ADVERTISEMENT

ಕೆಪಿಎಸ್‌ಸಿ: ಆಯ್ಕೆಪಟ್ಟಿ ಊರ್ಜಿತಕ್ಕೆ ಮಸೂದೆ; ಅಕ್ರಮ ಸಕ್ರಮಗೊಳಿಸುವ ಪ್ರಯತ್ನ

ಸಂಪಾದಕೀಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2022, 19:31 IST
Last Updated 20 ಫೆಬ್ರುವರಿ 2022, 19:31 IST
ಸಂಪಾದಕೀಯ
ಸಂಪಾದಕೀಯ   

ಇಬ್ಬಗೆ ಧೋರಣೆಯಿಂದ ಕೆಪಿಎಸ್‌ಸಿ ಶುದ್ಧೀಕರಣ ಸಾಧ್ಯವಿಲ್ಲ. ಅದಕ್ಕೆ ಬಲವಾದ ಸಂಕಲ್ಪ ಬೇಕು. ಅದನ್ನು ಸಾಧ್ಯವಾಗಿಸಲು ಅಷ್ಟೇ ದೃಢವಾದ ಇಚ್ಛಾಶಕ್ತಿ ಬೇಕು.

2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳ ನೇಮಕಾತಿಗೆ ಎದುರಾಗಿದ್ದ ತೊಡರುಗಳನ್ನು ನಿವಾರಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿದೆ. ಅಕ್ರಮ, ಭ್ರಷ್ಟಾಚಾರದ ಆರೋಪಗಳ ಸುಳಿಗೆ ಸಿಲುಕಿ ತನಿಖೆ, ವಿಚಾರಣೆಗೆ ಒಳಗಾಗಿ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಮೆಟ್ಟಿಲು ಹತ್ತಿ ಎಂಟು ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿರುವ ಈ ಆಯ್ಕೆಪಟ್ಟಿಗೆ ಸಿಂಧುತ್ವದ ಮುದ್ರೆ ಒತ್ತಲು ಸರ್ಕಾರವು ‘ಕರ್ನಾಟಕ ಸಿವಿಲ್‌ ಸೇವೆಗಳ (2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಮಸೂದೆ– 2022’ ರೂಪಿಸಿದೆ. ಇದೊಂದು ರೀತಿಯಲ್ಲಿ ಅಕ್ರಮವನ್ನು ಸಕ್ರಮಗೊಳಿಸುವ ಪ್ರಯತ್ನ. ಸಿಐಡಿ ತನಿಖೆಯು ಅಕ್ರಮಗಳನ್ನು ಬಯಲುಗೊಳಿಸಿದೆ. ಇದನ್ನು ಆಧಾರವಾಗಿ ಇರಿಸಿಕೊಂಡು ರಾಜ್ಯ ಸರ್ಕಾರವು 2011ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನೇ ಹಿಂದಕ್ಕೆ ಪಡೆದಿದೆ. ಸರ್ಕಾರದ ಈ ಕ್ರಮವನ್ನು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿವೆ. ಇಷ್ಟೆಲ್ಲ ಆದ ಬಳಿಕ ನೇಮಕಾತಿಗೆ ಸಿಂಧುತ್ವ ತರಲು ಸರ್ಕಾರ ಈಗ ಮಸೂದೆಯ ಮೊರೆ ಹೋಗಿರುವುದು ಸರಿಯಲ್ಲ. ಇದಕ್ಕೆ ಸರ್ಕಾರ ಏನೇ ಕಾರಣ ನೀಡಿದರೂ, ಯಾವುದೇ ತಾಂತ್ರಿಕ ನೆಪ ಮುಂದಿಟ್ಟರೂ ಅವುಗಳನ್ನು ಒಪ್ಪಲಾಗದು. ಇಂತಹದೊಂದು ನಿರ್ಧಾರವು ರವಾನಿಸುವ ಸಂದೇಶವಾದರೂ ಏನು ಎಂಬುದರ ಬಗೆಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕಿತ್ತು. 362 ಹುದ್ದೆಗಳ ಭರ್ತಿಗೆ ಲೋಕ ಸೇವಾ ಆಯೋಗವು 2011ರ ನವೆಂಬರ್‌ನಲ್ಲಿ ಅಧಿ ಸೂಚನೆ ಹೊರಡಿಸಿತ್ತು. ಆ ಬಳಿಕ ಪರೀಕ್ಷೆಗಳನ್ನು ನಡೆಸಿತು. ನಂತರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಯಿತು. ಪಟ್ಟಿ ಪ್ರಕಟಗೊಳ್ಳುತ್ತಲೇ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಯೊಬ್ಬರು ಅಂದಿನ ಅಡ್ವೊಕೇಟ್‌ ಜನರಲ್‌ಗೆ (ಎ.ಜಿ.) ಪತ್ರ ಬರೆದಿದ್ದರು. ಎ.ಜಿ. ಶಿಫಾರಸಿನ ಅನ್ವಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿತ್ತು. ನಂತರ 2014ರ ಜೂನ್‌ ತಿಂಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಅಕ್ರಮಗಳ ತನಿಖೆಯ ಹೊಣೆಯನ್ನು ಸಿಐಡಿಗೆ ವಹಿಸಿತು. ತನಿಖೆ ನಡೆಸಿದ ಸಿಐಡಿ ಮಧ್ಯಂತರ ವರದಿ ನೀಡಿತು. ಅದರ ಆಧಾರದಲ್ಲಿ ಆಗಿನ ಸರ್ಕಾರವು ನೇಮಕಾತಿ ಅಧಿಸೂಚನೆಯನ್ನು ವಾಪಸು ಪಡೆಯಿತು. ಈ ಕ್ರಮದ ವಿರುದ್ಧ ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಮೊರೆ ಹೋದರು. ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಕೆಎಟಿಯು ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೂ ನೇಮಕಾತಿಪತ್ರ ಕೊಡುವಂತೆ ಸೂಚಿಸಿತ್ತು. ಆದರೆ, ಕೆಎಟಿ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿತು. ಇದನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿಹಿಡಿದಿದೆ. ಇಷ್ಟೆಲ್ಲ ಬೆಳವಣಿಗೆಗಳ ಹೊರತಾಗಿಯೂ ನೇಮಕಾತಿ ಆದೇಶ ನೀಡುವುದಕ್ಕೆ ಪೂರಕವಾಗಿ ಮಸೂದೆ ರೂಪಿಸಿ, ಮಂಡಿಸಿರುವುದು ಏನನ್ನು ಸೂಚಿಸುತ್ತದೆ?

ಕರ್ನಾಟಕ ಲೋಕಸೇವಾ ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆ. ಆದರೆ ಈ ಸಂಸ್ಥೆ ಕೆಲವು ವರ್ಷಗಳಿಂದ ಅಕ್ರಮ, ಅದಕ್ಷತೆ, ಭ್ರಷ್ಟಾಚಾರದಂತಹ ಕಾರಣಗಳಿಗಾಗಿಯೇ ಸುದ್ದಿಯಾಗುತ್ತಿದೆ. 2011ನೇ ಸಾಲಿನ ನೇಮಕಾತಿ ಪ್ರಕ್ರಿಯೆಗೆ ಮೊದಲೂ ಅಕ್ರಮಗಳು ನಡೆದಿದ್ದವು. ಆನಂತರ ಕೂಡ ನಡೆದಿವೆ. ಹೀಗಾಗಿ ಈ ನಿರ್ದಿಷ್ಟ ಸಾಲಿನ ಅಭ್ಯರ್ಥಿಗಳನ್ನು ಮಾತ್ರ ಬಲಿಪಶು ಮಾಡುವುದು ಬೇಡ ಎಂದು ಕೆಲವು ರಾಜಕೀಯ ಮುಖಂಡರು ವಾದ ಮಾಡುತ್ತಿದ್ದಾರೆ. ಈ ಬಗೆಯಲ್ಲಿ ಸಮರ್ಥನೆಗಳನ್ನು ನೀಡುತ್ತಾ ಹೋದಲ್ಲಿ ಅಕ್ರಮಗಳ ಬಗೆಗೆ ತನಿಖೆ ನಡೆಸಬೇಕಾದ ಅಗತ್ಯವೇ ಬರಲಾರದು. ಯಾವುದೋ ಒಂದು ಬ್ಯಾಚ್‌ನ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದರೆ ಆಯ್ಕೆಯಾದ ಎಲ್ಲರೂ ವಾಮಮಾರ್ಗದಿಂದಲೇ ದಡ ಸೇರಿದ್ದಾರೆ ಎಂದು ಅರ್ಥವಲ್ಲ. 2011ನೇ ಸಾಲಿನ ನೇಮಕಾತಿ ಅಧಿ ಸೂಚನೆಯನ್ನು ಸರ್ಕಾರವು ಹಿಂದಕ್ಕೆ ಪಡೆದಿದ್ದರಿಂದ ಅಭ್ಯರ್ಥಿಗಳಿಗೆ ನಿರಾಶೆಯಾಗಿರುವುದು ನಿಜ. ಅದರಲ್ಲೂ ದುಡ್ಡು, ಪ್ರಭಾವ ಬಳಸದೇ ಆಯ್ಕೆಯಾದವರಿಗೆ ಇನ್ನೂ ಹೆಚ್ಚಿನ ನಿರಾಶೆ ಆಗಿರುತ್ತದೆ. ಆದರೆ, ಅದನ್ನು ನೆಪವಾಗಿಸಿಕೊಂಡು ಅಕ್ರಮಗಳನ್ನು ಸಮರ್ಥಿಸಲಾಗದು. ಅಕ್ರಮ ಎಸಗಿದವರಿಗೆ ರಕ್ಷಣೆ ನೀಡಲಾಗದು. ಹಾಗೆ ಮಾಡಿದರೆ ಅದು ಮತ್ತೂ ದೊಡ್ಡ ಅಪರಾಧ.ಉದ್ಯೋಗ ಆಕಾಂಕ್ಷಿ ಗಳ ಭರವಸೆಯ ಬೆಳಕಾಗಬೇಕಿರುವ ಕೆಪಿಎಸ್‌ಸಿ ಭ್ರಷ್ಟಾಚಾರದ ಕೂಪವಾಗಿದೆ. ಇದನ್ನು ಶುದ್ಧೀಕರಿಸ ಲೇಬೇಕಿದೆ. ನೇಮಕಾತಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕಗೊಳಿಸಬೇಕಾಗಿದೆ. ಈ ಸಲುವಾಗಿಯೇ ಪಿ.ಸಿ. ಹೋಟಾ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು. 2011ನೇ ಸಾಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಕೇಳಿಬಂದ ಆರೋಪಗಳೇ ಈ ಸಮಿತಿ ರಚನೆಗೆ ಕಾರಣ. ಹೋಟಾ ಸಮಿತಿಯು 2013ರ ಆಗಸ್ಟ್‌ನಲ್ಲಿಯೇ ವರದಿ ನೀಡಿತು. ಸುಧಾರಣೆಗೆ ಅನೇಕ ಶಿಫಾರಸುಗಳನ್ನು ಸಮಿತಿ ಮಾಡಿದೆ. ಆದರೆ, ಸರ್ಕಾರವು ತನಗೆ ಅನುಕೂಲ ಎನಿಸಿದ ಶಿಫಾರಸುಗಳನ್ನಷ್ಟೇ ಜಾರಿಗೆ ತಂದಿದೆ. ಅದೂ ಕಂತುಗಳಲ್ಲಿ ಜಾರಿಗೆ ಬರುತ್ತಿವೆ. 362 ಅಭ್ಯರ್ಥಿಗಳ ಆಯ್ಕೆಪಟ್ಟಿ ಊರ್ಜಿತಕ್ಕೆ ಶುಕ್ರವಾರ ವಿಧಾನ ಸಭೆಯಲ್ಲಿ ಮಸೂದೆ ಮಂಡನೆಯಾಗಿದೆ. ಅದೇ ದಿನ ಸಚಿವ ಸಂಪುಟ ಸಭೆಯು ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ (ಗ್ರೂಪ್‌ ಎ ಮತ್ತು ಬಿ) ಭರ್ತಿಗೆ ಕೆಪಿಎಸ್‌ಸಿ ನಡೆಸುವ ವ್ಯಕ್ತಿತ್ವ ಪರೀಕ್ಷೆ ಅರ್ಥಾತ್‌ ಸಂದರ್ಶನದ ಅಂಕಗಳನ್ನು 50ರಿಂದ 25ಕ್ಕೆ ಇಳಿಸಲು ತೀರ್ಮಾನ ತೆಗೆದುಕೊಂಡಿದೆ. ಒಂದೆಡೆ ಅಕ್ರಮ ತಡೆಗೆ ಪ್ರಯತ್ನ; ಮತ್ತೊಂದೆಡೆ ಅಕ್ರಮ ಮುಚ್ಚಿಹಾಕುವ ಯತ್ನ. ಎಂತಹ ವಿರೋಧಾಭಾಸ! ಇಂತಹ ಇಬ್ಬಗೆ ಧೋರಣೆಯಿಂದ ಕೆಪಿಎಸ್‌ಸಿ ಶುದ್ಧೀಕರಣ ಸಾಧ್ಯವಿಲ್ಲ. ಅದಕ್ಕೆ ಬಲವಾದ ಸಂಕಲ್ಪ ಬೇಕು. ಅದನ್ನು ಸಾಧ್ಯವಾಗಿಸಲು ಅಷ್ಟೇ ದೃಢವಾದ ಇಚ್ಛಾಶಕ್ತಿ ಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.