ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಶಿವಾಜಿನಗರದ ಶಾಸಕ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವ ಮೂಲಕ ತನಿಖೆಯಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ. ತಮ್ಮ ಮುಂದೆ ತನಿಖೆಗೆ ಹಾಜರಾಗಬೇಕೆಂದು ಎಸ್‌ಐಟಿ ಅಧಿಕಾರಿಗಳು ಕಳೆದ ವಾರವೇ ಅವರಿಗೆ ಸೂಚಿಸಿದ್ದರು, ಸೋಮವಾರ ಹಾಜರಾಗುವುದಾಗಿ ರೋಷನ್ ಬೇಗ್ ತಿಳಿಸಿದ್ದರು. ಆದರೆ, ಸೋಮವಾರ ಸದ್ದಿಲ್ಲದೆ ಪುಣೆ ವಿಮಾನ ಹತ್ತಿದ್ದ ಅವರನ್ನು ಪೊಲೀಸರು ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆದಿದ್ದಾರೆ. ಮಂಗಳವಾರ ಮಧ್ಯಾಹ್ನದವರೆಗೆ ಅವರ ವಿಚಾರಣೆ ನಡೆಸಿ ಮತ್ತೆ 19ರಂದು ಹಾಜರಾಗಬೇಕೆಂದು ತಿಳಿಸಿದ್ದಾರೆ. 40 ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ನಡೆದಿದೆ ಎನ್ನಲಾದ ಈ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ವಿದೇಶಕ್ಕೆ ಪರಾರಿಯಾಗಿರುವ ಆತನ ಬಂಧನಕ್ಕೆ ಈಗಾಗಲೇ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ‘ಬ್ಲೂ ಕಾರ್ನರ್’ ನೋಟಿಸ್ ಹೊರಡಿಸಿದ್ದು ಆತನ ಬಂಧನವೂ ಶೀಘ್ರವೇ ಆಗಬಹುದೆಂಬ ನಿರೀಕ್ಷೆ ಇದೆ. ಈ ಕಂಪನಿಯ ವ್ಯವಹಾರಗಳ ಬಗ್ಗೆ ಹಣ ಪಡೆದು, ಸದಭಿಪ್ರಾಯದ ವರದಿ ನೀಡಿದ ಆರೋಪದ ಮೇಲೆ ಈಗಾಗಲೇ ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಯೊಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಐಎಂಎ ಸಮೂಹ ಹೊಂದಿರುವ ವಿವಿಧ ಸ್ಥಿರಾಸ್ತಿಗಳನ್ನು ಪತ್ತೆಹಚ್ಚುವ ಪ್ರಕ್ರಿಯೆಯೂ ನಡೆದಿದ್ದು, ಈಗಾಗಲೇ ₹ 209 ಕೋಟಿ ಮೌಲ್ಯದ ಸೊತ್ತುಗಳನ್ನು ಸರ್ಕಾರ ವಶಕ್ಕೆ ಪಡೆದಿರುವುದು ಸ್ವಾಗತಾರ್ಹ. ಆರಂಭದ ಹಂತದಲ್ಲಿ ಪೊಲೀಸ್ ಅಧಿಕಾರಿಗಳು ತೋರಿರುವ ಈ ದಿಟ್ಟತನ ಮತ್ತು ಚುರುಕಿನ ಕಾರ್ಯಾಚರಣೆ, ಮುಂದಿನ ಹಂತದಲ್ಲಿ ರಾಜಕೀಯ ಒತ್ತಡದಿಂದ ದುರ್ಬಲಗೊಳ್ಳಬಾರದು.
ಒಂದು ತಿಂಗಳಿಂದ ತಲೆಮರೆಸಿಕೊಂಡಿರುವ ಆರೋಪಿ ಮನ್ಸೂರ್ ಖಾನ್ ಪದೇ ಪದೇ ಯೂಟ್ಯೂಬ್ ಮೂಲಕ ವಿಡಿಯೊ ಕಳುಹಿಸಿ ಸುದ್ದಿಯಾಗುತ್ತಿರುವುದು ವಿಪರ್ಯಾಸದ ಸಂಗತಿ. ಮನ್ಸೂರ್ ಖಾನ್ ‘ಅಪ್‌ಲೋಡ್’ ಮಾಡಿದ್ದಾರೆ ಎನ್ನಲಾದ ಹೊಸ ವಿಡಿಯೊದಲ್ಲಿ ‘ದೇಶಬಿಟ್ಟು ಹೋಗಿ ನಾನು ತಪ್ಪು ಮಾಡಿದ್ದೇನೆ. 24 ಗಂಟೆಗಳ ಒಳಗಾಗಿ ಭಾರತಕ್ಕೆ ಮರಳುತ್ತೇನೆ. ಭಾರತದ ನ್ಯಾಯಾಂಗದ ಮೇಲೆ ನನಗೆ ವಿಶ್ವಾಸವಿದೆ. ಕೆಲವು ರಾಜಕಾರಣಿಗಳು ಮತ್ತು ಸಮಾಜವಿರೋಧಿ ಶಕ್ತಿಗಳ ಒತ್ತಡದಿಂದಾಗಿ ದೇಶ ತ್ಯಜಿಸಬೇಕಾಯಿತು’ ಎಂಬ ಮಾತುಗಳಿವೆ. ಶಾಸಕರು ಮತ್ತು ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಲಂಚ ಕೊಟ್ಟಿರುವುದಾಗಿ ಹಿಂದೆಯೂ ಈತ ವಿಡಿಯೊದಲ್ಲಿ ಪ್ರಕಟಿಸಿದ್ದರ ಬಗ್ಗೆ ಇನ್ನಷ್ಟು ವಿವರ ಹೊರಬರಬೇಕಿದೆ. ಸಾವಿರಾರು ಹೂಡಿಕೆದಾರರಿಗೆ ವಿಶ್ವಾಸದ್ರೋಹ ಮಾಡಿ ಓಡಿಹೋಗಿರುವ ಆರೋಪಿ, ಹೀಗೆ ಎಲ್ಲೋ ಕುಳಿತು ಪೊಲೀಸರಿಗೆ ವಿಡಿಯೊ ಕಳುಹಿಸುವ ತಮಾಷೆಯನ್ನು ಸಾಧ್ಯವಾದಷ್ಟು ಬೇಗ ನಿಲ್ಲಿಸಬೇಕು. ಆತನನ್ನು ಶೀಘ್ರ ಬಂಧಿಸಿ ಭಾರತಕ್ಕೆ ಕರೆತಂದು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು. ಅಕಸ್ಮಾತ್ ಈ ವಂಚನೆಯ ಪ್ರಕರಣದಲ್ಲಿ ಶಾಸಕರು, ಸಚಿವರು, ಹಿರಿಯ ಅಧಿಕಾರಿಗಳು ಮುಂತಾಗಿ ಪ್ರಭಾವಶಾಲಿಗಳು ಒಳಗೊಂಡಿದ್ದರೆ ಅವರೂ ವಿಚಾರಣೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ರಾಜ್ಯದಲ್ಲಿ ಶಾಸಕರ ರಾಜೀನಾಮೆಯ ರಾಜಕೀಯ ಪ್ರಹಸನ ಇನ್ನೊಂದೆಡೆ ನಡೆಯುತ್ತಿದೆ. ಸರ್ಕಾರವನ್ನು ಉಳಿಸಿಕೊಳ್ಳಲು ಅಥವಾ ಉರುಳಿಸಲು ಶಾಸಕರ ಬೆಂಬಲ ಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಈ ವಂಚನೆಯ ಪ್ರಕರಣದ ತನಿಖೆ ದುರ್ಬಲಗೊಳಿಸುವ ಪ್ರಯತ್ನ ನಡೆದರೆ ಅದು ಅಕ್ಷಮ್ಯ. ಇಂತಹ ರಾಜಕೀಯ ಒತ್ತಡಗಳಿಗೆ ಪೊಲೀಸರು ಮಣಿಯಬಾರದು. ಯಾವುದೇ ಪಕ್ಷದ ಸರ್ಕಾರ ಇರಲಿ, ಜನಸಾಮಾನ್ಯರು ಬೆವರು ಸುರಿಸಿ ದುಡಿದು ಕೂಡಿಟ್ಟ ಹಣ ಮತ್ತೆ ಅವರಿಗೆ ವಾಪಸ್ ಸಿಗುವಂತೆ ಮಾಡುವುದು ಆಳುವವರ ಆದ್ಯ ಕರ್ತವ್ಯ. ಎಸ್‌ಐಟಿ ಚುರುಕಿನ ತನಿಖೆಯಲ್ಲಿ ತಮ್ಮ ಕಡೆಯಿಂದ ಯಾವುದೇ ಹಸ್ತಕ್ಷೇಪ ನಡೆಯದಂತೆ ರಾಜಕೀಯ ಪಕ್ಷಗಳೂ ಎಚ್ಚರಿಕೆ ವಹಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.