ಕರ್ನಾಟಕದ 2020–25ನೇ ಅವಧಿಯ ಕೈಗಾರಿಕಾ ನೀತಿಗೆ ರಾಜ್ಯದ ಸಚಿವ ಸಂಪುಟವು ಅನುಮೋದನೆ ನೀಡಿದೆ. ₹5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮತ್ತು ಅದರ ಮೂಲಕ 20 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಯು ಈ ನೀತಿಯ ಗುರಿ. ‘ರಫ್ತಿಗೆ ಸಂಬಂಧಿಸಿ ರಾಜ್ಯವು ಈಗ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮೂರನೇ ಸ್ಥಾನಕ್ಕೆ ಏರುವ ಗುರಿಯನ್ನು ಹಾಕಿಕೊಳ್ಳಲಾಗಿದೆ’ ಎಂದು ಸರ್ಕಾರವು ಹೇಳಿದೆ. ಆಟೊಮೊಬೈಲ್ ಮತ್ತು ಬಿಡಿಭಾಗಗಳು, ಔಷಧ ಮತ್ತು ವೈದ್ಯಕೀಯ ಉಪಕರಣಗಳು, ಜ್ಞಾನ ಆಧಾರಿತ ಉದ್ಯಮಗಳು, ಯಂತ್ರೋಪಕರಣಗಳು, ನವೀಕರಿಸಬಹುದಾದ ಇಂಧನ, ಬ್ಯಾಟರಿಚಾಲಿತ ವಾಹನ ಮುಂತಾದ ಕ್ಷೇತ್ರಗಳಿಗೆ ರಾಜ್ಯವು ಇನ್ನಷ್ಟು ಒತ್ತಾಸೆ ನೀಡಲಿದೆ ಎಂದು ಹೊಸ ನೀತಿಯು ಹೇಳಿದೆ. ಕೋವಿಡ್–19 ಪಿಡುಗು, ಅದನ್ನು ತಡೆಯಲು ಹೇರಲಾದ ಲಾಕ್‌ಡೌನ್‌ನಿಂದಾಗಿ ರಾಜ್ಯದ ಉದ್ಯಮ ವಲಯವು ನಲುಗಿದೆ. ಈ ವಲಯದ ಚೇತರಿಕೆಗೆ ಆಸರೆಯಾಗಿ ನಿಲ್ಲುವ ಉದ್ದೇಶ ತನಗಿದೆ ಎಂಬುದನ್ನು ರಾಜ್ಯ ಸರ್ಕಾರವು ವ್ಯಕ್ತಪಡಿಸಿದೆ. ಸರ್ಕಾರವು ಈ ಹಿಂದೆ ಕೈಗೊಂಡಿದ್ದ ಕೆಲವು ಕ್ರಮಗಳಿಂದಲೂ ಇದು ಸ್ಪಷ್ಟ. ಅಧಿಕಾರಶಾಹಿಯ ವಿಳಂಬದಿಂದಾಗಿ ಕೈಗಾರಿಕೆ ಸ್ಥಾಪನೆಗೆ ತೊಡಕಾಗಬಾರದು ಎಂಬ ಕಾರಣಕ್ಕಾಗಿ ಕರ್ನಾಟಕ ಕೈಗಾರಿಕಾ (ಸೌಲಭ್ಯಗಳು) ಕಾಯ್ದೆಗೆ ಇತ್ತೀಚೆಗಷ್ಟೇ ತಿದ್ದುಪಡಿ ತರಲಾಗಿದೆ. ಉನ್ನತ ಮಟ್ಟದ ಸಮಿತಿಯ ಅನುಮೋದನೆಯ ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಒದಗಿಸಲಾಗಿದೆ. ಚೀನಾದಿಂದ ಹೊರಗೆ ಬಂದು ರಾಜ್ಯದಲ್ಲಿ ಘಟಕ ಸ್ಥಾಪಿಸಲು ಬಯಸುವ ಕಂಪನಿಗಳಿಗೆ ನೆರವಾಗಲು ಕಾರ್ಯಪಡೆಯೊಂದನ್ನೂ ರಚಿಸಲಾಗಿದೆ. ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲಾಗಿದೆ. ಈಗಿನ ನೀತಿಯಲ್ಲಿ ಹೂಡಿಕೆಗೆ ಸಬ್ಸಿಡಿ ನೀಡುವ ಪ್ರಸ್ತಾವವೂ ಇದೆ. ಕೈಗಾರಿಕೆಗಳು ಬೆಳೆಯಲು ಬೇಕಾದ ವಾತಾವರಣವನ್ನು ಈ ಕ್ರಮಗಳು ಸೃಷ್ಟಿಸಲಿವೆ ಎಂಬುದರಲ್ಲಿ ಅನುಮಾನ ಇಲ್ಲ.
ಹೊಸದಾಗಿ ಆರಂಭ ಆಗಲಿರುವ ಉದ್ಯಮಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ 70ರಿಂದ ಶೇ 100ರಷ್ಟು ಆದ್ಯತೆ ನೀಡಬೇಕು ಎಂಬುದು ಈಗಿನ ನೀತಿಯ ಮಹತ್ವಾಕಾಂಕ್ಷಿ ಅಂಶ. ರಾಜ್ಯದ ಅಭಿವೃದ್ಧಿಯಲ್ಲಿನ ದೊಡ್ಡ ಪಾಲು ಇಲ್ಲಿನ ಜನರಿಗೇ ಸಿಗಬೇಕು ಎಂಬುದು ಇದರ ಹಿಂದಿರುವ ಸದಾಶಯ. ಈ ಅಂಶವನ್ನು ನೀತಿಯಲ್ಲಿಯೇ ಸೇರಿಸುವ ಮೂಲಕ ಜನರ ಜತೆಗೆ ತಾನು ಇದ್ದೇನೆ ಎಂಬ ಸಂದೇಶವನ್ನು ಸರ್ಕಾರವು ಸಾರಿದೆ. ಆದರೆ, ಇದು ಕಾಯ್ದೆಯ ರೂಪ ಪಡೆಯದೇ ಇದ್ದರೆ, ಸರ್ಕಾರ ನಿರೀಕ್ಷಿಸಿದ ಮಟ್ಟದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರೆಯಲಾರದು ಎಂಬ ಅನುಮಾನವನ್ನು ಪರಿಣತರು ವ್ಯಕ್ತಪಡಿಸಿದ್ದಾರೆ. ಈಗಿನ ಸ್ಥಿತಿಯಲ್ಲಿ, ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಇರಬೇಕು ಎಂಬುದು ಕಾಯ್ದೆಯಾದರೆ, ಅದು ಬಂಡವಾಳ ಹೂಡಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಸರ್ಕಾರ ಹಾಕಿಕೊಂಡಿರುವ ಗುರಿ ಸಾಧನೆಗೆ ಹಿನ್ನಡೆ ಆಗುವುದಿಲ್ಲವೇ ಎಂಬ ಪ್ರಶ್ನೆಯೂ ಇದೆ. ಕೈಗಾರಿಕೆಗಳಿಗೆ ಬೇಕಾಗಿರುವುದು ನುರಿತ ಕುಶಲಕರ್ಮಿಗಳು, ಎಂಜಿನಿಯರ್‌ಗಳು, ತಂತ್ರಜ್ಞರು ಮತ್ತು ವಿಜ್ಞಾನಿಗಳು. ಕೈಗಾರಿಕೆಗಳಿಗೆ ಪೂರಕವಾದ ವಾತಾವರಣವನ್ನು ರೂಪಿಸುವುದು ಎಂದರೆ, ಅದಕ್ಕೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ಒದಗಿಸುವುದು ಕೂಡ. ಹಾಗಾಗಿ, ಉತ್ತಮ ಕೈಗಾರಿಕಾ ನೀತಿಯ ಜತೆಗೆ ಅಷ್ಟೇ ಪರಿಣಾಮಕಾರಿಯಾದ ಶಿಕ್ಷಣ, ತರಬೇತಿ ಮತ್ತು ಕೌಶಲ ನೀತಿಯನ್ನೂ ರೂಪಿಸಿ ಅನುಷ್ಠಾನ ಮಾಡಬೇಕು. ಹೊರಗೆ ಎಲ್ಲಿಯೂ ಲಭ್ಯ ಇಲ್ಲದಂತಹ ಪ್ರತಿಭಾವಂತರು ರಾಜ್ಯದಲ್ಲಿ ಇದ್ದರೆ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿ ಎಂದು ಕೇಳುವ ಪ್ರಮೇಯವೇ ಇರುವುದಿಲ್ಲ. 20 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಯ ಗುರಿ ಹಾಕಿಕೊಂಡಿರುವ ಸರ್ಕಾರವು ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಜನರನ್ನು ಈ ಉದ್ಯೋಗಗಳನ್ನು ಕೈಗೊಳ್ಳಲು ಸಜ್ಜುಗೊಳಿಸಬೇಕು.ಕೈಗಾರಿಕೆಗಳ ಮೂಲಕ ಭೌಗೋಳಿಕವಾಗಿ ರಾಜ್ಯದ ಸಮತೋಲಿತ ಪ್ರಗತಿ ಸಾಧ್ಯವಾಗಬೇಕು. ಆದರೆ, ಹೆಚ್ಚಿನ ಕೈಗಾರಿಕೆಗಳು ಬೆಂಗಳೂರಿನ ಸುತ್ತಮುತ್ತಲೇ ಸ್ಥಾಪನೆ ಆಗಿವೆ ಮತ್ತು ಆಗುತ್ತಿವೆ. ಎರಡು ಮತ್ತು ಮೂರನೇ ಸ್ತರದ ನಗರಗಳ ಸುತ್ತಲೂ ಕೈಗಾರಿಕೆಗಳನ್ನು ಬೆಳೆಸಲು ಸರ್ಕಾರ ಈ ಹಿಂದೆಯೂ ಶ್ರಮಿಸಿತ್ತು. ಅದು ದೊಡ್ಡ ಮಟ್ಟದ ಫಲ ನೀಡಿಲ್ಲ. ಹೊಸ ನೀತಿಯಲ್ಲಿ,ಧಾರವಾಡ ಮತ್ತು ಶಿವಮೊಗ್ಗದಲ್ಲಿ ಎರಡು ವಿಶೇಷ ಹೂಡಿಕೆ ವಲಯಗಳ ಸ್ಥಾಪನೆಯ ಪ್ರಸ್ತಾವ ಇದೆ. ಇದು ಭೌಗೋಳಿಕವಾಗಿ ಸಮತೋಲಿತ ಪ್ರಗತಿಯ ಆಶಯಕ್ಕೆ ಪೂರಕ. ಈ ದಿಸೆಯಲ್ಲಿ ಸರ್ಕಾರವು ವಿಶೇಷ ಮುತುವರ್ಜಿ ವಹಿಸಬೇಕು. ಕೈಗಾರಿಕಾ ಅಭಿವೃದ್ಧಿಯ ಫಲವು ರಾಜ್ಯದ ಎಲ್ಲ ಭಾಗಗಳಿಗೆ, ಎಲ್ಲ ಜನರಿಗೆ ದಕ್ಕುವಂತೆ ನೋಡಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.