ADVERTISEMENT

ಲೆಕ್ಕಪತ್ರ ಸಮಿತಿಯ ನಡೆಗೆ ತಡೆಯೊಡ್ಡಿದ ಕ್ರಮ ತರವೇ?

​ಪ್ರಜಾವಾಣಿ ವಾರ್ತೆ
Published 29 ಮೇ 2020, 20:00 IST
Last Updated 29 ಮೇ 2020, 20:00 IST
   

ಸಂಸತ್ ಅಥವಾ ಶಾಸನಸಭೆಗಳಲ್ಲಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ತನ್ನದೇ ಆದ ಅಧಿಕಾರ ವ್ಯಾಪ್ತಿ ಇದೆ. ಸಾರ್ವಜನಿಕ ಹಣದ ದುರುಪಯೋಗದಂತಹ ಪ್ರಕರಣಗಳನ್ನು ಬಯಲಿಗೆಳೆದ ಗುಣಾತ್ಮಕ ಚಾರಿತ್ರ್ಯವನ್ನು ಸಮಿತಿ ಹೊಂದಿದೆ. ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದು, ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳನ್ನು ಜನರು ತಿರಸ್ಕರಿಸುವಷ್ಟರ ಮಟ್ಟಿಗೆ ಸಮಿತಿಯ ವರದಿಗಳು ಪ್ರಭಾವ ಬೀರಿದ್ದನ್ನು ಇತಿಹಾಸ ಕಂಡಿದೆ. ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕಲ್ಲಿದ್ದಲು ಹಗರಣ, 2ಜಿ–ಸ್ಪೆಕ್ಟ್ರಂ ಹಗರಣವು ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲು ದಾರಿ ಮಾಡಿಕೊಟ್ಟಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಇಂತಹ ಪರಮೋನ್ನತ ಅಧಿಕಾರ ಇರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ನಡೆಗೆ ಲಗಾಮು ಹಾಕುವ ರೀತಿಯಲ್ಲಿ ಕರ್ನಾಟಕ ವಿಧಾನಸಭೆಯ ಅಧ್ಯಕ್ಷರು ಹೊರಡಿಸಿರುವ ಪ್ರಕಟಣೆಯು ಸಾಂವಿಧಾನಿಕ ಸಂಸ್ಥೆಯೊಂದರ ಅಧಿಕಾರವನ್ನೇ ಕಟ್ಟಿಹಾಕುವತ್ತ ಇಟ್ಟಿರುವ ಹೆಜ್ಜೆಯಂತಿದೆ. ಕೊರೊನಾ ವೈರಾಣು ಹರಡುವಿಕೆ ತಡೆಯಲು ಅವಶ್ಯವಾದ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ತನಿಖೆಗೆ ಮುಂದಾದ ಸಮಿತಿಯು ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಲು ದಿನಾಂಕ ಗೊತ್ತು ಮಾಡಿತ್ತು. ಉದ್ದೇಶಿತ ಭೇಟಿಗೆ ಒಂದು ದಿನ ಮೊದಲು ಪ್ರಕಟಣೆ ಹೊರಡಿಸಿದ ಸಭಾಧ್ಯಕ್ಷರು, ಕೊರೊನಾ ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಸಮಿತಿಯ ಸದಸ್ಯರು ಅಧ್ಯಯನ ಪ್ರವಾಸ ಕೈಗೊಂಡಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳನ್ನು ಭೇಟಿಯಾಗಬೇಕಾಗುತ್ತದೆ, ಆರೋಗ್ಯದ ಹಿತದೃಷ್ಟಿಯಿಂದ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದು ಅಗತ್ಯವಾಗಿದ್ದು ಈ ಹಂತದಲ್ಲಿ ಸ್ಥಳ ಭೇಟಿ, ಪರಿಶೀಲನೆ ಕೈಗೊಳ್ಳಬಾರದು ಎಂದು ಸೂಚಿಸಿದ್ದಾರೆ.

ಲಾಕ್‌ಡೌನ್ ಘೋಷಣೆಯಾಗಿದ್ದ ಆರಂಭದ ದಿನಗಳಲ್ಲಿ ಇಂತಹದ್ದೊಂದು ಪ್ರಕಟಣೆಯನ್ನು ಸಭಾಧ್ಯಕ್ಷರು ಹೊರಡಿಸಿದ್ದರೆ ಅದಕ್ಕೆ ಯಾರ ತಗಾದೆಯೂ ಇರುತ್ತಿರಲಿಲ್ಲ. ಅವ್ಯವಹಾರದ ತನಿಖೆ, ಖರೀದಿಯಾದ ಉಪಕರಣಗಳ ಗುಣಮಟ್ಟ ಹಾಗೂ ಅದರಿಂದ ಸಾರ್ವಜನಿಕರಿಗೆ ಆಗಿರುವ ಅನುಕೂಲ– ಅನನುಕೂಲ ಪರಿಶೀಲಿಸಲು ದಿನಾಂಕ ಗೊತ್ತು ಮಾಡಿದಾಗ ಈ ರೀತಿ ನಿರ್ಬಂಧ ವಿಧಿಸಿರುವುದಕ್ಕೆ ಲೆಕ್ಕಪತ್ರ ಸಮಿತಿಯೇ ಆಕ್ಷೇಪ ಎತ್ತಿದೆ. ಸಭಾಧ್ಯಕ್ಷರ ಈ ನಡೆ ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.

ADVERTISEMENT

ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ವಿಧಾನಸಭೆಯ 15 ಹಾಗೂ ವಿಧಾನ ಪರಿಷತ್ತಿನ ಐವರು ಸದಸ್ಯರನ್ನೊಳಗೊಂಡಿದೆ. ರಾಜ್ಯ ಸರ್ಕಾರ ವೆಚ್ಚ ಮಾಡಲು ಸದನ (ವಿಧಾನಮಂಡಲ) ಅನುಮೋದಿಸಿದ ಮೊತ್ತದ ವಿನಿಯೋಗ ಹೇಗೆ ಆಗಿದೆ ಎಂಬ ಲೆಕ್ಕದ ಪರಿಶೀಲನೆ, ಅನುಮೋದನೆ ನೀಡಿದ್ದಕ್ಕಿಂತ ಹೆಚ್ಚು ವೆಚ್ಚ ಮಾಡಿದ್ದರೆ ಅದರ ವಾಸ್ತವಾಂಶ ಪರಿಶೀಲನೆಯ ಅಧಿಕಾರ ಈ ಸಮಿತಿಗೆ ಇದೆ. ಕೊರೊನಾ ಸಂಕಷ್ಟದ ಕಾಲವನ್ನು ಎದುರಿಸಲು ಬೇಕಾದ ಔಷಧ, ವೈದ್ಯಕೀಯ ಸಲಕರಣೆ, ಸುರಕ್ಷಾ ಸಾಧನಗಳನ್ನು ಖರೀದಿಸಲು ಸರ್ಕಾರ ಮುಂದಾಯಿತು. ಇದಕ್ಕಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯಡಿ ವಿನಾಯಿತಿಯನ್ನೂ ನೀಡಿತು. ಟೆಂಡರ್‌ ಇಲ್ಲದೇ ಖರೀದಿಸುವ ಅವಕಾಶ ಬಳಸಿಕೊಂಡ ಕೆಲವರು ಇದರಲ್ಲಿ ಅಕ್ರಮ ಎಸಗಿದ್ದಾರೆ ಎಂಬ ದೂರುಗಳು ಸಮಿತಿಗೆ ಸಲ್ಲಿಕೆಯಾಗಿದ್ದವು. ಈಗಾಗಲೇ ಬಳಕೆಯಾಗಿದ್ದ ವೆಂಟಿಲೇಟರ್ ಖರೀದಿ, ಕಳಪೆ ಪಿಪಿಇ ಕಿಟ್‌ (ಸುರಕ್ಷಾ ಸಾಧನ)‌, ಸ್ಯಾನಿಟೈಸರ್‌ಗೆ ಮೂರು ಪಟ್ಟು ಹೆಚ್ಚು ದರ ನೀಡಿಕೆ, ಕಪ್ಪುಪಟ್ಟಿಗೆ ಸೇರಿದ್ದ ಕಂಪನಿಯೊಂದರಿಂದ ದುಬಾರಿ ದರದಲ್ಲಿ ಉಪಕರಣ ಖರೀದಿ ಮಾಡಲಾಗಿದೆ ಎಂಬಂತಹ ಆರೋಪಗಳನ್ನು ದೂರಿನಲ್ಲಿ ಪಟ್ಟಿ ಮಾಡಲಾಗಿತ್ತು. ಸರ್ಕಾರ ಖರೀದಿಸಿದ್ದ ಉಪಕರಣಗಳನ್ನು ಕೆಎಸ್ಆರ್‌ಟಿಸಿ, ಬಿಎಂಟಿಸಿ ಹಾಗೂ ವಿಮಾನ ನಿಲ್ದಾಣಗಳಲ್ಲಿ ಬಳಕೆಗೆ ನೀಡಲಾಗಿತ್ತು. ಈ ಸ್ಥಳಗಳಿಗೆ ಏಕಾಏಕಿ ದಾಳಿ ಮಾಡಲು ಸಮಿತಿಯೇನೂ ಮುಂದಾಗಿರಲಿಲ್ಲ. ಪರಿಶೀಲನೆಗಷ್ಟೇ ಸಜ್ಜಾಗಿತ್ತು.

225 ಶಾಸಕರ ಹಿತ ಕಾಯುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಭಾಧ್ಯಕ್ಷರಿಗೆ, ಶಾಸಕರ ಆರೋಗ್ಯದ ಬಗ್ಗೆ ಕಾಳಜಿ ಇರುವುದು ತಪ್ಪೇನಲ್ಲ. ಆದರೆ, ಈಗ ಲಾಕ್‌ಡೌನ್ ಇದ್ದರೂ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಇಂತಹ ಹೊತ್ತಿನಲ್ಲಿ ಕೊರೊನಾ ಭೀತಿ ಮುಂದಿಟ್ಟು ನಿರ್ಬಂಧ ವಿಧಿಸಿರುವ ಕ್ರಮ ಅನುಮಾನಗಳಿಗೆ ಎಡೆಮಾಡಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯಂತಹ ಸಾಂವಿಧಾನಿಕ ಸಂಸ್ಥೆಗಳು ಮುಕ್ತವಾಗಿ ಕೆಲಸ ಮಾಡಲು ಅವಕಾಶ ಇರಬೇಕು. ಇದು, ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನೆರವಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.