ಶಾಸನಸಭಾ ಚುನಾವಣೆಗಳಲ್ಲಿ ಗೆದ್ದು–ಸೋತು ಅನುಭವ ಇರುವ ರಾಜಕಾರಣಿಗಳಿಗೆ ನಾಮನಿರ್ದೇಶನದಡಿ ಅವಕಾಶ ನೀಡಿರುವುದು ಸರಿಯೇ?
ಜನ ಹಿತ ಕಾಪಾಡುವ, ನಾಡಿನ ಮುನ್ನಡೆಗೆ ಪೂರಕವಾಗುವ ಶಾಸನ ರಚಿಸುವ ಉದ್ದೇಶಕ್ಕಾಗಿಯೇ ಇರುವ ಶಾಸನಸಭೆಗಳಲ್ಲಿ ಪ್ರಾಜ್ಞರು, ವಿಷಯ ಪರಿಣತರು, ಸಮಾಜದ ವಿವಿಧ ಸ್ತರಗಳಲ್ಲಿ ಸಕ್ರಿಯವಾಗಿರುವವರು ಇರಬೇಕು ಎಂಬುದು ಸಂವಿಧಾನದ ಆಶಯ. ಶಾಸನಸಭೆಗಳೆಂದು ಕರೆಯುವ ವಿಧಾನಸಭೆ, ವಿಧಾನಪರಿಷತ್ತು ಹಣ–ಜಾತಿ ಬಲದ ಮೇಲೆಯೇ ಭರ್ತಿಯಾಗುತ್ತಿರುವುದು ಈಚಿನ ದಶಕಗಳ ವಿದ್ಯಮಾನ. ಕರ್ನಾಟಕ ವಿಧಾನಪರಿಷತ್ತಿನಲ್ಲಿ ಖಾಲಿ ಇದ್ದ ಐದು ಸ್ಥಾನಗಳಿಗೆ ರಾಜ್ಯಪಾಲರು ನಾಮನಿರ್ದೇಶನ ಮಾಡಿದ್ದಾರೆ. ನಾಮನಿರ್ದೇಶನ ಎಂಬುದು ಆಡಳಿತ ಪಕ್ಷದ ಮರ್ಜಿಗೆ ಬಿಟ್ಟ ವಿಷಯವಾಗಿದೆ.
ಆದರೆ, ಈ ಹಿಂದೆ ತಮ್ಮ ವಿವೇಚನಾಧಿಕಾರ ಬಳಸಿ ಸರ್ಕಾರ ಶಿಫಾರಸು ಮಾಡಿದ ಹೆಸರುಗಳನ್ನು ಕರ್ನಾಟಕದ ರಾಜ್ಯಪಾಲರಾಗಿದ್ದವರು ನಿರ್ದಿಷ್ಟ ಕಾರಣ ನೀಡಿ ತಿರಸ್ಕರಿಸಿದ ನಿದರ್ಶನಗಳಿವೆ. ರಾಜ್ಯದಲ್ಲಿ ಖಾಲಿ ಇದ್ದ ಐದು ಸ್ಥಾನಗಳನ್ನು ಭರ್ತಿ ಮಾಡುವ ಅಧಿಕಾರವನ್ನು ಸಚಿವ ಸಂಪುಟ ಸಭೆಯು ಮುಖ್ಯಮಂತ್ರಿಗೆ ನೀಡಿತ್ತು. ಐದರಲ್ಲಿ ಮೂರು ಸ್ಥಾನಗಳನ್ನು ರಾಜಕೀಯ ಕ್ಷೇತ್ರದವರಿಗೇ ನೀಡಲಾಗಿದೆ. ಬೇರೆ ಕ್ಷೇತ್ರಗಳಲ್ಲಿ ದುಡಿದವರಿಗೆ ಇನ್ನೆರಡು ದೊರೆತಿವೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ, ಹಿಂದುಳಿದ ಕೋಲಿ–ಕಬ್ಬಲಿಗ ಸಮುದಾಯಕ್ಕೆ ಸೇರಿದ ಪ್ರೊ. ಸಾಬಣ್ಣ ತಳವಾರ ಹಾಗೂ ವನವಾಸಿ ಕಲ್ಯಾಣ ಸಮಿತಿಯಲ್ಲಿ ಮೂರು ದಶಕಗಳಿಗೂ ಹೆಚ್ಚು ಅವಧಿಯಿಂದ ದುಡಿಯುತ್ತಿರುವ ಸಿದ್ಧಿ ಸಮುದಾಯದ ಶಾಂತಾರಾಮ ಸಿದ್ಧಿ ಅವರ ನಾಮನಿರ್ದೇಶನವು ಅರ್ಹರಿಗೆ ಸಂದ ಗೌರವ.
ಶಾಂತಾರಾಮ ಅವರು ಈ ಸಮುದಾಯದ ಮೊದಲ ಪದವೀಧರ. ಸ್ವಾತಂತ್ರ್ಯ ಬಂದು ಇಷ್ಟು ದೀರ್ಘ ಅವಧಿ ಕಳೆದರೂ ಸಿದ್ಧಿ ಸಮುದಾಯದವರು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ನಿದರ್ಶನಗಳಿಲ್ಲ. ಸಿದ್ಧಿ ಸಮುದಾಯಕ್ಕೆ ಅವಕಾಶ ನೀಡುವ ಮೂಲಕ ಆದಿವಾಸಿ ಬುಡಕಟ್ಟು ಜನರಿಗೆ ಪ್ರಾತಿನಿಧ್ಯ ದೊರಕಿಸಿದಂತಾಗಿದೆ.
ನೇರ ಚುನಾವಣೆ ಮೂಲಕ ಗೆಲ್ಲಲು ಕಷ್ಟಸಾಧ್ಯವಾಗುವ ವಿವಿಧ ಕ್ಷೇತ್ರಗಳ ಪರಿಣತರ ಜ್ಞಾನವನ್ನು ಬಳಸಿಕೊಳ್ಳಲು ನಾಮನಿರ್ದೇಶನದ ಅವಕಾಶವನ್ನು ಕಲ್ಪಿಸಲಾಗಿದೆ.ಈಗ ನಾಮನಿರ್ದೇಶನ ಮಾಡಲಾಗಿರುವ ಎಚ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್ ಹಾಗೂ ಭಾರತಿ ಶೆಟ್ಟಿ ಅವರು ಸಕ್ರಿಯ ರಾಜಕಾರಣದಲ್ಲಿ ತೊಡಗಿರುವವರು. ಈ ಹಿಂದೆ ಶಾಸಕರೂ ಆಗಿದ್ದವರು.
ಇವರ ಪೈಕಿ ವಿಶ್ವನಾಥ್ ಹಾಗೂ ಯೋಗೇಶ್ವರ್ ಅವರುಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ನೆರವಾಗಿದ್ದರು. ಆ ಕಾರಣಕ್ಕಾಗಿಯೇ ಇವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದಾದರೆ ಈ ಆಯ್ಕೆಯು ಸಮಂಜಸ ಅಲ್ಲ ಎಂದೇ ಹೇಳಬೇಕಾಗುತ್ತದೆ. ಇವರಿಗೆ ಶಾಸಕ ಸ್ಥಾನ ದೊರಕಿಸಿಕೊಡಲು ಬೇರೆಯದೇ ಆದ ಮಾರ್ಗಗಳು ಇದ್ದವು. ವಿಧಾನಸಭೆ ಅಥವಾಸ್ಥಳೀಯ ಸಂಸ್ಥೆಗಳಿಂದ ಪರಿಷತ್ತಿಗೆ ನಡೆಯುವ ಚುನಾವಣೆ ಅಥವಾ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸುವ ಅವಕಾಶಗಳೂ ಇದ್ದವು. ನಾಮನಿರ್ದೇಶನ ಮಾಡುವಾಗ ವಿಷಯ ಪರಿಣತಿ, ಒಂದು ನಿರ್ದಿಷ್ಟ ಕ್ಷೇತ್ರದಲ್ಲಿನ ನೈಪುಣ್ಯ ಆಧರಿಸಿ ಆಯ್ಕೆ ಮಾಡುವ ಪರಿಪಾಟ ಇತ್ತು.
ಹೀಗೆ ಆಯ್ಕೆ ಮಾಡುವಾಗ ಸಾಹಿತಿಗಳು, ಕಲಾ ಕ್ಷೇತ್ರದಲ್ಲಿ ಕೆಲಸ ಮಾಡಿದವರು, ಶಾಂತಾರಾಮ ಅವರಂತೆ ಯಾವುದಾದರೂ ಕ್ಷೇತ್ರದಲ್ಲಿ ತಮ್ಮಷ್ಟಕ್ಕೆ ಸಾಧನೆ ಮಾಡಿದವರನ್ನು ಗುರುತಿಸಿ ಮೇಲ್ಮನೆಯ ಗೌರವ ಹೆಚ್ಚಿಸಲು ಸಾಧ್ಯವಿತ್ತು. ಪರಿಷತ್ತಿನಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದ್ದು, ಅವರಿಗೂ ಹೆಚ್ಚಿನ ಅವಕಾಶ ಕಲ್ಪಿಸಬಹುದಿತ್ತು. ಅದನ್ನು ಬಿಟ್ಟು ಶಾಸನಸಭಾ ಚುನಾವಣೆಗಳಲ್ಲಿ ಗೆದ್ದು–ಸೋತು ಅನುಭವ ಇರುವ ರಾಜಕಾರಣಿಗಳಿಗೆ ನಾಮನಿರ್ದೇಶನದಡಿ ಅವಕಾಶ ನೀಡಿರುವುದು ಸೂಕ್ತ ನಡೆಯಲ್ಲ. ಮುಂದಿನ ದಿನಗಳಲ್ಲಿ ಇಂತಹ ತೀರ್ಮಾನ ಕೈಗೊಳ್ಳುವಾಗ ಜನಮೆಚ್ಚುವಂತಹ ನಡೆಯನ್ನು ಸರ್ಕಾರದ ನೇತಾರರು ಪಾಲಿಸಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.