ADVERTISEMENT

ಸಂಪಾದಕೀಯ | ಜೀವನಾಂಶ, ಸಮಾನತೆ ಹಕ್ಕು ಎತ್ತಿಹಿಡಿದ ಚಾರಿತ್ರಿಕ ತೀರ್ಪು

ಎಲ್ಲ ಕಾನೂನು ಮತ್ತು ಆಚರಣೆಗಳಿಗಿಂತ ಸಮಾನತೆಯ ಸಾಂವಿಧಾನಿಕ ಹಕ್ಕಿಗೆ ಆದ್ಯತೆ ಎಂಬುದನ್ನು ಈಗಿನ ತೀರ್ಪು ಹೇಳಿದೆ

ಸಂಪಾದಕೀಯ
Published 12 ಜುಲೈ 2024, 23:34 IST
Last Updated 12 ಜುಲೈ 2024, 23:34 IST
   

ಮುಸ್ಲಿಂ ಮಹಿಳೆಯರು ಅಪರಾಧ ದಂಡಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 125ರ ಅಡಿಯಲ್ಲಿ ಜೀವನಾಂಶ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಈ ತೀರ್ಪು ಮುಸ್ಲಿಂ ಮಹಿಳೆಯರ ಸಮಾನತೆಯ ಹಕ್ಕುಗಳನ್ನು ಎತ್ತಿ ಹಿಡಿದಿದೆ. ಸಂಪ್ರದಾಯ, ವಿಶೇಷ ಕಾಯ್ದೆ ಅಥವಾ ಇತರ ವಿಧಾನಗಳ ಮೂಲಕ ಈ ಹಕ್ಕುಗಳನ್ನು ಕಸಿದುಕೊಳ್ಳಲು ಆಗದು ಎಂಬುದನ್ನು ಒತ್ತಿ ಹೇಳಿದಂತಾಗಿದೆ. ಧರ್ಮ ಯಾವುದಾದರೂ ಇರಲಿ, ವಿಚ್ಛೇದನದ ವಿಧಾನ ಯಾವುದೇ ಇರಲಿ, ಜೀವನಾಂಶ ದೊರೆಯಲೇಬೇಕು ಎಂದು ನ್ಯಾಯಾಲಯ ಹೇಳಿದೆ. ವಿಚ್ಛೇದಿತ ಮಹಿಳೆಯು ಪಡೆಯುವ ಜೀವನಾಂಶವು ದಾನ ಅಲ್ಲ, ಬದಲಿಗೆ ಅದು ಅವರ ಮೂಲಭೂತ ಹಕ್ಕು ಎಂಬುದನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಅಗಸ್ಟಿನ್‌ ಜಾರ್ಜ್‌ ಮಸೀಹ್‌ ಅವರು ದೃಢವಾಗಿ ಹೇಳಿದ್ದಾರೆ. ಮೊಹಮ್ಮದ್‌ ಅಬ್ದುಲ್‌ ಸಮದ್‌ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಈ ತೀರ್ಪು ನೀಡಲಾಗಿದೆ. ಸಮದ್‌ ಅವರ ವಿಚ್ಛೇದಿತ ಪತ್ನಿಗೆ ಅಪರಾಧ ದಂಡಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 125ರ ಅಡಿಯಲ್ಲಿ ಜೀವನಾಂಶ ನೀಡಬೇಕು ಎಂದು ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ತೆಲಂಗಾಣ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆಯರು, ಮುಸ್ಲಿಂ ಮಹಿಳೆ (ವಿಚ್ಛೇದನದ ಸಂದರ್ಭದಲ್ಲಿ ಹಕ್ಕುಗಳ ರಕ್ಷಣೆ) ಕಾಯ್ದೆ– 1986ರ ಅಡಿಯಲ್ಲಿ ಮಾತ್ರ ಜೀವನಾಂಶ ಕೇಳುವುದಕ್ಕೆ ಸಾಧ್ಯ ಎಂದು ಸಮದ್‌ ವಾದಿಸಿದ್ದರು. ಆದರೆ, ನ್ಯಾಯಾಲಯವು ಈ ವಾದವನ್ನು ತಳ್ಳಿಹಾಕಿದೆ. ಸಿಆರ್‌ಪಿಸಿಯ ಸೆಕ್ಷನ್‌ 125 ಧರ್ಮನಿರಪೇಕ್ಷವಾಗಿದ್ದು ಎಲ್ಲ ಮಹಿಳೆಯರಿಗೆ ಅನ್ವಯವಾಗುತ್ತದೆ ಎಂದಿದೆ. ಮುಸ್ಲಿಂ ಮಹಿಳೆಯರು ಈ ಸೆಕ್ಷನ್‌ ಅಡಿಯಲ್ಲಿ ಅಥವಾ ವಿಶೇಷ ಕಾಯ್ದೆ ಅಡಿಯಲ್ಲಿ ಅಥವಾ ಎರಡರ ಅಡಿಯಲ್ಲಿಯೂ ಜೀವನಾಂಶ ಕೇಳುವ ಆಯ್ಕೆ ಹೊಂದಿದ್ದಾರೆ ಎಂದೂ ನ್ಯಾಯಪೀಠ ಹೇಳಿದೆ.

ಶಾ ಬಾನು ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪನ್ನು ಈಗಿನ ತೀರ್ಪು ಮರು ವ್ಯಾಖ್ಯಾನಕ್ಕೆ ಒಳಪಡಿಸಿದೆ. ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ಸೆಕ್ಷನ್‌ 125ರ ಅಡಿಯಲ್ಲಿ ಜೀವನಾಂಶ ಪಡೆಯುವ ಹಕ್ಕು ಇದೆ ಎಂದು ಶಾ ಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ, ನಂತರ 1986ರಲ್ಲಿ ಜಾರಿಗೆ ಬಂದ ಕಾಯ್ದೆಯು ಈ ಹಕ್ಕನ್ನು ಮೊಟಕುಗೊಳಿಸಿದೆ ಎಂದು ಭಾವಿಸಲಾಗಿತ್ತು. ಆದರೆ, 1986ರ ಕಾಯ್ದೆಯು ಈ ಹಕ್ಕನ್ನು ಮೊಟಕು ಮಾಡಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ಬಂದ ತೀರ್ಪುಗಳು ಮುಸ್ಲಿಂ ಮಹಿಳೆಯರ ಸಮಾನತೆಯ ಹಕ್ಕನ್ನು ಎತ್ತಿ ಹಿಡಿಯುತ್ತಲೇ ಬಂದಿವೆ. ಸಿಆರ್‌ಪಿಸಿಯ ಸೆಕ್ಷನ್‌ 125 ಕೂಡ ಮುಸ್ಲಿಂ ಮಹಿಳೆಯರಿಗೆ ಅನ್ವಯ ಆಗುತ್ತದೆ ಎಂದು ಹೇಳಲಾಗಿದೆ. ಕಾನೂನು ಮತ್ತು ಆಚರಣೆಗಳು ಮುಸ್ಲಿಂ ಮಹಿಳೆಯರ ಜೀವನಾಂಶದ ಹಕ್ಕನ್ನು ವಿಸ್ತರಿಸುತ್ತಲೇ ಬಂದಿವೆ. ಮುಸ್ಲಿಂ ಮಹಿಳೆಯರಿಗೆ ಮರುಮದುವೆ ಆಗುವತನಕ ಜೀವನಾಂಶ ಪಡೆದುಕೊಳ್ಳುವ ಹಕ್ಕು ಇದೆ ಎಂದು 2001ರ ಡೇನಿಯಲ್‌ ಲತೀಫಿ ಪ್ರಕರಣದಲ್ಲಿ ಹೇಳಲಾಗಿದೆ. ನ್ಯಾಯಾಲಯವು ಇದೇ ವಿಚಾರವನ್ನು 2009ರಲ್ಲಿ ಎತ್ತಿ ಹಿಡಿದಿದೆ. ಜೊತೆಗೆ, ಸಿಆರ್‌ಪಿಸಿ ಅಡಿಯಲ್ಲಿಯೂ ಮುಸ್ಲಿಂ ಮಹಿಳೆಯರು ಜೀವನಾಂಶ ಪಡೆಯಬಹುದು ಎಂದೂ ನ್ಯಾಯಾಲಯ ಹೇಳಿದೆ. ವಿಚ್ಛೇದಿತ ಮುಸ್ಲಿಂ ಮಹಿಳೆಯರು ಸೆಕ್ಷನ್‌ 125 ಮತ್ತು 1986ರ ಕಾಯ್ದೆ ಎರಡರ ಅಡಿಯಲ್ಲಿಯೂ ಜೀವನಾಂಶ ಕೇಳಬಹುದು ಎಂದು ಪಟ್ನಾ ಹೈಕೋರ್ಟ್‌ 2019ರಲ್ಲಿ ಆದೇಶ ನೀಡಿದೆ. ಇಷ್ಟೆಲ್ಲ ತೀರ್ಪುಗಳು, ಆದೇಶಗಳು ಇದ್ದರೂ ಈ ಕುರಿತ ತಕರಾರು ಮುಂದುವರಿದಿತ್ತು. 1986ರ ಕಾಯ್ದೆಯು ಸಾಮಾನ್ಯ ಕಾಯ್ದೆ ಅಲ್ಲ, ಅದು ವಿಶೇಷ ಕಾಯ್ದೆ. ಹಾಗಾಗಿ, ಮುಸ್ಲಿಂ ಮಹಿಳೆಯರಿಗೆ ಸೆಕ್ಷನ್‌ 125 ಅನ್ವಯ ಆಗುವುದಿಲ್ಲ ಎಂದು ಈವರೆಗೆ ವಾದಿಸಲಾಗಿದೆ. ಆದರೆ, ಈ ವಾದವನ್ನು ನ್ಯಾಯಾಲಯವು ತಿರಸ್ಕರಿಸಿದೆ. ಯಾವ ಕಾನೂನಿನ ಅಡಿಯಲ್ಲಿ ಜೀವನಾಂಶ ಕೇಳಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವುದು ಮಹಿಳೆಗೆ ಬಿಟ್ಟ ವಿಚಾರ ಎಂಬುದನ್ನು ಕೋರ್ಟ್‌ ಈಗ ಸ್ಪಷ್ಟಪಡಿಸಿದೆ.

ಎಲ್ಲ ಕಾನೂನು ಮತ್ತು ಆಚರಣೆಗಳಿಗಿಂತ ಸಮಾನತೆಯ ಸಾಂವಿಧಾನಿಕ ಹಕ್ಕಿಗೆ ಆದ್ಯತೆ ಎಂಬುದನ್ನು ಈಗಿನ ತೀರ್ಪು ಹೇಳಿದೆ. ಮುಸ್ಲಿಂ ಮಹಿಳೆಯರು ತಮ್ಮ ಸಾಮಾಜಿಕ, ಆರ್ಥಿಕ ಸುರಕ್ಷತೆಯ ಹಕ್ಕುಗಳಿಂದ ವಂಚಿತರಾಗಬಾರದು ಎಂಬುದನ್ನು ನ್ಯಾಯಾಲಯವು ಖಾತರಿಪಡಿಸಿದೆ. ಭಾರತವು ಲಿಂಗತ್ವ ನ್ಯಾಯದ ವಿಚಾರದಲ್ಲಿ ಕಳೆದ ಕೆಲವು ದಶಕಗಳಲ್ಲಿ ಎಷ್ಟು ಮುಂದಕ್ಕೆ ಸಾಗಿದೆ ಎಂಬುದನ್ನು ಈ ತೀರ್ಪು ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆಯು ತೋರಿಸುತ್ತದೆ. ಯಾವುದೇ ರಾಜಕೀಯ ಅಥವಾ ಸಂಘರ್ಷ ಇಲ್ಲದೆಯೇ ಏಕರೂಪ ನಾಗರಿಕ ಸಂಹಿತೆಯ ಕಡೆಗೆ ಹೇಗೆ ಸಾಗಬಹುದು ಎಂಬುದನ್ನೂ ತೀರ್ಪು ತೋರಿಸಿಕೊಟ್ಟಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.