ರಾಜ್ಯದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆ ಸುಧಾರಣೆ ಮಾಡುವ ಮಾತುಗಳನ್ನು ನಮ್ಮ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿಹೇಳಿದ್ದಾರೆ. ಶಾಲಾ ಶಿಕ್ಷಣ ಸುಧಾರಣೆಗೆ ದೆಹಲಿ ಮಾದರಿ ಅಧ್ಯಯನಕ್ಕೆ ಅವರು ಕರೆ ನೀಡಿದ್ದಾರೆ. ದೆಹಲಿಯ ಸರ್ಕಾರಿ ಶಾಲೆಗಳ ಶಿಕ್ಷಕರನ್ನು ತರಬೇತಿಗಾಗಿ ಫಿನ್ಲೆಂಡ್ ಮತ್ತು ಸಿಂಗಪುರಗಳಿಗೆ ಕಳಿಸಲಾಗಿತ್ತು. ಇದೇ ರೀತಿ, ರಾಜ್ಯದ ಶಿಕ್ಷಕರನ್ನೂ ತರಬೇತಿಗಾಗಿ ವಿದೇಶಗಳಿಗೆ ಕಳಿಸುವ ವಿಚಾರವನ್ನೂ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ.
ದೆಹಲಿಯಲ್ಲಿ 2015ರಲ್ಲಿ ಎಎಪಿ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ, ಅಲ್ಲಿನ ಸರ್ಕಾರಿ ಶಾಲೆಗಳಲ್ಲಿ ಬೋಧನಾ ವಿಧಾನ ಹಾಗೂ ಶಿಕ್ಷಣ ಗುಣಮಟ್ಟ ಸುಧಾರಣೆಯಾಗಿರುವುದು ನಿಜ. ಶಾಲೆಗಳಲ್ಲಿ ಮೂಲಸೌಕರ್ಯಗಳಲ್ಲದೆ ಪಠ್ಯ ಕ್ರಮಗಳಲ್ಲೂ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿದ್ದು ಇದಕ್ಕೆ ಕಾರಣ. ನಮ್ಮ ಶಾಲೆ ಎಂಬ ಭಾವನೆಯನ್ನು ಅಲ್ಲಿ ಬಿತ್ತಿ ಬೆಳೆಸಲಾಗಿದೆ. ಉಚಿತಶಿಕ್ಷಣ, ಉಚಿತ ಪಠ್ಯಪುಸ್ತಕ, ಬಿಸಿಯೂಟ ಸೌಲಭ್ಯಗಳೂ ಸರ್ಕಾರಿ ಶಾಲೆಗಳ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿವೆ ಎಂಬ ವರದಿಗಳೂ ಇವೆ. ನಮ್ಮಲ್ಲೂ ಉಚಿತ ಪಠ್ಯಪುಸ್ತಕ, ಬಿಸಿಯೂಟ, ಉಚಿತ ಸಮವಸ್ತ್ರ ಎಂದೆಲ್ಲಾ ಅನೇಕ ಸೌಲಭ್ಯಗಳಿವೆ.
ಹೀಗಿದ್ದೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಏಕೆ ಕುಸಿಯುತ್ತಿದೆ ಎಂಬುದು ಪ್ರಶ್ನೆ. ಇಂಗ್ಲಿಷ್ ಮಾಧ್ಯಮದ ಆಕರ್ಷಣೆಯಿಂದ ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ ಎಂಬ ವಾದ ಮುಂದಿಡಲಾಗುತ್ತದೆ. ಆದರೆ ಇದೊಂದೇ ಕಾರಣವಲ್ಲ ಎಂಬುದು ವಾಸ್ತವ. ಮೂಲಸೌಕರ್ಯಗಳಿಲ್ಲದಿರುವುದು, ಶಿಕ್ಷಕರ ಕೊರತೆ ಹಾಗೂ ಸೂಕ್ತ ಪರಿಸರ ಇಲ್ಲದಿರುವುದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯಲು ಕಾರಣ ಎಂದು ಅನೇಕ ಸಮೀಕ್ಷೆಗಳು ಹೇಳಿವೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಇತ್ತೀಚೆಗೆ ನಡೆಸಲಾದ ಸಮೀಕ್ಷೆಯೊಂದು ಬೇರೆಯದೇ ಕಥೆ ಹೇಳುತ್ತಿದೆ. ಸ್ವಗ್ರಾಮದಲ್ಲಿ ಶಾಲೆ ಇಲ್ಲ ಎಂಬ ಕಾರಣಕ್ಕಾಗಿಯೇ ಹೆಚ್ಚಿನ ಮಕ್ಕಳು ಶಾಲೆಯನ್ನು ಅರ್ಧಕ್ಕೇ ಬಿಡುತ್ತಿದ್ದಾರೆ ಎಂಬ ಆತಂಕಕಾರಿ ಅಂಶ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.
ತಮ್ಮ ಊರಿನಲ್ಲಿಯೇ ಶಾಲೆ ಇದ್ದರೆ ಚೆನ್ನಾಗಿರುತ್ತದೆ ಎಂದು ಸಮೀಕ್ಷೆಗೊಳಪಟ್ಟ ಶೇ 88ರಷ್ಟು ಮಕ್ಕಳು ಹೇಳಿದ್ದಾರೆ. ‘8ನೇ ತರಗತಿ ಮುಂದುವರೆಸಲು ಇಚ್ಛೆಯಿದ್ದು ಓದುತ್ತಿರುವ ಶಾಲೆಯಲ್ಲಿಯೇ 8ನೇ ತರಗತಿ ಇಲ್ಲ ಎಂಬ ಕಾರಣಕ್ಕೆ ಶಾಲೆ ಬಿಡುತ್ತಿದ್ದೇವೆ’ ಎಂದು ಶೇ 56ರಷ್ಟು ಮಕ್ಕಳು ಹೇಳಿರುವುದು ಬೇರುಮಟ್ಟದಲ್ಲಿರುವ ಸಮಸ್ಯೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಇದು ನೀಡುವ ಪೆಟ್ಟು ದೊಡ್ಡದು. ಹೀಗಿದ್ದೂ ಪ್ರತಿ ವರ್ಷ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಲಸ ನಿರಂತರವಾಗಿ ನಡೆದುಕೊಂಡು ಬರುತ್ತಿರುವುದು ವಿಪರ್ಯಾಸ.
ಈ ಮಧ್ಯೆ, ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ಕಳಿಸಬೇಕೆಂಬ ನೀತಿಯನ್ನು ರೂಪಿಸುವ ಬಗ್ಗೆ ಪ್ರಾಥಮಿಕ ಶಿಕ್ಷಣ ಸಚಿವರು ಇತ್ತೀಚೆಗೆ ಮಾತನಾಡಿದ್ದಾರೆ. ಸರ್ಕಾರಿ ಶಾಲೆಗಳನ್ನು ಸುಧಾರಿಸಿದಲ್ಲಿ ಈ ಒತ್ತಡ ತಂತ್ರದ ಅಗತ್ಯವೇ ಬೀಳದು. ಸರ್ಕಾರಿ ಶಾಲೆಗಳ ಯಶಸ್ಸಿನ ಮಾದರಿಗಳಾಗಿರುವ ಕೇಂದ್ರೀಯ ವಿದ್ಯಾಲಯಗಳು ರಾಜ್ಯಕ್ಕೆ ಮಾದರಿಯಾಗಬೇಕು.
ಇಂಗ್ಲಿಷ್ ಭಾಷೆ ಚೆನ್ನಾಗಿ ಬಲ್ಲ 1000 ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸುವ ಬಗ್ಗೆಯೂ ಮುಖ್ಯಮಂತ್ರಿ ಮಾತನಾಡಿದ್ದಾರೆ. ಈಗಿರುವ ಶಿಕ್ಷಕರಿಗೆ ವಿಶೇಷ ಇಂಗ್ಲಿಷ್ ಕೋಚಿಂಗ್ ಕೊಡಿಸುವ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ಜೊತೆಗೆ, ಇಂಗ್ಲಿಷ್ ಭಾಷೆ ಗೊತ್ತಿದ್ದರೂ ಮಾತನಾಡಲು ತಮಗೆ ಎದುರಾಗುವ ಹಿಂಜರಿಕೆಯ ಬಗ್ಗೆಯೂ ಮುಖ್ಯಮಂತ್ರಿ ಮನಬಿಚ್ಚಿ ಹೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕು ಎಂಬುದು ಪರಿಹಾರವಾಗದು ಎಂಬುದನ್ನು ಅರಿತುಕೊಳ್ಳುವುದೂ ಸೂಕ್ತ. ಇಂಗ್ಲಿಷ್ ಅನ್ನು ಭಾಷೆಯಾಗಿ ಚೆನ್ನಾಗಿ ಕಲಿಸುವುದು ಮುಖ್ಯ. ಇಂಗ್ಲಿಷ್ ಸಂವಹನ ಕೌಶಲ ಹೆಚ್ಚಿಸುವ ಪಠ್ಯಗಳ ಸೃಷ್ಟಿಗೆ ಗಮನ ಅಗತ್ಯ. ಮಕ್ಕಳ ಕಲಿಕಾ ಮಟ್ಟ ತೀರಾ ಕೆಳಹಂತದಲ್ಲಿರುವುದನ್ನು ಶೈಕ್ಷಣಿಕ ಟ್ರಸ್ಟ್ ‘ಪ್ರಥಮ್’ ವರದಿಗಳು ದಾಖಲಿಸುತ್ತಲೇ ಇವೆ.
ಬೋಧನೆಯ ಜೊತೆಗೆ ಅನೇಕ ಸರ್ಕಾರಿ ಕಾರ್ಯಕ್ರಮಗಳ ನಿರ್ವಹಣೆಯ ಹೊರೆ ಶಿಕ್ಷಕರ ಮೇಲಿದೆ. ಪ್ರಾಥಮಿಕ ಶಿಕ್ಷಣ ಗುಣಮಟ್ಟ ಕುಸಿಯಲು ಇದೂ ಕಾರಣವಾಗುತ್ತಿದೆಯೇ ಎಂಬುದನ್ನು ಅವಲೋಕಿಸಬೇಕು. ಬೋಧನೆಯ ಮೌಲ್ಯ ಅರಿತುಕೊಳ್ಳದ ಸಮಾಜ ನಮ್ಮದಾಗಿದೆ. ಶಾಲಾಪಠ್ಯಗಳನ್ನು ಪಾಠ ಮಾಡಿ ಪರೀಕ್ಷೆಗೆ ಮಕ್ಕಳನ್ನು ಅಣಿ ಮಾಡುವುದಷ್ಟೇ ಶಿಕ್ಷಕಿಯ ಕೆಲಸವಲ್ಲ. ನಾಳಿನ ಪ್ರಜೆಗಳನ್ನು ತಯಾರು ಮಾಡುವ ಮಹತ್ತರ ಹೊಣೆಗಾರಿಕೆ ಶಿಕ್ಷಕರದ್ದು. ಶಿಕ್ಷಣಕ್ಕೆ ವ್ಯಯಿಸುವ ಹಣ ವೆಚ್ಚವಲ್ಲ. ಬದಲಿಗೆ ಉತ್ತಮ ನಾಳೆಗಳಿಗಾಗಿ ವಿನಿಯೋಗಿಸುವ ಹೂಡಿಕೆ ಎಂಬುದನ್ನು ಮನಗಾಣಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.