ADVERTISEMENT

ಸಂಪಾದಕೀಯ: ಅನೈತಿಕ ಪೊಲೀಸ್‌ಗಿರಿ ಮೃದು ಧೋರಣೆ ಅಪಾಯಕಾರಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 2:57 IST
Last Updated 18 ಅಕ್ಟೋಬರ್ 2021, 2:57 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮತೀಯ ಗೂಂಡಾಗಿರಿ ವಿಚಾರಕ್ಕೆ ಸಂಬಂಧಿಸಿದಂತೆ ‘ಕ್ರಿಯೆ– ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಿರುವ ಮಾತು ಧರ್ಮದ ಹೆಸರಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವ ವ್ಯಕ್ತಿಗಳಿಗೆ ಉತ್ತೇಜನ ನೀಡುವಂತಿದೆ. ಅನೈತಿಕ ಪೊಲೀಸ್‌ಗಿರಿ ಘಟನೆಗಳ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಕಾನೂನುಬಾಹಿರ ದುಂಡಾವರ್ತನೆಗಳಿಗೆ ನೈತಿಕತೆಯನ್ನು ಆರೋಪಿಸುವ ಪ್ರಯತ್ನ ಮಾಡಿದ್ದಾರೆ. ಸಮಾಜದಲ್ಲಿ ಜನರ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ನಡೆದುಕೊಳ್ಳಬೇಕಾಗುತ್ತದೆ; ಪರಸ್ಪರರ ಭಾವನೆಗಳಿಗೆ ಧಕ್ಕೆಯುಂಟಾದಾಗ ಕ್ರಿಯೆ–ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ ಎನ್ನುವ ಅಭಿಪ್ರಾಯವನ್ನು ಅನೈತಿಕ ಪೊಲೀಸ್‌ಗಿರಿ ಸಂದರ್ಭದಲ್ಲಿ ಒಪ್ಪಲಿಕ್ಕೆ ಸಾಧ್ಯವಿಲ್ಲ ಹಾಗೂ ಇಂತಹ ಮಾತು ಮುಖ್ಯಮಂತ್ರಿ ಸ್ಥಾನಕ್ಕೆ ಶೋಭಿಸುವಂತಹದ್ದೂ ಅಲ್ಲ. ಸಾಮಾಜಿಕ ಸಾಮರಸ್ಯ ಕಾಪಾಡಲು ನಾವೆಲ್ಲರೂ ಪ್ರಯತ್ನಿಸಬೇಕು ಹಾಗೂ ಆ ವಿಷಯದಲ್ಲಿ ಪ್ರತಿಯೊಬ್ಬರ ಹೊಣೆಗಾರಿಕೆಯೂ ಇದೆ ಎಂದು ಅವರು ಹೇಳಿರುವುದು ಸರಿಯಾಗಿದೆ. ಆದರೆ, ಸಾಮಾಜಿಕ ಸಾಮರಸ್ಯ ಕಾಪಾಡುವ ಆಶಯಕ್ಕೆ ವಿರುದ್ಧವಾದ ‘ಭಾವನೆಗಳಿಗೆ ಧಕ್ಕೆಯಾದಾಗ ಕ್ರಿಯೆ–ಪ್ರತಿಕ್ರಿಯೆ ಇದ್ದೇ ಇರುತ್ತದೆ’ ಎನ್ನುವ ಮಾತನ್ನೂ ಅವರೇ ಆಡಿದ್ದಾರೆ. ಇದು, ಸಾಮರಸ್ಯದ ಬಗ್ಗೆ ಮಾತನಾಡುತ್ತಲೇ ಮತೀಯ ಶಕ್ತಿಗಳನ್ನು ಪರೋಕ್ಷವಾಗಿ ಬೆಂಬಲಿಸುವ ಹೇಳಿಕೆಯಾಗಿದೆ. ನೈತಿಕತೆ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ ಎನ್ನುವ ಮುಖ್ಯಮಂತ್ರಿ ಮಾತು ಕೂಡ ಸಂದರ್ಭಕ್ಕೆ ಹೊಂದುವಂತಹದ್ದಲ್ಲ. ‘ನೈತಿಕತೆ’ ಎಂದರೆ ಯಾವ ನೈತಿಕತೆ? ನಾವು ಪಾಲಿಸಬೇಕಿರುವುದು ಸಾಂವಿಧಾನಿಕ ನೈತಿಕತೆ. ಸಮುದಾಯದ ನೈತಿಕತೆ ಅಥವಾ ವ್ಯಕ್ತಿಗತ ನೈತಿಕತೆಯು ಸಂದರ್ಭಕ್ಕೆ ತಕ್ಕಂತೆ ಬದಲಾಗಬಹುದು. ಆದರೆ, ಸಾಂವಿಧಾನಿಕ ನೈತಿಕತೆಗೆ ನಿರ್ದಿಷ್ಟ ಚೌಕಟ್ಟು ಇದೆ. ಮುಖ್ಯಮಂತ್ರಿಪ್ರತಿಪಾದಿಸಬೇಕಿರುವುದು ಸಾಂವಿಧಾನಿಕ ನೈತಿಕತೆ ಯನ್ನು; ಅನೈತಿಕ ಪೊಲೀಸ್‌ಗಿರಿ ನಡೆಸುವವರ ನೈತಿಕತೆಯನ್ನಲ್ಲ.

ಧರ್ಮದ ಹೆಸರಿನಲ್ಲಿ ನಡೆಯುವ ಅನೈತಿಕ ಪೊಲೀಸ್‌ಗಿರಿ ಪ್ರಕರಣಗಳು ನಾಗರಿಕ ಸಮಾಜದಲ್ಲಿ ಭೀತಿಯನ್ನು ಹುಟ್ಟಿಸುವಂತಹವು. ಅಮಾಯಕರು, ಅದರಲ್ಲೂ ಹೆಣ್ಣುಮಕ್ಕಳನ್ನು ಹೆಚ್ಚು ಬಾಧಿಸುವ ಮತೀಯ ಗೂಂಡಾಗಿರಿ ನಾಡಿನ ಧಾರ್ಮಿಕ ಸಾಮರಸ್ಯದ ವರ್ಚಸ್ಸಿಗೆ ಧಕ್ಕೆ ಉಂಟುಮಾಡುತ್ತದೆ. ಇಂಥ ಅನೈತಿಕ ಪೊಲೀಸ್‌ಗಿರಿಯ ಎರಡು ಪ್ರಕರಣ ಗಳು ಕರಾವಳಿಯಲ್ಲಿ ಇತ್ತೀಚೆಗೆ ನಡೆದಿವೆ. ವಾಹನ ವೊಂದರಲ್ಲಿ ಹೋಗುತ್ತಿದ್ದ ಭಿನ್ನ ಧರ್ಮೀಯ ವಿದ್ಯಾರ್ಥಿಗಳ ಮೇಲೆ ಸುರತ್ಕಲ್‌ನಲ್ಲಿ ಹಲ್ಲೆ ನಡೆದಿದೆ. ಬೇರೊಂದು ಧರ್ಮದ ವ್ಯಕ್ತಿಯ ಕಾರಿನಲ್ಲಿ ಹಿಂದೂ ಧರ್ಮದ ಮಹಿಳೆಯರು ಪ್ರಯಾಣಿಸಿದ್ದಕ್ಕೆ ಬಜರಂಗದಳದ ಕಾರ್ಯಕರ್ತರು ಮೂಡುಬಿದಿರೆಯಲ್ಲಿ ದಾಂದಲೆ ನಡೆಸಿದ್ದಾರೆ. ಆ ಪ್ರಕರಣದಲ್ಲಿ ಹಲ್ಲೆ ನಡೆಸಿದವರ ಪರವಾಗಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ‍ಅವರು ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಎನ್ನುವ ಆರೋಪವಿದೆ. ಮುಸ್ಲಿಂ ಮಹಿಳೆಗೆ ಡ್ರಾಪ್‌ ನೀಡಿದ ಹಿಂದೂ ಧರ್ಮಕ್ಕೆ ಸೇರಿದ ಬೈಕ್‌ ಸವಾರನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ, ‘ಇಂತಹ ಘಟನೆಗೆ ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದ ಮುಖ್ಯಮಂತ್ರಿ, ಈಗ ತದ್ವಿರುದ್ಧ ಹೇಳಿಕೆ ನೀಡಿರುವುದು ಕಳವಳಕ್ಕೆ ಕಾರಣವಾಗಿದೆ. ಧರ್ಮದ ಹೆಸರಿನಲ್ಲಿ ಬೆದರಿಸುವ, ಕಾನೂನನ್ನು ಕೈಗೆ ತೆಗೆದುಕೊಳ್ಳುವ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿವೆ. ನೈತಿಕತೆಯ ಹೆಸರಿನಲ್ಲಿ ಅನೈತಿಕತೆ ಹಾಗೂ ಗೂಂಡಾಗಿರಿಯನ್ನು ‍ಪ್ರದರ್ಶಿಸಲಾಗುತ್ತಿದೆ. ಈ ಲಜ್ಜೆಗೇಡಿತನವನ್ನು ‘ನೈತಿಕ ಪೊಲೀಸ್‌ಗಿರಿ’ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಈ ನಾಡಿಗೆ ತನ್ನದೇ ಆದ ಪೊಲೀಸ್‌ ವ್ಯವಸ್ಥೆಯಿದ್ದು, ಪರ್ಯಾಯ ಪೊಲೀಸ್‌ ವ್ಯವಸ್ಥೆಗೆ ಇಲ್ಲಿ ಅವಕಾಶವಿಲ್ಲ ಎನ್ನುವುದನ್ನು ಈ ಮೊದಲು ಗೃಹ ಖಾತೆಯನ್ನೂ ನಿರ್ವಹಿಸಿದ ಅನುಭವವಿರುವ ಮುಖ್ಯಮಂತ್ರಿ ಮರೆಯಬಾರದು. ಅನೈತಿಕ ಪೊಲೀಸ್‌ಗಿರಿಯ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟಧೋರಣೆ ತಳೆಯುವುದು ಅಗತ್ಯ. ಮೃದುಧೋರಣೆಯ ಮಾತುಗಳು ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ಬದಲು, ಕೋಮುವಾದಿ ಶಕ್ತಿಗಳಿಗೆ ಉತ್ತೇಜನ ನೀಡುತ್ತವೆ ಎನ್ನುವುದು ಅವರಿಗೆ ಸದಾ ನೆನಪಿರಬೇಕು.

ಅಧಿಕಾರದಲ್ಲಿ ಇರುವವರು ಕಾನೂನಿನ ಪರಿಪಾಲಕರಾಗಿ ಇರಬೇಕೇ ಹೊರತು, ಧರ್ಮ–ನೈತಿಕತೆಯ ಪ್ರತಿಪಾದಕರಾಗಿ ಅಲ್ಲ. ಧರ್ಮಪೀಠಗಳು, ಧರ್ಮಗುರುಗಳು ಬೋಧಿಸಬೇಕಾದುದನ್ನು ಸರ್ಕಾರವನ್ನು ಪ್ರತಿನಿಧಿಸುವವರು ಮಾಡಲಿಕ್ಕೆ ಹೋಗಬಾರದು, ಅದು ಅವರ ಕೆಲಸವೂ ಅಲ್ಲ. ಸಂಸ್ಕೃತಿ–ಧರ್ಮದ ಹೆಸರಿನಲ್ಲಿ ಅಮಾಯಕರ ಮೇಲೆ ಬಲಪ್ರಯೋಗ ಮಾಡುವುದನ್ನು ಕೆಲವರು ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಅಂಥ ಸಮಾಜಘಾತುಕ ಶಕ್ತಿಗಳ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ನಂಜನಗೂಡು ತಾಲ್ಲೂಕಿನಲ್ಲಿ ಅನಧಿಕೃತ ದೇಗುಲ ತೆರವುಗೊಳಿಸಿದ ಪ್ರಕರಣ ಖಂಡಿಸಿ, ‘ನಾವು ಗಾಂಧೀಜಿಯನ್ನೇ ಬಿಟ್ಟಿಲ್ಲ ಸ್ವಾಮಿ, ನೀವು ಯಾವ ಲೆಕ್ಕ ನಮಗೆ?’ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಪದಾಧಿಕಾರಿಗಳು ಮಂಗಳೂರಿನಲ್ಲಿ ಮುಖ್ಯಮಂತ್ರಿಯವರಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದರು. ಧರ್ಮದ ಹೆಸರಿನಲ್ಲಿ ಮುಖ್ಯಮಂತ್ರಿಯನ್ನೇ ಬೆದರಿಸಬಹುದಾದರೆ, ಜನಸಾಮಾನ್ಯರ ಪಾಡೇನು? ಧರ್ಮರಕ್ಷಕರ ಸೋಗಿನಲ್ಲಿ ಹೇಗೆ ಬೇಕಾದರೂ ವರ್ತಿಸುವುದಕ್ಕೆ, ಯಾರನ್ನು ಬೇಕಾದರೂ ಬೆದರಿಸಲಿಕ್ಕೆ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಅನೈತಿಕ ಪೊಲೀಸ್‌ಗಿರಿ ಎನ್ನುವುದು ಸಾಮಾಜಿಕ ಸಾಮರಸ್ಯಕ್ಕೆ ಅಪಾಯಕಾರಿ ಆಗಿರುವಂತೆಯೇ ಸರ್ಕಾರದ ಸಾರ್ವಭೌಮತೆಯ ಅಣಕವೂ ಆಗಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆಯುವವರು ಹಾಗೂ ಕಾನೂನನ್ನು ಕೈಗೆ ತೆಗೆದುಕೊಳ್ಳುವವರಿಂದ ಸರ್ಕಾರದ ಪ್ರತಿನಿಧಿಗಳು ಅಂತರ ಕಾಪಾಡಿಕೊಳ್ಳಬೇಕು. ಶಾಸನಸಭೆಗಳಲ್ಲಿ ಪ್ರಜೆಗಳನ್ನು ಪ್ರತಿನಿಧಿಸುವವರು, ಅದೇಕಾಲಕ್ಕೆ ಅನೈತಿಕ ಪೊಲೀಸ್‌ಗಿರಿಯ ವಕ್ತಾರರೂ ಆಗುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.