ADVERTISEMENT

ಸಂಪಾದಕೀಯ: ಸಮಾನತೆಯ ಹಾದಿಯಲ್ಲಿ ನಡಿಗೆ ಸ್ತ್ರೀವಾದದ ತಾತ್ವಿಕತೆಯ ದೀವಿಗೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 19:31 IST
Last Updated 7 ಮಾರ್ಚ್ 2021, 19:31 IST
   

ಶಿಕ್ಷಣ ಹಾಗೂ ಸಂವಹನ ಕ್ಷೇತ್ರದಲ್ಲಿ ಉಂಟಾಗಿರುವ ಅಸಾಧಾರಣ ಬದಲಾವಣೆಯು ಮಹಿಳೆಯ ಬದುಕಿನಲ್ಲೂ ಕ್ರಾಂತಿಕಾರಕ ಬದಲಾವಣೆ ತಂದಿದೆಯೇ ಎಂದು ಗಮನಿಸಿದರೆ ನಿರಾಶೆಯಾಗುತ್ತದೆ. ಸ್ತ್ರೀ ಸಮಾನತೆಯ ಬಹುತೇಕ ಆಶಯ ಮತ್ತು ಕಾರ್ಯಕ್ರಮಗಳ ಫಲಶ್ರುತಿಯು ಮಾತು ಹಾಗೂ ಬರವಣಿಗೆಯಲ್ಲಷ್ಟೇ ಎದ್ದುಕಾಣುತ್ತಿದೆ. ಲಿಂಗತಾರತಮ್ಯ ನಿವಾರಣೆಯ ದಿಸೆಯಲ್ಲಿ ಪ್ರಗತಿ ಆಗಿರುವುದನ್ನು ಒಪ್ಪಿಕೊಂಡರೂ, ಮಹಿಳಾ ಶೋಷಣೆಯ ಸ್ವರೂಪ ಬೇರೆ ಬೇರೆ ರೂಪಗಳಲ್ಲಿ ನಡೆಯುತ್ತಿದೆ ಹಾಗೂ ಅದರ ಪ್ರಮಾಣ ಆತಂಕ ಹುಟ್ಟಿಸುವಷ್ಟು ಇದೆ ಎಂಬುದನ್ನು ಅಲ್ಲಗಳೆಯಲಾಗದು.

ಹೆಣ್ಣಿನ ಬಗೆಗಿನ ಪೂರ್ವಗ್ರಹಗಳಿಂದ ಹೊರಬರುವುದು ಜನಸಾಮಾನ್ಯರಿಗೆ ಮಾತ್ರವಲ್ಲ, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುವವರಿಗೂ ಸಾಧ್ಯವಾಗಿಲ್ಲ. ದೈಹಿಕ ಹಾಗೂ ಬೌದ್ಧಿಕ ಸಾಮರ್ಥ್ಯದಲ್ಲಿ ಪುರುಷನಿಗೆ ಹೆಣ್ಣು ಸಮನಲ್ಲ ಎನ್ನುವ ಯೋಚನೆ ‘ಪ್ರಗತಿಪರ’ ಎನ್ನಿಸಿಕೊಂಡ ಕೆಲವರ ಮನಸ್ಸಿನಲ್ಲೂ ಅದು ಹೇಗೋ ಗಟ್ಟಿಯಾಗಿ ಕೂತು ಬಿಟ್ಟಿದೆ. ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಸಮಾಜದ ಬೇರೆ ಬೇರೆ ವರ್ಗಗಳ ಪ್ರಜ್ಞಾವಂತರು ಕೂಡ ಹೆಣ್ಣಿನ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡುವ ಮಾತುಗಳನ್ನಾಡುತ್ತಾರೆ.

ಸಮಾನತೆಯ ಹೋರಾಟದಲ್ಲಿ ಹೆಣ್ಣು ಎದುರಿಸಬೇಕಾದುದು ಎರಡು ಬಗೆಯ ಸವಾಲು. ಮೊದಲನೆಯದು, ತನ್ನ ದುಡಿಮೆ ಅಥವಾ ಚಿಂತನೆಯ ಸಾಮರ್ಥ್ಯವು ಗಂಡಿಗಿಂತಲೂ ಕಡಿಮೆಯದಲ್ಲ ಎಂದು ಮತ್ತೆ ಮತ್ತೆ ಸಾಬೀತುಪಡಿಸಬೇಕಾಗಿರುವುದು. ಮತ್ತೊಂದು, ದೇಹದ ಕಾರಣಕ್ಕಾಗಿ ಎದುರಿಸಬೇಕಾದ ಆತಂಕ ಗಳನ್ನು ಮೆಟ್ಟಿ ನಿಲ್ಲುವುದು. ಹೆಣ್ಣಿನ ದೇಹ ಹಾಗೂ ಮನಸ್ಸು ಎರಡನ್ನೂ ಗಾಸಿಗೊಳಿಸುವ ಕೆಲಸ ಮನೆಯೊಳಗೆ ಹಾಗೂ ಹೊರಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನಡೆಯುತ್ತಲೇ ಇದೆ.

ಉದ್ಯೋಗದ ಸ್ಥಳದಲ್ಲಿ ಗಂಡಿಗೆ ಸಹಜವಾಗಿ ದೊರೆಯುವ ಅವಕಾಶ ಮತ್ತು ಆರ್ಥಿಕ ಸವಲತ್ತುಗಳು ಹೆಣ್ಣಿಗೆ ದೊರಕುತ್ತವೆಂದು ಹೇಳುವುದು ಕಷ್ಟ. ಮಹಿಳಾ ಉದ್ಯೋಗಿಗಳ ನೇಮಕಕ್ಕೆ ಈಗಲೂ ಹಿಂಜರಿಯುವ ಔದ್ಯಮಿಕ ಕ್ಷೇತ್ರಗಳಿವೆ. ಕಾನೂನುಬದ್ಧವಾದ ಹೆರಿಗೆ ರಜೆ ನೀಡಲು ಚೌಕಾಸಿ ಮಾಡುವ ಅಧಿಕಾರಿಗಳೂ ಇದ್ದಾರೆ. ರಾಜಕೀಯವಾಗಿಯೂ ಹೆಣ್ಣು ಕಡೆಗಣನೆಗೆ ಒಳಗಾಗಿರುವುದಕ್ಕೆ ಶಾಸನಸಭೆಗಳು ಹಾಗೂ ಸಚಿವ ಸಂಪುಟಗಳು ಜೀವಂತ ಉದಾಹರಣೆಗಳಾಗಿವೆ. ಅಧಿಕಾರ ಸ್ಥಾನಗಳಲ್ಲಿನ ಸ್ತ್ರೀ ಪ್ರಾತಿನಿಧ್ಯದ ಕೊರತೆಯು ಲಿಂಗಭೇದ ಧೋರಣೆ ಹೆಚ್ಚಾಗುವುದಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿದೆ.

ಗಂಡು– ಹೆಣ್ಣಿನ ಸಮಾನತೆಯ ನಮ್ಮ ಪರಿಕಲ್ಪನೆಗಳು ಮನೆಕೆಲಸ, ದುಡಿಮೆಯ ಸಮಾನ ಅವಕಾಶಗಳು, ಆಸ್ತಿಯ ಹಕ್ಕುಗಳ ಸುತ್ತಲೇ ಗಿರಕಿ ಹೊಡೆಯುತ್ತವೆ. ಸ್ತ್ರೀ ಸಬಲೀಕರಣಕ್ಕೆ ಇವೆಲ್ಲ ಅಗತ್ಯ. ಆದರೆ, ಇವೆಲ್ಲಕ್ಕೂ ಮಿಗಿಲಾದುದು ಹೆಣ್ಣಿನ ಬಗೆಗೆ ಸಮಾಜದ ಯೋಚನಾವಿಧಾನದಲ್ಲಿ ಆಗಬೇಕಿರುವ ಬದಲಾವಣೆ. ಸುಶಿಕ್ಷಿತ ವರ್ಗದಲ್ಲೂ ವರದಕ್ಷಿಣೆ ಕಿರುಕುಳ ಪ್ರಕರಣಗಳು ವರದಿಯಾಗುತ್ತಿವೆ. ಲಿಂಗಸಂವೇದನೆಯ ಸೂಕ್ಷ್ಮಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾದವರು ಲಿಂಗತಾರತಮ್ಯದ ಮಾತುಗಳನ್ನು ಎಗ್ಗಿಲ್ಲದೆ ಆಡುತ್ತಿದ್ದಾರೆ. ಅತ್ಯಾಚಾರ ಪ್ರಕರಣಗಳ ಕ್ರೌರ್ಯ ನಾಗರಿಕ ಜಗತ್ತನ್ನು ಬೆಚ್ಚಿಬೀಳಿಸುವಂತಿದೆ. ಇಂಥ ಮಾತು, ನಡವಳಿಕೆಗಳು ಸಮಾಜದಲ್ಲಿ ಆಳವಾಗಿ ಬೇರೂರಿರುವ ಪುರುಷ ಯಜಮಾನಿಕೆಯ ಅಹಂಕಾರದ ಉದಾಹರಣೆಗಳಾಗಿವೆ.

ಈ ಪುರುಷ ಪೂರ್ವಗ್ರಹಕ್ಕೆ ಉತ್ತರದ ರೂಪದಲ್ಲಿ ‘ಸ್ತ್ರೀವಾದ’ದ ತಾತ್ವಿಕತೆ ಸಮಾಜದಲ್ಲಿ ಹಾಸುಹೊಕ್ಕಾಗಬೇಕಾಗಿದೆ. ಸ್ತ್ರೀವಾದ ಎನ್ನುವುದು ಕೆಲವರ ಪಾಲಿಗೆ ವಿನೋದದ ಹಾಗೂ ಉಡಾಫೆಯ ಸಂಗತಿಯಾಗಿದೆ. ಸಮಾಜದಲ್ಲಿ ಹೆಣ್ಣಿಗೆ ಸಮಾನ ಹಕ್ಕುಗಳು ಮತ್ತು ಗೌರವವನ್ನು ಬಯಸುವ ಸಿದ್ಧಾಂತದ ರೂಪದಲ್ಲಿ ಸ್ತ್ರೀವಾದವನ್ನು ಅರ್ಥೈಸಲಾಗುತ್ತದೆ. ಇಂದಿನ ಸ್ತ್ರೀವಾದದ ತಾತ್ವಿಕತೆ ವಿಶಾಲ ವಾಗಿದ್ದು, ಅದು ಸಾಮಾಜಿಕ ತಾರತಮ್ಯಗಳನ್ನು ಶಮನಗೊಳಿಸುವ ಉದಾತ್ತತೆಯನ್ನು ಒಳಗೊಂಡಿದೆ. ಸಮಾನತೆಯನ್ನು ಬಯಸುವವರ ಪಾಲಿಗೆ ಸ್ತ್ರೀವಾದ ಹಾಗೂ ಮಾನವತಾವಾದ ಒಂದೇ ನಾಣ್ಯದ ಎರಡು ಮುಖಗಳು.

ADVERTISEMENT

ಮಹಿಳೆಯರು ಮಾತ್ರವಲ್ಲ, ಗಂಡಸರು ಕೂಡ ಸ್ತ್ರೀವಾದದ ದಾರಿಯಲ್ಲಿ ನಡೆಯುವುದು ಇಂದಿನ ಅಗತ್ಯ. ಏಕೆಂದರೆ, ಸಮಾಜದಲ್ಲಿ ಆಳವಾಗಿ ಬೇರುಬಿಟ್ಟ ಲಿಂಗಾಧಾರಿತ ಶ್ರೇಣೀಕರಣವನ್ನು ಬದಲಿಸುವುದು ಬರೀ ಹೆಣ್ಣಿನ ಹೊಣೆಗಾರಿಕೆಯಲ್ಲ. ತಾರತಮ್ಯಕ್ಕೆ ಕಾರಣನಾದ ಗಂಡು, ಅದರ ನಿವಾರಣೆಯ ಪ್ರಯತ್ನದಲ್ಲೂ ಮುಂಚೂಣಿಯಲ್ಲಿ ನಿಲ್ಲುವ ನೈತಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕಾಗಿದೆ. ಲಿಂಗಭೇದವನ್ನು ಚಿವುಟುವ ಕೆಲಸ ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ನಿರಂತರವಾಗಿ ನಡೆಯುವುದರ ಜೊತೆಗೆ, ‘ಮಹಿಳಾ ದಿನ’ ಎನ್ನುವುದು ವಾರ್ಷಿಕ ಆಚರಣೆಯಾಗಿ ಸೀಮಿತಗೊಳ್ಳದೆ ದೈನಿಕ ಜೀವನದಲ್ಲಿ ಅನುಷ್ಠಾನಕ್ಕೆ ಬರುವಂತಾಗಬೇಕು. ಆಗಷ್ಟೇ ಆರೋಗ್ಯಕರ ಸಮಾಜದ ಕನಸು ನನಸಾಗುವ ಪ್ರಯತ್ನಕ್ಕೆ ವೇಗ ದೊರೆತೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.