ADVERTISEMENT

ವಿದೇಶಿ ದೇಣಿಗೆ ಸ್ವೀಕರಿಸುವುದರಿಂದ ಭಾರತದ ಪ್ರತಿಷ್ಠೆಗೆ ಕುಂದಾಗದು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2018, 19:30 IST
Last Updated 24 ಆಗಸ್ಟ್ 2018, 19:30 IST
   

ಕೇರಳದಲ್ಲಿ ಪ್ರವಾಹ ಇಳಿಮುಖವಾಗುತ್ತಿದೆ. ಆದರೆ ಬದುಕನ್ನು ಮರುಕಟ್ಟುವ ದೊಡ್ಡ ಸವಾಲು ಮುಂದಿದೆ. ಕೇರಳದ 14 ಜಿಲ್ಲೆಗಳಲ್ಲಿ 11 ಜಿಲ್ಲೆಗಳು ಪ್ರವಾಹದಿಂದ ನಲುಗಿವೆ. ಪ್ರಕೃತಿ ವಿಕೋಪದಲ್ಲಿ ಸರ್ವಸ್ವವನ್ನೂ ಕಳೆದುಕೊಂಡಿರುವ 10 ಲಕ್ಷಕ್ಕೂ ಹೆಚ್ಚು ಜನರು ಪರಿಹಾರಕೇಂದ್ರಗಳಲ್ಲಿ ಅನಿಶ್ಚಯದ ಭವಿಷ್ಯವನ್ನು ಎದುರು ನೋಡುತ್ತಿದ್ದಾರೆ. ಪುನರ್ವಸತಿ ಕಾರ್ಯಾಚರಣೆಗಳಿಗೆ ತಕ್ಷಣಕ್ಕೆ ₹ 20 ಸಾವಿರ ಕೋಟಿ ಅಗತ್ಯ ಇದೆ ಎಂಬುದು ಕೇರಳ ಸರ್ಕಾರದ ಪ್ರಾಥಮಿಕ ಅಂದಾಜು. ಈ ಅಂದಾಜು ಮೊತ್ತ ಇನ್ನೂ ಹೆಚ್ಚಾಗಬಹುದಾದ ಸಾಧ್ಯತೆಯೂ ಇದೆ. ಇಂತಹ ಸಂದರ್ಭದಲ್ಲಿ ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ನಿರ್ದಿಷ್ಟವಾಗಿ ₹ 700 ಕೋಟಿ ಹಾಗೂ ಮಾಲ್ಡೀವ್ಸ್‌ ₹ 35 ಲಕ್ಷ ನೆರವು ನೀಡಲು ಮುಂದೆ ಬಂದಿವೆ ಎಂದು ವರದಿಯಾಗಿತ್ತು. ಆದರೆ 2004ರಿಂದ ಪಾಲಿಸಿಕೊಂಡು ಬಂದಿರುವ ನೀತಿಯ ಪ್ರಕಾರ ವಿದೇಶಗಳ ದೇಣಿಗೆಯನ್ನು ಸ್ವೀಕರಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ. ಕೇರಳಕ್ಕೆ ₹ 600 ಕೋಟಿ ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಕೇರಳದಲ್ಲಿ ಆಗಬೇಕಿರುವ ಪುನರ್ವಸತಿ ಕಾರ್ಯಗಳ ಪ್ರಮಾಣವನ್ನು ಗಮನಿಸಿದರೆ ಇದು ಏನೇನೂ ಸಾಲದು. ₹ 2,600 ಕೋಟಿಯನ್ನು ತಕ್ಷಣಕ್ಕೆ ನೀಡಬೇಕು ಎಂಬುದು ಕೇರಳ ಸರ್ಕಾರದ ಆಗ್ರಹ. ‘ಕೇಂದ್ರದ ಅಲ್ಪ ನೆರವು ಸಾಕಾಗದು. ವಿದೇಶಿ ದೇಣಿಗೆ ತೆಗೆದುಕೊಳ್ಳಲೂ ಕೇಂದ್ರ ಅವಕಾಶ ನೀಡುತ್ತಿಲ್ಲ’ ಎಂಬುದು ಪ್ರತಿಪಕ್ಷಗಳ ಟೀಕೆಗಳಿಗೆ ಕಾರಣವಾಗಿದೆ. ಈ ಮಧ್ಯೆ, ‘ಕೇರಳಕ್ಕೆ ನೆರವು ನೀಡುವ ಮೊತ್ತದ ಬಗ್ಗೆ ಇನ್ನೂ ಯಾವುದೇ ಅಧಿಕೃತ ನಿರ್ಣಯ ಆಗಿಲ್ಲ’ ಎಂದು ಭಾರತದಲ್ಲಿರುವ ಯುಎಇ ರಾಯಭಾರಿ ಹೇಳಿದ್ದಾರೆ. ಈ ದೇಣಿಗೆಯ ವಿಚಾರವನ್ನು ಕೇಂದ್ರ ಹಾಗೂ ಪ್ರತಿಪಕ್ಷಗಳು ದೊಡ್ಡ ವಿವಾದವಾಗಿಸಿರುವ ಸಂದರ್ಭದಲ್ಲಿ ಈ ಹೇಳಿಕೆ ಹೊರಬಿದ್ದಿದೆ. ‘ಕೇರಳಕ್ಕೆ ಈಗ ಬಿಡುಗಡೆ ಮಾಡಿರುವ ₹ 600 ಕೋಟಿ ಪರಿಹಾರ ಆರಂಭದ ಮೊತ್ತ. ಪರಿಸ್ಥಿತಿ ಅವಲೋಕಿಸಿ ಇನ್ನೂ ಹೆಚ್ಚಿನ ಮೊತ್ತ ಬಿಡುಗಡೆ ಮಾಡಲಾಗುವುದು’ ಎಂದು ಕೇಂದ್ರ ಸರ್ಕಾರ ಈ ಮಧ್ಯೆ ಸಮಜಾಯಿಷಿ ನೀಡಿದೆ. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ವಿದೇಶಗಳಿಂದ ಹಣಕಾಸು ನೆರವು ಪಡೆಯದ ನೀತಿಯನ್ನು ಯುಪಿಎ ಸರ್ಕಾರ 2004ರಲ್ಲಿ ಜಾರಿಗೆ ತಂದಿದೆ. ಇದರ ಅನ್ವಯ, 2004ರಲ್ಲಿ ಸುನಾಮಿ ಸಂಭವಿಸಿದ್ದಾಗ ವಿದೇಶಿ ದೇಣಿಗೆ ನಿರಾಕರಿಸಲಾಗಿತ್ತು. ಇದೇ ನೀತಿಯನ್ನು ಈಗಲೂ ಅನುಸರಿಸಲಾಗುತ್ತಿದೆ ಎಂದು ಕೇಂದ್ರ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಪುನರ್ವಸತಿ ಕಾರ್ಯಾಚರಣೆಯ ಅಗಾಧತೆಯನ್ನು ಗಮನಿಸಿದ್ದ ಅಂದಿನ ಮನಮೋಹನ್‍ ಸಿಂಗ್‍ ನೇತೃತ್ವದ ಯುಪಿಎ ಸರ್ಕಾರ,ಸಂಸ್ಥೆಗಳ ಮೂಲಕ ವಿದೇಶಿ ದೇಣಿಗೆ ರವಾನಿಸಲು ಅವಕಾಶ ಕಲ್ಪಿಸಿತ್ತು ಎಂಬುದನ್ನೂ ಸ್ಮರಿಸಬೇಕು. ಈ ನಿಯಮದ ಅನುಕೂಲ ಪಡೆದುಕೊಂಡು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮೂಲಕ ಐರೋಪ್ಯ ಒಕ್ಕೂಟ ₹1.5 ಕೋಟಿಯನ್ನು ಕೇರಳಕ್ಕೆ ಇತ್ತೀಚೆಗೆ ಹಸ್ತಾಂತರಿಸಿದೆ. ಎಂದರೆ, ವಿದೇಶಿ ನೆರವನ್ನು ಭಾರತ ಸ್ವೀಕರಿಸುತ್ತಿದೆ. ಆದರೆ ಅದನ್ನು ರವಾನಿಸಬೇಕಾದ ಮಾರ್ಗದ ಬಗ್ಗೆ ಅನಗತ್ಯ ಅಡ್ಡಿಯನ್ನು ಸೃಷ್ಟಿಸುತ್ತಿದೆ. ವಿಪರ್ಯಾಸದ ಸಂಗತಿ ಎಂದರೆ, ಎನ್‍ಡಿಎ ಸರ್ಕಾರವೇ ರೂಪಿಸಿರುವ ರಾಷ್ಟ್ರೀಯ ಪ್ರಕೃತಿ ವಿಕೋಪ ನೀತಿ– 2016 (ಕಲಂ 9.2) ಪ್ರಕಾರ, ಸ್ವಯಂಪ್ರೇರಿತವಾಗಿವಿದೇಶಿ ಸರ್ಕಾರ ನೀಡಿದ ದೇಣಿಗೆಯನ್ನು ಸ್ವೀಕರಿಸಲು ಅವಕಾಶವಿದೆ. ವಿದೇಶಿ ದೇಣಿಗೆ ಸ್ವೀಕಾರ ವಿಚಾರದಲ್ಲಿ ಈ ಅಸ್ಪಷ್ಟತೆ, ದ್ವಂದ್ವವನ್ನು ಸರಿಪಡಿಸಬೇಕಾದುದು ಅಗತ್ಯ.

ಯುಎಇಯಲ್ಲಿ ಅಪಾರ ಸಂಖ್ಯೆಯ ಕೇರಳಿಗರು ಉದ್ಯೋಗಗಳಲ್ಲಿದ್ದು ಕೇರಳದ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ಯುಎಇ ನೆರವು ನೀಡಲು ಮುಂದೆ ಬಂದಿರುವುದನ್ನು ತಿರಸ್ಕರಿಸುವುದು ಸಲ್ಲದು. ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ನೆರವನ್ನು ಪಡೆದುಕೊಳ್ಳುವುದರಿಂದ ಪ್ರತಿಷ್ಠೆಗೆ ಹಾನಿ ಆಗದು. 2005ರಲ್ಲಿ ಕತ್ರಿನಾ ಚಂಡಮಾರುತದ ಹಾವಳಿಯ ನಂತರ ಅನೇಕ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯಸಂಸ್ಥೆಗಳು ನೀಡಿದ ನೆರವನ್ನು ಅಮೆರಿಕ ಸ್ವೀಕರಿಸಿತ್ತು. ಇದು ಎಲ್ಲಾ ರಾಷ್ಟ್ರಗಳೂ ಅನುಸರಿಸುವ ಕ್ರಮ. ರಾಷ್ಟ್ರೀಯ ಭದ್ರತೆ ಮತ್ತಿತರ ಹಿತಾಸಕ್ತಿಗಳ ಸಂಘರ್ಷದ ವಿಚಾರಗಳು, ವಿದೇಶಿ ದೇಣಿಗೆ ಪಡೆದುಕೊಳ್ಳುವ ಸಂದರ್ಭದಲ್ಲಿ ಸಹಜವಾಗಿಯೇ ಪರಿಶೀಲನೆಗೆ ಒಳಪಟ್ಟಿರುತ್ತವೆ. ಹೀಗಾಗಿ ಕೇರಳದಲ್ಲಿ ಪರಿಹಾರ ಹಾಗೂ ಪುನರ್ವಸತಿ ಕಾರ್ಯಾಚರಣೆಗಳು ಆದ್ಯತೆ ಪಡೆಯಬೇಕು. ವಿದೇಶಿ ದೇಣಿಗೆ ವಿಷಯವನ್ನು ರಾಜಕೀಯಕರಣಗೊಳಿಸುವುದು ಸಲ್ಲದು. ಕೇರಳದಲ್ಲಿ ಜನಜೀವನ ಮಾಮೂಲಿ ಪರಿಸ್ಥಿತಿಗೆ ಮರಳುವುದು ಮುಖ್ಯ. ಇದಕ್ಕಾಗಿ ಎಲ್ಲಾ ಬಗೆಯ ಹಣಕಾಸು ನೆರವು ಹಾಗೂ ತಾಂತ್ರಿಕ ಪರಿಣತಿಯ ಸಹಾಯಗಳಿಗೂ ಆಡಳಿತಯಂತ್ರ ಮುಕ್ತ ಮನಸ್ಸು ಹೊಂದಿರಬೇಕಾದುದು ಅವಶ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT