ADVERTISEMENT

ಸಂಪಾದಕೀಯ | ಬಸ್‌ ಚಾಲಕ, ಸಿಬ್ಬಂದಿಯ ಆರೋಗ್ಯ ಸುರಕ್ಷಿತ ಪ್ರಯಾಣಕ್ಕೆ ಅಗತ್ಯ

ಸಂಪಾದಕೀಯ
Published 14 ನವೆಂಬರ್ 2024, 0:12 IST
Last Updated 14 ನವೆಂಬರ್ 2024, 0:12 IST
   

ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಬಸ್ಸಿನ ಚಾಲಕರೊಬ್ಬರು ಚಾಲನೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿರುವುದು ಚಾಲಕರ ಆರೋಗ್ಯ ಮತ್ತು ಅವರ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಬೇಕಿರುವ ಅಗತ್ಯವನ್ನು ಹೇಳುತ್ತಿದೆ. ಅದೃಷ್ಟವಶಾತ್, ಆ ಬಸ್ಸಿನಲ್ಲಿ ಪ್ರಯಾಣಿಕರು ಇರಲಿಲ್ಲ. ಚಾಲಕನಿಗೆ ಹೃದಯಾಘಾತ ಆಗಿದ್ದನ್ನು ಗಮನಿಸಿದ ಬಸ್ಸಿನ ನಿರ್ವಾಹಕ, ಬಸ್ಸಿನ ಸ್ಟಿಯರಿಂಗ್ ಹಿಡಿದು, ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸುವ ಕೆಲಸ ಮಾಡಿದರು. ಅದೇನೇ ಇದ್ದರೂ ಇಂತಹ ಘಟನೆಗಳು ಬಸ್ಸಿನ ಚಾಲಕ ಹಾಗೂ ಸಿಬ್ಬಂದಿಯ ಜೀವಕ್ಕೆ ಅಪಾಯ ತರುವುದಷ್ಟೇ ಅಲ್ಲದೆ, ರಸ್ತೆಯನ್ನು ಬಳಸುವ ಇತರ ಎಲ್ಲರ ಜೀವಕ್ಕೂ ಕುತ್ತು ತರುತ್ತವೆ. ಬೆಂಗಳೂರಿನ ಸಂಚಾರ ದಟ್ಟಣೆಯು ಪಡೆದಿರುವ ಕುಖ್ಯಾತಿ ಹಾಗೂ ನಗರದ ಅತಿ ಒತ್ತಡದ ಜೀವನಶೈಲಿಯನ್ನು ಗಮನಿಸಿದರೆ, ಚಾಲಕರ ಆರೋಗ್ಯದ ಬಗ್ಗೆ ತೀವ್ರ ಆದ್ಯತೆಯ ಮೇರೆಗೆ ಗಮನಹರಿಸಬೇಕಿದೆ ಎಂಬುದು ವೇದ್ಯವಾಗುತ್ತದೆ. ಸಿಬ್ಬಂದಿಯ ಆರೋಗ್ಯವನ್ನು ಕಾಲಕಾಲಕ್ಕೆ ತಪಾಸಣೆಗೆ ಒಳಪಡಿಸಲು ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆಯ ಜೊತೆ ಬಿಎಂಟಿಸಿ ಒಪ್ಪಂದ ಮಾಡಿಕೊಂಡಿದೆ. ಇದು ಸ್ವಾಗತಾರ್ಹ. ಆದರೆ, ಇದೇ ಬಗೆಯ ಆರೋಗ್ಯ ತಪಾಸಣಾ ಕ್ರಮಗಳು ರಾಜ್ಯದ ಇತರ ರಸ್ತೆ ಸಾರಿಗೆ ನಿಗಮಗಳಲ್ಲಿಯೂ ಇವೆಯೇ ಎಂಬುದು ಖಚಿತವಿಲ್ಲ. ದೊಡ್ಡ ಸಂಖ್ಯೆಯಲ್ಲಿ ಜನರನ್ನು ಒಂದೆಡೆಯಿಂದ ಇನ್ನೊಂದೆಡೆ ಕರೆದೊಯ್ಯುವ ಖಾಸಗಿ ಬಸ್ಸುಗಳ ಸಿಬ್ಬಂದಿಯನ್ನು ಇದೇ ರೀತಿ ತಪಾಸಣೆಗೆ ಒಳಪಡಿಸಲಾಗುತ್ತಿಲ್ಲ ಎಂಬುದು ಕಳವಳ ಮೂಡಿಸುವಂಥದ್ದು. ಸಾರಿಗೆ ನಿಗಮಗಳ ಸಿಬ್ಬಂದಿಯ ಕೆಲಸದ ಅವಧಿಯು ಬಹಳ ದೀರ್ಘವಾಗಿ ಇರುತ್ತದೆಯಾದ ಕಾರಣ, ಅವರನ್ನು ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಪಡಿಸಬೇಕಿರುವುದು ಅವರ ಸುರಕ್ಷತೆ ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಬಹಳ ಅವಶ್ಯಕ.

ಬೆಂಗಳೂರಿನ ರಸ್ತೆ ಜಾಲವು ಬಹಳ ಸಂಕೀರ್ಣವಾದ ಹಾಗೂ ವಿಶಿಷ್ಟವಾದ ಸವಾಲುಗಳನ್ನು ಒಡ್ಡುತ್ತದೆ. ಅದೇ ರೀತಿಯಲ್ಲಿ, ಉತ್ತರ ಕರ್ನಾಟಕದ ಹಲವೆಡೆ ಕೂಡ ಸಮಸ್ಯೆಗಳು ಇವೆ. ಅಲ್ಲಿ ಬಸ್ಸುಗಳು ಹಳೆಯದಾಗಿವೆ, ಅವುಗಳ ನಿರ್ವಹಣೆ ಸರಿಯಾಗಿಲ್ಲ. ಈ ಪರಿಣಾಮವಾಗಿ ಬಸ್ಸುಗಳು ಹಾಳಾಗುವ, ಅಪಘಾತಕ್ಕೆ ಈಡಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಪಘಾತ ಸಂಭವಿಸಿ ವೈದ್ಯಕೀಯ ತುರ್ತು ಸಂದರ್ಭ ಸೃಷ್ಟಿಯಾದಾಗ ಪರಿಣಾಮಗಳು ಬಹಳ ಕೆಟ್ಟದ್ದಾಗಿರುತ್ತವೆ. ಹಲವು ಬಸ್ಸುಗಳಲ್ಲಿ ಮೂಲಭೂತ ಸುರಕ್ಷತಾ ಅಗತ್ಯವಾದ ಪ್ರಥಮ ಚಿಕಿತ್ಸೆ ಪರಿಕರಗಳು ಇರುವುದಿಲ್ಲ. ತುರ್ತು ಸಂದರ್ಭ ಎದುರಾದರೆ ಅದನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಎಲ್ಲ ಚಾಲಕರು ಹಾಗೂ ನಿರ್ವಾಹಕರಿಗೆ ತರಬೇತಿ ಇರುವುದಿಲ್ಲ. ಸುರಕ್ಷತಾ ಕ್ರಮಗಳ ವಿಚಾರದಲ್ಲಿನ ಸಿದ್ಧತೆಯ ಈ ಕೊರತೆಗಳು, ಸಿಬ್ಬಂದಿಯನ್ನು ಮತ್ತು ಪ್ರಯಾಣಿಕರನ್ನು ರಕ್ಷಿಸಲು ಇನ್ನಷ್ಟು ಹೆಚ್ಚು ಉತ್ತಮವಾದ, ಸಮಗ್ರವಾದ ಸುರಕ್ಷತಾ ಕ್ರಮಗಳ ಅಗತ್ಯವನ್ನು ಎತ್ತಿತೋರಿಸುತ್ತವೆ. ಸಿಬ್ಬಂದಿಯ ಆರೋಗ್ಯವನ್ನು ಕಾಲಕಾಲಕ್ಕೆ ತಪಾಸಣೆಗೆ ಒಳಪಡಿಸುವುದಷ್ಟೇ ಅಲ್ಲದೆ, ಪ್ರತಿ ಘಟಕದಲ್ಲಿಯೂ (ಡಿಪೊ) ಒಬ್ಬ ವೈದ್ಯ ಹಾಗೂ ಒಬ್ಬ ಆಪ್ತಸಮಾಲೋಚಕನನ್ನು ನಿಯೋಜಿಸುವ ಅಗತ್ಯದ ಬಗ್ಗೆ ಪರಿಶೀಲಿಸಬೇಕು. ದೈಹಿಕ ಆರೋಗ್ಯದ ಸಮಸ್ಯೆಗಳಷ್ಟೇ ಅಲ್ಲದೆ, ಸಾರಿಗೆ ನಿಗಮಗಳ ಸಿಬ್ಬಂದಿಯು ವೈಯಕ್ತಿಕವಾಗಿ ಮತ್ತು ವೃತ್ತಿಯ ನೆಲೆಯಲ್ಲಿ ಅತಿಯಾದ ಒತ್ತಡವನ್ನು ಎದುರಿಸುತ್ತಿರುತ್ತಾರೆ. ಇದು ಅವರ ಕಾರ್ಯಕ್ಷಮತೆಯ ಮೇಲೆ, ಸುರಕ್ಷಿತವಾಗಿ ಕೆಲಸಗಳನ್ನು ನಿರ್ವಹಿಸುವುದರ ಮೇಲೆ ಪರಿಣಾಮ ಉಂಟುಮಾಡುತ್ತದೆ. ಹೆಚ್ಚು ಒತ್ತಡ ಉಂಟುಮಾಡುವ ಉದ್ಯೋಗಗಳಲ್ಲಿ ಇರುವವರ ದೈಹಿಕ ಆರೋಗ್ಯದ ಮೇಲೆ ನಿಗಾ ಇರಿಸಿದರಷ್ಟೇ ಸಾಕಾಗುವುದಿಲ್ಲ. ಖಾಸಗಿ ಬಸ್ಸುಗಳ ನಿರ್ವಹಣೆಯಲ್ಲಿ ತೊಡಗಿರುವವರನ್ನು ಕೂಡ ಸರ್ಕಾರಿ ಬಸ್ಸುಗಳ ಸಿಬ್ಬಂದಿಗೆ ನಿಗದಿಪಡಿಸಿದಂತಹ ಆರೋಗ್ಯ ತಪಾಸಣೆಗಳಿಗೆ ಒಳಪಡಿಸಬೇಕು. ಸರ್ಕಾರಿ ಹಾಗೂ ಖಾಸಗಿ ವಲಯಗಳಿಂದ ಒಗ್ಗಟ್ಟಿನ ಯತ್ನವೊಂದು ನಡೆಯಬೇಕಿರುವುದು ರಸ್ತೆಗಳನ್ನು ಸುರಕ್ಷಿತವಾಗಿಸುವ ದಿಸೆಯಲ್ಲಿ ಅಗತ್ಯ ಕ್ರಮ.

ಬಿಎಂಟಿಸಿ ಬಸ್‌ ಚಾಲಕನ ಸಾವು ಸಾರಿಗೆ ಅಧಿಕಾರಿಗಳಿಗೆ ಮುನ್ನೆಚ್ಚರಿಕೆಯ ಗಂಟೆಯಂತೆ ಆಗಬೇಕು. ಸಿಬ್ಬಂದಿಯ ಆರೋಗ್ಯ ತಪಾಸಣೆ, ಅವರಿಗೆ ಅಗತ್ಯ ತರಬೇತಿ ಹಾಗೂ ಇತರ ಸುರಕ್ಷತಾ ಕ್ರಮಗಳ ವಿಚಾರವಾಗಿ ಸರ್ಕಾರವು ತ್ವರಿತವಾಗಿ ನಿಯಮಗಳನ್ನು ರೂಪಿಸಬೇಕು. ನಿಯಮಗಳನ್ನು ಪಾಲನೆ ಮಾಡದೆ ಇರುವವರಿಗೆ ಭಾರಿ ದಂಡ ವಿಧಿಸಬೇಕು. ಆರೋಗ್ಯ ತಪಾಸಣೆ, ಭಾವನಾತ್ಮಕ ನೆಲೆಯಲ್ಲಿ ಬೆಂಬಲ, ಉತ್ತಮವಾದ ತರಬೇತಿ ಹಾಗೂ ಸುಧಾರಿತ ಸುರಕ್ಷತಾ ಗುಣಮಟ್ಟದ ಮೂಲಕ ಮಾತ್ರ ದುರಂತಗಳನ್ನು ತಡೆಯಬಹುದು, ರಸ್ತೆಗಳು ಜನರ ಪಾಲಿಗೆ ಸುರಕ್ಷಿತವಾಗಿ ಇರುವಂತೆ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.