ADVERTISEMENT

ಸಂಪಾದಕೀಯ | ನಿಯಂತ್ರಣಕ್ಕೆ ಬರುತ್ತಿಲ್ಲ ಬೆಲೆ ಏರಿಕೆ; ಆರ್ಥಿಕ ಬೆಳವಣಿಗೆಗೆ ಮಾರಕ

ಸಂಪಾದಕೀಯ
Published 21 ಜನವರಿ 2024, 21:22 IST
Last Updated 21 ಜನವರಿ 2024, 21:22 IST
   

ಡಿಸೆಂಬರ್‌ ತಿಂಗಳಲ್ಲಿ ದೇಶದ ಚಿಲ್ಲರೆ ಹಣದುಬ್ಬರ ದರವು ನವೆಂಬರ್‌ ತಿಂಗಳಲ್ಲಿ ದಾಖಲಾಗಿದ್ದಕ್ಕಿಂತ ಹೆಚ್ಚಾಗಿದೆ ಎಂಬುದನ್ನು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಈಚೆಗೆ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತಿವೆ. ಆಹಾರ ವಸ್ತುಗಳ ಹಣದುಬ್ಬರ ಜಾಸ್ತಿಯಾದ ಪರಿಣಾಮವಾಗಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಡಿಸೆಂಬರ್‌ನಲ್ಲಿ ಶೇಕಡ 5.69ಕ್ಕೆ ಹೆಚ್ಚಳ ಕಂಡಿದೆ.

ಈ ಏರಿಕೆಯು ನಿರೀಕ್ಷಿತವೇ ಆಗಿತ್ತು. ಆಹಾರ ವಸ್ತುಗಳ ಬೆಲೆ ಏರಿಕೆ ಪ್ರಮಾಣವು ಹೆಚ್ಚಳ ಕಂಡು, ಒಟ್ಟಾರೆ ಹಣದುಬ್ಬರ ದರವು ಜಾಸ್ತಿ ಆಗಬಹುದು ಎಂಬ ಮಾತನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿತ್ತು. ಗ್ರಾಹಕ ಆಹಾರ ಬೆಲೆ ಸೂಚ್ಯಂಕವು ಡಿಸೆಂಬರ್‌ನಲ್ಲಿ ಶೇಕಡ 9.53ಕ್ಕೆ ಹೆಚ್ಚಳ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಧಾನ್ಯಗಳ ಬೆಲೆಯಲ್ಲಿ ಆದ ಶೇ 9.93ರಷ್ಟು ಏರಿಕೆ. ಬಹುತೇಕ ಎಲ್ಲ ಬಗೆಯ ಏಕಧಾನ್ಯಗಳ ಬೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಏರಿಕೆ ಆಗುತ್ತಲೇ ಇದೆ. ದ್ವಿದಳ ಧಾನ್ಯಗಳ ಬೆಲೆಯು ಹೆಚ್ಚು ಏರಿಕೆ ಕಂಡಿದೆ. ಡಿಸೆಂಬರ್‌ನಲ್ಲಿ ದ್ವಿದಳ ಧಾನ್ಯಗಳ ಬೆಲೆಯು 43 ತಿಂಗಳ ಗರಿಷ್ಠ ಮಟ್ಟದಲ್ಲಿ ಇತ್ತು. ಹಿಂಗಾರು ಬೆಳೆಯು ಹಿಂದಿನ ವರ್ಷದ ಪ್ರಮಾಣಕ್ಕಿಂತ ಕಡಿಮೆ ಆಗುವ ಸಾಧ್ಯತೆ ಇರುವ ಕಾರಣ, ದ್ವಿದಳ ಧಾನ್ಯಗಳ ಬೆಲೆ ಏರಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಜನಸಾಮಾನ್ಯರು ಮನೆಗಳಲ್ಲಿ ಬಳಸುವ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಏಕದಳ ಹಾಗೂ ದ್ವಿದಳ ಧಾನ್ಯಗಳಿಗೆ ಆದ್ಯತೆ ಹೆಚ್ಚಿರುತ್ತದೆ. ಹೀಗಾಗಿ, ಈ ಪದಾರ್ಥಗಳ ಬೆಲೆ ಏರಿಕೆಯು ಅವರಿಗೆ ನಿಜಕ್ಕೂ ಸಮಸ್ಯೆ ಸೃಷ್ಟಿಸುತ್ತದೆ.

ಕಳೆದ ಕೆಲವು ತಿಂಗಳ ಅವಧಿಯಲ್ಲಿ ತರಕಾರಿಗಳ ಬೆಲೆಯಲ್ಲಿಯೂ ತೀವ್ರ ಏರಿಕೆ ಆಗಿದೆ. ಟೊಮೆಟೊ ಮತ್ತು ಈರುಳ್ಳಿ ಬೆಲೆಯಲ್ಲಿ 2022ರ ಡಿಸೆಂಬರ್‌ನ ಬೆಲೆಗೆ ಹೋಲಿಸಿದರೆ ಭಾರಿ ಏರಿಕೆ ಆಗಿತ್ತು. ಆದರೆ, ತರಕಾರಿಗಳ ಬೆಲೆಯು ಅಲ್ಪಾವಧಿಯಲ್ಲಿ ಬಹಳ ಏರಿಳಿಕೆ ಕಾಣುತ್ತದೆ ಎಂಬುದು ನಿಜ. ಈ ಏರಿಳಿತಕ್ಕೆ ಪೂರೈಕೆ ವ್ಯವಸ್ಥೆ ಸೇರಿದಂತೆ ಹಲವು ಕಾರಣಗಳಿರುತ್ತವೆ. ಒಟ್ಟಾರೆಯಾಗಿ, ಎಲ್ಲ ಬಗೆಯ ಆಹಾರ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿದೆ. ಇದು ದೊಡ್ಡ ಸವಾಲು.

ADVERTISEMENT

ಆಹಾರ ವಸ್ತುಗಳ ಬೆಲೆ ಏರಿಕೆಯ ಮೇಲೆ ನಿಗಾ ಇರಿಸುವುದು ಆರ್‌ಬಿಐನ ಪ್ರಮುಖಕಾರ್ಯಸೂಚಿಗಳಲ್ಲಿ ಒಂದು ಎಂದು ಗವರ್ನರ್‌ ಶಕ್ತಿಕಾಂತ ದಾಸ್ ಈಚೆಗೆ ಹೇಳಿದ್ದಾರೆ. ಆಹಾರ ಮತ್ತು ಇಂಧನ ಹೊರತುಪಡಿಸಿ, ಇತರ ಸೇವೆಗಳು ಹಾಗೂ ಸರಕುಗಳ ಬೆಲೆ ಏರಿಕೆಯ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ. ಹೀಗಿದ್ದರೂ, ಹತ್ತು ಹಲವು ಅಂತರರಾಷ್ಟ್ರೀಯ ವಿದ್ಯಮಾನಗಳು ಹಾಗೂ ಹವಾಮಾನದ ಪರಿಣಾಮವನ್ನು ಆಧರಿಸಿರುವ ಹಣದುಬ್ಬರವನ್ನು ಅಂದಾಜು ಮಾಡುವುದು ಕಷ್ಟದ ಕೆಲಸವೇ. ಡಿಸೆಂಬರ್‌ನಲ್ಲಿ ದಾಖಲಾಗಿರುವ ಹಣದುಬ್ಬರ ಪ್ರಮಾಣವು ಆರ್‌ಬಿಐ ನಿಗದಿ ಮಾಡಿಕೊಂಡಿರುವ ಪ್ರಮಾಣಕ್ಕಿಂತ ಬಹಳ ಹೆಚ್ಚು. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ 5.4ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜು ಮಾಡಿದೆ. ಮುಂದಿನ ಹಣಕಾಸು ವರ್ಷದಲ್ಲಿ ಇದು ಶೇ 5.2ರಷ್ಟು ಆಗಲಿದೆ ಎಂದು ಅಂದಾಜಿಸಿದೆ. ವಾಸ್ತವದಲ್ಲಿ ಹಣದುಬ್ಬರ ಪ್ರಮಾಣವು ಈಗಿನ ಅಂದಾಜಿಗಿಂತ ಹೆಚ್ಚಾಗಬಹುದು ಎಂಬುದನ್ನು ಈಗಿನ ಕೆಲವು ವಿದ್ಯಮಾನಗಳು ಹೇಳುತ್ತಿವೆ.

ಕೇಂದ್ರ ಸರ್ಕಾರವು ಮಧ್ಯಂತರ ಬಜೆಟ್ಟನ್ನು ಫೆಬ್ರುವರಿ 1ರಂದು ಮಂಡಿಸಲಿದೆ. ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಮುಂದಿನ ತಿಂಗಳಲ್ಲಿ ಸಭೆ ಸೇರಲಿದೆ. ಹಣಕಾಸು ನೀತಿ ಸಮಿತಿಯು ರೆಪೊ ದರದ ವಿಚಾರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹಣದುಬ್ಬರವು ಹೆಚ್ಚಿನ ಮಟ್ಟದಲ್ಲಿಯೇ ಇರುವುದು ದೇಶದ ಅರ್ಥ ವ್ಯವಸ್ಥೆಗೆ ಹಾಗೂ ಕುಟುಂಬಗಳ ಖರ್ಚುಗಳ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಬಹುದು. ಅದರಲ್ಲೂ ಮುಖ್ಯವಾಗಿ, ಆಹಾರ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಹೆಚ್ಚಾಗುತ್ತಿರುವಾಗ ಪರಿಸ್ಥಿತಿ ಕಷ್ಟಕರವಾಗಿರುತ್ತದೆ. ಈ ಬಗೆಯ ಹಣದುಬ್ಬರವು ಬೇಡಿಕೆಯನ್ನು, ಬಳಕೆಯನ್ನು ಕುಗ್ಗಿಸುತ್ತದೆ. ಇದನ್ನು ಈಗ ಕಾಣುತ್ತಿದ್ದೇವೆ ಕೂಡ. ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಬರುತ್ತಿರುವ ಬೇಡಿಕೆಯು ಹಲವು ತಿಂಗಳುಗಳಿಂದ ಕಡಿಮೆ ಮಟ್ಟದಲ್ಲಿದೆ. ಬೇಡಿಕೆಯು ಇನ್ನಷ್ಟು ತಗ್ಗಿದರೆ ಆರ್ಥಿಕ ಬೆಳವಣಿಗೆ ಕುಸಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.