ADVERTISEMENT

ಸಂಪಾದಕೀಯ: ಹಂಗಾಮಿ ಸ್ಪೀಕರ್‌ ಆಯ್ಕೆ– ಸದನದ ಸಂಪ್ರದಾಯ ಕಡೆಗಣಿಸುವುದು ಸರಿಯಲ್ಲ

ಸಂಪಾದಕೀಯ

ಸಂಪಾದಕೀಯ
Published 23 ಜೂನ್ 2024, 23:31 IST
Last Updated 23 ಜೂನ್ 2024, 23:31 IST
<div class="paragraphs"><p>ಸಂಪಾದಕೀಯ: ಹಂಗಾಮಿ ಸ್ಪೀಕರ್‌ ಆಯ್ಕೆ– ಸದನದ ಸಂಪ್ರದಾಯ ಕಡೆಗಣಿಸುವುದು ಸರಿಯಲ್ಲ</p></div>

ಸಂಪಾದಕೀಯ: ಹಂಗಾಮಿ ಸ್ಪೀಕರ್‌ ಆಯ್ಕೆ– ಸದನದ ಸಂಪ್ರದಾಯ ಕಡೆಗಣಿಸುವುದು ಸರಿಯಲ್ಲ

   

ಹದಿನೆಂಟನೇ ಲೋಕಸಭೆಯ ಮೊದಲ ಅಧಿವೇಶನವೇ ಸಂಘರ್ಷಾತ್ಮಕವಾಗಿ ಇರಬಹುದು ಎಂಬುದರ ಸುಳಿವು ಹೊರಬಿದ್ದಿದೆ. ಹಂಗಾಮಿ ಸ್ಪೀಕರ್‌ ಆಗಿ ಕಾಂಗ್ರೆಸ್‌ ‍ಪಕ್ಷದ ಕೋಡಿಕುನ್ನಿಲ್‌ ಸುರೇಶ್‌ ಅವರ ಬದಲಿಗೆ ಬಿಜೆಪಿಯ ಭರ್ತೃಹರಿ ಮಹತಾಬ್‌ ಅವರನ್ನು ನೇಮಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಸುರೇಶ್‌ ಅವರು ಲೋಕಸಭೆಯ ಅತ್ಯಂತ ಹಿರಿಯ ಸದಸ್ಯ. ಅವರು ಎಂಟನೇ ಅವಧಿಗೆ ಸದಸ್ಯರಾಗಿದ್ದಾರೆ. ಮಹತಾಬ್‌ ಅವರದ್ದು ಇದು ಏಳನೇ ಅವಧಿ. ಯಾವುದೇ ಪಕ್ಷದವರು ಆಗಿರಲಿ, ಅತ್ಯಂತ ಹಿರಿಯ ಸದಸ್ಯನನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸುವುದು ಸಂಪ್ರದಾಯ. ಸಂಸದರಿಗೆ ಪ್ರತಿಜ್ಞಾವಿಧಿ ಬೋಧಿಸುವುದು ಮತ್ತು ಸ್ಪೀಕರ್‌ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಡುವುದು ಹಂಗಾಮಿ ಸ್ಪೀಕರ್‌ ಅವರ ಹೊಣೆಗಾರಿಕೆ. ಹಂಗಾಮಿ ಸ್ಪೀಕರ್‌ ಎಂಬುದು ತಾತ್ಕಾಲಿಕ ಹುದ್ದೆ ಮತ್ತು ಸಾಮಾನ್ಯವಾಗಿ ಅವರ ಅಧಿಕಾರಾವಧಿಯು ಮೂರು ದಿನಕ್ಕೆ ಮುಗಿದುಹೋಗುತ್ತದೆ. ಅತ್ಯಂತ ಹಿರಿಯ ಸದಸ್ಯನನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸುವುದು ಔಪಚಾರಿಕತೆ. ಯಾವುದೇ ವಿವಾದಾತ್ಮಕ ತೀರ್ಮಾನಗಳನ್ನು ಕೈಗೊಳ್ಳುವ ಅಥವಾ ಆದೇಶ ನೀಡುವ ಅವಕಾಶ ಹಂಗಾಮಿ ಸ್ಪೀಕರ್‌ಗೆ ಇಲ್ಲ. ಹೊಸ ಸ್ಪೀಕರ್‌ ಆಯ್ಕೆಯೊಂದಿಗೆ ಹಂಗಾಮಿ ಸ್ಪೀಕರ್‌ ಅಧಿಕಾರ ಕೊನೆಗೊಳ್ಳುತ್ತದೆ. 

ಸರ್ಕಾರವು ವಿಚಿತ್ರ ಮತ್ತು ಸ್ವೀಕಾರಾರ್ಹವಲ್ಲದ ನೆಪವನ್ನು ಮುಂದಿಟ್ಟು ಮಹತಾಬ್‌ ಅವರ ನೇಮಕವನ್ನು ಸಮರ್ಥಿಸಿಕೊಂಡಿದೆ. ಮಹತಾಬ್‌ ಅವರು ಸತತ ಏಳು ಅವಧಿಗೆ ಸಂಸದರಾಗಿದ್ದಾರೆ. ಆದರೆ, ಸುರೇಶ್‌ ಅವರು ನಿರಂತರವಾಗಿ ಎಂಟು ಅವಧಿಗೆ ಸಂಸದರಾಗಿರಲಿಲ್ಲ, ಮಧ್ಯದಲ್ಲಿ ಎರಡು ಬಾರಿ ಅವರು ಸಂಸದರಾಗಿ ಇರಲಿಲ್ಲ ಎಂಬುದು ಸರ್ಕಾರದ ಸಮರ್ಥನೆಯಾಗಿದೆ. ಈ ಸಮರ್ಥನೆಯಲ್ಲಿ ಹುರುಳಿಲ್ಲ. ಏಕೆಂದರೆ, ಅತಿ ದೀರ್ಘಕಾಲ ಸಂಸದರಾಗಿ ಅನುಭವ ಹೊಂದಿರುವ ಸದಸ್ಯನನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸುವುದು ಪದ್ಧತಿಯಾಗಿದೆ. ಮೇನಕಾ ಗಾಂಧಿ ಅವರ ಹೆಸರನ್ನು ಹಂಗಾಮಿ ಸ್ಪೀಕರ್‌ ಹುದ್ದೆಗೆ 2019ರಲ್ಲಿ ಬಿಜೆಪಿ ಪ್ರಸ್ತಾಪಿಸಿತ್ತು. ಅವರು ಕೂಡ ನಿರಂತರವಾಗಿ ಸಂಸದೆಯಾಗಿ ಇದ್ದವರಲ್ಲ. ಮಹತಾಬ್‌ ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸಿರುವುದು ಪ್ರಜ್ಞಾಪೂರ್ವಕವಾದ ನಿರ್ಧಾರ ಎಂಬುದರಲ್ಲಿ ಸಂದೇಹ ಇಲ್ಲ. ಈ ಬಾರಿ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಪ್ರಾಬಲ್ಯ ಹೆಚ್ಚಾಗಿದೆ. ಹಾಗಿದ್ದರೂ ವಿರೋಧ ಪಕ್ಷಗಳಿಗೆ ಯಾವುದೇ ಮನ್ನಣೆ ಕೊಡುವ ಮನಃಸ್ಥಿತಿಯಲ್ಲಿ ಸರ್ಕಾರ ಇಲ್ಲ ಎಂಬುದನ್ನು ತೋರಿಸುವುದು ಈ ನಿರ್ಧಾರದ ಹಿಂದಿನ ಉದ್ದೇಶ. ಇದು ಒಂದು ರಾಜಕೀಯ ಸಂದೇಶ. ಸುರೇಶ್‌ ಅವರು ದಲಿತ ಎಂಬ ಕಾರಣಕ್ಕೆ ಅವರಿಗೆ ಈ ಅವಕಾಶವನ್ನು ನಿರಾಕರಿಸಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಇದು ಕೂಡ ರಾಜಕೀಯವಾದ ಆರೋಪವೇ ಆಗಿದೆ. 

ADVERTISEMENT

ಟೀಕಾಕಾರರು, ಭಿನ್ನಮತೀಯರು ಮತ್ತು ವಿರೋಧ ಪಕ್ಷಗಳ ನಾಯಕರ ಕುರಿತು ತನ್ನ ಕಠಿಣ ನಿಲುವು ಮುಂದುವರಿಯಲಿದೆ ಎಂಬ ಸಂದೇಶವನ್ನೂ ಸರ್ಕಾರ ನೀಡಿದೆ. ಲೇಖಕಿ ಅರುಂಧತಿ ರಾಯ್‌ ಅವರ ವಿರುದ್ಧ ವಿಚಾರಣೆಗೆ ನೀಡಿದ ಅನುಮತಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಜಾಮೀನಿಗೆ ಜಾರಿ ನಿರ್ದೇಶನಾಲಯವು ಒಡ್ಡಿದ ವಿರೋಧ ಈ ಅಂಶವನ್ನು ದೃಢಪಡಿಸುತ್ತವೆ. ಸಂಸತ್ತಿನಲ್ಲಿ ಕೂಡ ವಿರೋಧ ಪಕ್ಷಗಳ ಕುರಿತು ಹಗೆತನದ ನೀತಿಯನ್ನು ಸರ್ಕಾರ ಅನುಸರಿಸುತ್ತಿರುವುದು ದುರದೃಷ್ಟಕರ. 17ನೇ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರ ಅಮಾನತು, ಉಚ್ಚಾಟನೆ ಮತ್ತು ಅನರ್ಹತೆ ಎಗ್ಗಿಲ್ಲದೇ ನಡೆದಿತ್ತು. ಆಡಳಿತ ಪ‍ಕ್ಷ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ತೀವ್ರವಾದ ವಾಗ್ವಾದಗಳು ನಡೆದಿದ್ದವು. ಸರ್ಕಾರದ ಬಿಗಿ ಹಿಡಿತದಿಂದಾಗಿ ಫಲಪ್ರದವಾದ ಸಂವಾದ ನಡೆದಿರಲಿಲ್ಲ. ಶಾಸನ ರೂಪಿಸುವಿಕೆಯೂ ಪರಿಣಾಮಕಾರಿಯಾಗಿ ನಡೆಯಲಿಲ್ಲ. ಲೋಕಸಭೆಯಲ್ಲಿ ಉಪ ಸ್ಪೀಕರ್‌ ಇರಬೇಕು ಎಂಬುದು ಸಾಂವಿಧಾನಿಕ ಅಗತ್ಯ. ಆದರೆ, ಕಳೆದ ಲೋಕಸಭೆಯಲ್ಲಿ ಉಪ ಸ್ಪೀಕರ್‌ ಆಯ್ಕೆಯನ್ನೇ ಮಾಡಲಿಲ್ಲ. ಈ ಬಾರಿಯ ಲೋಕಸಭೆ ಹೆಚ್ಚು ಫಲಪ್ರದವಾಗಿ ಕೆಲಸ ಮಾಡಬಹುದು ಎಂಬ ಭರವಸೆ ಇದೆ. ಹಂಗಾಮಿ ಸ್ಪೀಕರ್‌ಗೆ ನೆರವಾಗಲು ರೂಪಿಸಲಾದ ಸಹಾಯಕರ ಸಮಿತಿಯಲ್ಲಿರುವ ವಿರೋಧ ಪಕ್ಷದ ಸದಸ್ಯರು ತಮ್ಮ ಕರ್ತವ್ಯವನ್ನು ನೆರವೇರಿಸದಿರಲು ನಿರ್ಧರಿಸಿದ್ದಾರೆ. ಸುರೇಶ್‌ ಅವರನ್ನು ಕಡೆಗಣಿಸಿರು
ವುದಕ್ಕೆ ಇದು ಪ್ರತಿಭಟನೆ. ಪರಿಸ್ಥಿತಿ ಇನ್ನಷ್ಟು ತೀಕ್ಷ್ಣಗೊಳ್ಳುವ ಸುಳಿವುಗಳು ಕಾಣಿಸಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.