ADVERTISEMENT

ಸಂಪಾದಕೀಯ: ದತ್ತಾಂಶ ಸಂರಕ್ಷಣಾ ಮಸೂದೆ– ಲೋಪ ಸರಿಪಡಿಸಿಕೊಳ್ಳಬೇಕಿದೆ

ದತ್ತಾಂಶ ಸಂರಕ್ಷಣೆಗೆ ಸಂಬಂಧಿಸಿದ ಕರಡು ಮಸೂದೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

ಸಂಪಾದಕೀಯ
Published 14 ಜುಲೈ 2023, 0:43 IST
Last Updated 14 ಜುಲೈ 2023, 0:43 IST
   

ದತ್ತಾಂಶ ಸಂರಕ್ಷಣೆಗೆ ಸಂಬಂಧಿಸಿದ ಕರಡು ಮಸೂದೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ಇದರಿಂದಾಗಿ, ಆರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಸೂದೆಯನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಬಹುದಾಗಿದೆ. ವೈಯಕ್ತಿಕ, ಸಾಮಾಜಿಕ, ಆರ್ಥಿಕ ಸೇರಿದಂತೆ ಬದುಕಿನ ಎಲ್ಲ ಆಯಾಮಗಳಲ್ಲಿಯೂ ದತ್ತಾಂಶವು ಮಹತ್ವದ ಪಾತ್ರ ವಹಿಸುತ್ತಿರುವ ಇಂದಿನ ದಿನಗಳಲ್ಲಿ ಬಲಿಷ್ಠವಾದ ದತ್ತಾಂಶ ಸಂರಕ್ಷಣಾ ವ್ಯವಸ್ಥೆಯೊಂದು ಜಾರಿಯಲ್ಲಿ ಇರುವುದು ಅತ್ಯಗತ್ಯ. ಸರ್ಕಾರವೂ ಸೇರಿದಂತೆ ಎಲ್ಲ ಸಂಸ್ಥೆಗಳು ವೈಯಕ್ತಿಕ ದತ್ತಾಂಶ ಬಳಸುವುದನ್ನು ನಿಯಂತ್ರಿಸಲು ಕಾನೂನಿನ ಅಗತ್ಯ ಇದೆ. ದತ್ತಾಂಶ ಸಂಗ್ರಹಿಸುವ ಸಂಸ್ಥೆಗಳು ಅದನ್ನು ಯಾವ ರೀತಿ ನಿರ್ವಹಿಸಬೇಕು ಎಂಬುದಕ್ಕೆ ಪ್ರಕ್ರಿಯೆಗಳನ್ನು ರೂಪಿಸಬೇಕು. ಸಂಗ್ರಹ ಮತ್ತು ಬಳಕೆ ಯಾವ ರೀತಿ ಇರಬೇಕು ಎಂಬುದರಲ್ಲಿ ಸ್ಪಷ್ಟತೆ ಇರಬೇಕು. ದತ್ತಾಂಶ ಸಂಗ್ರಹಿಸಲಾದ ವ್ಯಕ್ತಿಗಳ ಹಕ್ಕುಗಳ ರಕ್ಷಣೆಗೂ ಕ್ರಮ ಬೇಕು. ಉದ್ದೇಶಿತ ಮಸೂದೆಯ ಪೂರ್ಣ ವಿವರಗಳು ಇನ್ನೂ ಬಹಿರಂಗ ಆಗಿಲ್ಲ. ಆದರೆ, ಈಗ ಸಿಕ್ಕ ಮಾಹಿತಿಯ ಆಧಾರದಲ್ಲಿ ಹೇಳುವುದಾದರೆ, ಕಳೆದ ವರ್ಷ ಸಿದ್ಧಪಡಿಸಲಾದ ಮಸೂದೆಯಲ್ಲಿ ಇದ್ದ ಕೆಲವು ಗಂಭೀರ ಲೋಪಗಳನ್ನು ಸರಿಪಡಿಸಲಾಗಿಲ್ಲ. 

ಪೌರರ ದತ್ತಾಂಶ ಬಳಕೆಯಲ್ಲಿ ಸರ್ಕಾರ ಮತ್ತು ಅದರ ಅಧೀನ ಸಂಸ್ಥೆಗಳಿಗೆ ನೀಡಲಾಗಿರುವ ವಿನಾಯಿತಿಗಳು ಮತ್ತು ರಕ್ಷಣೆಯು ಬಹಳ ಕಳವಳಕಾರಿ ವಿಚಾರ. ರಾಷ್ಟ್ರೀಯ ಭದ್ರತೆ, ವಿದೇಶಗಳ ಜೊತೆಗಿನ ಸಂಬಂಧ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಹೆಸರಿನಲ್ಲಿ ತನ್ನ ಯಾವುದೇ ಸಂಸ್ಥೆಗೆ ದತ್ತಾಂಶ ರಕ್ಷಣೆಯ ನಿಯಮಗಳಿಂದ ವಿನಾಯಿತಿ ನೀಡಲು ಸರ್ಕಾರಕ್ಕೆ ಅಧಿಕಾರ ಇದೆ. ಇಂತಹ ವ್ಯಾ‍ಪಕ ಅಧಿಕಾರವನ್ನು ಸರ್ಕಾರವು ತನಗೆ ತಾನೇ ಕೊಟ್ಟುಕೊಂಡರೆ, ಮುಂದೆ ಅದು ದುರ್ಬಳಕೆ ಆಗುವ ಅಪಾಯ ಇದ್ದೇ ಇದೆ. ಸರ್ಕಾರವು ಬಹಳಷ್ಟು ದತ್ತಾಂಶ ಸಂಗ್ರಹಿಸಿ ತನ್ನೊಂದಿಗೆ ಇರಿಸಿಕೊಳ್ಳುತ್ತದೆ. ಹಾಗಾಗಿ, ಸರ್ಕಾರಕ್ಕೆ ಇಂತಹ ವ್ಯಾಪಕ ಮತ್ತು ನಿರಂಕುಶ ಅಧಿಕಾರ ಇರಬಾರದು. ದತ್ತಾಂಶ ಸಂರಕ್ಷಣೆ ಮಂಡಳಿಗೆ ಸದಸ್ಯರನ್ನು ನೇಮಿಸುವಲ್ಲಿ ಸರ್ಕಾರಕ್ಕೆ ವಿವೇಚನಾಧಿಕಾರವನ್ನೂ ನೀಡಲಾಗಿದೆ. ಮಸೂದೆಯಲ್ಲಿ ಇರುವ ಪ್ರಕಾರ, ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನು ನೇಮಿಸುವ ಅಧಿಕಾರವೂ ಸರ್ಕಾರದ್ದೇ ಆಗಿದೆ. ದತ್ತಾಂಶ ಸಂರಕ್ಷಣೆಗೆ ಸಂಬಂಧಿಸಿ ಪೌರರ ಹಕ್ಕುಗಳನ್ನು ಕಾಪಾಡಲು ಗಟ್ಟಿಯಾದ ಮತ್ತು ಸ್ವತಂತ್ರವಾದ ನಿಯಂತ್ರಣ ಪ್ರಾಧಿಕಾರದ ಅಗತ್ಯ ಇದೆ. ಕಾಯ್ದೆಯಲ್ಲಿರುವ ಅಂಶಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದರ ಮೇಲೆ ನಿಗಾ ಇರಿಸುವುದರ ಜೊತೆಗೆ ಜನರ ದೂರುಗಳನ್ನೂ ಈ ಪ್ರಾಧಿಕಾರವು ಪರಿಹರಿಸಬೇಕು. ಇದು ಸರ್ಕಾರದ ಅಧೀನ ಸಂಸ್ಥೆಯಂತೆ ಇರಬಾರದು. 

ಈ ಮಸೂದೆಯು ಅಂಗೀಕಾರಗೊಂಡು ಕಾಯ್ದೆಯಾಗಿ ಜಾರಿಗೆ ಬಂದರೆ ಮಾಹಿತಿ ಹಕ್ಕು ಕಾಯ್ದೆಯು ದುರ್ಬಲಗೊಳ್ಳಬಹುದು. ಏಕೆಂದರೆ, ಸರ್ಕಾರದಲ್ಲಿರುವವರ ವೈಯಕ್ತಿಕ ದತ್ತಾಂಶಕ್ಕೆ ಈ ಕಾಯ್ದೆಯ ಅಡಿಯಲ್ಲಿ ರಕ್ಷಣೆ ದೊರೆಯಬಹುದು. ಇಂತಹ ದತ್ತಾಂಶವು ಸಾರ್ವಜನಿಕ ಹಿತದ ದೃಷ್ಟಿಯಿಂದ ಮಹತ್ವದ್ದೇ ಆದರೂ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಪಡೆಯಲು ಸಾಧ್ಯವಾಗದೇ ಹೋಗಬಹುದು. ಪರಿಭಾವಿತ ಸಮ್ಮತಿ ಅವಕಾಶದಿಂದಾಗಿ ದತ್ತಾಂಶ ಬಳಕೆಗೆ ಪೌರರ ಸಮ್ಮತಿ ಇದೆ ಎಂದು ಸರ್ಕಾರ ಭಾವಿಸಬಹುದು ಮತ್ತು ಇದು ದುರ್ಬಳಕೆಗೆ ಅವಕಾಶ ಮಾಡಿಕೊಡಬಹುದು. ಇತರ ಕೆಲವು ಕಳವಳಗಳೂ ಇವೆ. ದತ್ತಾಂಶ ರಕ್ಷಣೆಯ ಯಾವುದೇ ಕಾಯ್ದೆಯು ಖಾಸಗಿತನದ ರಕ್ಷಣೆಯ ಖಾತರಿ ಕೊಡಬೇಕು. ಏಕೆಂದರೆ, ಇದು ಮೂಲಭೂತ ಹಕ್ಕು. ಈ ವಿಚಾರದಲ್ಲಿ ಯಾವುದೇ ರಾಜಿಗೆ ಅವಕಾಶ ಇರಬಾರದು. 2018ರಲ್ಲಿ ಈ ಮಸೂದೆಯ ಮೊದಲ ಕರಡು ಸಿದ್ಧಪಡಿಸಿದ್ದ ನ್ಯಾಯಮೂರ್ತಿ ಬಿ.ಎನ್‌. ಶ್ರೀಕೃಷ್ಣ ಅವರು ಈಗಿನ ಕರಡು ಮಸೂದೆಯು ದೋಷಪೂರಿತವಾಗಿದೆ ಎಂದಿದ್ದಾರೆ. ಮಹತ್ವದ ವಿಚಾರಗಳಲ್ಲಿ ಈ ಹಿಂದಿನ ಮಸೂದೆಗಿಂತಲೂ ಕೆಟ್ಟದಾಗಿದೆ ಎಂದು ಹೇಳಿದ್ದಾರೆ. ಈ ಕಳವಳಗಳನ್ನು ಸಂಸತ್ತು ಪರಿಹರಿಸಬೇಕಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.