ಹರಿಯಾಣ ಮತ್ತು ಜಮ್ಮು–ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶವು ಎರಡು ಪ್ರಮುಖ ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವಾದ ‘ಇಂಡಿಯಾ’ಕ್ಕೆ ಮಿಶ್ರ ಫಲ ಕೊಟ್ಟಿದೆ. ಹರಿಯಾಣದಲ್ಲಿ ಎಲ್ಲ ಪ್ರತಿಕೂಲ ಸನ್ನಿವೇಶಗಳನ್ನೂ ಮೀರಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ರಾಜ್ಯದಲ್ಲಿ ಅತ್ಯುತ್ತಮ ಸಾಧನೆ ಬಿಜೆಪಿಗೆ ಸಾಧ್ಯವಾಗಿದೆ; ಜಮ್ಮು–ಕಾಶ್ಮೀರದಲ್ಲಿ ಅದು ಸಾಧ್ಯವಾಗಿಲ್ಲ. ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಕಾಂಗ್ರೆಸ್‌ಗೆ ಅಲ್ಲಿ ಭಾರಿ ದೊಡ್ಡ ಹೊಡೆತ ಬಿದ್ದಿದೆ. ಜಮ್ಮು–ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್–ಕಾಂಗ್ರೆಸ್ ಮೈತ್ರಿಕೂಟಕ್ಕೆ ಗೆಲುವು ಸಿಕ್ಕಿದೆ. ಆದರೆ, ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಇದು ಪರಿಹಾರವಾಗುವುದು ಸಾಧ್ಯವಿಲ್ಲ. ಏಕೆಂದರೆ, ನ್ಯಾಷನಲ್ ಕಾನ್ಫರೆನ್ಸ್ ಜೊತೆಗಿನ ಮೈತ್ರಿಯ ಕಾರಣಕ್ಕೆ ಕಾಂಗ್ರೆಸ್‌ಗೆ ಅಲ್ಲಿ ಕೆಲವು ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿದೆ. ಹರಿಯಾಣ ಮತ್ತು ಜಮ್ಮು–ಕಾಶ್ಮೀರ ವಿಧಾನಸಭೆಗಳು ಸಮಬಲ ಹೊಂದಿವೆ. ಎರಡೂ ಕಡೆ ತಲಾ 90 ಕ್ಷೇತ್ರಗಳು ಇವೆ. ಹಾಗಿದ್ದರೂ ಜಮ್ಮು–ಕಾಶ್ಮೀರದ ಗೆಲುವಿನ ಸಂಭ್ರಮಕ್ಕಿಂತ ಹರಿಯಾಣದ ಸೋಲು ಹೆಚ್ಚು ಆಘಾತಕಾರಿಯಾದುದು. ಈ ಹಿಂದೆ ಹಿನ್ನಡೆ ಅನುಭವಿಸಿದ್ದ ರಾಜ್ಯಗಳಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವು ಶಕ್ತಿ ಪಡೆದುಕೊಳ್ಳಲಾರಂಭಿಸಿದೆ ಎಂಬ ಭಾವನೆಯು ಈಗ ಪ್ರಶ್ನೆಗೆ ಒಳಗಾಗಿದೆ.
ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದರೂ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಂತ ಬಿಜೆಪಿಗೆ ಹರಿಯಾಣದಲ್ಲಿ ಸಿಕ್ಕ ಗೆಲುವು ಬಹಳ ಮಹತ್ವದ್ದೇ ಆಗಿದೆ. ಸತತ ಮೂರನೇ ಅವಧಿಗೆ ಗೆಲ್ಲುವುದು ಸುಲಭವೇನಲ್ಲ. ಬಿಜೆಪಿಗೆ ಕಳೆದ ಚುನಾವಣೆಯಲ್ಲಿ ಸರಳ ಬಹುಮತ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ಸ್ಪಷ್ಟ ಬಹುಮತ ಇದೆ ಮತ್ತು ಮತ ಪ್ರಮಾಣದಲ್ಲಿಯೂ ಏರಿಕೆ ಆಗಿದೆ. ಕಾಂಗ್ರೆಸ್‌ನ ಮತ ಪ್ರಮಾಣದಲ್ಲಿಯೂ ಏರಿಕೆ ಆಗಿದೆ. ಗೆದ್ದ ಸ್ಥಾನಗಳ ಸಂಖ್ಯೆಯಲ್ಲಿಯೂ ಅಲ್ಪ ಏರಿಕೆ ಇದೆ. ಆದರೆ, ಮತ ಪ್ರಮಾಣದ ಏರಿಕೆಗೆ ಅನುಗುಣವಾಗಿ ಸ್ಥಾನಗಳ ಸಂಖ್ಯೆ ಏರಿಲ್ಲ. ದುಷ್ಯಂತ ಚೌಟಾಲಾ ಅವರ ಜನನಾಯಕ ಜನತಾ ಪಾರ್ಟಿಯ (ಜೆಜೆಪಿ) ಮತಗಳು ಕಾಂಗ್ರೆಸ್‌ಗೆ ವರ್ಗಾವಣೆಯಾಗಿವೆ ಎಂದು ಹೇಳಲಾಗುತ್ತಿದೆ. ಆದರೆ, ಗೆಲುವಿನ ದಡ ಸೇರಿಸಲು ಅವು ಸಾಕಾಗಿಲ್ಲ. ಬಿಜೆಪಿಯ ಗೆಲುವಿಗೆ ಹಲವು ಕಾರಣಗಳನ್ನು ಮುಂದಿಡಲಾಗುತ್ತಿದೆ.
ಬಿಜೆಪಿಯು ಚುನಾವಣೆಯನ್ನು ತಳಮಟ್ಟದಲ್ಲಿ ನಿರ್ವಹಿಸಿದ ರೀತಿ, ವಿವಿಧ ಕಾರ್ಯತಂತ್ರಗಳ ಮೂಲಕ ಆಡಳಿತ ವಿರೋಧಿ ಭಾವನೆಯನ್ನು ಹಿಮ್ಮೆಟ್ಟಿಸಿದ್ದು, ತನ್ನ ಮೂಲ ನೆಲೆಯಲ್ಲಿ ಬಿರುಕು ಮೂಡದಂತೆ ನೋಡಿಕೊಂಡಿದ್ದು, ಸ್ಥಳೀಯ ವಿಚಾರಗಳಿಗೆ ಹೆಚ್ಚು ಮಹತ್ವ ನೀಡಿದ್ದು, ಮುಖ್ಯಮಂತ್ರಿಯ ಬದಲಾವಣೆಯು ಗೆಲುವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಅದೇನೇ ಇದ್ದರೂ ಗೆಲುವು ಗೆಲುವೇ. ನರೇಂದ್ರ ಮೋದಿ ಎಂಬ ‘ಜಾದೂ’ ಇಲ್ಲದೇ ಇದ್ದರೂ ಬಿಜೆಪಿ ಚುನಾವಣೆ ಗೆಲ್ಲಬಲ್ಲದು ಎಂಬುದಕ್ಕೆ ಹರಿಯಾಣದ ಫಲಿತಾಂಶ ಉದಾಹರಣೆಯಾಗಿದೆ. ಹರಿಯಾಣದಲ್ಲಿ ಗೆಲುವು ಸಾಧ್ಯ ಎಂಬ ಭಾವನೆ ಕಾಂಗ್ರೆಸ್‌ಗೆ ಇತ್ತು. ರಾಜಕೀಯ ವಿಶ್ಲೇಷಕರಲ್ಲಿಯೂ ಇದೇ ಭಾವನೆ ಇತ್ತು. ಆದರೆ, ಬಣ ರಾಜಕಾರಣ, ಚುನಾವಣಾ ಕಾರ್ಯತಂತ್ರ ಕಳಪೆಯಾಗಿದ್ದದ್ದು ಮತ್ತು ಇತರ ಅಂಶಗಳು ಗೆಲುವನ್ನು ಕಸಿದುಕೊಂಡಿರಬಹುದು. ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆಗೆ ಕೆಲವೇ ವಾರಗಳಲ್ಲಿ ನಡೆಯಲಿರುವ ಚುನಾವಣೆಯ ಮೇಲೆ ಹರಿಯಾಣ ಚುನಾವಣೆಯ ಫಲಿತಾಂಶವು ಪರಿಣಾಮ ಬೀರಬಹುದು. ಅದು ವಿರೋಧ ಪಕ್ಷಕ್ಕೆ ಅನುಕೂಲಕರವಂತೂ ಅಲ್ಲ.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು–ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ದೊಡ್ಡ ಸಾಧನೆ ಮಾಡಿದೆ. ಮೆಹಬೂಬಾ ಮುಫ್ತಿ ಅವರ ಪಿಡಿಪಿ ಹೇಳ ಹೆಸರಿಲ್ಲದಂತಾಗಿದೆ. ಬಿಜೆಪಿಯ ಚುನಾವಣಾ ಲೆಕ್ಕಾಚಾರವೂ ತಲೆಕೆಳಗಾಗಿದೆ. ಯಾವ ಪಕ್ಷಕ್ಕೂ ಬಹುಮತ ಬರಲಾರದು ಎಂಬ ಲೆಕ್ಕಾಚಾರದಲ್ಲಿದ್ದ ಬಿಜೆಪಿ, ನಾಮನಿರ್ದೇಶಿತ ಸದಸ್ಯರ ಬೆಂಬಲದಲ್ಲಿ ಸರ್ಕಾರ ರಚಿಸುವ ಯೋಜನೆ ರೂಪಿಸಿತ್ತು. ಆದರೆ ನ್ಯಾಷನಲ್ ಕಾನ್ಫರೆನ್ಸ್–ಕಾಂಗ್ರೆಸ್ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದಿದೆ. ಹಾಗಾಗಿ, ಬಿಜೆಪಿಯ ಲೆಕ್ಕಾಚಾರ ಈಗ ಕೈಗೂಡುವುದಿಲ್ಲ. ಜಮ್ಮು–ಕಾಶ್ಮೀರದ ಸರ್ಕಾರಕ್ಕೆ ಸೀಮಿತ ಅಧಿಕಾರಗಳಷ್ಟೇ ಇರಲಿವೆ. ಹೆಚ್ಚಿನ ಅಧಿಕಾರ ಲೆಫ್ಟಿನೆಂಟ್ ಗವರ್ನರ್ ಕೈಯಲ್ಲಿಯೇ ಇರುತ್ತದೆ. ಅಲ್ಲಿನ ರಾಜಕಾರಣವೂ ಭಿನ್ನ ದಾರಿಯಲ್ಲಿ ಸಾಗಲಿದೆ. ಈ ಬಾರಿಯ ಚುನಾವಣೆಯ ಒಂದು ಬಹುಮುಖ್ಯವಾದ ಸಕಾರಾತ್ಮಕ ಅಂಶವೆಂದರೆ, ಜನರ ಭಾಗವಹಿಸುವಿಕೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಜನರು ಬಹುದೊಡ್ಡ ಪ್ರಮಾಣದಲ್ಲಿ ಹಕ್ಕು ಚಲಾವಣೆ ಮಾಡಿರುವುದು ಶುಭ ಸೂಚನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.