ಬೆಂಗಳೂರಿನಲ್ಲಿ ಮತ್ತೊಂದು ಹಣಕಾಸು ಸಂಸ್ಥೆಯ ವಂಚನೆ ಬಯಲಾಗಿದೆ. ‘ಐ ಮಾನಿಟರಿ ಅಡ್ವೈಸರಿ’ (ಐಎಂಎ) ಸಮೂಹದ ಸಂಸ್ಥಾಪಕ ಮೊಹಮ್ಮದ್ ಮನ್ಸೂರ್ ಖಾನ್, ಸಂಸ್ಥೆಯ ಪ್ರಧಾನ ಕಚೇರಿಯ ಬಾಗಿಲು ಮುಚ್ಚಿ ಕಣ್ಮರೆಯಾಗಿದ್ದಾರೆ. ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಒಟ್ಟು ₹ 2000 ಕೋಟಿಗೂ ಹೆಚ್ಚು ಹಣವನ್ನು ಜನರು ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಒಂದೇ ದಿನ 11 ಸಾವಿರಕ್ಕೂ ಹೆಚ್ಚು ಜನರು ಸಂಸ್ಥೆಯ ವಿರುದ್ಧ ವಂಚನೆಯ ದೂರುಗಳನ್ನು ದಾಖಲಿಸಿದ್ದಾರೆ. ಸಂಸ್ಥಾಪಕರದ್ದು ಎನ್ನಲಾದ ಹೇಳಿಕೆಯೊಂದು 2–3 ದಿನಗಳಿಂದ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದ್ದು ಅದರಲ್ಲಿ ಅವರು, ತಾನು ಜೀವಭಯದಿಂದ ಅಜ್ಞಾತ ಸ್ಥಳದಲ್ಲಿದ್ದು, ಸ್ಥಳೀಯ ಶಾಸಕರೊಬ್ಬರ ಸಹಿತ ಹಲವು ಗಣ್ಯರು ತನ್ನಿಂದ ನೂರಾರು ಕೋಟಿ ಪಡೆದಿರುವುದಾಗಿ ಹೇಳಿದ್ದಾರೆ. ಅವರು ಕೊಲ್ಲಿ ದೇಶವೊಂದಕ್ಕೆ ಪಲಾಯನ ಮಾಡಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.
ಬಡ ಹಾಗೂ ಮಧ್ಯಮ ವರ್ಗದ ಸಾವಿರಾರು ಜನರು ಮಕ್ಕಳ ಮದುವೆ, ಓದು, ಗೃಹ ನಿರ್ಮಾಣ ಮುಂತಾದ ಉದ್ದೇಶಗಳಿಗಾಗಿ ಹೊಟ್ಟೆಬಟ್ಟೆ ಕಟ್ಟಿ ಕೂಡಿಟ್ಟಿದ್ದ ಹಣವನ್ನು ಹೆಚ್ಚಿನ ಲಾಭದ ಆಸೆಯಿಂದ ಈ ಸಂಸ್ಥೆಗೆ ಕಟ್ಟಿದ್ದಾರೆ. ಅದರಲ್ಲೂ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಎದ್ದು ಕಾಣಿಸುತ್ತಿದೆ. ಮುಸ್ಲಿಮರಲ್ಲಿ ಬಡ್ಡಿ ತೆಗೆದುಕೊಳ್ಳುವುದು ‘ಹರಾಂ’ (ನಿಷಿದ್ಧ) ಆಗಿದ್ದು, ‘ಹಲಾಲ್’ (ಧರ್ಮಸಮ್ಮತ) ರೀತಿಯಲ್ಲೇ ಹೂಡಿಕೆ ನಡೆಸಬೇಕು ಎಂಬ ಧಾರ್ಮಿಕ ನಿಯಮವಿದೆ. ಈ ಸಂಸ್ಥೆಯವರು ತಮ್ಮಲ್ಲಿ ಠೇವಣಿ ಮಾಡಲಾದ ಹಣವನ್ನು ವ್ಯಾಪಾರದಲ್ಲಿ ಹೂಡಿ, ಬಂದ ಲಾಭದಲ್ಲಿ ಪಾಲು ಕೊಡುವುದಾಗಿ (ಹಲಾಲ್) ಹೇಳಿದ್ದನ್ನು ಜನ ನಂಬಿದ್ದಾರೆ. ವಂಚಕರು ಜನರ ಧಾರ್ಮಿಕ ನಂಬಿಕೆಗಳನ್ನೂ ಹೇಗೆ ಮೋಸಕ್ಕೆ ಬಳಸಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ.
ಕಡಿಮೆ ದರದಲ್ಲಿ ಚಿನ್ನಾಭರಣ ಮಾರಾಟ, ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದು, ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮುಂತಾದ ಚಟುವಟಿಕೆಗಳನ್ನೂ ಈ ಸಂಸ್ಥೆ ಮಾಡುತ್ತಿದ್ದು, ಅವುಗಳಿಗೆ ಸಂಬಂಧಿಸಿದ ಸಮಾರಂಭಗಳಲ್ಲಿ ಸಮಾಜದ ಗಣ್ಯರು ಪಾಲ್ಗೊಂಡಿರುವುದು ಸಂಸ್ಥೆಯ ಮೇಲಿನ ಜನರ ನಂಬಿಕೆಗೆ ಇಂಬು ನೀಡಿದೆ. ಈಗ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಾಗ ಯಾವ ಶಾಸಕರೂ, ಗಣ್ಯರೂ ಈ ನತದೃಷ್ಟರ ನೆರವಿಗೆ ಬರುವುದಿಲ್ಲ. ರಾಜ್ಯದ ಮಟ್ಟಿಗೆ ಇಂತಹ ವಂಚನೆ ಹೊಸತೇನಲ್ಲ. ಇದಕ್ಕೂ ಮುಂಚೆ ಬೆಂಗಳೂರಿನ ಎಐಎಂಎಂಎಸ್ ವೆಂಚರ್ಸ್ ಎಂಬ ಸಂಸ್ಥೆಯೂ ಹೀಗೆಯೇ ಸಾವಿರಾರು ಬಡ ಮುಸ್ಲಿಮರನ್ನು ವಂಚಿಸಿದ ಪ್ರಕರಣ ಬಯಲಿಗೆ ಬಂದಿತ್ತು.
ಎಐಎಂಎಂಎಸ್ ಮತ್ತು ಅಜ್ಮೇರಾ ಗ್ರೂಪ್ ವಂಚನೆ ಪ್ರಕರಣಗಳಲ್ಲಿ ಆರೋಪಿಗಳು ತಲೆಮರೆಸಿಕೊಳ್ಳಲು ನೆರವು ನೀಡಿದ್ದ ಸಿಸಿಬಿ ಇನ್‌ಸ್ಪೆಕ್ಟರ್ ಮತ್ತು ಹೆಡ್‌ಕಾನ್‌ಸ್ಟೆಬಲ್ ಸೇವೆಯಿಂದ ಅಮಾನತುಗೊಂಡಿದ್ದೂ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಅಗ್ರಿಗೋಲ್ಡ್, ಆ್ಯಂಬಿಡೆಂಟ್, ವಿಕ್ರಂ ಇನ್‌ವೆಸ್ಟ್‌ಮೆಂಟ್ಸ್, ಡ್ರೀಮ್ಸ್ ಜಿ.ಕೆ., ಷಣ್ಮುಗಂ ಫೈನಾನ್ಸ್, ಹಿಂದೂಸ್ತಾನ್ ಇನ್‌ಫ್ರಾಕಾನ್, ಗೃಹ ಕಲ್ಯಾಣ್, ಟಿಜಿಎಸ್ ಮುಂತಾದ 16ಕ್ಕೂ ಹೆಚ್ಚು ಹಣಕಾಸು ಸಂಸ್ಥೆಗಳು ಜನರ ಹೂಡಿಕೆ ಹಣವನ್ನು ವಂಚಿಸಿದ ಬಗ್ಗೆ ಮೊಕದ್ದಮೆಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಒಟ್ಟು ವಂಚನೆಯ ಅಂದಾಜು ಮೊತ್ತ ₹ 5 ಸಾವಿರ ಕೋಟಿಗೂ ಹೆಚ್ಚು ಎನ್ನುವುದನ್ನು ಗಮನಿಸಿದರೆ, ನಮ್ಮಲ್ಲಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ನಿಯಂತ್ರಣಕ್ಕೆ ಇನ್ನಷ್ಟು ಕಠಿಣ ಕ್ರಮಗಳ ಅಗತ್ಯವಿದೆ ಎನ್ನುವುದು ಸ್ಪಷ್ಟ.
ದೊಡ್ಡ ಮಟ್ಟದ ಲಾಭದ ಆಸೆಗಾಗಿ ಇಂತಹ ಹಣಕಾಸು ಸಂಸ್ಥೆಗಳ ಪೂರ್ವಾಪರಗಳನ್ನು ವಿಚಾರಿಸದೆ ಜನರು ಹಣ ಹೂಡುವುದನ್ನು ನಿಲ್ಲಿಸಬೇಕು. ಯಾವುದೇ ಸಂಸ್ಥೆ ನಡೆಸುತ್ತಿರುವ ಠೇವಣಿ ಯೋಜನೆಗಳು ಅಧಿಕೃತವೇ ಎಂಬುದನ್ನು ಹೂಡಿಕೆಗೆ ಮುನ್ನ ಖಚಿತಪಡಿಸಿಕೊಳ್ಳಬೇಕು. ಜೊತೆಗೆ ಭಾರತೀಯ ರಿಸರ್ವ್ ಬ್ಯಾಂಕ್, ಸೆಬಿ, ರಿಜಿಸ್ಟ್ರಾರ್ ಆಫ್ ಕಂಪನೀಸ್ ಅಥವಾ ಸಹಕಾರಿ ಸಂಸ್ಥೆಗಳ ರಿಜಿಸ್ಟ್ರಾರ್‌ರಿಂದ ಈ ಸಂಸ್ಥೆಗಳು ಅನುಮತಿ ಪಡೆದಿವೆಯೇ ಎಂದು ತಿಳಿದುಕೊಳ್ಳಬೇಕು. ಐಎಂಎ ಸಮೂಹದ ವಂಚನೆ ಉದಾಹರಣೆಯನ್ನು ಗಮನಿಸಿದರೆ, ‘ತನ್ನ ವಿವಿಧ ಹಣಕಾಸು ಸಲಹಾ ಯೋಜನೆಗಳಲ್ಲಿ ಇವರೆಲ್ಲ ಪಾಲುದಾರರು’ ಎಂದೇ ಆ ಸಂಸ್ಥೆ ಜನರಿಗೆ ಸರ್ಟಿಫಿಕೇಟ್‌ಗಳನ್ನು ವಿತರಿಸಿದೆ. ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ವಂಚಕರು ಎಂತಹ ಒಳದಾರಿಗಳನ್ನು ಕಂಡುಕೊಂಡಿದ್ದಾರೆ ಎನ್ನುವುದೂ ಜನರಿಗೆ ಗೊತ್ತಾಗುವುದಿಲ್ಲ. ಸರ್ಕಾರವು ವಂಚಕರನ್ನು ಬಂಧಿಸಿ ಜೈಲಿಗಟ್ಟಬೇಕು. ಈ ಪ್ರಕರಣದ ತನಿಖೆಯನ್ನು ಸರ್ಕಾರವು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಿದೆ. ತನಿಖೆಯು ಕ್ಷಿಪ್ರಗತಿಯಲ್ಲಿ ಪೂರ್ಣಗೊಳ್ಳಬೇಕು. ಜನರ ಹಣ ಮರಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.