ವಿಶ್ವ ಮಟ್ಟದಲ್ಲಿ ಭಾರತ ಪ್ರಬಲ ಶಕ್ತಿಯಾಗಿ ಗುರುತಿಸಿಕೊಳ್ಳಲು ಹಂಬಲಿಸುತ್ತಿರುವ ಸಂದರ್ಭದಲ್ಲಿ ಪ್ರಕಟವಾಗಿರುವ ಜಾಗತಿಕ ಹಸಿವಿನ ಸೂಚ್ಯಂಕವು ವಾಸ್ತವದ ಮತ್ತೊಂದು ಮಗ್ಗುಲನ್ನು ಪರಿಚಯಿಸುವಂತಿದೆ. ದಕ್ಷಿಣ ಏಷ್ಯಾ ಮತ್ತು ‘ಬ್ರಿಕ್ಸ್’ ದೇಶಗಳಲ್ಲಿ ಹಸಿವಿನಿಂದ ಬಳಲುತ್ತಿರುವ ಅತ್ಯಂತ ಹೆಚ್ಚು ಜನರು ಭಾರತದಲ್ಲಿದ್ದಾರೆ ಎನ್ನುವ ಸುದ್ದಿಯು ದಾರುಣ ಮುಖವೊಂದನ್ನು ಸೂಚಿಸುತ್ತದೆ.
‘ಕನ್ಸರ್ನ್ ವರ್ಲ್ಡ್‌ವೈಡ್’ ಮತ್ತು ‘ವೆಲ್ಟ್‌ಹಂಗರ್‌ಹಿಲ್ಫ್’ ಎನ್ನುವ ಸಂಸ್ಥೆಗಳು ಸಿದ್ಧಪಡಿಸಿರುವ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 102ನೇ ಸ್ಥಾನದಲ್ಲಿದೆ. ಅಪೌಷ್ಟಿಕತೆ, ಮಕ್ಕಳ ಕುಂಠಿತ ಬೆಳವಣಿಗೆ, ಕಡಿಮೆ ತೂಕದ ಮಕ್ಕಳು ಹಾಗೂ ಶಿಶುಮರಣದ ಪ್ರಮಾಣವನ್ನು ಆಧರಿಸಿ ಈ ಸೂಚ್ಯಂಕವನ್ನು ರೂಪಿಸಲಾಗಿದೆ. ಅಪೌಷ್ಟಿಕತೆ, ಮಕ್ಕಳ ಕಡಿಮೆ ತೂಕ ಹಾಗೂ ಶಿಶುಮರಣ– ಇವೆಲ್ಲವೂ ಪರಸ್ಪರ ಸಂಬಂಧ ಹೊಂದಿರುವ ಸಂಗತಿಗಳು. ಗರ್ಭಾವಸ್ಥೆಯಿಂದಲೇ ತಲೆದೋರುವ ಅಪೌಷ್ಟಿಕತೆಯ ಸಮಸ್ಯೆ, ಶಿಶುಮರಣಕ್ಕೂ ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವುದಕ್ಕೂ ಕಾರಣವಾಗುತ್ತದೆ.
ಶಿಶುಮರಣ ಪ್ರಮಾಣ ದೇಶದಲ್ಲಿ ಶೇ 3.9ರಷ್ಟಿದ್ದರೆ, ಬೆಳವಣಿಗೆ ಕುಂಠಿತವಾದ ಮಕ್ಕಳ ಸಂಖ್ಯೆ ಶೇ 37.8ರಷ್ಟಿದೆ. ನೂರಕ್ಕೆ ಸುಮಾರು ಹದಿನೈದು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, 6ರಿಂದ 23 ತಿಂಗಳವರೆಗಿನ ಶೇ 9.6 ಮಕ್ಕಳಿಗೆ ಕನಿಷ್ಠ ಆಹಾರ ದೊರೆಯುತ್ತಿದೆ. ವಿಶ್ವ ಹಸಿವು ಸೂಚ್ಯಂಕದ ಪಟ್ಟಿಯಲ್ಲಿ ಭಾರತ 2015ರಲ್ಲಿ 93ನೇ ಸ್ಥಾನ ಹಾಗೂ 2018ರಲ್ಲಿ 103ನೇ ಸ್ಥಾನದಲ್ಲಿತ್ತು. 2015ಕ್ಕೆ ಹೋಲಿಸಿದರೆ ಈಗ ಒಂಬತ್ತು ಸ್ಥಾನಗಳಷ್ಟು ಕುಸಿತ ಕಂಡಿರುವುದು ಆತಂಕಕ್ಕೆಡೆ ಮಾಡುವ ಸಂಗತಿ. ಇದೇ ಸೂಚ್ಯಂಕದಲ್ಲಿ 2000ನೇ ಇಸವಿಯಲ್ಲಿ ಭಾರತ 83ನೇ ಸ್ಥಾನದಲ್ಲಿತ್ತು ಎನ್ನುವುದನ್ನು ಪರಿಗಣಿಸಿದರೆ, ಎರಡು ದಶಕಗಳಲ್ಲಿ ನಾವು ಸಾಧಿಸಿರುವ ಅಭಿವೃದ್ಧಿಯ ಅಸಲಿಯತ್ತಿನ ಬಗ್ಗೆಯೇ ಗಂಭೀರ ವಿಮರ್ಶೆ ನಡೆಯಬೇಕಿದೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಹಾಗೂ ಚೀನಾ ದೇಶವು ಭಾರತಕ್ಕಿಂತಲೂ ಉತ್ತಮ ಸ್ಥಾನದಲ್ಲಿರುವುದು ಕೂಡ ನಾವು ಎಡವಿರುವುದೆಲ್ಲಿ ಎನ್ನುವುದರ ವಿಶ್ಲೇಷಣೆಗೆ ಪ್ರೇರಣೆಯಾಗಬೇಕು.
‘ಸ್ವಚ್ಛ ಭಾರತ’ ಅಭಿಯಾನ ನಿರೀಕ್ಷಿತ ಫಲ ನೀಡದಿರುವುದನ್ನು ಗುರುತಿಸಿರುವ ಹಸಿವು ಸೂಚ್ಯಂಕದ ವರದಿಯು ಸ್ವಚ್ಛತೆಯ ಕೊರತೆ, ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳಲು ಕಾರಣಗಳಲ್ಲೊಂದಾಗಿದೆ ಎಂದು ಹೇಳಿದೆ. ಸ್ವಾತಂತ್ರ್ಯ ಪಡೆದಾಗಿನಿಂದ ಈವರೆಗೆ ಬಡತನ–ಹಸಿವು ನಿರ್ಮೂಲನೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ‘ಗರೀಬಿ ಹಠಾವೊ’ದಿಂದ ಕರ್ನಾಟಕದ ‘ಅನ್ನಭಾಗ್ಯ’ದವರೆಗಿನ ಹಲವು ಯೋಜನೆಗಳು ಹಸಿವಿನ ನಿರ್ಮೂಲನೆಯ ಉದ್ದೇಶದಿಂದಲೇ ರೂಪುಗೊಂಡಂತಹವು. ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ದವಸ ಧಾನ್ಯ ವಿತರಿಸುವ ಪಡಿತರ ಯೋಜನೆಗಳು ಎಲ್ಲ ರಾಜ್ಯಗಳಲ್ಲಿವೆ.
ಇಷ್ಟೆಲ್ಲ ಕಾರ್ಯಕ್ರಮಗಳ ನಂತರವೂ ಹಸಿವಿನ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ ಎಂದರೆ, ಅರ್ಹರನ್ನು ತಲುಪುವಲ್ಲಿ ಯೋಜನೆಗಳು ಯಶಸ್ವಿಯಾಗಿಲ್ಲ ಎಂದಾಯಿತು. ಆಹಾರಧಾನ್ಯಗಳ ಸಂಗ್ರಹ ಹಾಗೂ ವಿತರಣೆ ಕೂಡ ಸಮರ್ಪಕವಾಗಿಲ್ಲ. ಒಂದೆಡೆ ಹೊಟ್ಟೆ ಹಸಿದ ಮಂದಿಯಿದ್ದರೆ, ಇನ್ನೊಂದು ತುದಿಯಲ್ಲಿ ಗೋದಾಮುಗಳಲ್ಲಿನ ಆಹಾರ ಕೊಳೆಯುತ್ತಿದೆ, ಇಲಿ- ಹೆಗ್ಗಣಗಳ ಪಾಲಾಗುತ್ತಿದೆ. ಶ್ರೀಮಂತವರ್ಗ ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಐದನೇ ಒಂದು ಪಾಲು ಪೋಲಾಗುತ್ತಿದೆ ಎನ್ನುವ ವರದಿಯೂ ಇದೆ. ಅನ್ನದ ಈ ಅಪಬಳಕೆಯು ಅಮಾನವೀಯ, ಅನೈತಿಕ. ಆಹಾರವು ಮನುಷ್ಯನ ಕನಿಷ್ಠ ಹಾಗೂ ಮೂಲಭೂತ ಅಗತ್ಯ. ಆಹಾರ ಪೂರೈಕೆಗೆ ಸಂಬಂಧಿಸಿದಂತೆಯೇ ಉದ್ಯೋಗಸೃಷ್ಟಿ ಚಟುವಟಿಕೆಗಳು ನಡೆಯುತ್ತವೆ.
‘ಜಾಗತಿಕ ಹಸಿವು ಸೂಚ್ಯಂಕ’ ಭಾರತದಲ್ಲಿನ ಹಸಿವಿನ ಭಾಗವಾದ ಆರೋಗ್ಯ, ಆರ್ಥಿಕ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಯೋಚಿಸಲು ಒತ್ತಾಯಿಸುತ್ತದೆ. ಹಸಿವುಮುಕ್ತ ಭಾರತದ ಪ್ರಯತ್ನವನ್ನು ಒಂದು ಬೃಹತ್ ಹಾಗೂ ಪ್ರಾಮಾಣಿಕ ಆಂದೋಲನವಾಗಿ ಬೆಳೆಸಬೇಕಾದ ಸವಾಲು ಸರ್ಕಾರದ ಮುಂದಿದೆ. ಆಹಾರ ಮತ್ತು ಆರೋಗ್ಯ ಎಲ್ಲರ ಆದ್ಯತೆಯಾಗಬೇಕಾದುದು ಈ ಹೊತ್ತಿನ ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.