ADVERTISEMENT

ಭಾರತ –ಪಾಕ್ ಬಾಂಧವ್ಯ ಪುನರಾರಂಭ ಸುಗಮವಾಗಿರಲಿ

ಸಂಪಾದಕೀಯ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2018, 19:30 IST
Last Updated 22 ಆಗಸ್ಟ್ 2018, 19:30 IST
   

ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್‌ ಖಾನ್ ಭಾರತಕ್ಕೆ ಹೊಸಬರಲ್ಲ. ಕ್ರಿಕೆಟ್ ಆಟಗಾರನಾಗಿ ಅವರು ಭಾರತಕ್ಕೆ ಅನೇಕ ಬಾರಿ ಭೇಟಿ ನೀಡಿದ್ದಾರೆ. ಇದು ಭಾರತ– ಪಾಕಿಸ್ತಾನ ಮಧ್ಯದ ದ್ವಿಪಕ್ಷೀಯ ಬಾಂಧವ್ಯ ಸುಧಾರಣೆಗೆ ಪೂರಕವಾಗುವುದೇ? ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತ– ಪಾಕಿಸ್ತಾನ ನಡುವಣ ಸಂಘರ್ಷದ ವಿಚಾರಗಳನ್ನು ಬಗೆಹರಿಸಿಕೊಳ್ಳಲು ಉಭಯ ದೇಶಗಳೂ ಮಾತುಕತೆ ಮಾರ್ಗ ತುಳಿಯಬೇಕೆಂದು ಇಮ್ರಾನ್ ಖಾನ್ ಹೇಳಿರುವುದು ಸಕಾರಾತ್ಮಕ ಬೆಳವಣಿಗೆ. ಭಾರತದ ಒಂದು ಹೆಜ್ಜೆಗೆ ಪ್ರತಿಯಾಗಿ ಎರಡು ಹೆಜ್ಜೆ ಇಡುವುದಾಗಿ ಚುನಾವಣೆಯಲ್ಲಿ ಗೆದ್ದ ನಂತರ ಮಾಡಿದ ವಿಜಯೋತ್ಸವ ಭಾಷಣದಲ್ಲೂ ಇಮ್ರಾನ್‌ ಹೇಳಿದ್ದರು. ಪ್ರಧಾನಿ ಮೋದಿಯವರೂ ಇಮ್ರಾನ್‌ ಖಾನ್‌ ಪಕ್ಷ ವಿಜಯ ಗಳಿಸಿದ ನಂತರ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ಸ್ನೇಹದ ಫೋನ್‌ ಕರೆ ಮಾಡಿ ಅಭಿನಂದಿಸಿದ್ದರು. ಭಾರತ ಕ್ರಿಕೆಟ್ ತಂಡದ ಸದಸ್ಯರ ಸಹಿಗಳಿರುವ ಕ್ರಿಕೆಟ್ ಬ್ಯಾಟ್ ಅನ್ನು ಇಮ್ರಾನ್ ಅವರಿಗೆಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನರ್ ಉಡುಗೊರೆಯಾಗಿ ನೀಡಿದ್ದರು. ಆ ನಂತರ ಆಗಸ್ಟ್ 18ರಂದು ಪ್ರಧಾನಿಯಾಗಿ ಇಮ್ರಾನ್‌ ಖಾನ್ ಪ್ರಮಾಣವಚನ ಸ್ವೀಕರಿಸಿದ ದಿನ, ಮೋದಿಯವರು ಕಳಿಸಿದ್ದ ಪತ್ರದಲ್ಲಿ, ಒಳ್ಳೆಯ ನೆರೆಹೊರೆಯ ಬಾಂಧವ್ಯದ ಜೊತೆಗೆ ಅರ್ಥಪೂರ್ಣ ಹಾಗೂ ರಚನಾತ್ಮಕ ಬಾಂಧವ್ಯ ನಿರ್ಮಿಸುವ ಇರಾದೆಯನ್ನು ವ್ಯಕ್ತಪಡಿಸಿದ್ದರು. ಎರಡೂ ರಾಷ್ಟ್ರಗಳ ಜನರ ಸಂಪರ್ಕ ಸುಧಾರಣೆಗೆ ಉಭಯ ದೇಶಗಳ ಮಧ್ಯೆ ಕ್ರಿಕೆಟ್ ಆಟ ಪುನರಾರಂಭಿಸುವ ಇಂಗಿತ ಪಾಕಿಸ್ತಾನದಿಂದ ವ್ಯಕ್ತವಾಗಿದೆ. ಈ ಎಲ್ಲಾ ಬೆಳವಣಿಗೆಗಳು ಉಭಯ ರಾಷ್ಟ್ರಗಳ ನಡುವೆ ಸಂಬಂಧ ಸುಧಾರಣೆಗೆ ಪೂರಕವಾಗಿವೆ.ಅಷ್ಟೇ ಅಲ್ಲ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಂತ್ಯಸಂಸ್ಕಾರದಲ್ಲಿ ಪಾಕಿಸ್ತಾನ ನಿಯೋಗವೂ ಪಾಲ್ಗೊಂಡಿತ್ತು. ನಂತರ ಆ ನಿಯೋಗವು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರನ್ನೂ ಭೇಟಿಯಾಗಿತ್ತು. ಇಂತಹ ಸಂದರ್ಭದಲ್ಲಿ, ಪ್ರಧಾನಿಯಾಗಿ ಇಮ್ರಾನ್‌ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸಚಿವ ನವಜೋತ್‌ ಸಿಂಗ್‌ ಸಿಧು ಅವರು ಪಾಲ್ಗೊಂಡಿದ್ದನ್ನು ತವರಿನಲ್ಲಿ ವಿವಾದವಾಗಿಸಿರುವುದು ಸಲ್ಲದು. ಅದೂ ಪಾಕಿಸ್ತಾನದ ಸೇನಾ ಮುಖಂಡ ಜಾವೇದ್ ಬಜ್ವಾ ಅವರನ್ನು ಆಲಿಂಗಿಸಿದ ಸಿಧು ನಡೆ ಹೆಚ್ಚು ಟೀಕೆಗಳಿಗೆ ಗುರಿಯಾಗಿದೆ. ಇದಕ್ಕೆ ಪ್ರತಿಯಾಗಿ ಇಮ್ರಾನ್‌ ಆವರು, ಸಿಧು ಅವರನ್ನು ‘ಶಾಂತಿಯ ದೂತ’ ಎಂದು ಕರೆದಿದ್ದಾರೆ. ‘ಪಾಕಿಸ್ತಾನದ ಹಿತಾಸಕ್ತಿಗಳನ್ನು ರಕ್ಷಿಸುವ ಜನರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ’ ಎಂದು ಈ ಪ್ರಕರಣದ ಬಗ್ಗೆ ಬಿಜೆಪಿ ಮಾಡಿರುವ ಟೀಕೆ ಹುರುಳಿಲ್ಲದ್ದು. ಬಾಂಧವ್ಯ ಸುಧಾರಣೆಗೆ ಉಭಯ ದೇಶಗಳ ಉನ್ನತನಾಯಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವ ಸಂದರ್ಭದಲ್ಲಿ ಇಂತಹ ವಿವಾದಗಳು ಅಗ್ಗದ ಪ್ರಚಾರತಂತ್ರಗಳಾಗಿಬಿಡುತ್ತವೆ.

‘ನಯಾ ಪಾಕಿಸ್ತಾನ’ ಕಟ್ಟುವ ಕನಸು ಹೊಂದಿದ್ದಾರೆ ಹೊಸ ಪ್ರಧಾನಿ ಇಮ್ರಾನ್ ಖಾನ್. ಪಾಕಿಸ್ತಾನವನ್ನು ಇಸ್ಲಾಮಿಕ್ ಕಲ್ಯಾಣ ರಾಷ್ಟ್ರವಾಗಿ ಪರಿವರ್ತಿಸುವ ಮಾತುಗಳನ್ನಾಡಿದ್ದಾರೆ. ನಾಗರಿಕ ಸರ್ಕಾರ ಹಾಗೂ ಮಿಲಿಟರಿ ಸಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವಂತಹ ದೊಡ್ಡ ಸವಾಲು ಇಮ್ರಾನ್ ಅವರ ಮುಂದಿದೆ. ಜೊತೆಗೆ ಇಮ್ರಾನ್‌ ಅವರ ಪಕ್ಷ ಪೂರ್ಣ ಬಹುಮತ ಪಡೆದಿಲ್ಲ. ಸಣ್ಣ ಪುಟ್ಟ ಪಕ್ಷಗಳ ಜೊತೆಗಿನ ಮೈತ್ರಿ ಅವರಿಗೆ ಅನಿವಾರ್ಯ. ಈ ಎಲ್ಲಾ ಒತ್ತಡಗಳ ನಡುವೆ ಭಾರತದೊಂದಿಗಿನ ಸಂಬಂಧ ಸುಧಾರಣೆಯ ಸವಾಲು ಅವರಿಗಿದೆ. ಆದರೆ ಉಭಯ ರಾಷ್ಟ್ರಗಳ ನಡುವೆ ಸದ್ಯಕ್ಕೆ ಪರಸ್ಪರ ಮಾತುಗಳ ವಿನಿಮಯ ಮೃದುವಾಗಿದ್ದು ಉತ್ತೇಜನಕಾರಿಯಾಗಿರುವುದು ನಿಜ. ಈ ಮಾತುಗಳೆಲ್ಲಾ ಬರಲಿರುವ ದಿನಗಳಲ್ಲಿ ಕಾರ್ಯರೂಪಕ್ಕಿಳಿಯುತ್ತವೆಯೇ ಎಂಬುದನ್ನು ಕಾದುನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT