ADVERTISEMENT

ಸಂಪಾದಕೀಯ: ಕಾರ್ಮಿಕ ಕಲ್ಯಾಣ ಮಂಡಳಿ ನಿಧಿ ಬಳಕೆಯಲ್ಲಿ ಪಾರದರ್ಶಕತೆ ಇರಲಿ

ಸಂಪಾದಕೀಯ

ಸಂಪಾದಕೀಯ
Published 28 ಜೂನ್ 2024, 19:38 IST
Last Updated 28 ಜೂನ್ 2024, 19:38 IST
   

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ರಾಜ್ಯದಲ್ಲಿರುವ ನಿರ್ಮಾಣ ಕಾರ್ಮಿಕರ ಕುಟುಂಬಗಳಿಗೆ ಅಗತ್ಯ ನೆರವು ಕಲ್ಪಿಸಿ, ಅವರ ಜೀವನಮಟ್ಟ ಸುಧಾರಣೆಗೆ ನೆರವಾಗುವ ಮಹತ್ತರವಾದ ಹೊಣೆಗಾರಿಕೆಯನ್ನು ಹೊಂದಿದೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಟ್ಟಡ ಮತ್ತು ಇತರ ನಿರ್ಮಾಣ ಕೆಲಸಗಾರರ ಕಲ್ಯಾಣ ಸುಂಕ ಕಾಯ್ದೆ– 1996ರ ಅಡಿಯಲ್ಲಿ ಈ ಮಂಡಳಿ 2007ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ರಾಜ್ಯದಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 40 ಲಕ್ಷ ಕಾರ್ಮಿಕರು ಈ ಮಂಡಳಿಯಲ್ಲಿ ನೋಂದಾಯಿತರಾಗಿದ್ದಾರೆ.

ಬೃಹತ್‌ ನಿರ್ಮಾಣ ಕಾಮಗಾರಿ ಕೈಗೊಳ್ಳುವವರು ನಿರ್ಮಾಣ ಕಾಮಗಾರಿಗಳ ಒಟ್ಟು ಮೌಲ್ಯದ ಶೇಕಡ 1ರಷ್ಟನ್ನು ಸೆಸ್‌ ರೂಪದಲ್ಲಿ ಮಂಡಳಿಗೆ ಪಾವತಿಸಬೇಕು. ನೋಂದಣಿಯಾಗುವ ಕಾರ್ಮಿಕರೂ ಅತ್ಯಲ್ಪ ಪ್ರಮಾಣದ ಶುಲ್ಕ ನೀಡಬೇಕು. 2006–07ರಿಂದ 2023–24ನೇ ಆರ್ಥಿಕ ವರ್ಷದ ಅಂತ್ಯದವರೆಗೆ ಮಂಡಳಿಯು ಸಂಗ್ರಹಿಸಿದ ಸೆಸ್‌, ನೋಂದಣಿ ಶುಲ್ಕ ಮತ್ತು ಅವುಗಳ ಮೇಲೆ ಬ್ಯಾಂಕ್‌ಗಳಿಂದ ದೊರೆತ ಬಡ್ಡಿಯ ಒಟ್ಟು ಮೊತ್ತ ₹ 14,000 ಕೋಟಿಗೂ ಹೆಚ್ಚು. ನಿರ್ಮಾಣ ಕಾರ್ಮಿಕರ ಕುಟುಂಬಗಳಿಗಾಗಿ ಮಂಡಳಿಯು ಶೈಕ್ಷಣಿಕ ಸಹಾಯಧನ, ವಿವಾಹ ಸಹಾಯಧನ, ಅಪಘಾತ ಮತ್ತು ಮರಣ ಪರಿಹಾರ, ವೈದ್ಯಕೀಯ ವೆಚ್ಚ ಪಾವತಿ, ವಸತಿ ಸೌಲಭ್ಯ ಸೇರಿದಂತೆ ನೇರ ಅನುಕೂಲದ ಹಲವು ಸೌಲಭ್ಯಗಳನ್ನು
ಕಲ್ಪಿಸುತ್ತಿದೆ. ಕಾರ್ಮಿಕರಿಗೆ ಪರೋಕ್ಷವಾಗಿ ಅನುಕೂಲ ಕಲ್ಪಿಸುವಂತಹ ಕೆಲವು ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದೆ. ಅಸ್ತಿತ್ವಕ್ಕೆ ಬಂದಾಗಿನಿಂದ ಈವರೆಗೆ ₹ 6,000 ಕೋಟಿಗೂ ಹೆಚ್ಚು ಮೊತ್ತವನ್ನು ಈ ಯೋಜನೆಗಳ ಅಡಿಯಲ್ಲಿ ವೆಚ್ಚ ಮಾಡಲಾಗಿದೆ ಎಂಬುದನ್ನು ಮಂಡಳಿಯ ಅಂಕಿಅಂಶಗಳು ಹೇಳುತ್ತವೆ.

ADVERTISEMENT

ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ನೆರವು ನೀಡುವುದಕ್ಕಾಗಿಯೇ ಸಂಗ್ರಹಿಸಿದ ಹಣ ಬಳಕೆಗೆ ಮಂಡಳಿ ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ಹಲವು ವರ್ಷಗಳಿಂದಲೂ ಆಕ್ಷೇಪ ವ್ಯಕ್ತ
ವಾಗುತ್ತಲೇ ಇದೆ.

ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶೈಕ್ಷಣಿಕ ಸಹಾಯಧನದ ಮೊತ್ತವನ್ನು ಕಡಿತ
ಗೊಳಿಸಿದ್ದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಒಕ್ಕೂಟ ಹಾಗೂ ಇತರರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಅಂತಹ ಅನೇಕ ಸಂಗತಿಗಳು ಹೊರಬಂದಿವೆ. ತನ್ನ ಬಳಿ ₹ 8,000 ಕೋಟಿಯಷ್ಟು ಬೃಹತ್‌ ಮೊತ್ತ ಇದ್ದಾಗ್ಯೂ ವಿದ್ಯಾರ್ಥಿಗಳ ಶೈಕ್ಷಣಿಕ ಸಹಾಯಧನದ ಮೊತ್ತವನ್ನು ಕಡಿತಗೊಳಿಸಿದ ಕ್ರಮವನ್ನು ಸಮರ್ಥಿಸಿಕೊಳ್ಳಲಾಗದೇ ಮಂಡಳಿಯು ನ್ಯಾಯಾಲಯದಲ್ಲಿ ಪೇಚಿಗೆ ಸಿಲುಕಿದೆ.

ತನ್ನ ಬಳಿ ಲಭ್ಯವಿರುವ ಹಣದ ಕುರಿತು ಸರಿಯಾಗಿ ಮಾಹಿತಿ ನೀಡಲು ಹಿಂದೇಟು ಹಾಕಿ ಆರಂಭದಲ್ಲೇ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡ ಮಂಡಳಿಯು ಈವರೆಗೆ ಮಾಡಿರುವ ವೆಚ್ಚದ ಬಗ್ಗೆಯೂ ಸರಿಯಾದ ಮಾಹಿತಿ ಒದಗಿಸದೇ ಟೀಕೆಗೊಳಗಾಗಿದೆ. ಲಭ್ಯವಿರುವ ಹಣ ಮತ್ತು ಈವರೆಗಿನ ವೆಚ್ಚದ ಕುರಿತು ಪಾರದರ್ಶಕ ರೀತಿಯಲ್ಲಿ ಮಾಹಿತಿ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿರುವ ಮಂಡಳಿಯ ನಡೆಯು ಅಲ್ಲಿನ ವಹಿವಾಟುಗಳ ಬಗ್ಗೆ ಸಂಶಯಕ್ಕೆ ಎಡೆಮಾಡಿದೆ. ಅನುದಾನದ ಮಾರ್ಗಪಲ್ಲಟಕ್ಕೆ ಪ್ರಯತ್ನ, ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಕಾರ್ಮಿಕರಿಗೆ ನೆರವು ನೀಡುವ ಹೆಸರಿನಲ್ಲಿ ದುಂದುವೆಚ್ಚ, ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್‌ ವಿತರಣೆಯಲ್ಲಿ ಅಕ್ರಮ, ಕಾರ್ಮಿಕರಲ್ಲದವರನ್ನು ಮಂಡಳಿಯ ಫಲಾನುಭವಿ
ಗಳನ್ನಾಗಿ ನೋಂದಣಿ ಮಾಡಿಸಿರುವುದು ಸೇರಿದಂತೆ ಹಲವು ಆರೋಪಗಳು ಈ ಹಿಂದೆ ಕೇಳಿಬಂದಿದ್ದವು.

ನಿರ್ಮಾಣ ಕ್ಷೇತ್ರದಲ್ಲಿ ದುಡಿಯುತ್ತಿರುವವರಲ್ಲಿ ಹೆಚ್ಚಿನವರು ಅಲೆಮಾರಿಗಳಂತೆ ಬದುಕುತ್ತಿದ್ದಾರೆ. ಜೀವನೋಪಾಯಕ್ಕಾಗಿ ಹುಟ್ಟಿದ ಊರು ತೊರೆದು ನಗರ, ಪಟ್ಟಣ ಪ್ರದೇಶಗಳಿಗೆ ವಲಸೆ ಬಂದು ದೈಹಿಕ ಶ್ರಮದಲ್ಲೇ ಜೀವನ ನಡೆಸುತ್ತಿರುವವರಿಗೆ ಈ ಮಂಡಳಿ ಭರವಸೆಯ ಬೆಳಕಾಗಬೇಕಿತ್ತು. ದುಡಿಯುವ ವರ್ಗದ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಕೆಲಸವನ್ನು ಸಂಶಯಕ್ಕೆ ಎಡೆ ಇಲ್ಲದಂತೆ ಮಾಡಬೇಕಿತ್ತು. ಆದರೆ, ಶೈಕ್ಷಣಿಕ ಸಹಾಯಧನಕ್ಕೆ ಕತ್ತರಿ ಹಾಕಿರುವ ಅಧಿಕಾರಿಗಳು ಬಡವರ ಜೀವನಮಟ್ಟ ಸುಧಾರಣೆಗೆ ಮೀಸಲಾದ ನಿಧಿಯನ್ನು ಆಡಳಿತ ನಿರ್ವಹಣೆ ಹೆಸರಿನಲ್ಲಿ ಮನಸೋಇಚ್ಛೆ ಬಳಕೆ ಮಾಡಿರುವುದು ಮಹಾಲೇಖಪಾಲರ ವರದಿಯಲ್ಲಿ ಬಯಲಾಗಿದೆ. ಅನುದಾನದ ಕೊರತೆಯ ನೆಪವೊಡ್ಡಿ ಆರು ಲಕ್ಷದಷ್ಟು ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನಿರಾಕರಿಸಿರುವ ಮಂಡಳಿಯ ಅಧಿಕಾರಿಗಳ ನಡೆಯನ್ನು ಒಪ್ಪಲಾಗದು.

ಇತ್ತೀಚಿನ ವರ್ಷಗಳಲ್ಲಿ ಫಲಾನುಭವಿಗಳಿಗೆ ನೇರವಾಗಿ ತಲುಪುವಂತಹ ಕಾರ್ಯಕ್ರಮಗಳಿಗಿಂತಲೂ ಟೆಂಡರ್‌ ಮೂಲಕ ನಿರ್ವಹಿಸುವ ಕಾರ್ಯಕ್ರಮಗಳಿಗೇ ಹೆಚ್ಚು ವೆಚ್ಚ ಮಾಡುತ್ತಿರುವ ಬಗ್ಗೆ ಕಾರ್ಮಿಕರ ವಲಯದಲ್ಲಿ ಆಕ್ಷೇಪಗಳಿವೆ.

ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮಂಡಳಿ ಅನುಸರಿಸುತ್ತಿರುವ ಇಂತಹ  ನೀತಿಯೂ ಅನುಮಾನಗಳಿಂದ ಹೊರತಾಗಿಲ್ಲ. ಮಂಡಳಿಯು ಸಂಪನ್ಮೂಲ ಸಂಗ್ರಹ ಮತ್ತು ವೆಚ್ಚ ಎರಡೂ ವಿಚಾರಗಳಲ್ಲಿ ಸಂಪೂರ್ಣ ಪಾರದರ್ಶಕತೆ ಅಳವಡಿಸಿಕೊಳ್ಳಬೇಕು. ಹೈಕೋರ್ಟ್‌ ಆದೇಶದಂತೆ ಈಗ ಲಭ್ಯವಿರುವ ಹಣ ಮತ್ತು ವೆಚ್ಚದ ಕುರಿತು ಮಾಹಿತಿ ಬಹಿರಂಗಪಡಿಸುವುದರ ಜತೆಗೆ ಮುಂದೆಯೂ ನಿಯಮಿತವಾಗಿ ಆ ಕೆಲಸವನ್ನು ಮುಂದುವರಿಸಬೇಕು. ಮಂಡಳಿಯಲ್ಲಿ ಪಾರದರ್ಶಕತೆ ತರುವ ಹೊಣೆಗಾರಿಕೆ ಕಾರ್ಮಿಕ ಇಲಾಖೆಗೂ ಸೇರಿದೆ. ಗುತ್ತಿಗೆದಾರರು ಮತ್ತು ಪೂರೈಕೆದಾರರ ಜೇಬು ತುಂಬಿಸುವ ಯೋಜನೆಗಳಿಗಿಂತಲೂ ನಿರ್ಮಾಣ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನೆಮ್ಮದಿಯ ನಾಳೆಗಳನ್ನು ಖಾತರಿಪಡಿಸುವಂತಹ ಯೋಜನೆಗಳ ಅನುಷ್ಠಾನಕ್ಕೆ ಮಂಡಳಿ ಒತ್ತು ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.