ADVERTISEMENT

ಸಂಪಾದಕೀಯ | ಮಾವೊವಾದ ಒಡ್ಡಿರುವ ಸವಾಲು; ಅಭಿವೃದ್ಧಿಯೇ ಉತ್ತರವಾಗಲಿ

ಸಂಪಾದಕೀಯ
Published 21 ಏಪ್ರಿಲ್ 2024, 19:43 IST
Last Updated 21 ಏಪ್ರಿಲ್ 2024, 19:43 IST
   

ಛತ್ತೀಸಗಢದಲ್ಲಿ ಭದ್ರತಾ ಪಡೆಗಳ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ 29 ಮಂದಿ ನಕ್ಸಲೀಯರು ಹತರಾಗಿರುವುದು ಅಲ್ಲಿ ಅವರ ಚಟುವಟಿಕೆಗಳಿಗೆ ದೊಡ್ಡ ಪೆಟ್ಟು. ಈ 29 ಮಂದಿಯಲ್ಲಿ ಮಾವೊವಾದಿಗಳ ಕೆಲವು ಪ್ರಮುಖ ಕಮಾಂಡರ್‌ಗಳೂ ಸೇರಿದ್ದಾರೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಮತ್ತು ಜಿಲ್ಲಾ ಮೀಸಲು ಪಡೆಯ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ನಕ್ಸಲೀಯರು ಹತರಾಗಿದ್ದಾರೆ. ಖಚಿತ ಗುಪ್ತಚರ ಮಾಹಿತಿ ಆಧರಿಸಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ವರದಿಗಳು ಹೇಳಿವೆ. ಮಾವೊವಾದಿಗಳಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.

ಹೀಗೆ ವಶಪಡಿಸಿಕೊಂಡವುಗಳಲ್ಲಿ ಆಧುನಿಕ ಶಸ್ತ್ರಾಸ್ತ್ರಗಳೂ ಸೇರಿವೆ. ಈ ಕಾರ್ಯಾಚರಣೆಯನ್ನು ‘ಎನ್‌ಕೌಂಟರ್’ ಎಂದು ಕರೆಯಲಾಗಿದೆ. ಆದರೆ ಮಾಮೂಲಿ ‘ಎನ್‌ಕೌಂಟರ್‌’ಗಳಿಗೆ ಇರುವ ನಕಾರಾತ್ಮಕ ಅರ್ಥವನ್ನು ಇದು ಧ್ವನಿಸುತ್ತದೆಯೇ ಎಂಬುದು ಖಚಿತವಾಗಿಲ್ಲ. ನಕ್ಸಲೀಯರು ಭಾರಿ ಸಂಖ್ಯೆಯಲ್ಲಿ ಹತರಾಗಿರುವುದನ್ನು ಗಮನಿಸಿದರೆ ಭದ್ರತಾ ಪಡೆಗಳಿಂದ ದಾಳಿ ಎದುರಾಗುವ ಮುನ್ಸೂಚನೆ ಅವರಿಗೆ ಇರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಭದ್ರತಾ ಪಡೆಯ ಸಿಬ್ಬಂದಿಗೆ ಗಾಯಗಳಾಗಿವೆ. ಮಾವೊವಾದಿಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಒಂದೆಡೆ ಸೇರಿದ್ದು ಹಾಗೂ ಭದ್ರತಾ ಪಡೆಯ ಸಿಬ್ಬಂದಿಗೆ ಸುಲಭದ ತುತ್ತಾಗಿದ್ದು ಮಾಮೂಲಿ ಸಂಗತಿ ಅಲ್ಲ. ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಯಶಸ್ಸು ಸಾಧಿಸಿದ್ದಾರೆ.

ಈ ಕಾರ್ಯಾಚರಣೆಯ ಯಶಸ್ಸಿನ ಶ್ರೇಯವನ್ನು ಸರ್ಕಾರವು ತನ್ನದಾಗಿಸಿಕೊಂಡಿದೆ. ಈಚಿನ ನೂರು ದಿನಗಳ ಅವಧಿಯಲ್ಲಿ 87 ಮಂದಿ ಮಾವೊವಾದಿಗಳ ಹತ್ಯೆ ಆಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ನಕ್ಸಲ್‌ವಾದವನ್ನು ದೇಶದಿಂದ ಸಂಪೂರ್ಣವಾಗಿ ನಿರ್ಮೂಲಗೊಳಿಸಲಾಗುತ್ತದೆ ಎಂದು ಅವರು ಘೋಷಿಸಿದ್ದಾರೆ. ಎಡಪಂಥೀಯ ತೀವ್ರವಾದವು ಭದ್ರತೆಗೆ ಗಂಭೀರ ಸವಾಲನ್ನು ಒಡ್ಡಿರುವ ರಾಜ್ಯದಲ್ಲಿ, ಲೋಕಸಭಾ ಚುನಾವಣೆಗೆ ಮೊದಲು ನಡೆದ ಈ ಕಾರ್ಯಾಚರಣೆಯು ಸರ್ಕಾರಕ್ಕೆ ಬಲ ತುಂಬುವ ಕೆಲಸ ಮಾಡುತ್ತದೆ. ಸರ್ಕಾರ ತಳೆದ ಆಕ್ರಮಣಶೀಲ ಧೋರಣೆಯ ಪರಿಣಾಮವಾಗಿ ಛತ್ತೀಸಗಢದಲ್ಲಿ ನಕ್ಸಲೀಯರು ಒಂದು ಸಣ್ಣ ಪ್ರದೇಶಕ್ಕೆ ಈಗ ಸೀಮಿತಗೊಂಡಿದ್ದಾರೆ ಎಂದು ಶಾ ಅವರು ಹೇಳಿದ್ದಾರೆ. ಆದರೆ ಇದು ಸಂಪೂರ್ಣ ಸತ್ಯವಲ್ಲ. ಮಹಾರಾಷ್ಟ್ರ, ಆಂಧ್ರಪ್ರದೇಶ, ಛತ್ತೀಸಗಢ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಲ್ಲಿ ನಕ್ಸಲೀಯರು ಇಂದಿಗೂ ಗಣನೀಯ ಪ್ರಮಾಣದಲ್ಲಿ ಪ್ರಭಾವ ಹೊಂದಿದ್ದಾರೆ. ಕೆಲವು ಪ್ರದೇಶಗಳಲ್ಲಿ ಸರ್ಕಾರದ ಮಾತಿಗಿಂತ ನಕ್ಸಲೀಯರ ಮಾತು ನಡೆಯುತ್ತಿದೆ. ಭದ್ರತಾ ಸಿಬ್ಬಂದಿಯನ್ನು ಕೊಲ್ಲುವ ಮೂಲಕ ಹಾಗೂ ಆಸ್ತಿಯನ್ನು ಲೂಟಿ ಮಾಡುವ ಮೂಲಕ ನಕ್ಸಲೀಯರು ಪ್ರಭುತ್ವಕ್ಕೆ ನಷ್ಟ ಉಂಟುಮಾಡಿದ್ದಾರೆ.

ADVERTISEMENT

ದೇಶದ ಮಧ್ಯ ಭಾಗದಲ್ಲಿ ಹಾಗೂ ಪೂರ್ವ ಭಾಗದಲ್ಲಿ ನಕ್ಸಲೀಯರು ತಮ್ಮ ಚಟುವಟಿಕೆಗಳನ್ನು ಕೇಂದ್ರೀಕರಿಸಿದ್ದಾರೆ. ಈ ಭಾಗಗಳಲ್ಲಿ ಬುಡಕಟ್ಟು ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲೆ ಕಂಡುಕೊಂಡಿವೆ. ದೇಶದಲ್ಲಿ ಅತ್ಯಂತ ಹೆಚ್ಚು ದೌರ್ಜನ್ಯಕ್ಕೆ ಒಳಗಾಗಿರುವ ಬುಡಕಟ್ಟು ಸಮುದಾಯಗಳ ಬೆಂಬಲಕ್ಕೆ ನಿಲ್ಲುವ ಮೂಲಕ, ಅವರ ಪರವಾಗಿ ಮಾತನಾಡುವ ಮೂಲಕ ನಕ್ಸಲೀಯರು ಆ ಸಮುದಾಯಗಳ ಅನುಕಂಪ ಪಡೆದುಕೊಳ್ಳುವ ಯತ್ನ ನಡೆಸಿದ್ದಾರೆ. ಆದರೆ ಸರ್ಕಾರವು ಅಭಿವೃದ್ಧಿ, ಒಳ್ಳೆಯ ಆಡಳಿತ ಹಾಗೂ ಒಳ್ಳೆಯ ಮನಸ್ಸಿನಿಂದ ಈ ಸಮುದಾಯಗಳಿಗೆ ಹತ್ತಿರವಾಗಲು ಯತ್ನಿಸಿದ ಸಂದರ್ಭಗಳಲ್ಲಿ ನಕ್ಸಲೀಯರು ಇದೇ ಸಮುದಾಯಗಳ ಬೆಂಬಲವನ್ನು ಕಳೆದುಕೊಂಡಿದ್ದೂ ಇದೆ.

ಇದು ಒಂದು ಪಾಠವನ್ನು ಹೇಳುತ್ತಿದೆ. ಅಂದರೆ, ಮಾವೊವಾದಿಗಳನ್ನು ಇಲ್ಲವಾಗಿಸುವ ಮೂಲಕ ಮಾವೊವಾದವನ್ನು ಇಲ್ಲವಾಗಿಸಲು ಆಗದು; ಬದಲಿಗೆ, ಸಮಾಜದ ಕೆಲವು ವರ್ಗಗಳಿಗೆ ಮಾವೊವಾದವು ಆಕರ್ಷಕ ಅನ್ನಿಸುವಂತೆ ಮಾಡುವ ಕಾರಣಗಳನ್ನು ನಿರ್ಮೂಲಗೊಳಿಸಬೇಕು. ಮಾವೊವಾದಿಗಳು ತಮ್ಮಲ್ಲಿ ವಿಕೇಂದ್ರೀಕರಣದ ಮಾದರಿಯನ್ನು ಅಳವಡಿಸಿಕೊಂಡು, ದೇಶದ ಬೇರೆ ಬೇರೆ ಭಾಗಗಳಲ್ಲಿ ಸಣ್ಣ ಸಣ್ಣ ಗುಂಪುಗಳಲ್ಲಿ ಹಂಚಿಹೋಗಿದ್ದಾರೆ. ಇದು ಅವರನ್ನು ಭೌತಿಕವಾಗಿ ಇಲ್ಲವಾಗಿಸುವುದನ್ನು ಬಹಳ ಕಷ್ಟಕರವಾಗಿಸಿದೆ. ಹೀಗಾಗಿ, ಮಾವೊವಾದವನ್ನು ವಿರೋಧಿಸುವ ಕಾರ್ಯತಂತ್ರವು ಬಲಪ್ರಯೋಗಕ್ಕಿಂತ ಮಿಗಿಲಾಗಿ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.