ADVERTISEMENT

ಸಂಪಾದಕೀಯ: ಪಶ್ಚಿಮಘಟ್ಟಗಳಲ್ಲಿ ಭೂಕುಸಿತದ ತಡೆ ಬೇಕಿದೆ ಆಡಳಿತದ ಪ್ರಾಮಾಣಿಕ ನಡೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 19:31 IST
Last Updated 4 ಏಪ್ರಿಲ್ 2021, 19:31 IST
   

ಪಶ್ಚಿಮಘಟ್ಟಗಳು ಜೀವಸಿರಿಯ ಉಗ್ರಾಣವೂ ಹೌದು, ನಿಸರ್ಗ ವಿಕೋಪಗಳ ಉಗ್ರ ತಾಣವೂ ಹೌದು. ಹಿಮಾಲಯದಂತೆ ಅದು ಬೆಳೆಯುತ್ತಿಲ್ಲವಾದರೂ ಪದೇಪದೇ ಕುಸಿತಕ್ಕೆ ಪಕ್ಕಾಗುತ್ತಲೇ ಇರುತ್ತದೆ. ಅಲ್ಲಿನ ಪುರಾತನ ಶಿಥಿಲ ಶಿಲೆಗಳು, ತೀವ್ರ ಇಳಿಜಾರಿನ ಆಳ ಕಮರಿಗಳು, ಸಡಿಲ ಮಣ್ಣು ಮತ್ತು ಭರಪೂರ ಮಳೆ ಎಲ್ಲವೂ ಇಡೀ ಗುಡ್ಡ ಪ್ರದೇಶವನ್ನು ಅಸ್ಥಿರತೆಯ ಪ್ರಪಾತಕ್ಕೆ ತಳ್ಳಲು ಸಜ್ಜಾಗಿರುತ್ತವೆ.

ಈಚಿನ ವರ್ಷಗಳಲ್ಲಿ ಹವಾಗುಣ ಬದಲಾವಣೆಯ ಕಾರಣದಿಂದಾಗಿ ಅತಿಶಯ ಸೆಕೆ, ಅನಿರೀಕ್ಷಿತ ಮೇಘಸ್ಫೋಟ, ಸತತ ಜಡಿಮಳೆ ಮುಂತಾದವು ಒಟ್ಟಾಗಿ ಭೂಕುಸಿತದ ಸಂಭವನೀಯತೆ ಮತ್ತು ತೀವ್ರತೆ ಎರಡನ್ನೂ ಹೆಚ್ಚಿಸಿವೆ. ಸಾಲದೆಂಬಂತೆ, ಅಲ್ಲಿ ಅಭಿವೃದ್ಧಿಯ ಯೋಜನೆಗಳ ದಾಂಗುಡಿಯೂ ಹೆಚ್ಚುತ್ತಿದೆ. ಮೂರು– ನಾಲ್ಕು ವರ್ಷಗಳಿಂದ ವಿಶೇಷವಾಗಿ ಕೊಡಗು ಮತ್ತು ಚಿಕ್ಕಮಗಳೂರಿನ ಕೆಲ ಭಾಗಗಳಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತಗಳು ಸಂಭವಿಸುತ್ತಿವೆ. ಅಂಥ ಮಹಾದುರಂತಗಳಿಗೆ ನಿಖರ ಕಾರಣಗಳನ್ನು ಪತ್ತೆಹಚ್ಚುವಂತೆ ಹಾಗೂ ವಿಕೋಪಗಳನ್ನು ಪ್ರತಿಬಂಧಿಸುವ ಕ್ರಮಗಳನ್ನು ಸೂಚಿಸುವಂತೆ ವಿಜ್ಞಾನಿಗಳ ಹಾಗೂ ಪರಿಸರತಜ್ಞರ ಸಮಿತಿಯೊಂದನ್ನು ಕರ್ನಾಟಕ ಸರ್ಕಾರ ನೇಮಕ ಮಾಡಿತ್ತು. ಅದರ ಅಂತಿಮ ವರದಿಯನ್ನು ಇತ್ತೀಚೆಗೆ ಜೀವಿವೈವಿಧ್ಯ ಮಂಡಳಿ ಪ್ರಕಟಿಸಿದೆ. ಪ್ರಕೃತಿಯ ಮಡಿಲಲ್ಲಿ ಮನುಷ್ಯನ ಹಸ್ತಕ್ಷೇಪಗಳಿಂದಾದ ತಪ್ಪುಗಳೇ (ಮುಖ್ಯವಾಗಿ ಎಂಜಿನಿಯರಿಂಗ್‌ ದೋಷಗಳೇ) ಬಹುತೇಕ ಎಲ್ಲ ಭೂಕುಸಿತಗಳಿಗೆ ಕಾರಣವಾಗಿವೆ ಎಂದು ವರದಿಯಲ್ಲಿ ಪ್ರಮುಖವಾಗಿ ಹೇಳಲಾಗಿದೆ; ಭೂಕುಸಿತವನ್ನೂ ನೈಸರ್ಗಿಕ ವಿಕೋಪಗಳ ವ್ಯಾಖ್ಯೆಯಡಿ ತರಬೇಕೆಂದೂ ಸಮಿತಿ ಶಿಫಾರಸು ಮಾಡಿದೆ.

ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿ ಮುಂದೆ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ಕರ್ನಾಟಕ ರಾಜ್ಯ ವಿಕೋಪ ನಿಯಂತ್ರಣ ಪ್ರಾಧಿಕಾರದ ಅನುಮತಿ ಪಡೆಯಬೇಕೆಂದೂ ತಜ್ಞರ ಸಮಿತಿ ಸೂಚಿಸಿದೆ.

ADVERTISEMENT

ತನಿಖಾ ಸಮಿತಿಗಳೆಂದರೆ ತತ್ಕಾಲೀನ ಆಕ್ರೋಶ ವನ್ನು ತಂಪುಗೊಳಿಸುವ ಕ್ರಮಗಳೆಂದೂ, ವರದಿಗಳೆಂದರೆ ಮೂಲೆಗೆ ತಳ್ಳಬೇಕಾದ ದಾಖಲೆಗಳೆಂದೂ ಪರಿಭಾವಿಸುವ ಪ್ರತೀತಿಯೇ ನಮ್ಮಲ್ಲಿದೆ. ಅದಕ್ಕೆ ಅಪವಾದವೆಂಬಂತೆ ಈ ಸಮಿತಿ ತುರ್ತಾಗಿಯೇ ವರದಿ ಸಲ್ಲಿಸಿದ್ದು ಹಾಗೂ ಅದರ ಶಿಫಾರಸುಗಳನ್ನು ಪರಿಶೀಲಿಸಿ ಅನುಷ್ಠಾನಕ್ಕೆ ತರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿಕೆ ನೀಡಿದ್ದು- ಇವೆಲ್ಲವೂ ಸ್ವಾಗತಾರ್ಹವೇ ಹೌದು. ಅನುಷ್ಠಾನಕ್ಕೆ ವಿಳಂಬ ಬೇಡ. ಈ ನಿಸರ್ಗ ಭಂಡಾರದತ್ತ ಹೂಡಿಕೆದಾರರ ಆಕರ್ಷಣೆ ದಿನದಿನಕ್ಕೆ ಹೆಚ್ಚುತ್ತಿದೆ.

ಹೆದ್ದಾರಿ ವಿಸ್ತರಣೆ, ರೈಲುಮಾರ್ಗಕ್ಕಾಗಿ ಭೂಕೊರೆತ, ಸುರಂಗ ನಿರ್ಮಾಣ, ವಿದ್ಯುತ್‌ ತಂತಿಮಾರ್ಗ, ನದಿತಿರುವಿನ ಕೊಳವೆ ಮಾರ್ಗವೇ ಮುಂತಾದ ಮೂಲಸೌಕರ್ಯಗಳ ಅಭಿವೃದ್ಧಿಯ ಜೊತೆಜೊತೆಗೆ ಮರಳು ಗಣಿಗಾರಿಕೆ, ಖಾಸಗಿ ರೆಸಾರ್ಟ್‌ ನಿರ್ಮಾಣ, ಗ್ರಾನೈಟ್‌ ಸಾಗಾಟದಿಂದಾಗುವ ಅರಣ್ಯನಾಶ ಎಲ್ಲವೂ ಈ ಪರಿಸರಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚುತ್ತಿವೆ. ಸಾಲದ್ದಕ್ಕೆ ಭೂಪರಿವರ್ತನೆಯ ಮೇಲಿದ್ದ ನಿರ್ಬಂಧಗಳನ್ನೂ ಸರ್ಕಾರ ತೆಗೆದು ಹಾಕಿದ್ದರಿಂದ ಕಂಡಕಂಡಲ್ಲಿ ಖಾಸಗಿ ಜೆಸಿಬಿ ಯಂತ್ರಗಳು ಗುಡ್ಡ ಕೊರೆಯುವ, ಡೈನಮೈಟ್‌ ಸಿಡಿಸಿ ಭೂವಿಸ್ತರಣೆ ಮಾಡುವ ಪ್ರಕ್ರಿಯೆಯೂ ಹೆಚ್ಚಾಗಿದೆ. ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯ ಕೆಳಗಡೆಗೇ ಅಗೆತದ ಕೆಲಸ ನಡೆದಿದೆ ಎಂದರೆ ಪೀಠದ ಕೆಳಗೇ ಅಸ್ಥಿರತೆಯ ಭೀತಿಯಿದೆಯೆಂದಾಯಿತು.

ಇನ್ನು ಪರಿಹಾರದ ವಿಚಾರ: ಅದೆಷ್ಟೊ ಗ್ರಾಮಗಳಲ್ಲಿ ಕಳೆದ ಎರಡು– ಮೂರು ವರ್ಷಗಳಲ್ಲಿ ಭೂಕುಸಿತದಿಂದ ಜಮೀನು-ಮನೆ ಕಳೆದುಕೊಂಡವರಿಗೆ ಬದಲೀ ನೆಲೆಯನ್ನು ಕಲ್ಪಿಸುವ ಕೆಲಸವೂ ಆಗುತ್ತಿಲ್ಲ. ಕಡತಗಳೆಲ್ಲ ಜಿಲ್ಲಾಧಿಕಾರಿಗಳ ಬಳಿಯೇ ಕೂತಿವೆ. ಮನುಷ್ಯರಿಗೇನೊ ಅಷ್ಟಿಷ್ಟು ನಗದು ಪರಿಹಾರ ಕೊಟ್ಟಾಗಿದೆ ಸರಿ; ಆದರೆ ನಿಸರ್ಗಕ್ಕೆ ಪರಿಹಾರವೆಲ್ಲಿ? ಗುಡ್ಡ ಕುಸಿದಿದ್ದರಿಂದ ಹಳ್ಳಕೊಳ್ಳಗಳ ದಿಕ್ಕುತಪ್ಪಿ ಮಡುಗಟ್ಟಿದ ಮಣ್ಣು-ನೀರು ಹೊಸಬಗೆಯ ಅಸ್ಥಿರತೆಗೆ ಕಾರಣವಾಗಿ (ಉತ್ತರಾಖಂಡದಲ್ಲಿ ಆದಂತೆ) ಅದೂ ಆಪತ್ತಿಗೆ ಕಾರಣವಾಗಬಹುದು.

ಪ್ರಕೃತಿಗೂ ಮರುವಸತಿ ಕಲ್ಪಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಅಡ್ಡಾದಿಡ್ಡಿ ಭೂಬಳಕೆ, ಲಂಗುಲಗಾಮಿಲ್ಲದ ಕಬಳಿಕೆಯಿಂದಾಗಿ ಮಲೆನಾಡು- ಕರಾವಳಿ ಪ್ರದೇಶಗಳ 23 ತಾಲ್ಲೂಕುಗಳಲ್ಲಿ ಭೂಕುಸಿತದ ಸಾಧ್ಯತೆ ಇದೆಯೆಂದು ಭಾರತೀಯ ಭೂವಿಜ್ಞಾನ ಸರ್ವೇಕ್ಷಣ ವರದಿಯಲ್ಲೂ ಹೇಳಲಾಗಿದೆ. ಯಾವುದೇ ಸರ್ಕಾರಿ ಕಾಮಗಾರಿಗೆ ಕೈಹಾಕುವ ಮುನ್ನ ಈ ಸಂಸ್ಥೆ ಸಿದ್ಧಪಡಿಸಿರುವ ‘ಸಂಭವನೀಯ ಭೂಕುಸಿತದ ನಕ್ಷೆ’ಯನ್ನು ಎದುರಿಗಿಟ್ಟುಕೊಳ್ಳಬೇಕು ಎಂಬುದನ್ನು ಕಡ್ಡಾಯ ಮಾಡಬೇಕು.

ಕೇರಳದಲ್ಲಿ ಇಂಥ ನಕ್ಷೆಯನ್ನು ಯಾರು ಬೇಕಾದರೂ ವೀಕ್ಷಿಸ ಬಹುದಾಗಿದೆ. ಎಲ್ಲಕ್ಕಿಂತ ಮುಖ್ಯ ಏನೆಂದರೆ, ಘಟ್ಟಪ್ರದೇಶದ ಕಣಿವೆಗಳಲ್ಲಿ ಶತಮಾನಗಳಿಂದ ನೆಲೆಸಿರುವ ಜನರು ತಮ್ಮದಲ್ಲದ ತಪ್ಪಿನಿಂದಾಗಿ ಭಯ-ಆತಂಕಗಳಲ್ಲಿ ಬದುಕಬೇಕಾಗಿ ಬಂದಿದೆ. ಅಂಥವರಿಗೆ ಕೊಂಚ ನೆಮ್ಮದಿ ಸಿಗುವಂತೆ ವಿಶೇಷ ‘ಭೂಕುಸಿತ ವಿಮೆ’ ಮಾಡಿಸುವತ್ತ ಸರ್ಕಾರ ಗಮನ ಹರಿಸಬೇಕಿದೆ. ಭದ್ರತೆ ನಿಸರ್ಗಕ್ಕೂ ಬೇಕಾಗಿದೆ, ಅದರ ಮಡಿಲಲ್ಲಿ ನೆಲೆಸಿದವರಿಗೂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.