ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿದ ‘ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ– 2019’ ಇದೀಗ ಜಾರಿಗೆ ಬಂದಿದೆ. ವಾಹನ ಚಾಲಕರು ಹಾಗೂ ಸವಾರರು ಸಂಚಾರ ನಿಯಮಗಳ ಉಲ್ಲಂಘನೆಗೆ ಭಾರಿ ಪ್ರಮಾಣದ ದಂಡ ತೆರಬೇಕಿದೆ. ದಂಡದ ಪ್ರಮಾಣವನ್ನು ಹಲವು ಪಟ್ಟು ಹೆಚ್ಚಿಸಿದ ಸರ್ಕಾರದ ನಡೆಗೆ ಕೆಲವು ವಲಯಗಳಿಂದ ತೀವ್ರ ವಿರೋಧ ಕೂಡ ವ್ಯಕ್ತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ದೇಶದೊಳಗೆ ವಾಹನಗಳ ಬಳಕೆ ವಿಪರೀತವಾಗಿ ಹೆಚ್ಚಿದೆ. ಆದರೆ, ಸಂಚಾರ ನಿಯಮಗಳನ್ನು ಹೆಚ್ಚಿನ ಚಾಲಕರು ಶಿಸ್ತಿನಿಂದ ಪಾಲಿಸುತ್ತಿಲ್ಲ. ತತ್ಪರಿಣಾಮ, ರಸ್ತೆ ಅಪಘಾತಗಳ ಪ್ರಮಾಣ ನಿರಂತರವಾಗಿ ಹೆಚ್ಚುತ್ತಲೇ ಇದೆ. ದೇಶದಲ್ಲಿ ಪ್ರತಿವರ್ಷ ಸರಾಸರಿ ಐದು ಲಕ್ಷ ಅಪಘಾತಗಳು ಸಂಭವಿಸುತ್ತಿವೆ. 1.5 ಲಕ್ಷಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎನ್ನುತ್ತದೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ವರದಿ. ಇಷ್ಟೊಂದು ಸಾವು–ನೋವಿಗೆ ಕಾರಣವಾದ ಸಂಚಾರ ಅವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ ಚಾಲಕರಿಗೆ ಲಗಾಮು ಹಾಕುವುದು ಬೇಡವೇ ಎನ್ನುವುದು ಸರ್ಕಾರದ ಪ್ರಶ್ನೆ. ನಿಯಮ ಉಲ್ಲಂಘನೆ ಮಾಡಿದವರಿಗೆ ಇದುವರೆಗೆ ಜಾರಿಯಲ್ಲಿದ್ದ 1988ರ ಮೋಟಾರು ವಾಹನ ಕಾಯ್ದೆಯಲ್ಲಿ ತೀರಾ ಕಡಿಮೆ ಪ್ರಮಾಣದ ದಂಡ ಹಾಗೂ ಶಿಕ್ಷೆ ಇತ್ತು. ಸಂಚಾರ ವ್ಯವಸ್ಥೆಯಲ್ಲಿ ಶಿಸ್ತು ತರಲು ಈ ಕಾಯ್ದೆ ಅಷ್ಟೊಂದು ಪರಿಣಾಮಕಾರಿ ಆಗಿರಲಿಲ್ಲ ಎನ್ನುವುದು ಸಂಚಾರ ತಜ್ಞರ ವಾದ.
ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವವರು ಯಾರೂ ಕಾಯ್ದೆಯ ಹೊಸ ಸ್ವರೂಪದ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ದಂಡ ಎಷ್ಟು ಹೆಚ್ಚಾದರೂ ಅವರಿಗೆ ಚಿಂತೆಯಿಲ್ಲ. ಆದರೆ, ಕೆಲವರಿಗೆ ವಾಹನಗಳನ್ನು ಮಿತಿಮೀರಿದ ವೇಗದಲ್ಲಿ ಹಾಗೂ ಬೇಕಾಬಿಟ್ಟಿ ಓಡಿಸುವುದು ಒಂದು ಬಗೆಯ ಖಯಾಲಿ. ಹೆಲ್ಮೆಟ್ ಧರಿಸದೆ ವಾಹನ ಓಡಿಸುವುದು, ದ್ವಿಚಕ್ರ ವಾಹನದ ಮೇಲೆ 3–4 ಮಂದಿ ಸವಾರಿ ಮಾಡುವುದು... ಇಂತಹವು ನಿತ್ಯ ಕಾಣಸಿಗುವ ನೋಟಗಳು. ಹಿಂದೆ ಬರುವ ವಾಹನಗಳ ಮೇಲೆ ನಿಗಾ ಇಡಲು ತಮ್ಮ ವಾಹನದಲ್ಲಿ ಕನ್ನಡಿ ಇರಬೇಕು ಎನ್ನುವ ಸಾಮಾನ್ಯ ತಿಳಿವಳಿಕೆಯ ಕೊರತೆಯೂ ಇದೆ. ಸಂಜ್ಞೆಗಳನ್ನು ತೋರದೆ ಬೇಕೆಂದಾಗ, ಬೇಕೆಂದಲ್ಲಿ ವಾಹನವನ್ನು ತಿರುಗಿಸುವುದುಂಟು. ಮುಂದಿರುವ ವಾಹನದಿಂದ ಸುರಕ್ಷಿತ ಅಂತರದಲ್ಲಿ ತಮ್ಮ ವಾಹನವನ್ನು ನಿಲ್ಲಿಸಬೇಕು ಅಂತಲೂ ಕೆಲವರಿಗೆ ಅನಿಸುವುದಿಲ್ಲ. ನಿಯಮ ಉಲ್ಲಂಘಿಸಿ ಒಂದುವೇಳೆ ಸಿಕ್ಕಿಬಿದ್ದರೆ, ಪೊಲೀಸರ ಕೈಬೆಚ್ಚಗೆ ಮಾಡಿ ಜಾರಿಕೊಂಡು ಹೋಗುವ ಪರಿಪಾಟ ಎಲ್ಲೆಡೆಯೂ ಇದೆ. ಕಾಯ್ದೆಯನ್ನು ರೂಪಿಸಿರುವುದು ಅಪಘಾತಗಳನ್ನು ತಡೆಗಟ್ಟುವ ಸಲುವಾಗಿಯೇ ವಿನಾ ಜನರನ್ನು ಶಿಕ್ಷಿಸುವ ಉದ್ದೇಶದಿಂದಲ್ಲ. ಆದರೆ, ನಿಯಮ ಇರುವುದೇ ಉಲ್ಲಂಘಿಸುವುದಕ್ಕಾಗಿ ಎನ್ನುವಂತಹ ಮನೋಭಾವದ ಜನರಿಗೆ ಹೊಸ ನಿಯಮ ಕಳವಳ ಉಂಟುಮಾಡಿದೆ. ನಮ್ಮ ಹಾಗೂ ನಮ್ಮಂತೆಯೇ ರಸ್ತೆಯ ಮೇಲೆ ಪ್ರಯಾಣಿಸುವ ಇತರರ ಸುರಕ್ಷತೆಗಾಗಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದನ್ನು ಎಲ್ಲರೂ ಅರಿತರೆ ಹೊಸ ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ. ಪೊಲೀಸರೂ ಅಷ್ಟೆ; ಹೆಚ್ಚಿನ ದಂಡ ಶೇಖರಣೆಯನ್ನೇ ಆದ್ಯತೆಯನ್ನಾಗಿ ಪರಿಗಣಿಸದೆ ಸುಗಮ ಮತ್ತು ಸುರಕ್ಷಿತ ಸಂಚಾರ ವ್ಯವಸ್ಥೆ ರೂಪಿಸುವ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ದಂಡದ ಭಯದಿಂದಲೇ ಅಪಘಾತಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗದು. ಬಹುಪಾಲು ಅಪಘಾತಗಳಿಗೆ ಪ್ರಮುಖ ಕಾರಣ ಚಾಲಕರಾದರೂ ರಸ್ತೆ ನಿರ್ವಹಣೆಯಲ್ಲಿನ ಲೋಪಗಳ ಪಾತ್ರವೂ ಇರುವುದನ್ನು ಅಲ್ಲಗಳೆಯಲಾಗದು. ರಸ್ತೆ ವಿನ್ಯಾಸ ಮತ್ತು ನಿರ್ವಹಣೆಯಲ್ಲಿನ ಲೋಪಗಳನ್ನು ಸರಿಪಡಿಸುವ ಕೆಲಸವನ್ನೂ ಸರ್ಕಾರ ಆದ್ಯತೆಯಿಂದ ಮಾಡಬೇಕು. ಹೆಲ್ಮೆಟ್, ಸೀಟ್ ಬೆಲ್ಟ್‌ನಂತಹ ಸುರಕ್ಷಾ ಸಾಧನಗಳ ಬಳಕೆಯ ಮಹತ್ವವನ್ನು ಜನರಿಗೆ ಮನದಟ್ಟು ಮಾಡಿಸಬೇಕು. ದಂಡ ಹೆಚ್ಚಿಸುವಲ್ಲಿ ತೋರಿದ ಉತ್ಸಾಹವನ್ನು ಜಾಗೃತಿ ಮೂಡಿಸುವಲ್ಲಿಯೂ ತೋರಿಸಬೇಕು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.