ADVERTISEMENT

ಕೆಎಎ ವೈಫಲ್ಯಕ್ಕೆ ಅಥ್ಲೀಟುಗಳಿಗೆ ‘ಶಿಕ್ಷೆ’ ಬೇಡ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 20:00 IST
Last Updated 30 ಸೆಪ್ಟೆಂಬರ್ 2019, 20:00 IST
.
.   

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 59ನೇ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಆತಿಥ್ಯ ವಹಿಸುವುದಾಗಿ ಭರವಸೆ ಕೊಟ್ಟ ಕರ್ನಾಟಕ ಅಥ್ಲೆಟಿಕ್‌ ಅಸೋಸಿಯೇಷನ್‌ (ಕೆಎಎ), ಟ್ರ್ಯಾಕ್‌ ಸುಸ್ಥಿತಿಯಲ್ಲಿಲ್ಲದ ಕಾರಣ ಚಾಂಪಿಯನ್‌ಷಿಪ್‌ ನಡೆಸಲು ಸಾಧ್ಯವಿಲ್ಲ ಎಂದು ಒಂದು ತಿಂಗಳ ಹಿಂದೆ ಕೈಚೆಲ್ಲಿದೆ. ವರ್ಷದ ಹಿಂದೆ ಒಪ್ಪಿಕೊಂಡು, ಚಾಂಪಿಯನ್‌ಷಿಪ್‌ ಆರಂಭಕ್ಕೆ ತಿಂಗಳು ಬಾಕಿಯಿರುವಾಗ ಹಿಂದೆ ಸರಿದ ಕೆಎಎ ಮೇಲೆ ಭಾರತ ಅಥ್ಲೆಟಿಕ್‌ ಫೆಡರೇಷನ್‌ (ಎಎಫ್‌ಐ) ಆಕ್ರೋಶಗೊಂಡು ಅಮಾನತು ಶಿಕ್ಷೆ ವಿಧಿಸಿದೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಪಾಲ್ಗೊಳ್ಳುವುದಕ್ಕೆ ನಿರ್ಬಂಧ ಹೇರಿದೆ. ಕೆಎಎ ಮಾಡಿದ ತಪ್ಪಿಗೆ ಈಗ ಅಥ್ಲೀಟುಗಳು ಬೆಲೆ ತೆರುವಂತಾಗಿದೆ. ಈ ಚಾಂಪಿಯನ್‌ಷಿಪ್‌ಗೆ ಸಿದ್ಧತೆ ನಡೆಸಿರುವ ಪ್ರತಿಭಾನ್ವಿತ ಅಥ್ಲೀಟುಗಳು ತಮ್ಮದಲ್ಲದ ತಪ್ಪಿಗೆ ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. ಕರ್ನಾಟಕವು ಆತಿಥ್ಯದಿಂದ ಹಿಂದೆ ಸರಿದ ಪರಿಣಾಮ, ಜಾರ್ಖಂಡ್‌ನ ರಾಜಧಾನಿ ರಾಂಚಿಯ ಬಿರ್ಸಾ ಮುಂಡಾ ಕ್ರೀಡಾಂಗಣಕ್ಕೆ ಚಾಂಪಿಯನ್‌ಷಿಪ್‌ ಸ್ಥಳಾಂತರಗೊಂಡಿದೆ. ಇದೇ ತಿಂಗಳ 10ರಿಂದ 13ರವರೆಗೆ ನಡೆಯುವ ಈ ಚಾಂಪಿಯನ್‌ಷಿಪ್‌ನಲ್ಲಿ ಎಎಫ್‌ಐ ಬ್ಯಾನರ್‌ನಡಿ ಭಾಗವಹಿಸಲು ರಾಜ್ಯದ 26 ಅಥ್ಲೀಟುಗಳಿಗೆ ಅವಕಾಶ ನೀಡುವಂತೆ ಅಂಗಲಾಚುವ ಪರಿಸ್ಥಿತಿಯನ್ನು ಕೆಎಎ ತಂದುಕೊಂಡಿದೆ.

ಕಳೆದ ವರ್ಷ ಎಎಫ್‌ಐ ಸರ್ವಸದಸ್ಯರ ಸಭೆಯಲ್ಲಿ ಈ ಚಾಂಪಿಯನ್‌ಷಿಪ್‌ನ ಆತಿಥ್ಯ ವಹಿಸುವುದಾಗಿ ಕೆಎಎ ಹೇಳಿತ್ತು. ಆತಿಥ್ಯ ವಹಿಸಿಕೊಂಡ ಮೇಲೆ ಅದಕ್ಕೆ ಸೂಕ್ತವಾಗಿ ಸಿದ್ಧತೆ ನಡೆಸಬೇಕಾಗಿತ್ತು.ಇದರಲ್ಲಿ ಸಂಸ್ಥೆ ವಿಫಲವಾಯಿತು. ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ ಕಳಪೆಯಾಗಿತ್ತು. ಅದನ್ನು ಕಿತ್ತುಹಾಕಿ ಹೊಸದಾಗಿ ನಿರ್ಮಾಣ ಮಾಡಬೇಕಾಗಿತ್ತು. ₹4.26 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲು ನಿರ್ಧರಿಸಲಾಯಿತು. ಇದಕ್ಕೆ ಟೆಂಡರ್‌ ಕರೆಯಲಾಗಿತ್ತು. ಆದರೆ ವಿವಿಧ ಕಾರಣಗಳಿಂದ ಟೆಂಡರ್‌ ಪ್ರಕ್ರಿಯೆ ವಿಳಂಬವಾಯಿತು. ಈ ಮಧ್ಯೆ ರಾಜ್ಯದ ಮೈತ್ರಿ ಸರ್ಕಾರದ ಅಸ್ತಿತ್ವ ಅತಂತ್ರವಾಗಿದ್ದ ಪರಿಣಾಮ, ಕ್ರೀಡಾ ಇಲಾಖೆಯು ಮೂವರು ಆಯುಕ್ತರನ್ನು ಕಂಡಿತು. ಇವೆಲ್ಲದರ ಮಧ್ಯೆ ಸಮಯವೂ ಕಡಿಮೆಯಾಗುತ್ತಾ ಬಂತು. ಆಗಸ್ಟ್‌ 30ರಂದು ಅಸಹಾಯಕತೆ ವ್ಯಕ್ತಪಡಿಸಿ ಕೆಎಎ ಪತ್ರ ಬರೆಯಿತು. ಬೆಂಗಳೂರಿನ ಬದಲು, ಸಿಂಥೆಟಿಕ್‌ ಟ್ರ್ಯಾಕ್‌ ಇರುವ ಮಂಗಳೂರು, ಮೂಡುಬಿದಿರೆ, ಮೈಸೂರು, ಉಡುಪಿ, ಧಾರವಾಡ, ಗದಗ ಮುಂತಾದೆಡೆ ಈ ಚಾಂಪಿಯನ್‌ಷಿಪ್‌ ಸಂಘಟಿಸಬಹುದಿತ್ತು. ಆದರೆ ಆ ಕಡೆಯೂ ರಾಜ್ಯ ಸಂಸ್ಥೆ ಗಮನಹರಿಸಲಿಲ್ಲ. ಮೂಡುಬಿದಿರೆಯಲ್ಲಿ ಈ ಹಿಂದೆ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳು ನಡೆದಿವೆ. ಮಂಗಳೂರಿನಲ್ಲೂ ಫೆಡರೇಷನ್‌ ಕಪ್‌ನಂಥ ಮಹತ್ವದ ಕೂಟಗಳು ನಡೆದಿವೆ. ಆದರೆ ಆ ನಿಟ್ಟಿನಲ್ಲಿ ಸಂಸ್ಥೆ ಯೋಚಿಸಲಿಲ್ಲ. ಈ ಕೂಟದ ಆತಿಥ್ಯ ವಹಿಸಲು ಕಷ್ಟವೆಂದು, ಸೂಕ್ತ ಕಾರಣಗಳೊಂದಿಗೆ ಸಾಕಷ್ಟು ಮೊದಲೇ ಎಎಫ್‌ಐಗೆ ಹೇಳಬಹುದಿತ್ತು. ಇದರಿಂದಾಗಿ ಫೆಡರೇಷನ್‌ಗೆ ಈ ಕೂಟವನ್ನು ಬೇರೆ ರಾಜ್ಯಕ್ಕೆ ವಹಿಸಲು ಇನ್ನಷ್ಟು ಸಮಯ ಸಿಗುತ್ತಿತ್ತು. ಈ ಹಿನ್ನೆಲೆಯಲ್ಲಿ, ‘ರಾಜ್ಯ ಸಂಸ್ಥೆಯ ನಡವಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಈ ಲೋಪಕ್ಕೆ ಸಕಾರಣಗಳಿಲ್ಲ’ ಎಂದು ಟೀಕಿಸಲು ಎಎಫ್‌ಐ ಅಧ್ಯಕ್ಷ ಆದಿಲ್‌ ಸುಮಾರಿವಾಲಾ ಅವರಿಗೆ ಅವಕಾಶವಾಯಿತು. ಈಗ ಎಎಫ್‌ಐ ಅಧಿಕಾರಿಗಳು, ವಿಶ್ವ ಚಾಂಪಿಯನ್‌ಷಿಪ್‌ ನಡೆಯುತ್ತಿರುವ ಕಾರಣ ದೋಹಾದಲ್ಲಿ ಇದ್ದಾರೆ. ಅವರು ಅಲ್ಲಿಂದ ಬಂದ ನಂತರ ಅಥ್ಲೀಟುಗಳಿಗೆ ಅವಕಾಶ ಸಿಗುವ ವಿಷಯ ತೀರ್ಮಾನವಾಗುವ ಸಾಧ್ಯತೆ ಇದೆ. ಆದರೆ, ಅಷ್ಟರಲ್ಲಿ ಪ್ರವೇಶಾವಕಾಶದ ಗಡುವು ಮೀರುವ ಆತಂಕ ಇದೆ. ಕರ್ನಾಟಕದ ಮೇಲೆ ವಿಧಿಸಿರುವ ಅಮಾನತು ಶಿಕ್ಷೆಯ ಸ್ವರೂಪ ಸ್ಪಷ್ಟವಾಗಿಲ್ಲ. ಇಂಥ ತಪ್ಪಿಗೆ ನಿಯಮದಂತೆ ದಂಡ ವಿಧಿಸುವ ಅವಕಾಶ ಸಹ ಇದೆ. ಏನೇ ಆಗಲಿ, ರಾಜ್ಯದ ಅಥ್ಲೀಟುಗಳ ಭವಿಷ್ಯ ಅತಂತ್ರವಾಗದಂತೆ ನೋಡಿಕೊಳ್ಳುವುದು ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT