಲೂ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರ ಬದಲಾವಣೆಯಾಗುವುದೂ ಸಹಜ ಎನ್ನುವ ಸ್ಥಿತಿ ರಾಜ್ಯದಲ್ಲಿದೆ. ಅವಧಿ ಪೂರ್ಣಗೊಳ್ಳದಿದ್ದರೂ ಅಧ್ಯಕ್ಷರನ್ನು ಬದಲಿಸುವುದು ತಮ್ಮ ಹಕ್ಕು ಎಂದು ಅಧಿಕಾರಸ್ಥ ರಾಜಕಾರಣಿಗಳು ಭಾವಿಸಿದಂತಿದೆ. ಕೆಲವು ಅಕಾಡೆಮಿಗಳ ಅಧ್ಯಕ್ಷರು ಸೈದ್ಧಾಂತಿಕ ಕಾರಣಗಳಿಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿದೆ. ಹಾಗೆ ತಾವಾಗಿಯೇ ಯಾರಾದರೂ ಸ್ಥಾನ ತೆರವು ಮಾಡಿದಾಗ, ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬಹುದು. ಆದರೆ, ಅಧ್ಯಕ್ಷಸ್ಥಾನದಲ್ಲಿ ಮುಂದುವರಿಯಲು ಬಯಸುವವರಿಗೆ ಅವಧಿ ಪೂರೈಸಲು ಸರ್ಕಾರ ಅವಕಾಶ ಕಲ್ಪಿಸಬೇಕು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರಾಜಕಾರಣ ಸಲ್ಲದು. ತನ್ನ ಸಿದ್ಧಾಂತಕ್ಕೆ ಒಲ್ಲದವರು ಅಕಾಡೆಮಿಗಳಲ್ಲಿ ಇರಬಾರದು ಎಂದು ಯಾವ ಪಕ್ಷದ ಸರ್ಕಾರವಾದರೂ ಬಯಸುವುದು ಸರಿಯಲ್ಲ. ತಮ್ಮ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ಇರುವವರನ್ನೂ ಒಳಗೊಳ್ಳಲು ಪ್ರಯತ್ನಿಸುವುದು ಪ್ರಜಾಪ್ರಭುತ್ವದಲಕ್ಷಣ ಎನ್ನುವುದನ್ನು ಆಡಳಿತದ ಚುಕ್ಕಾಣಿ ಹಿಡಿದವರು ಅರ್ಥ ಮಾಡಿಕೊಳ್ಳಬೇಕು. ಪ್ರಾಧಿಕಾರಗಳು ಮತ್ತು ಅಕಾಡೆಮಿಗಳು ರೂಪಿಸಿದ್ದ ಯೋಜನೆಗಳು, ಅಧ್ಯಕ್ಷ ಮತ್ತು ಸದಸ್ಯರ ಏಕಾಏಕಿ ಬದಲಾವಣೆಯಿಂದ ಪೂರ್ಣಗೊಳ್ಳದೆ ನಿಂತುಹೋಗುತ್ತವೆ. ಹೊಸ ಅಧ್ಯಕ್ಷರು ಬಂದಾಗ ಹಳೆಯ ಯೋಜನೆಗಳು ಸ್ಥಗಿತಗೊಳ್ಳುವುದೂ ಇದೆ. ಇದರಿಂದ ಸಂಪನ್ಮೂಲಗಳು ವ್ಯರ್ಥವಾಗುತ್ತವೆ, ಜನರ ತೆರಿಗೆಯ ಹಣ ಪೋಲಾಗುತ್ತದೆ. ಖಾಲಿ ಮಾಡಿಸಿದ ಜಾಗಗಳನ್ನು ಸರ್ಕಾರ ತಕ್ಷಣವೇ ತುಂಬುತ್ತದೆಯೇ ಎಂದರೆ ಅದೂ ಇಲ್ಲ. ಸಾಂಸ್ಕೃತಿಕ ಕ್ಷೇತ್ರವು ಸರ್ಕಾರಗಳಿಗೆ ಯಾವಾಗಲೂ‌ ಕೊನೆಯ ಆದ್ಯತೆ. ಇದರಿಂದಾಗಿ ಕೆಲವೊಮ್ಮೆ ತಿಂಗಳುಗಟ್ಟಲೆ ಅಕಾಡೆಮಿ–ಪ್ರಾಧಿಕಾರಗಳು ಅಧ್ಯಕ್ಷರಿಲ್ಲದೆ ಖಾಲಿ ಬಿದ್ದು, ಸಾಂಸ್ಕೃತಿಕ ಚಟುವಟಿಕೆಗಳು ಸ್ಥಗಿತಗೊಳ್ಳುತ್ತವೆ.

ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿ ‘ಸಾಂಸ್ಕೃತಿಕ ನೀತಿ’ಗೆ ಸಂಬಂಧಿಸಿದಂತೆ 2014ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ, ಅಕಾಡೆಮಿ–ಪ್ರಾಧಿಕಾರಗಳ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಕೆಲವು ಶಿಫಾರಸುಗಳನ್ನು ಮಾಡಿತ್ತು. ‘ಸರ್ಕಾರಗಳು ಬದಲಾದರೂ ಅವಧಿ ಮುಗಿಯುವವರೆಗೆ ಅಧ್ಯಕ್ಷರು ಮತ್ತು ಸದಸ್ಯರ ಆಡಳಿತಾವಧಿ ಮೊಟಕುಗೊಳಿಸಬಾರದು ಅಥವಾ ಅವರ ರಾಜೀನಾಮೆ ಕೇಳಬಾರದು. ಅಕಾಡೆಮಿಗಳ ನಿಯಮಾವಳಿಯಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಅವಕಾಶ ಕಲ್ಪಿಸಿರುವ ಪರಿಚ್ಛೇದಗಳನ್ನು ರದ್ದು ಮಾಡಿ ಸಂಪೂರ್ಣ ಸಾಂಸ್ಕೃತಿಕ ಸ್ವಾಯತ್ತತೆ ನೀಡಬೇಕು’ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಶೋಧನಾ ಸಮಿತಿ ರಚನೆಯ ಮೂಲಕ ಅಕಾಡೆಮಿಗಳು, ಪ್ರಾಧಿಕಾರಗಳು ಮತ್ತು ಪ್ರತಿಷ್ಠಾನಗಳ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ನಡೆಸಬೇಕು ಎಂದೂ ವರದಿ ಹೇಳಿತ್ತು. ಆದರೆ, ಸಾಂಸ್ಥಿಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಶಿಸ್ತಿನ ಚೌಕಟ್ಟು ನೀಡುವ ಆ ವರದಿಯನ್ನು ಅನುಷ್ಠಾನಕ್ಕೆ ತರಲು ಯಾವ ಪಕ್ಷದ ಸರ್ಕಾರಕ್ಕೂ ಮನಸ್ಸಿದ್ದಂತಿಲ್ಲ. ಸಾಹಿತಿಗಳು ಅಥವಾ ಕಲಾವಿದರು ತಮ್ಮ ಅಂಕೆಯಲ್ಲಿರಬೇಕೆಂದು ರಾಜಕಾರಣಿಗಳು ಭಾವಿಸುವ ಕಾರಣದಿಂದಲೇ ಅವರಿಗೆ ಬರಗೂರು ವರದಿ ಅಪಥ್ಯವಾಗಿರಬಹುದು. ಅಕಾಡೆಮಿಗಳ ಅಧ್ಯಕ್ಷತೆಯನ್ನು ಯಾವಾಗ ಬೇಕಾದರೂ ತೆರವು ಮಾಡಿಸಬಹುದಾದ ಸ್ಥಾನವನ್ನಾಗಿ ಉಳಿಸಿಕೊಳ್ಳುವುದು ಸರ್ಕಾರಕ್ಕೆ ಪ್ರಿಯವಾದುದು. ಸಾಂಸ್ಕೃತಿಕ ವ್ಯಕ್ತಿತ್ವಗಳನ್ನು ರಾಜಕೀಯ ಪಕ್ಷಗಳ ಕಾರ್ಯಕರ್ತರಂತೆ ನೋಡುವುದನ್ನು ಇನ್ನಾದರೂ ಸರ್ಕಾರ ಕೈಬಿಡಬೇಕು. ಈಗ, ತಾನೇ ತೆರವು ಮಾಡಿಸಿರುವ ಅಧ್ಯಕ್ಷ ಸ್ಥಾನಗಳನ್ನು ಆದಷ್ಟು ಬೇಗ ತುಂಬುವುದರ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳು ಸರಾಗವಾಗಿ ನಡೆಯಲು ಅವಕಾಶ ಕಲ್ಪಿಸಬೇಕು. ಬರಗೂರು ವರದಿಯನ್ನು ಅನುಷ್ಠಾನಕ್ಕೆ ತರುವಂತೆ ನಾಡಿನ ಸಾಹಿತಿಗಳು–ಕಲಾವಿದರು ಸರ್ಕಾರದ ಮೇಲೆ ಒತ್ತಡ ಹೇರಬೇಕಾದ ಅಗತ್ಯವೂ ಇದೆ. ಅದರಿಂದಾಗಿ ಅಕಾಡೆಮಿ–ಪ್ರಾಧಿಕಾರಗಳ ಅಧ್ಯಕ್ಷರು ಸರ್ಕಾರದ ಬದಲಾವಣೆಗಳ ಹಂಗಿಗೆ ಬೀಳದೆ, ತಮ್ಮ ಅವಧಿಯಲ್ಲಿ ಉದ್ದೇಶಿತ ಯೋಜನೆಗಳನ್ನು ಪೂರ್ಣಗೊಳಿಸುವುದು ಸಾಧ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT