ADVERTISEMENT

ಸಂಪಾದಕೀಯ: ಸಂಸತ್ತಿನಲ್ಲಿ ಪ್ರಧಾನಿ ಮೋದಿ ಭಾಷಣ- ವೈಫಲ್ಯ ಮರೆಮಾಚಲು ದೂಷಣೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 20:45 IST
Last Updated 9 ಫೆಬ್ರುವರಿ 2022, 20:45 IST
ಸಂಪಾದಕೀಯ
ಸಂಪಾದಕೀಯ   

ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಯವರು ಮಾಡಿದ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ಕೊಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಡಿದ ಮಾತುಗಳು ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ರಾಜ್ಯಗಳ ಮತದಾರರನ್ನು ಉದ್ದೇಶಿಸಿದ್ದಂತೆ ಕಾಣುತ್ತಿವೆ.

ಲೋಕಸಭೆಯಲ್ಲಿಯೂ ರಾಜ್ಯಸಭೆಯಲ್ಲಿಯೂ ಪ್ರಧಾನಿಯವರು ಆಡಿದ ಮಾತುಗಳ ಧಾಟಿ, ಮತ ಚಲಾಯಿಸಲು ಸಿದ್ಧರಾಗಿ ನಿಂತವರನ್ನು ಉದ್ದೇಶಿಸಿ ಆಡಿದಂತೆ ಇತ್ತು. ಪ್ರಧಾನಿಯವರು ತಮ್ಮ ಸರ್ಕಾರದ ನೀತಿ ಹಾಗೂ ರಾಷ್ಟ್ರಪತಿಯವರ ಭಾಷಣದಲ್ಲಿ ಅಡಕವಾಗಿದ್ದ ಅಂಶಗಳ ಸಮರ್ಥನೆಯ ಹಂತವನ್ನು ದಾಟಿದರು, ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರು.

ಅವರ ಮಾತಿನ ತೀವ್ರತೆ ಹಾಗೂ ಅಬ್ಬರ ಅದೆಷ್ಟಿತ್ತೆಂದರೆ, ಅವರು ಸದನದ ಒಳಗೆ ನಿಂತು ಸದನದ ಹೊರಗೆ ಇರುವವರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ ಎಂಬುದು ಖಚಿತವಾಗುತ್ತಿತ್ತು. ತಮ್ಮ ಮಾತು ಅವರ ಮೇಲೆ ಪ್ರಭಾವ ಬೀರಲಿ ಎಂಬ ಉದ್ದೇಶ ಪ್ರಧಾನಿಯವರಲ್ಲಿ ಇತ್ತು ಎಂಬುದು ಗೊತ್ತಾಗುತ್ತಿತ್ತು. ಅವರು ತಮ್ಮ ಮಾತಿನಲ್ಲಿ ಕೆಲವು ವಿಷಯಗಳನ್ನು ಪ್ರಸ್ತಾಪಿಸುವುದರಿಂದ ತಪ್ಪಿಸಿಕೊಂಡರು, ಘಟನೆಗಳನ್ನು ತಪ್ಪಾಗಿ ಉಲ್ಲೇಖಿಸಿದರು, ತಪ್ಪಾಗಿ ಅರ್ಥೈಸಿದರು.

ADVERTISEMENT

ವಿರೋಧ ಪಕ್ಷಗಳನ್ನು, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ಸನ್ನು, ಅನುಚಿತ ರೀತಿಯಲ್ಲಿ ಗುರಿಯಾಗಿಸಿಕೊಂಡು ಮಾತನಾಡಿದರು. ಅವರ ಮಾತುಗಳಲ್ಲಿ ಪ್ರತಿಭಟನೆಯ ಧೋರಣೆಯೇ ಹೆಚ್ಚಾಗಿತ್ತು. ಒಳ್ಳೆಯ ಅಭಿರುಚಿಯದ್ದಲ್ಲದ ವ್ಯಂಗ್ಯ, ಅಬ್ಬರ ಮಾತಿನಲ್ಲಿತ್ತು. ಟೀಕೆಗಳಿಗೆ ತರ್ಕಬದ್ಧವಾಗಿ ಉತ್ತರ ಕೊಡುವ ಬದಲು ತಮ್ಮ ಮಾತುಗಳನ್ನು ಎಲ್ಲರೂ ಆಲಿಸಲಿ ಎಂಬ ಧೋರಣೆ ಅಲ್ಲಿತ್ತು.

ಸರ್ಕಾರವು ಕೋವಿಡ್ ಸಾಂಕ್ರಾಮಿಕದ ನಿರ್ವಹಣೆಯನ್ನು ಸರಿಯಾಗಿ ಮಾಡಿಲ್ಲ ಎಂದು ಟೀಕಿಸಿದ ವಿರೋಧ ಪಕ್ಷಗಳ ಮೇಲೆಯೇ ಪ್ರಧಾನಿಯವರು ಒಂದಿಷ್ಟು ಆರೋಪ ಹೊರಿಸಲು ಯತ್ನಿಸಿದರು. ಮೊದಲ ಬಾರಿಯ ಲಾಕ್‌ಡೌನ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳುವಂತೆ ವಿರೋಧ ಪಕ್ಷಗಳು ಪ್ರಚೋದನೆ ನೀಡಿದ್ದವು ಎಂದು ಆರೋಪಿಸಿದರು.

ಇತಿಹಾಸದಲ್ಲಿ ಆಗಿಹೋಗಿರುವ ಸಂಗತಿಗಳನ್ನು ರಾಜಕೀಯ ಉದ್ದೇಶಕ್ಕೆ ತಿರುಚಿ ಹೇಳುವ ಪ್ರವೃತ್ತಿಯೊಂದು ದೇಶದಲ್ಲಿ ಈಚಿನ ದಿನಗಳಲ್ಲಿ ಗಾಢವಾಗಿ ಕಾಣಿಸುತ್ತಿದೆ. ವಲಸೆ ಕಾರ್ಮಿಕರು ಮೊದಲ ಲಾಕ್‌ಡೌನ್‌ ಸಂದರ್ಭದಲ್ಲಿ ಅನುಭವಿಸಿದ ಸಂಕಷ್ಟಕ್ಕೆ ವಿರೋಧ ಪಕ್ಷಗಳನ್ನು ಹೊಣೆ ಮಾಡುವುದು ಇತಿಹಾಸವನ್ನು ತಿರುಚಿ ಹೇಳುವುದಕ್ಕೆ ಸಮ.

ವಲಸೆ ಕಾರ್ಮಿಕರು ತಾವು ಇದ್ದ ನಗರಗಳಿಂದ ತಮ್ಮ ಊರುಗಳ ಕಡೆ ಮುಖ ಮಾಡುವ ಸಂದರ್ಭ ಸೃಷ್ಟಿಯಾಗಿದ್ದಕ್ಕೆ ಕಾರಣ ಸರ್ಕಾರ. ಅವರು ಅನುಭವಿಸಿದ ಯಾತನೆಗಳಿಗೆ ಹೊಣೆಯನ್ನು ಸರ್ಕಾರ ಹೊರಬೇಕು. ವಲಸೆ ಕಾರ್ಮಿಕರು ಎದುರಿಸಿದ ಸಂಕಷ್ಟದ ವಿಚಾರವಾಗಿ ಸುಪ್ರೀಂ ಕೋರ್ಟ್ ಕೂಡ ಕೇಂದ್ರ ಸರ್ಕಾರವನ್ನು ಟೀಕಿಸಿದೆ. ಲಾಕ್‌ಡೌನ್‌ ಹೇರಿದ ವಿಚಾರದಲ್ಲಿ, ಕೋವಿಡ್‌ ಪೀಡಿತರ ಚಿಕಿತ್ಸೆಯ ವಿಚಾರದಲ್ಲಿ ಹಾಗೂ ಲಸಿಕೆ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರವು ತಪ್ಪು ಹೆಜ್ಜೆಗಳನ್ನು ಇರಿಸಿತ್ತು. ಈ ಹಿನ್ನೆಲೆಯಲ್ಲಿ ನೋಡಿದಾಗ, ಕೋವಿಡ್‌ ಸಾಂಕ್ರಾಮಿಕವನ್ನು ಬಹಳ ಸಮರ್ಥವಾಗಿ ನಿಭಾಯಿಸಲಾಗಿದೆ ಎಂದು ಪ್ರಧಾನಿಯವರು ಹೇಳಿದ್ದನ್ನು ಒಪ್ಪಿಕೊಳ್ಳಲಾಗದು.

ಕಾಂಗ್ರೆಸ್ ಪಕ್ಷವು ಮುಂದಿನ ನೂರು ವರ್ಷ ಅಧಿಕಾರಕ್ಕೆ ಮರಳುವುದಿಲ್ಲ ಎಂದು ಪ್ರಧಾನಿ ಹೇಳಿದರು. ಅದು ನೂರು ವರ್ಷ ಅಧಿಕಾರಕ್ಕೆ ಬರುವುದಿಲ್ಲ ಎನ್ನುತ್ತಲೇ ತಮ್ಮ ಭಾಷಣದ ಬಹುತೇಕ ಅವಧಿಯನ್ನು ಕಾಂಗ್ರೆಸ್ಸನ್ನು ಟೀಕಿಸಲು ಬಳಸಿದರು. ವಿರೋಧ ಪಕ್ಷಗಳನ್ನು ಉದ್ದೇಶಿಸಿ ಸಂಸತ್ತಿನಲ್ಲಿ ಮಾತನಾಡುವಾಗ ಬಳಸಬಾರದ ಪದಗಳನ್ನೂ ಬಳಸಿದರು. ಇದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರಿಯಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರದಲ್ಲಿ ಕಾಂಗ್ರೆಸ್ಸನ್ನು ವಿಸರ್ಜಿಸಿದ್ದರೆ ಏನಾಗುತ್ತಿತ್ತು ಎಂಬ ಚಿತ್ರಣವನ್ನು ತಮ್ಮದೇ ಬಗೆಯಲ್ಲಿ ನೀಡಿದರು. ಸಂಪೂರ್ಣವಾಗಿ ಊಹೆಯ ಆಧಾರದಲ್ಲಿ ಇತಿಹಾಸದ ಚಿತ್ರಣ ನೀಡುವುದಕ್ಕೂ ಇತಿಹಾಸವನ್ನು ತಿರುಚುವುದಕ್ಕೂ ವ್ಯತ್ಯಾಸವಿಲ್ಲ. ಇಂತಹ ಯತ್ನಗಳಿಂದ ಇಂದಿನ ತಲೆಮಾರಿಗೆ ಅಥವಾ ಭವಿಷ್ಯದ ಪ್ರಜೆಗಳಿಗೆ ಯಾವ ‍ಪ್ರಯೋಜನವೂ ಇಲ್ಲ. ದೇಶ ಇಂದು ಎದುರಿಸುತ್ತಿರುವ ಹಣದುಬ್ಬರ ಹೆಚ್ಚಳ, ನಿರುದ್ಯೋಗ, ಅರ್ಥ ವ್ಯವಸ್ಥೆಯಲ್ಲಿನ ಬಿಕ್ಕಟ್ಟುಗಳು, ಸಾಮಾಜಿಕ ಸಂಘರ್ಷ ಹೆಚ್ಚುತ್ತಿರುವುದರ ಬಗ್ಗೆ ಎತ್ತಲಾದ ಪ್ರಶ್ನೆಗಳಿಗೆ ಪ್ರಧಾನಿಯವರು ನಿರ್ದಿಷ್ಟವಾದ, ಸ್ಪಷ್ಟವಾದ ಉತ್ತರ ನೀಡಬೇಕಿತ್ತು.

ಆದರೆ, ಹಾಗೆ ಮಾಡುವ ಬದಲು ಪ್ರಧಾನಿಯವರು ಇಂದಿನ ಎಲ್ಲ ಸಮಸ್ಯೆಗಳು ಮತ್ತು ಲೋಪಗಳಿಗೆ ಹಿಂದಿನ ಸರ್ಕಾರಗಳನ್ನು ಹೊಣೆ ಮಾಡಿದರು. ದೇಶದ ವಿರೋಧ ಪಕ್ಷಗಳು ಇಂದು ಇಡೀ ದೇಶ ಹೆಮ್ಮೆಪಡುವಂತಹ ಕೆಲಸಗಳನ್ನೇನೂ ಮಾಡುತ್ತಿಲ್ಲ. ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಇಂದು ಈ ಸ್ಥಿತಿ ತಲುಪಿದ್ದರ ಬಗ್ಗೆ ಆ ಪಕ್ಷದಲ್ಲಿಯೇ ದೊಡ್ಡ ಮಟ್ಟದಲ್ಲಿ ಆತ್ಮಾವಲೋಕನ ನಡೆಯಬೇಕು. ಆದರೆ, ಪ್ರಧಾನಿಯವರು ಎಲ್ಲದಕ್ಕೂ ವಿರೋಧ ಪಕ್ಷಗಳತ್ತ ಬೊಟ್ಟು ಮಾಡಲು ಯತ್ನಿಸುವುದರಿಂದ, ತಮ್ಮಲ್ಲಿನ ಟೊಳ್ಳು ಬಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.