ADVERTISEMENT

ಸಂಪಾದಕೀಯ | ಲೋಕಸಭೆ ಚುನಾವಣೆ ಫಲಿತಾಂಶ: ಪ್ರಜಾಪ್ರಭುತ್ವಕ್ಕೆ ಸಂದ ಗೆಲುವು

ಸಂಪಾದಕೀಯ
Published 5 ಜೂನ್ 2024, 0:28 IST
Last Updated 5 ಜೂನ್ 2024, 0:28 IST
   

ಹದಿನೆಂಟನೇ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ನ್ಯಾಷನಲ್‌ ಡೆಮಾಕ್ರಟಿಕ್‌ ಅಲಯನ್ಸ್‌ (ಎನ್‌ಡಿಎ) ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಏರುವ ಸಾಧ್ಯತೆ ಇದೆ. ಆದರೆ, ಈಗಿನ ಸಂದರ್ಭವನ್ನು ಚಾರಿತ್ರಿಕ ಎಂದು ಪರಿಗಣಿಸಬೇಕಾಗುತ್ತದೆ. ಈ ಹಿಂದೆ ಪಕ್ಷವೊಂದು ಒಂದು ಬಾರಿ ಮಾತ್ರ ಸತತ ಮೂರನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿತ್ತು. 1962ರಲ್ಲಿ ಜವಾಹರಲಾಲ್‌ ನೆಹರೂ ಅವರು ಸತತ ಮೂರನೇ ಬಾರಿ ಅಧಿಕಾರಕ್ಕೆ ಏರಿದ್ದರು. ಆಗ, ಸ್ವಲ್ಪ ದುರ್ಬಲ ವಾಗಿದ್ದ ಕಾಂಗ್ರೆಸ್‌ ಮತ್ತು ನೆಹರೂ ಚುನಾವಣೆ ಎದುರಿಸಿ, ಗೆದ್ದಿದ್ದರು. ಆದರೆ, ಈ ಬಾರಿ ಭಾರಿ ಪ್ರಬಲ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ಎದುರಿಸಿತ್ತು. ಎನ್‌ಡಿಎ 400 ಕ್ಷೇತ್ರಗಳಲ್ಲಿ
ಗೆಲ್ಲಲಿದೆ, ಬಿಜೆಪಿಯೊಂದಕ್ಕೇ ಮೂರನೇ ಎರಡರಷ್ಟು ಬಹುಮತ ಬರಲಿದೆ ಎಂದು ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ನಾಯಕರು ಹೇಳಿಕೊಂಡಿದ್ದರು. ಆದರೆ, ಬಿಜೆಪಿಗೆ ಸರಳ ಬಹುಮತವೂ ಬಂದಿಲ್ಲ. ಹಾಗಾಗಿ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ನೈತಿಕವಾಗಿ ಮತ್ತು ರಾಜಕೀಯವಾಗಿ ಸೋಲು ಉಂಟಾಗಿದೆ. ನರೇಂದ್ರ ಮೋದಿ ಅವರಿಗೆ ಇದು ವೈಯಕ್ತಿಕವಾದ ಸೋಲು. ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಲಿದೆ ಎಂಬುದಕ್ಕಿಂತ ವಿರೋಧ ಪಕ್ಷವಾಗಿ ಕಾಂಗ್ರೆಸ್‌ ಪಕ್ಷವು ಪುನಶ್ಚೇತನಗೊಂಡ ರೀತಿಯನ್ನು ಚಾರಿತ್ರಿಕ ಎಂದು ಬಣ್ಣಿಸಬಹುದು. ಅತ್ಯಂತ ದುರ್ಬಲ ವಾಗಿದ್ದ ಕಾಂಗ್ರೆಸ್‌ ಈಗಿನ ಪುನಶ್ಚೇತನಕ್ಕಾಗಿ ಕಠಿಣ ಹೋರಾಟವನ್ನೇ ನಡೆಸಿದೆ. ಕಾಂಗ್ರೆಸ್‌ ಅಲ್ಲದೆ ಇತರ ವಿರೋಧ ಪಕ್ಷಗಳು ಕೂಡ ಏಟು ತಿಂದು, ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಕೇಂದ್ರೀಯ ಸಂಸ್ಥೆಗಳ ಕಿರುಕುಳಕ್ಕೆ ಒಳಗಾಗಿ ದಿಕ್ಕು ತೋಚದಂತಿದ್ದವು. ಕೆಲವು ನಾಯಕರು ಜೈಲುಪಾಲಾಗಿದ್ದರು. ಇಂತಹ ದಯನೀಯ ಸ್ಥಿತಿಯಿಂದ ಈ ಪಕ್ಷಗಳು ಮೇಲೆದ್ದು ಬಂದ ರೀತಿ ಚಾರಿತ್ರಿಕ. ಈಗಿನ ಚುನಾವಣೆ ಮಾತ್ರವಲ್ಲ ಮುಂದಿನ ಚುನಾವಣೆಗಳಲ್ಲೂ ಗೆಲುವು ತನ್ನದೇ ಎಂದು ಅತಿಯಾದ ಆತ್ಮವಿಶ್ವಾಸದ ಲ್ಲಿದ್ದ ಆಡಳಿತ ಪಕ್ಷಕ್ಕೆ ದೊಡ್ಡ ಸವಾಲು ಒಡ್ಡಲು ಈ ಪಕ್ಷಗಳು ಈಗ ಸಜ್ಜಾಗಿವೆ. ‘ಇಂಡಿಯಾ’ ಮೈತ್ರಿಕೂಟ ದೊಡ್ಡ ಸಾಧನೆಯನ್ನೇ ಮಾಡಿದೆ. 

ಕಾಂಗ್ರೆಸ್‌ಮುಕ್ತ ಮತ್ತು ವಿರೋಧ ಪಕ್ಷ ಮುಕ್ತ ಭಾರತ ತನ್ನ ಗುರಿ ಎಂದು ಬಿಜೆಪಿ ಘೋಷಿಸಿಕೊಂಡಿತ್ತು. ಆದರೆ, ಈಗ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಬಲವಾಗಿ ನಿಲ್ಲಲಿವೆ. ಕಾಂಗ್ರೆಸ್‌ ಪಕ್ಷವು ಪಡೆದ ಸ್ಥಾನಗಳ ಸಂಖ್ಯೆಯು ಈ ಹಿಂದಿಗಿಂತ ದುಪ್ಪಟ್ಟಾಗಿದೆ. ಹಿಂದೆಂದಿಗಿಂತಲೂ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಆ ಪಕ್ಷವು ಪಡೆದ ಮತ ಪ್ರಮಾಣದಲ್ಲಿಯೂ ಏರಿಕೆ ಆಗಿದೆ. ‘ಇಂಡಿಯಾ’ ಮೈತ್ರಿಕೂಟವು ಸುಸಂಬದ್ಧವಾಗಿ, ಸುಸಂಘಟಿತವಾಗಿ ಇರಲಿಲ್ಲ. ಮೈತ್ರಿಕೂಟದೊಳಗಿನ ಕೆಲವು ಪಕ್ಷಗಳು ಪರಸ್ಪರ ಸ್ಪರ್ಧೆಗಿಳಿದಿದ್ದವು. ಹಾಗಿದ್ದರೂ ಹೆಚ್ಚಿನ ಪಕ್ಷಗಳು ಲಾಭ ಮಾಡಿಕೊಂಡಿವೆ. ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿ ಅನೇಕ ಕಡೆ ಕ್ಷೇತ್ರಗಳನ್ನು ಕಳೆದುಕೊಂಡಿದೆ ಮತ್ತು ಹೆಚ್ಚು ಸ್ಥಾನಗಳನ್ನು ಗಳಿಸಿಕೊಳ್ಳುವ ನಿರೀಕ್ಷೆ ಇದ್ದಲ್ಲಿಯೂ ಆ ನಿರೀಕ್ಷೆ ಈಡೇರಿಲ್ಲ. ಮಿತ್ರಪಕ್ಷಗಳ ಅದರಲ್ಲೂ ಮುಖ್ಯವಾಗಿ ನಾರಾ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಮತ್ತು ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಬೆಂಬಲದಲ್ಲಿ ಮಾತ್ರ ಬಿಜೆಪಿಯು ಸರ್ಕಾರ ರಚಿಸಲು ಸಾಧ್ಯ. 

ಬಿಜೆಪಿ ನಡೆಸಿದ ಚುನಾವಣಾ ಪ್ರಚಾರವು ದೇಶ ಮತ್ತು ಸಮಾಜವನ್ನು ಒಗ್ಗೂಡಿಸುವ ಬದಲಿಗೆ ವಿಭಜಿಸುವ ರೀತಿಯಲ್ಲಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಧಾರ್ಮಿಕ ನೆಲೆಯಲ್ಲಿ ಧ್ರುವೀಕರಿಸಲು ತಮ್ಮಿಂದಾದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದರು. ಮುಸ್ಲಿಮರನ್ನು ಗುರಿಯಾಗಿಸಿ ಹಲವು ಆರೋಪಗಳನ್ನು ಮಾಡಿದ್ದರು. ವಿರೋಧ ಪಕ್ಷಗಳ ನಾಯಕರನ್ನು ಖಳರು ಎಂಬಂತೆ ಚಿತ್ರಿಸಿದ್ದರು. ಕಾಂಗ್ರೆಸ್‌ ಪಕ್ಷವು ಮುಸ್ಲಿಮರ ಹಿತಾಸಕ್ತಿಯನ್ನು ಮಾತ್ರ ಕಾಯುತ್ತದೆ ಎಂದಿದ್ದರು. ಬಿಜೆಪಿ ನಡೆಸಿದ ದ್ವೇಷ ರಾಜಕಾರಣವು ಮತದಾರನಿಗೆ ಒಪ್ಪಿಗೆ ಆಗಿಲ್ಲ ಎಂಬುದನ್ನು ಫಲಿತಾಂಶವು ಹೇಳುತ್ತದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಬಾಲರಾಮ ಮೂರ್ತಿಯ ಪ್ರತಿಷ್ಠಾಪನೆಯು ಬಿಜೆಪಿ ನಿರೀಕ್ಷಿಸಿದ ರೀತಿಯಲ್ಲಿ ಫಲ ಕೊಟ್ಟಿಲ್ಲ. ವಿರೋಧ ಪಕ್ಷಗಳು ಮುಖ್ಯವಾಗಿ ಇರಿಸಿಕೊಂಡಿದ್ದ ಬೆಲೆ ಏರಿಕೆ ಮತ್ತು ನಿರುದ್ಯೋಗದಂತಹ ವಿಚಾರಗಳೇ ಮುನ್ನೆಲೆಯಲ್ಲಿ ಉಳಿದವು. ಈ ಫಲಿತಾಂಶವು ಪ್ರಜಾಪ್ರಭುತ್ವದ ಗೆಲುವು. ಪ್ರಜಾಪ್ರಭುತ್ವ ಮತ್ತು ಅದರ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಪ್ರಹಾರ ನಡೆಯುತ್ತಲೇ ಇದೆ. ಜನಾದೇಶವನ್ನು, ಸರ್ಕಾರಗಳನ್ನು ಬುಡಮೇಲು ಮಾಡುವ ಕೃತ್ಯಗಳು ಸಾಮಾನ್ಯವಾಗಿದ್ದವು. ಸಾಂವಿಧಾನಿಕ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಗ್ಗಿಲ್ಲದೆ ನಡೆದಿತ್ತು. ಟೀಕಾಕಾರರು ಮತ್ತು ಭಿನ್ನಮತ ಹೊಂದಿದವರನ್ನು ನಿರ್ದಯವಾಗಿ ದಮನ ಮಾಡುವ ಕೆಲಸ ನಡೆದಿತ್ತು. ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲಾಗಿತ್ತು. ಈಗ ಬಂದಿರುವ ಜನಾದೇಶವು ಪ್ರಜಾಪ್ರಭುತ್ವದ ನಿರ್ಲಕ್ಷ್ಯ, ಅಧಿಕಾರದ ದುರುಪಯೋಗ, ಅಧಿಕಾರದ ಅಹಂ ವಿರುದ್ಧದ ಎಚ್ಚರಿಕೆಯಾಗಿದೆ. ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಮೊಟಕುಗೊಳಿಸುವುದನ್ನು ಭಾರತದ ಮತದಾರ ಯಾವತ್ತೂ ಸಹಿಸುವುದಿಲ್ಲ. ಸರ್ವಾಧಿಕಾರವನ್ನೂ ಒಪ್ಪುವುದಿಲ್ಲ. ಒಬ್ಬ ವ್ಯಕ್ತಿಯು ಪಕ್ಷ, ಸಮಾಜ, ದೇಶ ಎಲ್ಲವನ್ನೂ ಮೀರಿ ಬೆಳೆದಿದ್ದಾನೆ ಎಂಬಂತೆ ಬಿಂಬಿಸುವ ವ್ಯಕ್ತಿಪೂಜೆಯನ್ನೂ ಮತದಾರ ಸಹಿಸುವುದಿಲ್ಲ ಎಂಬುದರ ಉದಾಹರಣೆ ಈಗಿನ ಫಲಿತಾಂಶ. ಪ್ರಜಾಪ್ರಭುತ್ವಕ್ಕೆ ನಾಯಕರು ಬೇಕೇ ವಿನಾ ಅತಿಮಾನವರು, ದೇವಮಾನವರು ಬೇಕಾಗಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಮತದಾರ ನೀಡಿದ್ದಾನೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.