ಭಾರತ ಮತ್ತು ಇಂಡಿಯಾ ಎಂಬ ಪದಗಳ ನಡುವೆ ಸಾಂವಿಧಾನಿಕವಾಗಿ, ರಾಜಕೀಯವಾಗಿ ಅಥವಾ ಶಬ್ದಾರ್ಥಕ್ಕೆ ಸಂಬಂಧಿಸಿದಂತೆ ಯಾವ ವ್ಯತ್ಯಾಸವೂ ಇಲ್ಲ. ಹೀಗಾಗಿ, ‘ಇಂಡಿಯಾ’ ಎಂಬ ಪದಕ್ಕಿಂತ ‘ಭಾರತ’ ಪದಕ್ಕೆ ಹೆಚ್ಚಿನ ಆದ್ಯತೆ ನೀಡಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇರಿಸಿರುವ ಹೆಜ್ಜೆಯು ಅರ್ಥಹೀನ. ಜಿ–20 ಶೃಂಗಸಭೆಯ ಭಾಗವಾಗಿ ನೀಡಿರುವ ಸರ್ಕಾರಿ ಆಹ್ವಾನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರವು ‘ಭಾರತ’ ಎಂಬ ಪದ ಬಳಸಿದೆ. ಈ ಪದವನ್ನು ಕೇಂದ್ರವು ಇನ್ನೂ ಹೆಚ್ಚು ವ್ಯಾಪಕವಾಗಿ ಬಳಸಲು ಮುಂದಾಗಬಹುದು.
ರಾಜಕೀಯ ಹಾಗೂ ಸರ್ಕಾರಿ ಸಂಕಥನಗಳಲ್ಲಿ ‘ಇಂಡಿಯಾ’ ಎಂಬ ಪದದ ಬಳಕೆಯನ್ನು ಇನ್ನಿಲ್ಲವಾಗಿಸಲು ಕೂಡ ಕೇಂದ್ರವು ಮುಂದಾಗಬಹುದು. ಸಂವಿಧಾನವು ಈ ದೇಶವನ್ನು ‘ಇಂಡಿಯಾ, ಅಂದರೆ ಭಾರತ’ ಎಂದು ಕರೆದಿದೆ. ಹೀಗಾಗಿ ಒಂದು ಪದವನ್ನು ಅಳಿಸಿಹಾಕಬೇಕು ಎಂದಾದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ‘ಇಂಡಿಯಾ’ ಪದದ ಬದಲಿಗೆ ‘ಭಾರತ’ ಪದ ಬಳಕೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಹಿಂದಿನಿಂದಲೂ ಒಲವು ತೋರಿಸಿವೆ ಎಂಬುದು ನಿಜವಾದರೂ, ಒಂದು ಪದದ ಬಳಕೆಯು ಇದ್ದಕ್ಕಿದ್ದಂತೆ ಸಮಸ್ಯೆಯಾಗಿ ಕಂಡಿದ್ದು ಏಕೆ ಎಂಬುದು ಗೊತ್ತಾಗದ ಸಂಗತಿ. ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳ ಒಕ್ಕೂಟವು ತನಗೆ ಐ.ಎನ್.ಡಿ.ಐ.ಎ (ಇಂಡಿಯಾ) ಎಂಬ ಹೆಸರು ಕೊಟ್ಟುಕೊಂಡಿದ್ದಕ್ಕೆ ಪ್ರತಿಯಾಗಿ ಈ ಕೆಲಸ ನಡೆಯುತ್ತಿದೆ ಎಂದಾದರೆ, ಅದನ್ನು ಬಾಲಿಶತನದ, ಸಿಡುಕಿನ ಪ್ರತಿಕ್ರಿಯೆ ಎನ್ನಬೇಕಾಗುತ್ತದೆ. ರಾಷ್ಟ್ರೀಯವಾದದ ಸಂಕಥನದ ಮೇಲೆ ಇನ್ನಷ್ಟು ಬಲಿಷ್ಠವಾದ ಹಿಡಿತ ಸಾಧಿಸುವ ಹಲವು ಕ್ರಮಗಳ ಒಂದು ಭಾಗ ಇದು ಎನ್ನುವುದಾದರೆ, ಇದನ್ನು ಅವಿವೇಕದ ನಡೆ ಎನ್ನಬೇಕಾಗುತ್ತದೆ.
ಭಾರತ ಹಾಗೂ ಇಂಡಿಯಾ ಎಂಬ ಪದಗಳನ್ನು ಒಂದರ ಬದಲಿಗೆ ಇನ್ನೊಂದು ಎಂಬಂತೆ ಬಳಸಲಾಗಿದೆ. ಕೆಲವು ಬಾರಿ, ಸಂದರ್ಭವನ್ನು ಆಧರಿಸಿ ಈ ಪದಗಳನ್ನು ಬಳಕೆ ಮಾಡಲಾಗುತ್ತಿದೆ. ‘ಭಾರತ’ ಪದಕ್ಕೆ ಸಾಂಸ್ಕೃತಿಕವಾಗಿ ಹೆಚ್ಚು ಮಹತ್ವವಿದೆ. ಆದರೆ ‘ಇಂಡಿಯಾ’ ಎಂಬ ಪದವು ಹೆಚ್ಚು ವ್ಯಾಪಕವಾಗಿ ಬಳಕೆಯಲ್ಲಿದೆ. ಅದರಲ್ಲೂ ರಾಜತಾಂತ್ರಿಕ ವ್ಯವಹಾರಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗಿದೆ, ಇದು ಹೆಚ್ಚು ಜನಪ್ರಿಯವೂ ಆಗಿದೆ. ‘ಭಾರತ’ ಪದವು ದೇಶದ ಗ್ರಾಮೀಣ ಪ್ರದೇಶಗಳನ್ನು ಹೆಚ್ಚು ಚೆನ್ನಾಗಿ ಪ್ರತಿಬಿಂಬಿಸುತ್ತದೆ, ‘ಇಂಡಿಯಾ’ ಎಂಬ ಪದವು ದೇಶದ ನಗರ ಪ್ರದೇಶಗಳನ್ನು ಸೂಚಿಸುವುದಕ್ಕೆ ಸೂಕ್ತ ಎಂಬ ಮಾತುಗಳೂ ಇವೆ.
‘ಇಂಡಿಯಾ’ ಪದವನ್ನು ಮೊದಲು ಬಳಸಿದ್ದು ವಿದೇಶಿಯರು, ಅದು ದೇಶದ ಅಸ್ಮಿತೆ ಹಾಗೂ ದೇಶವು ಪ್ರತಿಪಾದಿಸುವ ಮೌಲ್ಯಗಳನ್ನು ‘ಭಾರತ’ ಎಂಬ ಪದದಷ್ಟು ಚೆನ್ನಾಗಿ ಧ್ವನಿಸುವುದಿಲ್ಲ ಎಂಬ ನೆಲೆಯಲ್ಲಿ ‘ಇಂಡಿಯಾ’ ಪದ ಬಳಕೆಗೆ ವಿರೋಧ ವ್ಯಕ್ತವಾಗಿದ್ದಿದೆ. ಆದರೆ ಎರಡೂ ಪದಗಳು ತಮ್ಮ ಅರ್ಥವ್ಯಾಪ್ತಿಯ ವಿಚಾರದಲ್ಲಿ ಇತಿಹಾಸದುದ್ದಕ್ಕೂ ವಿಕಾಸಗೊಳ್ಳುತ್ತ ಬಂದಿವೆ. ಈ ಎರಡು ಪದಗಳ ಇರುವಿಕೆ ಹಾಗೂ ಸಂವಿಧಾನವು ಎರಡೂ ಪದಗಳನ್ನು ಮಾನ್ಯ ಮಾಡಿರುವುದು, ಆ ಇತಿಹಾಸದ ಭಿನ್ನ ತೊರೆಗಳನ್ನು ಮತ್ತು ಭಿನ್ನ ಬೇರುಗಳನ್ನು ಗುರುತಿಸಿರುವುದಕ್ಕೆ ಸಮ. ಭಿನ್ನ ಸಮುದಾಯಗಳು, ಭಿನ್ನ ಭಾಷೆಗಳು ಮತ್ತು ಭಿನ್ನ ಧಾರ್ಮಿಕ ಆಚರಣೆಗಳ ಜನರ ಅನುಭವಗಳು, ಅವರ ಗ್ರಹಿಕೆಗಳು ಮತ್ತು ಅವರ ಆಲೋಚನೆಗಳು ಇಲ್ಲಿನ ರಾಷ್ಟ್ರೀಯ ಅಸ್ಮಿತೆಯನ್ನು ರೂಪಿಸಿವೆ. ಯಾವುದೋ ಒಂದನ್ನು ತಿರಸ್ಕರಿಸಿ, ಇನ್ನೊಂದನ್ನು ಮಾತ್ರ ಒಪ್ಪಿಕೊಳ್ಳುವುದು ತಪ್ಪು.
‘ಇಂಡಿಯಾ’ ಪದವನ್ನು ಕೈಬಿಟ್ಟು ‘ಭಾರತ’ ಎಂಬ ಪದವನ್ನು ಮಾತ್ರ ಬಳಸಬೇಕು ಎಂದಾದರೆ ಅದಕ್ಕೆ ಸಂವಿಧಾನ ತಿದ್ದುಪಡಿ ಮಾತ್ರವಲ್ಲದೆ, ವ್ಯಾಪಕ ಸಮಾಲೋಚನೆಯ ಅಗತ್ಯವಿದೆ. ಒಮ್ಮತವನ್ನು ರೂಪಿಸುವ ಅಗತ್ಯ ಇದೆ. ಯಾವುದೋ ಒಂದು ರಾಜಕೀಯ ಪಕ್ಷದ ಅಭಿರುಚಿ ಅಥವಾ ಸೈದ್ಧಾಂತಿಕ ಒಲವುಗಳಿಗೆ ಅನುಗುಣವಾಗಿ ದೇಶದ ಹೆಸರನ್ನು ಬದಲಾಯಿಸಲಾಗದು; ಅದು ಆಡಳಿತದಲ್ಲಿ ಇರುವ ಪಕ್ಷವಾದರೂ ಸರಿ.
‘ಭಾರತ’ ಎಂಬ ಪದವೂ ಈ ದೇಶವನ್ನು ಪೂರ್ತಿಯಾಗಿ ಪ್ರತಿನಿಧಿಸುವುದಿಲ್ಲ ಎಂದು ಕೆಲವರು ಭಾವಿಸುವ ಅಪಾಯ ಇದೆ; ಏಕೆಂದರೆ, ಆ ಪದವು ದೇಶದ ಉತ್ತರ ಭಾಗದ ಒಂದು ರಾಜವಂಶದ ಜೊತೆ ಬೆಸೆದುಕೊಂಡಿದೆ ಎಂದು ಕೆಲವರು ಭಾವಿಸಬಹುದು. ಹಿಂದೂ, ಹಿಂದಿ ಪದಗಳ ಬೇರುಗಳು ಕೂಡ ಪರ್ಷಿಯಾದಲ್ಲಿವೆ. ರಾಜಕೀಯ ಸನ್ನಿವೇಶವು ವಿಷಮಗೊಂಡಿರುವ ಹೊತ್ತಿನಲ್ಲಿ, ‘ಭಾರತ’ ಪದಕ್ಕೆ ಹೆಚ್ಚಿನ ಆದ್ಯತೆ ನೀಡುವುದು, ‘ಇಂಡಿಯಾ’ ಪದವನ್ನು ಕೈಬಿಡುವುದನ್ನು ಸಿದ್ಧಾಂತವೊಂದರ ಹೇರಿಕೆ ಎಂಬಂತೆ ಕಾಣಬಹುದು. ಅದಕ್ಕೆ ವಿರೋಧ ವ್ಯಕ್ತವಾಗಬಹುದು. ‘ಭಾರತ’ ಹಾಗೂ ‘ಇಂಡಿಯಾ’ ಪದಗಳನ್ನು ಒಟ್ಟೊಟ್ಟಿಗೆ ಇರಿಸಿಕೊಳ್ಳಲು ಅಗತ್ಯವಿರುವ ಬೌದ್ಧಿಕ ಚೈತನ್ಯ ದೇಶದ ಪ್ರಜೆಗಳಿಗೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.