ADVERTISEMENT

ಸಂಪಾದಕೀಯ: ಕಂತು ಪಾವತಿ ಅವಧಿ ವಿಸ್ತರಣೆ ಹಿತವಾಗಬಲ್ಲ ಮಧ್ಯಮ ಮಾರ್ಗ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 19:30 IST
Last Updated 22 ಸೆಪ್ಟೆಂಬರ್ 2020, 19:30 IST
   

ಕೋವಿಡ್–19 ಸಾಂಕ್ರಾಮಿಕ ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟು ಅಸಾಧಾರಣ ಎಂಬ ಮಾತು ಕ್ಲೀಷೆಯಾಗಿ ಕಾಣಿಸಬಹುದು. ಆದರೆ, ಈ ಬಿಕ್ಕಟ್ಟಿನ ನಡುವೆ ಜೀವನದ ಬಂಡಿ ಸಾಗಿಸಲು ಹೆಣಗಾಡುತ್ತಿರುವವರಿಗೆ ಬಿಕ್ಕಟ್ಟು ಅದೆಷ್ಟು ತೀವ್ರವಾಗಿದೆ ಎಂಬುದು ಈಗಾಗಲೇ ಅರ್ಥವಾಗಿರುತ್ತದೆ. ಇಂತಹ ಅಸಾಧಾರಣ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ನೆರವಿಗೆ ಬಂದ ಒಂದು ಮಾರ್ಗ, ಸಾಲದ ಕಂತುಗಳ ಪಾವತಿ ಅವಧಿಯ ಮುಂದೂಡಿಕೆ.

ಲಾಕ್‌ಡೌನ್‌ ಕಾರಣದಿಂದಾಗಿ ಉದ್ಯೋಗ ಕಳೆದುಕೊಂಡವರಿಗೆ, ವೇತನ ಕಡಿತ ಅನುಭವಿಸುತ್ತಿರುವವರಿಗೆ, ಆದಾಯದ ಮೂಲ ಬತ್ತಿಹೋಗಿರುವವರಿಗೆ ಈ ವಿನಾಯಿತಿಯು ದೊಡ್ಡಮಟ್ಟಿಗೆ ನೆರವಾಗಿದೆ. ಈ ವಿನಾಯಿತಿ ಅವಧಿಯು ಆಗಸ್ಟ್‌ 31ಕ್ಕೆ ಕೊನೆಗೊಂಡಿತ್ತು. ಆದರೆ, ಅವಧಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಲು ಅವಕಾಶ ಇದೆ ಎಂದುಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿಸುಪ್ರೀಂ ಕೋರ್ಟ್‌ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿಕೆ ಸಲ್ಲಿಸಿತ್ತು. ಅದರಂತೆಯೇ, ಈಗ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ‌ (ಎಸ್‌ಬಿಐ), ಯಾರೆಲ್ಲ ಕಂತು ಪಾವತಿಯಿಂದ ವಿನಾಯಿತಿ (ಮೊರಟೋರಿಯಂ) ಸೌಲಭ್ಯ ಪಡೆಯಬಹುದು, ಯಾವ ಬಗೆಯ ಸಾಲಗಳಿಗೆ ಈ ಸೌಲಭ್ಯ ಸಿಗುತ್ತದೆ ಎಂಬುದರ ವಿವರಗಳನ್ನು ಪ್ರಕಟಿಸಿದೆ.

ಮೊರಟೋರಿಯಂ ಸೌಲಭ್ಯ ಪಡೆಯಲು ಡಿಸೆಂಬರ್ 24ರ ಗಡುವನ್ನು ಕೂಡ ನಿಗದಿ ಮಾಡಿದೆ. ಆನ್‌ಲೈನ್‌ ಮೂಲಕ ಅಥವಾ ಬ್ಯಾಂಕಿನ ಶಾಖೆಗಳಿಗೆ ಭೇಟಿ ನೀಡಿ ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು. ಭಾರತದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ಈ ಸೌಲಭ್ಯವನ್ನು ಮುಂಚೂಣಿಯಲ್ಲಿ ನಿಂತು ಕಲ್ಪಿಸಿರುವ ಕಾರಣ, ಇನ್ನುಳಿದ ಬ್ಯಾಂಕುಗಳೂ ಈ ಸೌಲಭ್ಯವನ್ನು ಆದಷ್ಟು ಬೇಗ ನೀಡುತ್ತವೆ ಎಂಬ ನಿರೀಕ್ಷೆ ಹೊಂದಬಹುದು. ಈಗ, ಖಾಸಗಿ ವಲಯದ ದೊಡ್ಡ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಕೂಡ ಸಾಲದ ಕಂತುಗಳನ್ನು ಮುಂದೂಡಿಕೆ ಮಾಡುವ ಅವಕಾಶ ಕಲ್ಪಿಸಿರುವ ವರದಿಗಳು ಬಂದಿವೆ.

ADVERTISEMENT

ಗೃಹ ಸಾಲ, ಶಿಕ್ಷಣ ಸಾಲ, ವಾಣಿಜ್ಯ ಬಳಕೆಗೆ ಅಲ್ಲದ ವಾಹನ ಸಾಲ ಸೇರಿದಂತೆ ಕೆಲವು ಬಗೆಯ ಸಾಲಗಳಿಗೆ ಎಸ್‌ಬಿಐ ನೀಡಿರುವ ಸೌಲಭ್ಯವು ಅನ್ವಯವಾಗುತ್ತದೆ. ಮೊರಟೋರಿಯಂ ಅವಧಿಯಲ್ಲಿ ಸಾಲದ ಮೊತ್ತಕ್ಕೆ ಬಡ್ಡಿ ವಿಧಿಸಬೇಕೇ ಎಂಬ ವಿಚಾರವಾಗಿ ಕಳೆದ ಕೆಲವು ತಿಂಗಳುಗಳಲ್ಲಿ ಬಹಳಷ್ಟು ಚರ್ಚೆಗಳು ನಡೆದಿವೆ. ಈಗ ಮೊರಟೋರಿಯಂ ಸೌಲಭ್ಯ ಪಡೆದವರಿಗೂ ಆ ಅವಧಿಗೆ ಬಡ್ಡಿ ವಿಧಿಸಲಾಗುತ್ತದೆ ಎಂಬುದನ್ನು ಎಸ್‌ಬಿಐ ಸ್ಪಷ್ಟಪಡಿಸಿದೆ. ಠೇವಣಿದಾರರು ಮತ್ತು ಷೇರುದಾರರಿಂದ ಹಣ ಪಡೆದು, ಅದನ್ನು ಸಾಲವಾಗಿ ನೀಡುವ ಬ್ಯಾಂಕ್‌ಗಳು, ಸಾಲದ ಮೇಲಿನ ಬಡ್ಡಿಗೆ ವಿನಾಯಿತಿ ನೀಡಬೇಕು ಎಂದಾದರೆ, ಠೇವಣಿದಾರರಿಗೆ ಕೊಡಬೇಕಿರುವ ಬಡ್ಡಿ ಮೊತ್ತಕ್ಕೆ ಎಲ್ಲಿಂದ ಹಣ ತಂದುಕೊಡಬೇಕು ಎಂಬ ಪ್ರಶ್ನೆ ಎದುರಾಗುತ್ತದೆ.

ಕೋವಿಡ್‌ನಿಂದಾಗಿ ಠೇವಣಿದಾರರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಸಾಲ ಪಡೆದವರ ಹಾಗೂ ಠೇವಣಿ ಇರಿಸಿದವರಿಬ್ಬರ ಹಿತವನ್ನೂ ಕಾಯುವ ಹೊಣೆ ಹೊತ್ತಿರುವ ಬ್ಯಾಂಕುಗಳು ಈಗ ಸಾಲದ ಬಾಕಿ ಮೊತ್ತದ ಮರುಹೊಂದಾಣಿಕೆ ಮಾರ್ಗದ ಮೊರೆಹೋಗಿವೆ. ಈ ಕ್ರಮದಿಂದಾಗಿ, ಸಾಲ ಪಡೆದವರು ತಮ್ಮ ಸಾಲ ಸುಸ್ತಿಯಾಗುವ ಅಪಾಯದಿಂದ ನಿರ್ದಿಷ್ಟ ಅವಧಿಯ ಮಟ್ಟಿಗೆ ಪಾರಾಗುತ್ತಾರೆ. ಬ್ಯಾಂಕುಗಳಿಗೆ ಕೂಡ ತಾವು ಕೊಟ್ಟ ಸಾಲ ‘ಅನುತ್ಪಾದಕ’ ಆಗದಂತೆ ನೋಡಿಕೊಳ್ಳುವ ಕಾಲಮಿತಿಯ ಅವಕಾಶ ಇದರಿಂದ ಲಭ್ಯವಾಗುತ್ತದೆ. ಈ ಮಧ್ಯಮ ಮಾರ್ಗವು ಬ್ಯಾಂಕುಗಳ ಷೇರುದಾರರಿಗೂ ಇಷ್ಟವಾಗಬಹುದು.

ಸಾಲ ಪಡೆದವರ ಪಾಲಿಗೆ ಮೊರಟೋರಿಯಂ ಅವಧಿಯು ತಮ್ಮ ಹಣಕಾಸಿನ ಸ್ಥಿತಿಯನ್ನು ಸರಿದಾರಿಗೆ ತಂದುಕೊಳ್ಳಲು, ಹೊಸ ಆದಾಯ ಮೂಲವನ್ನು ಸೃಷ್ಟಿಸಿಕೊಳ್ಳಲು ಇರುವ ಅಪೂರ್ವ ಅವಕಾಶ. ಈ ಅವಕಾಶವನ್ನು ಅವರು ಬಹಳ ಶಿಸ್ತಿನಿಂದ ಬಳಕೆ ಮಾಡಿಕೊಳ್ಳಬೇಕು. ಆರ್‌ಬಿಐ ಈಗಾಗಲೇ ಹೇಳಿರುವಂತೆ, ಈ ರೀತಿಯ ಸೌಲಭ್ಯವು ಮತ್ತೆ ಮತ್ತೆ ಸಿಗಲಿಕ್ಕಿಲ್ಲ. ಮೊರಟೋರಿಯಂ ಸೌಲಭ್ಯ ಪಡೆದಿದ್ದರೂ ಸಾಲವನ್ನು ಅವಧಿಗೆ ಮುನ್ನವೇ ಮರುಪಾವತಿಸಲು ನಿರ್ಬಂಧ ಇಲ್ಲ. ಹಾಗಾಗಿ, ಮುಂದೆ ಆರ್ಥಿಕ ಸ್ಥಿತಿ ಉತ್ತಮವಾದಲ್ಲಿ, ಸಾಲ ಮರುಪಾವತಿಯನ್ನು ಆದ್ಯತೆಯ ಮೇರೆಗೆ ಮಾಡಿದಲ್ಲಿ ಬಡ್ಡಿಯ ಹೊರೆಯನ್ನು ತುಸು ತಗ್ಗಿಸಿಕೊಳ್ಳಲು ಸಾಧ್ಯವಾದೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.