‘ಉತ್ತರಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯ್ದೆ– 2004’ರ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯುವ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಕೆಲಸ ಮಾಡಿದೆ. ಅಲ್ಲದೆ, ದೇಶದ ಸಂವಿಧಾನದ ಧರ್ಮನಿರಪೇಕ್ಷ ತತ್ವಗಳನ್ನು ರಕ್ಷಿಸಲಾಗುತ್ತದೆ ಎಂಬ ಭರವಸೆಯನ್ನು ಸುಪ್ರೀಂ ಕೋರ್ಟ್ ಈ ತೀರ್ಪಿನ ಮೂಲಕ ನೀಡಿದೆ. ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದವರು ಸೇರಿದಂತೆ, ವಿವಿಧ ಧಾರ್ಮಿಕ ಸಮುದಾಯಗಳಿಗೆ ಸೇರಿದವರ ಸಂಸ್ಥೆಗಳ ಅಧೀನದಲ್ಲಿ ಇರುವ ಶಿಕ್ಷಣ ಸಂಸ್ಥೆಗಳ ಸಂಖ್ಯೆ ದೊಡ್ಡದಾಗಿಯೇ ಇದೆ. ಈ ಕಾರಣದಿಂದಾಗಿ ಸುಪ್ರೀಂ ಕೋರ್ಟ್‌ನ ಈ ತೀರ್ಪು ಮಹತ್ವ ಪಡೆದುಕೊಳ್ಳುತ್ತದೆ. ಮದರಸಾಗಳನ್ನು ಆರಂಭಿಸುವುದು, ಸಂವಿಧಾನವು ಧಾರ್ಮಿಕ ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ನೀಡಿರುವ ಹಕ್ಕಿಗೆ ಅನುಗುಣವಾಗಿಯೇ ಇದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಆದರೆ, ಅವು ಒದಗಿಸುವ ಶಿಕ್ಷಣದ ಗುಣಮಟ್ಟದ ಮೇಲೆ ಕಾನೂನಿನ ನಿಯಂತ್ರಣ ಇರುವಂತಾಗಲು ಶಾಸನವೊಂದರ ಅಗತ್ಯವನ್ನು ಕೋರ್ಟ್ ಅನುಮೋದಿಸಿದೆ. ಮದರಸಾಗಳಲ್ಲಿನ
ಶಿಕ್ಷಣ ಕ್ರಮಕ್ಕೆ ಸಂಬಂಧಿಸಿದ ಈ ಕಾಯ್ದೆಯನ್ನು ಅಲಹಾಬಾದ್ ಹೈಕೋರ್ಟ್ ರದ್ದುಪಡಿಸಿದ ನಂತರದಲ್ಲಿ, ಉತ್ತರಪ್ರದೇಶದ ಮದರಸಾಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ಮದರಸಾಗಳಲ್ಲಿ ಆಧುನಿಕ ಜ್ಞಾನ
ಶಾಖೆಗಳನ್ನು ಇಸ್ಲಾಮಿಕ್ ಪಠ್ಯಗಳ ಜೊತೆಯಲ್ಲೇ ಕಲಿಸಲಾಗುತ್ತದೆ. ಈ ಶಿಕ್ಷಣ ಸಂಸ್ಥೆಗಳು ಸಂವಿಧಾನ ಹೇಳುವ ಧರ್ಮನಿರಪೇಕ್ಷ ತತ್ವವನ್ನು ಉಲ್ಲಂಘಿಸುತ್ತಿವೆ ಎಂದು ಹೈಕೋರ್ಟ್ ಹೇಳಿತ್ತು.
ಮದರಸಾಗಳಲ್ಲಿ ಅಭ್ಯಾಸ ಮಾಡುತ್ತಿರುವ ಲಕ್ಷಾಂತರ ಮಂದಿ ವಿದ್ಯಾರ್ಥಿಗಳನ್ನು ಹೈಕೋರ್ಟ್ ಆದೇಶದ ಪರಿಣಾಮವಾಗಿ ಸಾಂಪ್ರದಾಯಿಕ ಶಾಲೆಗಳಿಗೆ ಕಳುಹಿಸಬೇಕಾದ ಅಗತ್ಯ ಎದುರಾಗುತ್ತದೆ, ಮದರಸಾಗಳು ಅಸಂಗತ ಆಗುತ್ತವೆ ಎಂಬ ಆತಂಕ ವ್ಯಕ್ತವಾಗಿತ್ತು. ಆದರೆ ಈ ಆತಂಕವನ್ನು ಸುಪ್ರೀಂ ಕೋರ್ಟ್ ದೂರ
ಮಾಡಿದೆ. ಮದರಸಾಗಳು ವಹಿಸಿರುವ ಮಹತ್ವದ ಪಾತ್ರವನ್ನು ಸುಪ್ರೀಂ ಕೋರ್ಟ್ ಗುರುತಿಸಿದೆ. ಇದರ ಜೊತೆಯಲ್ಲೇ, ರಾಜ್ಯದಲ್ಲಿ 13,364 ಮದರಸಾಗಳು 12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿವೆ ಎಂಬುದನ್ನು ಕೋರ್ಟ್ ಗುರುತಿಸಿದೆ. ‘ಮದರಸಾಗಳು ಧಾರ್ಮಿಕ ಬೋಧನೆಯಲ್ಲಿ ತೊಡಗಿವೆಯಾದರೂ, ಅವುಗಳ ಮೂಲ ಉದ್ದೇಶ ಶಿಕ್ಷಣ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಬೇಕಾದ ಹೊಣೆ ಸರ್ಕಾರಗಳ ಮೇಲೆ ಇದೆಯಾದರೂ, ತಮ್ಮ ಸಂಸ್ಥೆಗಳ ವಿಚಾರವಾಗಿ ಧಾರ್ಮಿಕ ಅಲ್ಪಸಂಖ್ಯಾತರು ಹೊಂದಿರುವ ಹಕ್ಕುಗಳು ಈ ಹೊಣೆಗೆ ಅಡ್ಡಿಯಾಗುವ ರೀತಿ
ಯಲ್ಲೇನೂ ಇಲ್ಲ. ‘ಶಿಕ್ಷಣ ಸಂಸ್ಥೆಯೊಂದನ್ನು ಅಲ್ಪಸಂಖ್ಯಾತ ಸಮುದಾಯ ನಡೆಸುತ್ತಿದೆ ಎಂದಮಾತ್ರಕ್ಕೆ ಅಥವಾ ಬಹುಸಂಖ್ಯಾತ ಸಮುದಾಯ ನಡೆಸುತ್ತಿದೆ ಹಾಗೂ ಅದು ಆ ಸಮುದಾಯದ ಬೋಧನೆ
ಗಳನ್ನು ಹೇಳಿಕೊಡುತ್ತಿದೆ ಎಂದಮಾತ್ರಕ್ಕೆ, ಅಂತಹ ಸಂಸ್ಥೆಗಳಲ್ಲಿನ ಬೋಧನೆಗಳು ಶಿಕ್ಷಣದ ವ್ಯಾಪ್ತಿಗೆ ಹೊರತಾಗಿವೆ ಎನ್ನಲಾಗದು’ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಮದರಸಾಗಳ ಮೇಲೆ ಉತ್ತರಪ್ರದೇಶ ಮಾತ್ರವೇ ಅಲ್ಲದೆ ಬೇರೆ ರಾಜ್ಯಗಳಲ್ಲಿಯೂ ಒಂದಿಷ್ಟು ಒತ್ತಡಗಳು ಇವೆ. ಅದರಲ್ಲೂ ಮುಖ್ಯವಾಗಿ ಅಸ್ಸಾಂ ಹಾಗೂ ಮಧ್ಯಪ್ರದೇಶದಲ್ಲಿ ಈ ಸಮಸ್ಯೆ ಇದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗವು (ಎನ್‌ಸಿಪಿಸಿಆರ್) ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಈಚೆಗೆ ಪತ್ರವೊಂದನ್ನು ಬರೆದು, ಮದರಸಾ ಮಂಡಳಿಗಳನ್ನು ಮುಚ್ಚಬೇಕು, ಸರ್ಕಾರದಿಂದ ಈ ಸಂಸ್ಥೆಗಳಿಗೆ ಕೊಡುವ ಅನುದಾನ ನಿಲ್ಲಿಸಬೇಕು, ಆ ಸಂಸ್ಥೆಗಳಲ್ಲಿ ಓದುತ್ತಿರುವ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಬೇಕು ಎಂದು ಶಿಫಾರಸು ಮಾಡಿದೆ. ಮದರಸಾಗಳಲ್ಲಿ ಮಕ್ಕಳಿಗೆ ಒದಗಿಸುವ ಶಿಕ್ಷಣವು ಸಮಗ್ರವಾಗಿ ಇಲ್ಲ, ಅದು ಸೂಕ್ತವಾಗಿಲ್ಲ ಎಂದು ಎನ್‌ಸಿಪಿಸಿಆರ್ ಹೇಳಿದೆ. ಈ ಸಂಸ್ಥೆಗಳು ಶಿಕ್ಷಣ ಹಕ್ಕು ಕಾಯ್ದೆಯ ಆಶಯಗಳನ್ನು ಪಾಲಿಸುತ್ತಿಲ್ಲ ಎಂದು ದೂರಿದೆ. ಎನ್‌ಸಿಪಿಸಿಆರ್‌ನ ಈ ಕ್ರಮ ಹಾಗೂ ಕೆಲವು ರಾಜ್ಯ ಸರ್ಕಾರಗಳ ಕ್ರಮವನ್ನು ಮುಸ್ಲಿಂ ಸಮುದಾಯ ಮತ್ತು ಅದಕ್ಕೆ ಸೇರಿದ ಸಂಸ್ಥೆಗಳನ್ನು ಗುರಿಯಾಗಿಸಿಕೊಳ್ಳುವ ಕ್ರಮವೆಂದೇ ಪರಿಗಣಿಸಬೇಕಾಗುತ್ತದೆ. ಈಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ಮದರಸಾಗಳ ವಿರುದ್ಧದ ಅಭಿಯಾನವನ್ನು ಎದುರಿಸಲು ನೆರವಾಗುತ್ತದೆ. ವಿವಿಧ ಧರ್ಮ ಹಾಗೂ ಸಂಸ್ಕೃತಿಗಳ ಸಂಗಮ ಎಂದು ಪರಿಗಣಿತವಾಗಿರುವ ಈ ದೇಶದಲ್ಲಿ ಮದರಸಾಗಳ ಮಹತ್ವದ ಪಾತ್ರವನ್ನು ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.