ಪ್ರಜೆ ಬಡವನಾಗಿ ಇರುವಾಗ ಸರ್ಕಾರಗಳು ಶ್ರೀಮಂತ ಆಗುವುದಿಲ್ಲ. ಪ್ರಜೆಗಳು ಪಾವತಿಸುವ ತೆರಿಗೆಯ ಹಣವೇ ಸರ್ಕಾರಗಳಿಗೆ ವರಮಾನದ ಪ್ರಮುಖ ಮೂಲ. ಇದಲ್ಲದೆ, ಸರ್ಕಾರಿ ಸ್ವಾಮ್ಯದ ಕೆಲವು ಉದ್ದಿಮೆಗಳು ತಯಾರಿಸುವ ಉತ್ಪನ್ನಗಳ ಮಾರಾಟ, ಸೇವೆಗಳ ಒದಗಿಸುವಿಕೆಯ ಮೂಲಕವೂ ಸರ್ಕಾರಗಳು ವರಮಾನ ಸಂಗ್ರಹಿಸುವುದು ಇದೆ. ಈ ವರಮಾನ ಚೆನ್ನಾಗಿರಬೇಕಾದರೆ ಪ್ರಜೆಯ ಕೈಯಲ್ಲಿ ಒಳ್ಳೆಯ ಮೊತ್ತ ಇರಬೇಕಾಗುತ್ತದೆ. ಪ್ರಜೆ ಶ್ರೀಮಂತನಾದಂತೆಲ್ಲ ಹೆಚ್ಚು ಖರ್ಚು ಮಾಡುತ್ತಾನೆ. ಆತ ಮಾಡುವ ಖರ್ಚುಗಳಲ್ಲಿನ ಒಂದು ಭಾಗವು ತೆರಿಗೆಯ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ ಸಂದಾಯ ಆಗುತ್ತದೆ. ಆ ಹಣವನ್ನು ಸರ್ಕಾರವು ಮೂಲಸೌಕರ್ಯ ಯೋಜನೆಗಳಿಗೆ, ಅಭಿವೃದ್ಧಿ ಯೋಜನೆಗಳಿಗೆ ಹೂಡಿಕೆ ಮಾಡಿ ಪ್ರಜೆಗೆ ಇನ್ನಷ್ಟು ಸವಲತ್ತುಗಳು ಸಿಗುವಂತೆ ಮಾಡಬೇಕು. ಈ ಪ್ರಕ್ರಿಯೆಯಲ್ಲಿ, ಕಾಲ ಸರಿದಂತೆಲ್ಲ ಪ್ರಜೆ ಹಾಗೂ ಸರ್ಕಾರ ಜೊತೆಜೊತೆಯಾಗಿ ಶ್ರೀಮಂತ ಆಗಬೇಕು. ಇದು ನಾವು ಒಪ್ಪಿಕೊಂಡು ಬಂದಿರುವ ಆರ್ಥಿಕ ವ್ಯವಸ್ಥೆಯಲ್ಲಿ ಆಗಬೇಕಾದ ಪ್ರಕ್ರಿಯೆ. ಆದರೆ, ಕೋವಿಡ್–19 ಸಾಂಕ್ರಾಮಿಕವು ಧುತ್ತೆಂದು ಎದುರಾದಾಗ, ಅದು ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್‌ಡೌನ್ ಜಾರಿಗೆ ತರಲಾಯಿತು.
ಜನ ಹೊರಗಡೆ ಬಂದು ಖರ್ಚು ಮಾಡುವುದು ಇದ್ದಕ್ಕಿದ್ದಂತೆ ತೀವ್ರವಾಗಿ ಕಡಿಮೆ ಆಯಿತು. ಇದರಿಂದಾಗಿ ಸರ್ಕಾರಗಳ ವರಮಾನ ಕುಸಿಯಿತು. ಅರ್ಥ ವ್ಯವಸ್ಥೆಯು ಲಾಕ್‌ಡೌನ್‌ನ ಪರಿಣಾಮಗಳಿಂದ ಇನ್ನೂ ಪೂರ್ತಿಯಾಗಿ ಹೊರಬಂದಿಲ್ಲ. ಜನ ಧೈರ್ಯವಾಗಿ ಖರ್ಚು ಮಾಡುತ್ತಿಲ್ಲ. ಏಕೆಂದರೆ, ಎಲ್ಲ ವರ್ಗಗಳಿಗೆ ಸೇರಿದ ಜನರ ಆದಾಯವು ಕೋವಿಡ್ ಪೂರ್ವದ ಸ್ಥಿತಿಗೆ ಇನ್ನೂ ಬಂದಿರುವಂತೆ ಕಾಣುತ್ತಿಲ್ಲ. ಜನರ ಸ್ಥಿತಿ ಸುಧಾರಿಸುವವರೆಗೆ ಸರ್ಕಾರಗಳ ವರಮಾನ ಕೂಡ ಸಾಮಾನ್ಯವಾಗಿ ಏರು ಗತಿಯನ್ನು ಕಾಣುವುದಿಲ್ಲ.
ಜನರ ದುಡಿಮೆಯ ಶಕ್ತಿಯನ್ನು ಆಧರಿಸಿಯೇ ಸರ್ಕಾರಗಳವರಮಾನ ತೀರ್ಮಾನ ಆಗಬೇಕು. ಆದರೆ, ಈ ಪರಿಸ್ಥಿತಿಯಲ್ಲಿಯೂ ಹೆಚ್ಚಿನ ವರಮಾನ ಸಂಗ್ರಹಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಮೇಲಿನ ತೆರಿಗೆಯ ಹೊರೆಯನ್ನು ವಿಪರೀತ ಎಂಬಂತೆ ಹೆಚ್ಚಿಸಿರುವುದು ಸಲ್ಲದ ನಡೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸರ್ಕಾರಗಳು ವಿಧಿಸುತ್ತಿರುವ ಬಗೆಬಗೆಯ ತೆರಿಗೆಯು ಈ ಮಾತಿಗೆ ಅತ್ಯುತ್ತಮ ನಿದರ್ಶನ. ಜನ ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ತೆರಿಗೆಗಳನ್ನು ಈ ಪರಿಯಲ್ಲಿ ಹೆಚ್ಚಿಸುವುದು ಸರಿಯೇ ಎಂಬ ಪ್ರಶ್ನೆಗೆ ಆಳುವ ವರ್ಗದವರು ಸ್ವಗತದಲ್ಲಿಯಾದರೂಪ್ರಾಮಾಣಿಕ ಉತ್ತರ ಕೊಟ್ಟುಕೊಳ್ಳಬಹುದು...
ನಿತ್ಯದ ಬದುಕಿನಲ್ಲಿ ಅತ್ಯಗತ್ಯವಾಗಿರುವ ವಿದ್ಯುತ್ ದರ ಏರಿಕೆಯನ್ನು ಇನ್ನೊಂದು ನಿದರ್ಶನವನ್ನಾಗಿ ಪರಿಗಣಿಸಬಹುದು. 2020 ಹಾಗೂ 2021ರಲ್ಲಿ ವಿದ್ಯುತ್ ಶುಲ್ಕವನ್ನು ಪ್ರತೀ ಯೂನಿಟ್‌ಗೆ ಒಟ್ಟು 70 ಪೈಸೆಯಷ್ಟು ಹೆಚ್ಚಿಸಲಾಗಿದೆ. ಉದ್ಯೋಗ ಹಾಗೂ ಆದಾಯ ನಷ್ಟದ ಈ ಕಾಲಘಟ್ಟದಲ್ಲಿ ಜನರಿಗೆ ಒಂದಾದ ನಂತರ ಒಂದು ಎಂಬಂತೆ ಬೆಲೆ ಏರಿಕೆಯನ್ನು ತಾಳಿಕೊಳ್ಳುವ ಶಕ್ತಿ ಇರುತ್ತದೆಯೇ? ವೇತನದಲ್ಲಿ ಕಡಿತ ಅನುಭವಿಸುತ್ತಿರುವ ಕುಟುಂಬಗಳು, ಜೀವನೋಪಾಯವನ್ನೇ ಕಳೆದುಕೊಂಡಿರುವ ಕುಟುಂಬಗಳು ಈ ಏರಿಕೆಯನ್ನು ಯಾವ ರೀತಿ ಸ್ವೀಕರಿಸಬಲ್ಲವು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಹೆಚ್ಚಿನ ಸಂಶೋಧನೆ ಬೇಕಾಗಿಲ್ಲ.
ತೈಲೋತ್ಪನ್ನಗಳ ದರ ಏರಿಕೆ ಹಾಗೂ ವಿದ್ಯುತ್ ದರ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಸಿಗುವ ಅಷ್ಟೂ ಉತ್ಪನ್ನಗಳ ಬೆಲೆಯಲ್ಲಿ ಅಷ್ಟಿಷ್ಟಾದರೂ ಏರಿಕೆ ಆಗಬಹುದು. ಇದು ಜನರ ಕೊಳ್ಳುವ ಶಕ್ತಿಯ ಮೇಲೆ ಮಾಡುವ ಪರಿಣಾಮ ಏನಿದ್ದಿರಬಹುದು? ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಂವೇದನೆಯು ಆಳುವ ವರ್ಗದಲ್ಲಿ ಸದ್ಯಕ್ಕೆ ಕಾಣಿಸುತ್ತಿಲ್ಲ. ಕೋವಿಡ್ ಸೃಷ್ಟಿಸಿರುವ ಅನಿಶ್ಚಿತ ಸ್ಥಿತಿ ನಿವಾರಣೆಯಾಗಿ, ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಪೂರ್ಣ ಚೈತನ್ಯದೊಂದಿಗೆ ನಡೆಯಲು ಆರಂಭವಾದ ನಂತರದಲ್ಲಿ ಕೈಗೊಳ್ಳಬಹುದಾಗಿದ್ದ ಕೆಲವು ಕ್ರಮಗಳನ್ನು ಆಳುವ ವರ್ಗಗಳು, ಸಂಕಷ್ಟ ಕಾಲದಲ್ಲಿಯೇ ಕೈಗೊಳ್ಳುತ್ತಿವೆ. ಜನರ ಆದಾಯದ ಸ್ಥಿತಿ ಎಲ್ಲಿಗೆ ತಲುಪಿದೆ ಎಂಬುದನ್ನು ಗಮನಿಸದೆಯೇ, ತನ್ನ ವರಮಾನ ಕೊರತೆಯನ್ನು ಮಾತ್ರ ಸರ್ಕಾರವು ಭರ್ತಿ ಮಾಡಿಕೊಳ್ಳಲು ಮುಂದಾ ಗುತ್ತಿರುವಂತೆ ಭಾಸವಾಗುತ್ತಿದೆ.
ಕೋವಿಡ್‌ನ ಎರಡನೆಯ ಅಲೆಯನ್ನು ನಿಭಾಯಿಸುವ ಉದ್ದೇಶದಿಂದ ರಾಜ್ಯದಲ್ಲಿ ಲಾಕ್‌ಡೌನ್ ಹೇರಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಮದ್ಯದ ಅಂಗಡಿಗಳಲ್ಲಿ ವ್ಯಾಪಾರವು ಕೆಲವು ಷರತ್ತುಗಳೊಂದಿಗೆ ನಡೆಯಲು ಅವಕಾಶ ಕಲ್ಪಿಸಿತ್ತು. ಮದ್ಯ ಮಾರಾಟವು ಸರ್ಕಾರದ ಪ್ರಮುಖ ವರಮಾನ ಮೂಲಗಳಲ್ಲಿ ಒಂದು. ಮದ್ಯದ ಅಂಗಡಿ ಪೂರ್ತಿಯಾಗಿ ಮುಚ್ಚಬೇಕಿಲ್ಲ ಎಂದು ತೀರ್ಮಾನಿಸುವ ಮೂಲಕ ಸರ್ಕಾರವು ತನ್ನ ವರಮಾನ ಮೂಲವೊಂದನ್ನು ಮುಕ್ತವಾಗಿ ಇರಿಸಿಕೊಂಡಿತ್ತು. ಅದು ಸರಿ. ವರಮಾನ ಇಲ್ಲದೆ ಸರ್ಕಾರಕ್ಕೆ ಕೆಲಸ ಮಾಡಲು ಆಗುವುದಿಲ್ಲ. ಆದರೆ, ಅದೇ ಸಂದರ್ಭದಲ್ಲಿ ಸರ್ಕಾರವು ಜನರ ಆದಾಯ ಮೂಲ ಬತ್ತಿಹೋಗದಂತೆ ನೋಡಿಕೊಳ್ಳುವ ಬಗ್ಗೆ ಗಮನಹರಿಸಿತ್ತೇ ಎಂಬ ಪ್ರಶ್ನೆ ಇದೆ.
ಈ ಪ್ರಶ್ನೆಯನ್ನು ತುಸು ಮಾರ್ಪಡಿಸಿ, ‘ತಮ್ಮ ವರಮಾನ ಸಂಗ್ರಹ ಹೆಚ್ಚಿಸಿಕೊಳ್ಳುವ ಬಗ್ಗೆ ಗಮನ ನೀಡುತ್ತಿರುವ ಸರ್ಕಾರಗಳು, ಜನರ ಆದಾಯ ಹೆಚ್ಚಿಸಲು ತಕ್ಷಣದ ಕ್ರಮವಾಗಿ ಏನು ಮಾಡಿವೆ’ ಎಂದು ಕೇಳಬಹುದು. ಜನರ ಆದಾಯ ಹೆಚ್ಚಾಗದಿರುವಾಗ ಅವರ ಮೇಲಿನ ಕರ ಭಾರವನ್ನು ಹೆಚ್ಚಿಸುವುದು ಸಹ್ಯವಾದ ನಡೆಯಲ್ಲ. ಈ ಬಗ್ಗೆ ಅಧಿಕಾರಸ್ಥರು ಇನ್ನಷ್ಟು ಮಾನವೀಯವಾಗಿ ಆಲೋಚಿಸಬೇಕು. ಜನರ ಆದಾಯ ಹೆಚ್ಚಿಸದೆಯೇ ಅವರು ಮಾಡಬೇಕಿರುವ ಅಗತ್ಯ ವೆಚ್ಚಗಳನ್ನು ಮಾತ್ರ ಹೆಚ್ಚಿಸುವ ಕ್ರಮಗಳಿಗೆ ಕೊನೆಹಾಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.