ADVERTISEMENT

ಮಕ್ಕಳಿಗೆ ಪಠ್ಯಪುಸ್ತಕ ಒದಗಿಸುವುದು ಆದ್ಯತೆಯ ವಿಷಯವಾಗಬೇಕು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 20:00 IST
Last Updated 11 ಅಕ್ಟೋಬರ್ 2019, 20:00 IST
   

ಉತ್ತರ ಕರ್ನಾಟಕದ ಎಂಟು ಶೈಕ್ಷಣಿಕ ಜಿಲ್ಲೆಗಳಲ್ಲಿ ಎರಡು ತಿಂಗಳುಗಳಿಂದ ಪಠ್ಯಪುಸ್ತಕಗಳು ಇಲ್ಲದೆಯೇ ಮಕ್ಕಳು ಕಲಿಯುವ ಪರಿಸ್ಥಿತಿ ಇರುವುದು ಶೋಚನೀಯ. ಚಿಕ್ಕೋಡಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಹಾಗೂ ನೆರೆಯಿಂದಾಗಿ ವಿದ್ಯಾರ್ಥಿಗಳ ಪಠ್ಯಪುಸ್ತಕಗಳು ಕೊಚ್ಚಿಕೊಂಡು ಹೋಗಿವೆ.

ಕನ್ನಡ, ಮರಾಠಿ, ಉರ್ದು ಮಾಧ್ಯಮ ಸೇರಿದಂತೆ 7.31 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ನೀರುಪಾಲಾಗಿರುವುದರಿಂದ, ಮಕ್ಕಳಿಗೆ ಓದಲು ಪಠ್ಯಪುಸ್ತಕಗಳು ಹಾಗೂ ಬರೆಯಲು ಲೇಖನ ಸಾಮಗ್ರಿಗಳು ಇಲ್ಲದಂತಾಗಿವೆ. ಪುಸ್ತಕಗಳಷ್ಟೇ ಅಲ್ಲ, ಅನೇಕ ಊರುಗಳಲ್ಲಿ ಶಾಲಾ ಕೊಠಡಿಗಳೇ ಮಳೆ–ಪ್ರವಾಹಕ್ಕೆ ತುತ್ತಾಗಿವೆ. ಅಂತಹ ಪ್ರದೇಶಗಳಲ್ಲಿ ದೇವಸ್ಥಾನ ಹಾಗೂ ಸಮುದಾಯ ಭವನಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಕೆಲವೆಡೆ ಮರಗಳಡಿ ತರಗತಿಗಳನ್ನು ನಡೆಸಬೇಕಾದ ಅನಿವಾರ್ಯವೂ ಇದೆ.

ಇಂತಹ ಜಾಗಗಳಲ್ಲಿ ಕುಡಿಯುವ ನೀರು, ಶೌಚಾಲಯದಂತಹ ಮೂಲ ಸೌಕರ್ಯಗಳೇ ಇಲ್ಲ. ನೆರೆ ದುರಂತ ಸಂಭವಿಸಿ ಎರಡು ತಿಂಗಳು ಕಳೆದರೂ ಪರಿಸ್ಥಿತಿ ಸುಧಾರಿಸಿಲ್ಲ ಎನ್ನುವುದು ಆತಂಕ ಹುಟ್ಟಿಸುವ ಸಂಗತಿ. ಈ ಅವ್ಯವಸ್ಥೆಯಿಂದಾಗಿ ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎನ್ನುವ ವರದಿಗಳಿವೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದ ಪರಿಹಾರ ಕೇಂದ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಭೇಟಿ ನೀಡಿದ್ದಾಗ, ವಿದ್ಯಾರ್ಥಿನಿಯೊಬ್ಬಳು ತನ್ನ ಪಠ್ಯಪುಸ್ತಕಗಳು ನೆರೆಯಲ್ಲಿ ಕೊಚ್ಚಿಹೋಗಿರುವ ಸಂಕಟವನ್ನು ತೋಡಿಕೊಂಡಿದ್ದಳು. ಮುಖ್ಯಮಂತ್ರಿ ಗಮನಕ್ಕೆ ಆ ಘಟನೆ ಬಂದು ಎರಡು ತಿಂಗಳು ಕಳೆದ ನಂತರವೂ ಸಾವಿರಾರು ಸಂತ್ರಸ್ತ ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ನಿರೀಕ್ಷೆಯಲ್ಲಿರುವುದು ಆಡಳಿತಯಂತ್ರದ ಆಮೆವೇಗಕ್ಕೆ ಉದಾಹರಣೆಯಂತಿದೆ.

ADVERTISEMENT

ರಾಜ್ಯದ ವಿವಿಧೆಡೆಗಳಲ್ಲಿ ಉಳಿದಿರುವ ಹೆಚ್ಚುವರಿ ಪುಸ್ತಕಗಳನ್ನು ಅಗತ್ಯವಿರುವೆಡೆ ಕಳಿಸುವುದಾಗಿ ಶಿಕ್ಷಣ ಇಲಾಖೆ ಹೇಳಿತ್ತು. ಅದರಿಂದ ಹೆಚ್ಚಿನ ಉಪಯೋಗವೇನೂ ಆದಂತಿಲ್ಲ. ಇನ್ನು ಹದಿನೈದು ದಿನಗಳಲ್ಲಿ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗುವುದು ಎಂದು ಅಧಿಕಾರಿಗಳು ಈಗ ಹೇಳಿದ್ದಾರೆ. ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರುವ ದಿನಗಳಲ್ಲಿ ಪಠ್ಯಪುಸ್ತಕಗಳನ್ನು ಪೂರೈಸಲು ಎರಡೂವರೆ ತಿಂಗಳ ಸಮಯ ಬೇಕಾಗುತ್ತದೆ ಎನ್ನುವುದು ಅಚ್ಚರಿಯಷ್ಟೇ ಅಲ್ಲ, ವಿಷಾದಕರ ಸಂಗತಿಯೂ ಹೌದು.

ಪ್ರವಾಹಪೀಡಿತ ಪ್ರದೇಶಗಳ ಅನೇಕ ಶಾಲೆಗಳಲ್ಲಿ ಕಲಿಕಾ ಸಾಮಗ್ರಿಗಳಿಲ್ಲದೆಯೇ ವಿದ್ಯಾರ್ಥಿಗಳು ಅರ್ಧವಾರ್ಷಿಕ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಯ ನಂತರದ ದಸರೆ ರಜೆಯೂ ಮುಗಿಯುತ್ತಿದ್ದು, ಶಾಲೆಗಳ ಬಾಗಿಲುಗಳು ಮತ್ತೆ ತೆರೆಯಲಿವೆ. ಆದರೂ ವಿದ್ಯಾರ್ಥಿಗಳ ಸಂಕಷ್ಟ ಬಗೆಹರಿದಿಲ್ಲ. ಈ ನಡುವೆ ಏಳನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ಸರ್ಕಾರ ಉತ್ಸುಕವಾಗಿದೆ.

ಪಠ್ಯಪುಸ್ತಕಗಳೇ ಇಲ್ಲದಿರುವ ಸಂದರ್ಭದಲ್ಲಿ ಪಬ್ಲಿಕ್ ಪರೀಕ್ಷೆಯ ಆತಂಕವನ್ನೂ ವಿದ್ಯಾರ್ಥಿಗಳ ಜೊತೆಗೆ ಪಾಲಕರು–ಬೋಧಕರು ಎದುರಿಸಬೇಕಾಗಿದೆ. ಕಲಿಕೆಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಪಠ್ಯ‍ಪುಸ್ತಕಗಳ ಸರಬರಾಜನ್ನು ಸರ್ಕಾರ ಅತ್ಯಂತ ಆದ್ಯತೆಯ ವಿಷಯವನ್ನಾಗಿ ಪರಿಗಣಿಸಬೇಕು.

ಶಾಲಾ ಕೊಠಡಿಗಳ ದುರಸ್ತಿಯೂ ತ್ವರಿತವಾಗಿ ನಡೆಯಬೇಕು. ಸುರಕ್ಷಿತ ಹಾಗೂ ಆರೋಗ್ಯಕರ ಪರಿಸರದಲ್ಲಿ ಮಕ್ಕಳ ಕಲಿಕೆ ನಿರಾತಂಕವಾಗಿ ನಡೆಯುವ ಪರಿಸ್ಥಿತಿಯನ್ನು ಸರ್ಕಾರ ಕಲ್ಪಿಸಬೇಕು. ಪಠ್ಯಪುಸ್ತಕಗಳ ಸರಬರಾಜಿನಲ್ಲಿ ಏರುಪೇರಾಗುವುದು ಹೊಸತೇನಲ್ಲ. ಶೈಕ್ಷಣಿಕ ವರ್ಷದಲ್ಲಿ ಅರ್ಧ ಭಾಗ ಮುಗಿಯುತ್ತ ಬಂದರೂ ಪುಸ್ತಕಗಳ ಸರಬರಾಜು ಪೂರ್ಣಗೊಳ್ಳದಿರುವ ದೂರುಗಳನ್ನು ಪ್ರತಿವರ್ಷ ಕೇಳುತ್ತಲೇ ಬಂದಿದ್ದೇವೆ. ಇಂಥ ದೂರುಗಳ ಕುರಿತಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂವೇದನೆಯನ್ನೇ ಕಳೆದುಕೊಂಡಿರುವಂತಿದೆ.

ಗುಣಮಟ್ಟದ ಶಿಕ್ಷಣವನ್ನು ನೀಡುವ ಬಗ್ಗೆ ಉತ್ಸುಕರಾಗಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಅವರು ಮೊದಲಿಗೆ ತಮ್ಮ ಇಲಾಖೆಯ ಆಡಳಿತಯಂತ್ರವನ್ನು ಚುರುಕುಗೊಳಿಸಬೇಕಾಗಿದೆ. ಆ ನಿಟ್ಟಿನಲ್ಲಿ ಅವರು, ಪ್ರವಾಹಪೀಡಿತ ಪ್ರದೇಶಗಳಲ್ಲಿ ಅಸ್ತವ್ಯಸ್ತಗೊಂಡಿರುವ ಕಲಿಕೆಯ ವ್ಯವಸ್ಥೆಯನ್ನು ಹಳಿಗೆ ತರುವ ಬಗ್ಗೆ ಮೊದಲು ಗಮನ ಹರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.