ADVERTISEMENT

ಸಂಪಾದಕೀಯ | ರಾಜಕೀಯ ಆಟ ಆಡುವುದು ರಾಜ್ಯಪಾಲರಿಗೆ ಸಲ್ಲದ ನಡವಳಿಕೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2023, 23:15 IST
Last Updated 19 ಏಪ್ರಿಲ್ 2023, 23:15 IST
   

ಮಸೂದೆಗಳಿಗೆ ಅಂಕಿತ ಹಾಕದೆ ಸುಮ್ಮನೆ ಉಳಿಯುವ ಮೂಲಕ ರಾಜ್ಯಪಾಲರು ಶಾಸನಸಭೆಗಳಿಗೆ ಅಗೌರವ ತೋರುತ್ತಿದ್ದಾರೆ.

ರಾಜ್ಯಪಾಲರು ಹಾಗೂ ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳ ನಡುವೆ ಹೊಸದೊಂದು ವಿಚಾರವಾಗಿ ಈಗ ಸಂಘರ್ಷ ಉಂಟಾಗುತ್ತಿದೆ. ಅದು, ಆ ರಾಜ್ಯಗಳ ಶಾಸನಸಭೆಗಳು ಅನುಮೋದನೆ ನೀಡಿದ ಮಸೂದೆಗಳಿಗೆ ರಾಜ್ಯಪಾಲರು ಸಮ್ಮತಿ ಸೂಚಿಸುವುದಕ್ಕೆ ವಿಳಂಬ ಮಾಡುತ್ತಿರುವುದು. ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ, ಕೇರಳ, ತೆಲಂಗಾಣ ಮತ್ತು ಛತ್ತೀಸಗಡ ರಾ‌ಜ್ಯಪಾಲರು ಆಯಾ ರಾಜ್ಯಗಳ ಶಾಸನಸಭೆಗಳು ಅನುಮೋದನೆ ನೀಡಿರುವ ಮಸೂದೆಗಳಿಗೆ ಅಂಕಿತ ಹಾಕದೆ ಕುಳಿತಿದ್ದಾರೆ. ರಾಜ್ಯ ಸರ್ಕಾರಗಳ ಜೊತೆಗಿನ ಸಂಘರ್ಷದಲ್ಲಿ ಈ ರಾಜ್ಯಪಾಲರು, ಮಸೂದೆಗಳಿಗೆ ಸಹಿ ಹಾಕುವ ತಮ್ಮ ಅಧಿಕಾರವನ್ನು ಹೊಸ ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

‘ರಾಜ್ಯದ ವಿಧಾನಸಭೆಯು ಅನುಮೋದನೆ ನೀಡಿರುವ ಮಸೂದೆಗಳಿಗೆ ಕಾಲಮಿತಿಯಲ್ಲಿ ಅಂಕಿತ ಹಾಕುವಂತೆ ರಾಜ್ಯಪಾಲರಿಗೆ ತಕ್ಷಣವೇ ಸೂಕ್ತವಾದ ಸೂಚನೆಗಳನ್ನು ರವಾನಿಸಬೇಕು’ ಎಂದು ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಯವರಿಗೆ ಮನವಿ ಮಾಡುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆಯು ಈಚೆಗೆ ಕೈಗೊಂಡಿದೆ. ಇದೇ ಮಾದರಿಯ ನಿರ್ಣಯವನ್ನು ಕೇರಳದಲ್ಲಿಯೂ ಕೈಗೊಳ್ಳುವ ಇಂಗಿತವನ್ನು ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವ್ಯಕ್ತಪಡಿಸಿದ್ದಾರೆ. ಮಸೂದೆಯೊಂದಕ್ಕೆ ಅಂಕಿತ ಹಾಕುವಲ್ಲಿ ತೆಲಂಗಾಣದ ರಾಜ್ಯಪಾಲರು ಅನುಸರಿಸುತ್ತಿರುವ ವಿಳಂಬ ಧೋರಣೆಯು ಕಾನೂನುಬಾಹಿರ, ಸಂವಿಧಾನಬಾಹಿರ ಹಾಗೂ ಅಕ್ರಮ ಎಂದು ಘೋಷಿಸುವಂತೆ ಕೋರಿ ತೆಲಂಗಾಣ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ರಾಜ್ಯದ ವಿಧಾನಸಭೆ ಅನುಮೋದನೆ ನೀಡಿದ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬರಬೇಕು ಎಂದಾದರೆ ಅದಕ್ಕೆ ರಾಜ್ಯಪಾಲರ ಅಂಕಿತ ಬೇಕು. ಇದು ಸಂವಿಧಾನ ಹೇಳಿರುವ ನಿಯಮ. ಈ ವಿಚಾರದಲ್ಲಿ ಸಂವಿಧಾನದ 200ನೇ ವಿಧಿಯು ರಾಜ್ಯಪಾಲರಿಗೆ ಮೂರು ಆಯ್ಕೆಗಳನ್ನು ನೀಡುತ್ತದೆ. ಮೊದಲನೆಯದು, ಮಸೂದೆಗೆ ಅಂಕಿತ ಹಾಕುವುದು. ಎರಡನೆಯದು, ಮಸೂದೆಯನ್ನು ರಾಷ್ಟ್ರಪತಿ
ಅವರಿಗೆ ರವಾನಿಸುವುದು. ಮೂರನೆಯದು, ಅಂಕಿತ ಹಾಕದೆ, ಆ ಮಸೂದೆಯನ್ನು ತಮ್ಮ ಅಭಿಪ್ರಾಯಗಳ ಜೊತೆ ಶಾಸನಸಭೆಗೆ ‘ಸಾಧ್ಯವಾದಷ್ಟು ಬೇಗ’ ವಾಪಸ್ ಕಳುಹಿಸುವುದು.

ADVERTISEMENT

ಹೀಗೆ ವಾಪಸ್ ಕಳುಹಿಸಿದ ಸಂದರ್ಭದಲ್ಲಿ, ಶಾಸನಸಭೆಯು ಆ ಮಸೂದೆಗೆ ಮತ್ತೆ ಅನುಮೋದನೆ ನೀಡಿದರೆ, ರಾಜ್ಯಪಾಲರಿಗೆ ಆ ಮಸೂದೆಗೆ ಸಹಿ ಮಾಡದೆ ಬೇರೆ ಆಯ್ಕೆ ಉಳಿದುಕೊಳ್ಳುವುದಿಲ್ಲ. ಆದರೆ ರಾಜ್ಯಪಾಲರು ಮಸೂದೆಯೊಂದರ ವಿಚಾರವಾಗಿ ಎಷ್ಟು ಸಮಯದವರೆಗೆ ಯಾವುದೇ ತೀರ್ಮಾನ ಕೈಗೊಳ್ಳದೆ ಇರಬಹುದು ಎಂಬುದನ್ನು ಸಂವಿಧಾನವು ನಿರ್ದಿಷ್ಟವಾಗಿ ಹೇಳಿಲ್ಲ. ಕೆಲವು ರಾಜ್ಯಗಳ ರಾಜ್ಯಪಾಲರು ಈಗ ಇದನ್ನು ಬಳಸಿಕೊಂಡು, ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ವಿಳಂಬ ಮಾಡುತ್ತಿದ್ದಾರೆ. ಮಸೂದೆಯನ್ನು ತಡೆಹಿಡಿಯುವುದು ಅಂದರೆ ಅದನ್ನು ತಿರಸ್ಕರಿಸುವುದಕ್ಕೆ ಸಮ ಎಂದು ತಮಿಳುನಾಡಿನ ರಾಜ್ಯಪಾಲರು ಹೇಳಿದ್ದಾರೆ. ಸಂವಿಧಾನಕ್ಕೆ ವ್ಯಾಖ್ಯಾನ ನೀಡಿ, ಮಸೂದೆಯನ್ನು ತಿರಸ್ಕರಿಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ, ರಾಜ್ಯಪಾಲರು ರಾಜ್ಯದ ಸಚಿವ ಸಂಪುಟದ ಸಲಹೆ ಮತ್ತು ನೆರವು ಪಡೆದು ಮುಂದಕ್ಕೆ ಹೆಜ್ಜೆ ಇರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳು ಹಲವು ಬಾರಿ ಸ್ಪಷ್ಟಪಡಿಸಿವೆ.

ಕಾನೂನು ರೂಪಿಸುವ ಅಥವಾ ಇರುವ ಕಾಯ್ದೆಯನ್ನು ಹಿಂದಕ್ಕೆ ಪಡೆಯುವ ಅಧಿಕಾರ ಇರುವುದು ಶಾಸನಸಭೆಗಳಿಗೆ ಮಾತ್ರ. ಹೀಗಾಗಿ, ವಿಧಾನಸಭೆಯು ಹೊಂದಿರುವ ಕಾನೂನು ರೂಪಿಸುವ ಅಧಿಕಾರದಲ್ಲಿ ಹಸ್ತಕ್ಷೇಪದಂತೆ ಆಗುವ ಯಾವುದೇ ಕೆಲಸವನ್ನು ರಾಜ್ಯಪಾಲರು ಮಾಡುವಂತಿಲ್ಲ.

ಮಸೂದೆಗಳಿಗೆ ಅಂಕಿತ ಹಾಕದೆ ಸುಮ್ಮನೆ ಉಳಿಯುವ ಮೂಲಕ ರಾಜ್ಯಪಾಲರು ಶಾಸನಸಭೆಗಳಿಗೆ ಅಗೌರವ ತೋರುತ್ತಿದ್ದಾರೆ. ಮಸೂದೆಗಳು ಕಾಯ್ದೆಗಳಾಗದಂತೆ ತಡೆಯುವ ಮೂಲಕ ಅವರು ರಾಜ್ಯದ ಆಡಳಿತಕ್ಕೆ ಅಡ್ಡಿ ಉಂಟುಮಾಡುತ್ತಿದ್ದಾರೆ. ರಾಜ್ಯಗಳ ಪಾಲಿಗೆ ಅಗತ್ಯವಿರುವ ಕಾಯ್ದೆಗಳು ಯಾವುವು ಎಂಬುದನ್ನು ತೀರ್ಮಾನಿಸುವ ಅಧಿಕಾರ ಇರುವುದು ಅಲ್ಲಿನ ವಿಧಾನಸಭೆಗಳಿಗೆ. ಕಾಯ್ದೆಗಳನ್ನು ಅನುಷ್ಠಾನಕ್ಕೆ ತರಬೇಕಿರುವುದು ಅಲ್ಲಿನ ಸರ್ಕಾರದ ಹೊಣೆ. ಇಲ್ಲಿ ರಾಜ್ಯಪಾಲರಿಗೆ ಹೆಚ್ಚಿನ ಪಾತ್ರ ಇಲ್ಲ. ಸರ್ಕಾರದ ದಿನನಿತ್ಯದ ಕಾರ್ಯಗಳಿಗೆ ರಾಜ್ಯಪಾಲರಿಂದ ಅಡ್ಡಿ ಉಂಟಾಗದಂತೆ ನೋಡಿಕೊಳ್ಳಲು, ಅಗತ್ಯ ಎದುರಾದರೆ, ಎಲ್ಲ ರಾಜ್ಯಗಳೂ ಕೇಂದ್ರದ ಎದುರು ಹಾಗೂ ರಾಷ್ಟ್ರಪತಿ ಎದುರು ತಮ್ಮ ವಿಚಾರ ಮಂಡಿಸಬೇಕು. ಸಂದರ್ಭ ಎದುರಾದಲ್ಲಿ ಸುಪ್ರೀಂ ಕೋರ್ಟ್‌ಗೂ ಮನವರಿಕೆ ಮಾಡಿಕೊಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.