ADVERTISEMENT

ಸಂಪಾದಕೀಯ: ಹಿತಕರ ಮಟ್ಟದಲ್ಲಿ ಹಣದುಬ್ಬರ; ಅಹಿತಕರ ಮಟ್ಟಕ್ಕೆ ತೈಲ ಬೆಲೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 22:11 IST
Last Updated 14 ಫೆಬ್ರುವರಿ 2021, 22:11 IST
Sampadakiya 15-02-2021.jpg
Sampadakiya 15-02-2021.jpg   

ದೈನಂದಿನ ಜೀವನಕ್ಕೆ ಅತ್ಯಂತ ಅಗತ್ಯವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಹೆಚ್ಚಾಗುತ್ತ ಇದೆ. ಈ ಎರಡು ತೈಲೋತ್ಪನ್ನಗಳ ಬೆಲೆಯು ಈಗಾಗಲೇ ದಾಖಲೆಯ ಗರಿಷ್ಠ ಮಟ್ಟದಲ್ಲಿ ಇದೆ. ಸಾರ್ವಜನಿಕರಿಗೂ ನೀತಿ ನಿರೂಪಕರಿಗೂ ಏಕಕಾಲದಲ್ಲಿ ಚಿಂತೆ ಮೂಡಿಸುವಂಥದ್ದು ತೈಲೋತ್ಪನ್ನಗಳ ಬೆಲೆ ಹೆಚ್ಚಳ. ಇದರ ನಡುವೆ ನೀತಿ ನಿರೂಪಕರಿಗೆ ಒಂದಿಷ್ಟು ಸಮಾಧಾನ ತರುವ ಸುದ್ದಿಯೊಂದು ಹೊರಬಿದ್ದಿದೆ. ಜನವರಿ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡ 4.06ಕ್ಕೆ ತಗ್ಗಿದೆ. 2020ರ ಅಕ್ಟೋಬರ್‌ ತಿಂಗಳಲ್ಲಿ ಶೇಕಡ 7.61ಕ್ಕೆ ಏರಿಕೆ ಆಗಿದ್ದ ಹಣದುಬ್ಬರವು ಈಗ ಈ ಮಟ್ಟಕ್ಕೆ ತಗ್ಗಿದೆ.

ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ), ಹಣದುಬ್ಬರದ ಪ್ರಮಾಣವನ್ನು ಶೇ 4ರ ಆಸುಪಾಸಿನಲ್ಲಿ (ಶೇ 2ರಷ್ಟು ಹೆಚ್ಚು ಅಥವಾ ಶೇ 2ರಷ್ಟು ಕಡಿಮೆ) ಇರಿಸಬೇಕು ಎಂದು ಹಿಂದೆಯೇ ಸೂಚನೆ ನೀಡಿದೆ. ಆದರೆ, ಕೋವಿಡ್–19ರ ಕಾರಣದಿಂದಾಗಿ ಪೂರೈಕೆ ವ್ಯವಸ್ಥೆಯಲ್ಲಿ ಉಂಟಾದ ವ್ಯತ್ಯಯದ ಪರಿಣಾಮವಾಗಿ ಶೇ 7ಕ್ಕಿಂತ ಹೆಚ್ಚಾಗಿದ್ದ ಹಣದುಬ್ಬರವು ತೀರಾ ಅಹಿತಕರ ಸನ್ನಿವೇಶವನ್ನು ಸೃಷ್ಟಿಸಿತ್ತು. ಈಗ ತರಕಾರಿಗಳ ಬೆಲೆಯಲ್ಲಿ ಶೇ 16ರಷ್ಟು ಇಳಿಕೆ ಕಂಡುಬಂದಿರುವ ಪರಿಣಾಮವಾಗಿ, ಒಟ್ಟಾರೆ ಚಿಲ್ಲರೆ ಹಣದುಬ್ಬರದ ಪ್ರಮಾಣವು ಹಿತಕರ ಮಟ್ಟದತ್ತ ಸರಿದಿದೆ ಎಂದು ವರದಿಯಾಗಿದೆ.

ಪೂರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಪರಿಹಾರ ಕಂಡಿದ್ದರ ಪರಿಣಾಮವಾಗಿ, ತರಕಾರಿಗಳ ಬೆಲೆ ಜನವರಿಯಲ್ಲಿ ಇಳಿಕೆ ಆಗಿರಬಹುದು. ಇದು ಹಣದುಬ್ಬರದ ಅಂಕಿ–ಅಂಶಗಳು ಸಮಾಧಾನ ತರುವ ಮಟ್ಟದಲ್ಲಿ ಕಾಣಿಸುವಂತೆ ಮಾಡಿರಬಹುದು. ಹಣದುಬ್ಬರ ತಗ್ಗಿರುವ ಕಾರಣದಿಂದಾಗಿ ರೆಪೊ ದರಗಳನ್ನು ಇನ್ನಷ್ಟು ತಗ್ಗಿಸಲು ಆರ್‌ಬಿಐಗೆ ಅವಕಾಶ ಇದೆ ಎಂದು ಕೆಲವರು ಈ ಸಂದರ್ಭದಲ್ಲಿ ವಾದಿಸಬಹುದು ಕೂಡ. ಆದರೆ, ತುಸು ತಾಳ್ಮೆಯಿಂದ ಇನ್ನಷ್ಟು ಸಂಗತಿಗಳತ್ತ ಗಮನಹರಿಸಿದರೆ, ಹಣದುಬ್ಬರ ಈಗ ತಗ್ಗಿರುವಂತೆ ಕಂಡರೂ ಮುಂದಿನ ದಿನಗಳಲ್ಲಿ ಅದು ಮತ್ತೆ ದುಃಸ್ವಪ್ನದಂತೆ ಕಾಡುವ ಸಾಧ್ಯತೆ ಇದೆ ಎಂಬುದು ಗೊತ್ತಾಗುತ್ತದೆ.

ADVERTISEMENT

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಇದ್ದರೂ ಇವುಗಳ ಮೇಲಿನ ಸುಂಕವನ್ನು ತಗ್ಗಿಸಿ, ದೇಶಿ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಕಡಿಮೆ ಮಾಡುವ ಪ್ರಸ್ತಾವ ತನ್ನ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ತೈಲ ಬೆಲೆ ಹೆಚ್ಚಳವು ಸರಕು ಸಾಗಣೆ ವೆಚ್ಚವನ್ನು ತಕ್ಷಣಕ್ಕೆ ಹೆಚ್ಚಿಸುವ ಶಕ್ತಿ ಹೊಂದಿದೆ. ಆಹಾರ ಪದಾರ್ಥಗಳು ಸೇರಿದಂತೆ ಪ್ರತಿದಿನದ ಜೀವನಕ್ಕೆ ಅಗತ್ಯವಿರುವ ಎಲ್ಲ ವಸ್ತುಗಳ ಬೆಲೆಯೂ ತೈಲ ಬೆಲೆಯ ಜೊತೆ ಜೋಡಣೆ ಆಗಿರುತ್ತದೆ.

ಹೀಗಾಗಿ, ತೈಲ ಬೆಲೆ ಹೆಚ್ಚಳದ ಪರಿಣಾಮವು ಅಗತ್ಯ ವಸ್ತುಗಳ ಬೆಲೆಯಲ್ಲಿ ಹಲವೆಡೆ ಈಗಾಗಲೇ ಕಾಣಿಸಿಕೊಂಡಿದೆ, ಕೆಲವೆಡೆ ಇನ್ನು ಕೆಲವೇ ದಿನಗಳಲ್ಲಿ ಕಾಣಿಸಿಕೊಳ್ಳಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿನ ಹೆಚ್ಚಳವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ನೋಡಿದಾಗ, ‘ಹಣದುಬ್ಬರ ತಗ್ಗಿರುವುದರ ಸಮಾಧಾನವು ಎಷ್ಟು ದಿನಗಳವರೆಗೆ ಇರಲಿದೆ’ ಎಂಬ ಪ್ರಶ್ನೆ ಮೂಡುತ್ತದೆ. ಆಹಾರೇತರ ಉತ್ಪನ್ನಗಳ ಹಣದುಬ್ಬರ ಪ್ರಮಾಣವು ತೀರಾ ಕಡಿಮೆ ಆಗಿಲ್ಲ ಎಂಬುದನ್ನೂ ಇಲ್ಲಿ ಗಮನಿಸಬೇಕು. ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳುಗಳಲ್ಲಿ ಹಣದುಬ್ಬರವು ಮತ್ತೆ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ಕೆಲವು ಅರ್ಥಶಾಸ್ತ್ರಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಹಣದುಬ್ಬರಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ತಾತ್ಕಾಲಿಕ ಸಮಾಧಾನವನ್ನಷ್ಟೇ ಮೂಡಿಸಬಲ್ಲವು.

ಹಣದುಬ್ಬರವು ನಿಜಕ್ಕೂ ಇಳಿಕೆ ಕಂಡು, ಜನಸಾಮಾನ್ಯರ ದೈನಂದಿನ ವಹಿವಾಟು ಇನ್ನಷ್ಟು ಚುರುಕು ಪಡೆದುಕೊಳ್ಳಬೇಕು ಎಂದಾದರೆ, ತೈಲ ಬೆಲೆ ತಗ್ಗಬೇಕು. ಅದು ಸಾಧ್ಯವಾಗದಿದ್ದರೆ ಮಧ್ಯಮ ವರ್ಗದ ಜನ ಖರ್ಚು ಮಾಡಲು ಇನ್ನಷ್ಟು ಹಿಂದೇಟು ಹಾಕಿಯಾರು. ಪರಿಣಾಮವಾಗಿ, ವಾಣಿಜ್ಯ ವಹಿವಾಟುಗಳು ಸೊರಗಬಹುದು. ಹಣದುಬ್ಬರವನ್ನು ಹಿತಕರ ಮಟ್ಟದಲ್ಲಿ ಇರಿಸಿಕೊಳ್ಳುವ ಜೊತೆಯಲ್ಲೇ, ತೈಲ ಬೆಲೆ ಅಹಿತಕರ ಮಟ್ಟದಿಂದ ಇಳಿಯುವಂತೆ ನೋಡಿಕೊಳ್ಳುವ ಸಂದರ್ಭವೂ ಹೌದು ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.