ಬಿಜೆಪಿಯ ಕಾರ್ಯಕ್ರಮಗಳ ಬಗ್ಗೆ ಅಹೋರಾತ್ರಿ ವರದಿ ಮಾಡಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳ ನೇರಪ್ರಸಾರ ಮಾಡಲು ಟಿ.ವಿ. ವಾಹಿನಿ ಆರಂಭವಾಗಿದ್ದು, ಅದರ ಔಚಿತ್ಯ ಹಾಗೂ ಕಾನೂನುಬದ್ಧತೆಯ ಬಗ್ಗೆ ಪ್ರಶ್ನೆಗಳು ಮೂಡಿವೆ. ಭಾನುವಾರ ‘ನಮೋ ಟಿವಿ’ ಎಂಬ ಹೆಸರಿನಲ್ಲಿ ಆರಂಭವಾದ ಇದು ನಂತರ, ‘ಕಂಟೆಂಟ್ ಟಿವಿ’ ಎಂದು ಹೆಸರು ಬದಲಿಸಿಕೊಂಡಿದ್ದು, ಒಂದು ಪಕ್ಷ ಹಾಗೂ ಅದರ ನಾಯಕರ ಕಾರ್ಯಕ್ರಮಗಳನ್ನು ಮಾತ್ರ ಪ್ರಸಾರ ಮಾಡುತ್ತಿದೆ. ಈ ವಾಹಿನಿಯ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಕಾಂಗ್ರೆಸ್ ಮತ್ತು ಎಎಪಿ, ವಾಹಿನಿಯ ಪ್ರಸಾರವನ್ನು ಅಮಾನತಿನಲ್ಲಿ ಇರಿಸಬೇಕು ಎಂದು ಕೇಳಿವೆ. ತಮ್ಮ ಪರ ಪ್ರಚಾರ ಮಾಡಲು ವಾಹಿನಿ ಆರಂಭಿಸಿ, ನಂತರ ಅದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಸೋಗುಹಾಕುವ ಮೂಲಕ, ಪ್ರಭಾವಿ ಸ್ಥಾನಗಳಲ್ಲಿ ಇರುವವರು ತಮ್ಮ ಸ್ಥಾನದ ದುರುಪಯೋಗ ಮಾಡಿಕೊಳ್ಳಲು ಅವಕಾಶ ನೀಡಬಾರದು ಎಂದೂ ಈ ಎರಡು ಪಕ್ಷಗಳು ಹೇಳಿವೆ. ಹೀಗೆ ಮಾಡುವುದರಿಂದ, ವಿರೋಧ ಪಕ್ಷಗಳಿಗೆ ಸಮಾನ ಅವಕಾಶ ನಿರಾಕರಿಸಿದಂತೆ ಆಗುತ್ತದೆ. ಈ ವಾಹಿನಿಯು ಪ್ರಧಾನಿಯವರ ‘ಮೈ ಭೀ ಚೌಕೀದಾರ್’ ಕಾರ್ಯಕ್ರಮದ ನೇರಪ್ರಸಾರ ಮಾಡಿದೆ, ಬಿಜೆಪಿ ನಾಯಕರ ಸಂದರ್ಶನ ಹಾಗೂ ಇತರ ಪ್ರಚಾರ ಕಾರ್ಯಕ್ರಮಗಳ ಪ್ರಸಾರದಲ್ಲಿ ತೊಡಗಿದೆ. ಈ ವಾಹಿನಿಯು ‘ನಮೋ ಆ್ಯಪ್’ನ ಟಿ.ವಿ. ವಾಹಿನಿ ರೂಪ ಎಂದು ಹೇಳಲಾಗಿದ್ದು, ಇದು ಎಲ್ಲ ಡಿಟಿಎಚ್ ವೇದಿಕೆಗಳಲ್ಲೂ ಲಭ್ಯವಾಗುತ್ತಿದೆ ಎಂಬ ವರದಿಗಳಿವೆ. ಆದರೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಅನುಮತಿ ನೀಡಿರುವ ವಾಹಿನಿಗಳ ಪಟ್ಟಿಯಲ್ಲಿ ಈ ವಾಹಿನಿಯ ಹೆಸರು ಉಲ್ಲೇಖವಾಗಿಲ್ಲ. ಈ ವಾಹಿನಿಗೆ ಬಂಡವಾಳ ಬಂದಿದ್ದು ಎಲ್ಲಿಂದ ಎಂಬುದು ಬಹಿರಂಗವಾಗಿಲ್ಲ. ಇದರ ಮಾಲೀಕರು ಯಾರು ಎಂಬುದೂ ಬಹಿರಂಗವಾಗಿಲ್ಲ. ಆದರೆ, ಈ ವಾಹಿನಿಗೆ ಸರ್ಕಾರದ ಜಾಹೀರಾತುಗಳು ಬರುತ್ತಿವೆ. ಈ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೇಲಿನ ವೆಚ್ಚ ಬಿಜೆಪಿ ಅಥವಾ ನರೇಂದ್ರ ಮೋದಿ ಅವರ ಚುನಾವಣಾ ವೆಚ್ಚದ ಭಾಗವೇ ಎಂಬುದು ಗೊತ್ತಿಲ್ಲ. ಇಲ್ಲಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಹಾಗೂ ಪ್ರಸಾರ ನಿಯಮಾವಳಿಗಳ ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿರುವ ಕಾರಣ, ಈ ಎಲ್ಲ ಅಂಶಗಳ ಬಗ್ಗೆ ಪರಿಶೀಲಿಸಿ ಚುನಾವಣಾ ಆಯೋಗ ಕ್ರಮ ಜರುಗಿಸಬೇಕು. ಈ ನಡುವೆ, ನರೇಂದ್ರ ಮೋದಿ ಅವರ ಜೀವನದ ಕಥೆ ಹೇಳುವ ಒಂದು ಸಿನಿಮಾ ಶುಕ್ರವಾರ ಬಿಡುಗಡೆ ಆಗುತ್ತಿದೆ. ಅಲ್ಲದೆ, ಡಿಜಿಟಲ್ (ಒಟಿಟಿ) ವೇದಿಕೆಯೊಂದರಲ್ಲಿ ಮೋದಿ ಅವರ ಜೀವನದ ಬಗ್ಗೆ ವೆಬ್ ಸರಣಿಯೊಂದರ ಪ್ರಸಾರ ಆರಂಭವಾಗಿರುವ ವರದಿ ಇದೆ. ಚುನಾವಣೆ ಘೋಷಣೆಯಾಗಿರುವಾಗ ಈ ರೀತಿಯ ಸಿನಿಮಾ, ವೆಬ್ ಸರಣಿಗಳ ಬಿಡುಗಡೆ ಹಾಗೂ ಪ್ರಸಾರ ಎಷ್ಟು ಸರಿ ಎಂಬುದನ್ನೂ ಆಯೋಗ ಪರಿಶೀಲಿಸಬೇಕು.
ಉಪಗ್ರಹ ನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ಸು ಸಾಧಿಸಿದ್ದನ್ನು ಘೋಷಿಸಲು ಪ್ರಧಾನಿಯವರು ಟಿ.ವಿ. ವಾಹಿನಿಗಳ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ವಿದ್ಯಮಾನವು ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದು ಆಯೋಗ ಹೇಳಿದೆ. ಮೋದಿ ಮತ್ತು ಅವರ ನೇತೃತ್ವದ ಸರ್ಕಾರದ ವಿರುದ್ಧ ದಾಖಲಾಗುವ ದೂರುಗಳ ವಿಚಾರದಲ್ಲಿ ಕ್ರಮ ತೆಗೆದುಕೊಳ್ಳಲು ಆಯೋಗ ಹಿಂದೇಟು ಹಾಕುತ್ತಿದೆ ಎಂಬುದಕ್ಕೆ ಇದು ನಿದರ್ಶನ. ಅವರು ಮಾಡಿದ ಘೋಷಣೆಯು ಕ್ಷಿಪಣಿ ಪರೀಕ್ಷೆಯ ಯಶಸ್ಸನ್ನು ತಾವು ಪಡೆದುಕೊಳ್ಳುವ ಯತ್ನವಾಗಿತ್ತು. ಆದರೆ ನಿಯಮಗಳ ಅಕ್ಷರಾರ್ಥವನ್ನು ಮಾತ್ರ ಪರಿಗಣಿಸಿದ ಆಯೋಗವು ದೂರದರ್ಶನ ಮತ್ತು ಆಕಾಶವಾಣಿಯು ಮೋದಿ ಅವರ ಭಾಷಣದ ವಿಡಿಯೊ ಮತ್ತು ಧ್ವನಿಸುರುಳಿಯನ್ನು ಬೇರೆ ಕಡೆಯಿಂದ ಪಡೆದುಕೊಂಡಿದ್ದವು; ಹಾಗಾಗಿ ಇದು ನಿಯಮ ಉಲ್ಲಂಘನೆ ಅಲ್ಲ ಎಂದು ಹೇಳಿದೆ. ನಿಯಮಗಳ ಆಶಯವನ್ನು ಪ್ರಧಾನಿಯವರು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಭಾಸವಾಗುತ್ತದೆ. ದುರದೃಷ್ಟದ ವಿಚಾರವೆಂದರೆ, ಚುನಾವಣಾ ಆಯೋಗವು ತಟಸ್ಥ ನಿಲುವಿನ ತೀರ್ಪುಗಾರನಂತೆ ಗೋಚರಿಸುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.