ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಜೈಲು ಕೈಪಿಡಿಗಳಲ್ಲಿ ಇದ್ದ ಜಾತಿ ಆಧಾರಿತ ತಾರತಮ್ಯದ ಕ್ರಮಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ನ ತೀರ್ಪು ಒಂದು ಮೈಲಿಗಲ್ಲು. ಇದು ಹಲವು ದಶಕಗಳಿಂದ ಜೈಲು ಕೈಪಿಡಿಗಳಿಗೆ ಅಂಟಿದ್ದ ಕಳಂಕವೊಂದನ್ನು ತೊಳೆಯುವ ಕೆಲಸ ಮಾಡಿದೆ. ಜಾತಿಯ ಆಧಾರದಲ್ಲಿ ಕೆಲಸಗಳನ್ನು ಹಂಚಿಕೆ ಮಾಡುವುದು ಸೇರಿದಂತೆ ಜಾತಿ ಆಧಾರಿತ ತಾರತಮ್ಯವನ್ನು ಕೊನೆಗೊಳಿಸಲು ಜೈಲು ಕೈಪಿಡಿಗಳಿಗೆ ಬದಲಾವಣೆ ತರಬೇಕು ಎಂದು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೋರ್ಟ್ ಸೂಚಿಸಿದೆ. ಮಾದರಿ ಜೈಲು ಕೈಪಿಡಿಯಲ್ಲಿ ಹಾಗೂ ‘ಮಾದರಿ ಜೈಲು ಮತ್ತು ಸುಧಾರಣಾ ಸೇವೆಗಳ ಕಾಯ್ದೆ–2023’ರಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರಕ್ಕೆ ಕೂಡ ಕೋರ್ಟ್ ಸೂಚನೆ ನೀಡಿದೆ. ಜಾತಿ ತಾರತಮ್ಯವು ಜೈಲು ಕೈಪಿಡಿಗಳಲ್ಲಿ ಇರುವುದನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ಕೋರ್ಟ್ ಗಮನಕ್ಕೆ ತಂದಿದ್ದರು. ಅದರ ಪರಿಣಾಮವಾಗಿ ಈ ತೀರ್ಪು ಬಂದಿದೆ. ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಹಾಗೂ ದುರ್ಬಲವಾಗಿರುವ ಜಾತಿಗಳಿಗೆ ಸೇರಿದ ಕೈದಿಗಳಿಗೆ ಕಸ ಗುಡಿಸುವ, ಸ್ವಚ್ಛಗೊಳಿಸುವ ಕೆಲಸಗಳನ್ನು ವಹಿಸಲಾಗುತ್ತಿದೆ, ಸಾಮಾಜಿಕವಾಗಿ ಮುಂದುವರಿದಿರುವ ಜಾತಿಗಳಿಗೆ ಸೇರಿದ ಕೈದಿಗಳಿಗೆ ಅಡುಗೆಯಂತಹ ಕೆಲಸಗಳನ್ನು ವಹಿಸಲಾಗುತ್ತಿದೆ
ಎಂಬುದನ್ನು ಕೋರ್ಟ್ ಗಮನಕ್ಕೆ ತರಲಾಗಿತ್ತು. ಸಮಾಜದಲ್ಲಿ ಇರುವ ಜಾತಿ ತಾರತಮ್ಯದ ವ್ಯವಸ್ಥೆ ಯನ್ನೇ ಜೈಲುಗಳ ಒಳಗಡೆಯೂ ಪಾಲಿಸಲಾಗುತ್ತಿದೆ ಎಂದು ಹೇಳಲಾಗಿತ್ತು. ಕೆಲಸಗಳಲ್ಲಿ ಮಾತ್ರವೇ ಅಲ್ಲದೆ, ಕೈದಿಗಳ ವಾಸಕ್ಕೆ ಸ್ಥಳ ನಿಗದಿ ಮಾಡುವಲ್ಲಿಯೂ ತಾರತಮ್ಯ ಅನುಸರಿಸಲಾಗುತ್ತಿದೆ.
ಇಂತಹ ಆಚರಣೆಗಳು ತಾರತಮ್ಯದಿಂದ ಕೂಡಿವೆ, ಅವು ಅಸಾಂವಿಧಾನಿಕ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಆದರೆ, ದೇಶದ ಎಲ್ಲ ರಂಗಗಳಲ್ಲಿಯೂ ಜಾತಿ ಆಧಾರಿತ ತಾರತಮ್ಯವನ್ನು ನಿಷೇಧಿಸಿದ ನಂತರದಲ್ಲಿ ಕೂಡ ಜೈಲಿನ ಕೈಪಿಡಿಗಳಲ್ಲಿ ಜಾತಿ ಆಧಾರಿತವಾದ ಇಂತಹ ತಾರತಮ್ಯಗಳು ಮುಂದುವರಿದಿದ್ದವು, ಇಷ್ಟು ವರ್ಷ ಅವು ಚಾಲ್ತಿಯಲ್ಲಿ ಇದ್ದವು ಎಂಬುದು ಆಶ್ಚರ್ಯ ಮೂಡಿಸುವಂತಹ ಸಂಗತಿ. ಇಂತಹ ಅಂಶಗಳು ಇದ್ದ ಜೈಲು ಕೈಪಿಡಿಗಳನ್ನು, ಮನುಷ್ಯರನ್ನು ಅವರ ಜಾತಿಯ ಆಧಾರದಲ್ಲಿ ಭಿನ್ನವಾಗಿ ಕಾಣಬೇಕು ಹಾಗೂ ಅವರ ವಿಚಾರವಾಗಿ ತಾರತಮ್ಯ ತೋರಬೇಕು ಎಂದು ಹೇಳಿದ ಮನುಸ್ಮೃತಿಯ ಜೊತೆ ಹೋಲಿಸಬೇಕಾಗುತ್ತದೆ. ಮಾನವ ಹಕ್ಕುಗಳು, ಸಾಂವಿಧಾನಿಕ ಅವಕಾಶಗಳ ಆಧಾರದಲ್ಲಿ ವಿವಿಧ ಸಮಿತಿಗಳು ನೀಡಿದ ಶಿಫಾರಸುಗಳನ್ನು ಆಧರಿಸಿ ಜೈಲು ಕೈಪಿಡಿಗಳನ್ನು ಪರಿಷ್ಕರಿಸಲಾಗಿದೆ.ಹೀಗಿದ್ದರೂ, ಎದ್ದು ಕಾಣುವ ತಾರತಮ್ಯಕ್ಕೆ ದಾರಿ ಮಾಡಿಕೊಡುವಂತಹ ಈ ಅಂಶಗಳು ಕೈಪಿಡಿಗಳಲ್ಲಿ ಇದ್ದವು ಎಂಬುದು ವಿಷಾದಕರ. ದೇಶದ ಜೈಲುಗಳಲ್ಲಿ ಇನ್ನೂ ಹಲವು ಬಗೆಯ ತಾರತಮ್ಯಗಳು ಇವೆ. ಲಿಂಗ, ಹಣದ ಪ್ರಭಾವ, ರಾಜಕೀಯ ಅಧಿಕಾರ ಆಧರಿಸಿದ ತಾರತಮ್ಯ ಜೈಲುಗಳಲ್ಲಿದೆ. ಆದರೆ ಈ
ಪ್ರಕರಣದಲ್ಲಿ, ಜಾತಿ ಆಧಾರಿತ ತಾರತಮ್ಯದ ಬಗ್ಗೆ ಮಾತ್ರ ಕೋರ್ಟ್ ಗಮನಹರಿಸಿತ್ತು.
ತನ್ನ ಆದೇಶದ ಪಾಲನೆಗೆ ವ್ಯವಸ್ಥೆಯೊಂದನ್ನು ಕೂಡ ಕೋರ್ಟ್ ಸೂಚಿಸಿದೆ. ಜೈಲುಗಳಲ್ಲಿ ಇರುವ ನೋಂದಣಿ ಪುಸ್ತಕದಲ್ಲಿನ ‘ಜಾತಿ’ ಕಲಂ ಅನ್ನು ತಕ್ಷಣವೇ ಅಳಿಸಬೇಕು ಎಂದು ಅದು ಸೂಚಿಸಿದೆ. ಹಾಗೆಯೇ, ಕೆಲವು ಬುಡಕಟ್ಟು ಸಮುದಾಯಗಳನ್ನು ‘ಮತ್ತೆ ಮತ್ತೆ ಅಪರಾಧ ಎಸಗುವವರು’ ಎಂದು ಗುರುತಿಸುವುದನ್ನು ನಿಲ್ಲಿಸಬೇಕು ಎಂದು ಕೂಡ ಸೂಚಿಸಿದೆ. ಸರ್ಕಾರಗಳ ಕಡೆಯಿಂದ ಆಗುವ ತಾರತಮ್ಯವು ಎಲ್ಲ ಬಗೆಯ ತಾರತಮ್ಯಗಳಿಗಿಂತ ಹೆಚ್ಚು ಕೆಟ್ಟದಾದುದು, ಆ ತಾರತಮ್ಯವು ಸಾಂವಿಧಾನಿಕ ಹಕ್ಕುಗಳಿಗೆ ವಿರುದ್ಧ ಎಂದು ಕೋರ್ಟ್ ಹೇಳಿದೆ. ವಸಾಹತುಶಾಹಿ ಕಾಲದ ಕ್ರಿಮಿನಲ್ ಕಾನೂನುಗಳು ವಸಾಹತು ನಂತರದ ಕಾಲಘಟ್ಟದ ಮೇಲೆಯೂ ಪ್ರಭಾವ ಬೀರುತ್ತಿವೆ ಎಂದು ಅದು ಹೇಳಿದೆ. ಕಾನೂನುಗಳು ಹಾಗೂ ನಿಯಮಗಳು ವಸಾಹತು ಕಾಲದಲ್ಲಿ ರೂಪ ಪಡೆದವಾಗಿದ್ದರೂ, ಜಾತಿ ಆಧಾರಿತ ತಾರತಮ್ಯಕ್ಕೆ ದಾರಿ ಮಾಡಿಕೊಡುವ ಧೋರಣೆಗಳು ವಸಾಹತು ಕಾಲಕ್ಕಿಂತ ಬಹಳ ಹಿಂದಿನವು. ಸಮಾಜದಲ್ಲಿನ ಕೆಲವು ಸಮುದಾಯಗಳು ಮೇಲು, ಇನ್ನು ಕೆಲವು ಸಮುದಾಯಗಳು ಕೀಳು ಎಂಬ ಕೆಟ್ಟ ಗ್ರಹಿಕೆಯ ಆಧಾರದಲ್ಲಿ ಬೆಳೆದುಬಂದಿರುವ ಧೋರಣೆ ಬದಲಾವಣೆ ಕಾಣಬೇಕಿದೆ. ಸಮಾಜದಲ್ಲಿನ ನಂಬಿಕೆಗಳೇ ಜೈಲು ಕೈಪಿಡಿಗಳ ಒಳಕ್ಕೂ ನುಸುಳಿವೆ. ಬದಲಾವಣೆ ಜೈಲು ಕೈಪಿಡಿಗಳ ಆಚೆಗೂ
ಆಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.