‘ನೀಟ್’ನಲ್ಲಿ (ಯುಜಿ) ಅಕ್ರಮಗಳು ನಡೆದಿವೆ ಎಂಬ ದೂರುಗಳು ವ್ಯಾಪಕವಾಗಿರುವ ಹೊತ್ತಿನಲ್ಲಿ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸಿದ ಯುಜಿಸಿ–ನೆಟ್ ಪರೀಕ್ಷೆಯು ರದ್ದಾಗಿರುವುದು ಪರೀಕ್ಷಾ ವ್ಯವಸ್ಥೆಯ ಬಗ್ಗೆಯೇ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ. ಯುಜಿಸಿ–ನೆಟ್ ಪರೀಕ್ಷೆಯನ್ನು ಒಂಬತ್ತು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದಾರೆ. ನೀಟ್–ಯುಜಿಗೆ ಸರಿಸುಮಾರು 24 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ನೆಟ್ ಪರೀಕ್ಷೆಯನ್ನು ರದ್ದುಪಡಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ‘ಪರೀಕ್ಷೆಯಲ್ಲಿ ಲೋಪಗಳಾಗಿರಬಹುದು’ ಎಂಬ ಕಾರಣ ನೀಡಿದೆ. ಈ ವಿಚಾರವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗುತ್ತದೆ ಎಂದು ಹೇಳಿದೆ. ಅಂದರೆ, ಪರೀಕ್ಷೆಯು ನ್ಯಾಯಸಮ್ಮತವಲ್ಲದ ಬಗೆಯಲ್ಲಿ ನಡೆದಿದೆ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಂತೆ ಆಯಿತು. ಆದರೆ ಯಾವ ರೀತಿಯ ಅಕ್ರಮಗಳು ನಡೆದಿವೆ ಹಾಗೂ ಯಾರು ಆ ಕೃತ್ಯ ಎಸಗಿದ್ದಾರೆ ಎಂಬುದನ್ನು ಸರ್ಕಾರವು ಸ್ಪಷ್ಟಪಡಿಸಿಲ್ಲ. ನೀಟ್ ಅನ್ನು ವೈದ್ಯಕೀಯ ಹಾಗೂ ಅದಕ್ಕೆ ಸಂಬಂಧಿಸಿದ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆಯನ್ನು ನಿರ್ಣಯಿಸಲು ನಡೆಸಲಾಗಿದೆ. ನೆಟ್ ಪರೀಕ್ಷೆಯನ್ನು ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಹಾಗೂ ಕಿರಿಯ ಸಂಶೋಧನಾ ಫೆಲೊಗಳ ಅರ್ಹತೆಯನ್ನು ತೀರ್ಮಾನಿಸಲು ನಡೆಸಲಾಗಿದೆ.
ಈ ಪರೀಕ್ಷೆಗಳ ಸುತ್ತ ಎದ್ದಿರುವ ವಿವಾದಗಳು ಪರೀಕ್ಷೆಯನ್ನು ನಡೆಸಿದ ಬಗೆಯಲ್ಲಿ ಗಂಭೀರ ಸ್ವರೂಪದ ಲೋಪಗಳು ಇದ್ದುದರತ್ತ ಬೊಟ್ಟುಮಾಡಿವೆ. ಅಲ್ಲದೆ, ಈ ವಿವಾದಗಳು ಪರೀಕ್ಷಾ ಏಜೆನ್ಸಿಯ ವಿಶ್ವಾಸಾರ್ಹತೆಗೆ ಬಲವಾದ ಪೆಟ್ಟು ಕೊಟ್ಟಿವೆ. ನೀಟ್–ಯುಜಿ ಕುರಿತ ವಿಚಾರಗಳು ಈಗ ಸುಪ್ರೀಂ ಕೋರ್ಟ್‌ನ ಅಂಗಳದಲ್ಲಿವೆ. ಎನ್‌ಟಿಎ ಬಗ್ಗೆ ಕಟುವಾದ ಮಾತುಗಳನ್ನು ಆಡಿರುವ ಸುಪ್ರೀಂ ಕೋರ್ಟ್, ಆ ಏಜೆನ್ಸಿಗೆ ಕೆಲವು ಗಂಭೀರ ಪ್ರಶ್ನೆಗಳನ್ನು ಕೇಳಿದೆ. ನೀಟ್‌ಗೆ ಹಾಜರಾಗಿದ್ದ 1,500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ನೀಡಿದ್ದ ಕೃಪಾಂಕಗಳನ್ನು ರದ್ದುಪಡಿಸಲಾಗುತ್ತದೆ, ಆ ವಿದ್ಯಾರ್ಥಿಗಳು ಹೊಸದಾಗಿ ನೀಟ್ ಬರೆಯಬಹುದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ವಿವರಣೆ ನೀಡಿದೆ. ನೀಟ್‌ನ
ಪ್ರಶ್ನೆಪತ್ರಿಕೆ ಸೋರಿಕೆ ಆಗಿತ್ತು ಎಂಬ ಆರೋಪಗಳಿವೆ, ಹಲವಾರು ವಿದ್ಯಾರ್ಥಿಗಳು ಟಾಪರ್‌ಗಳಾಗಿ ಹೊರಹೊಮ್ಮಿರುವುದು ಹೇಗೆ ಎಂಬ ಪ್ರಶ್ನೆಗಳಿವೆ. ಈ ಪರೀಕ್ಷೆಯಲ್ಲಿ ನಿರ್ದಿಷ್ಟ ಕಡೆಗಳಲ್ಲಿ ಕೆಲವು ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ನೀಟ್ ವಿಚಾರವಾಗಿ ಕಳೆದ ಕೆಲವು ವರ್ಷಗಳಿಂದ ಗಂಭೀರ ದೂರುಗಳು ಇವೆ. ಹಿಂದಿನ ವರ್ಷಗಳಲ್ಲಿ ಪರೀಕ್ಷೆಯನ್ನು ನಡೆಸಿದ ಬಗೆಯಿಂದ ಪಾಠ ಕಲಿತುಕೊಳ್ಳುವ ಬದಲು, ಅನುಭವ ಸಂಪಾದಿಸುವ ಬದಲು ಹಾಗೂ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬದಲು ಎನ್‌ಟಿಎ ಇನ್ನಷ್ಟು ಗಂಭೀರವಾದ ತಪ್ಪುಗಳನ್ನು ಪ್ರತಿವರ್ಷವೂ ಮಾಡುತ್ತಿದೆ.
ಪರೀಕ್ಷೆಗಳಿಗೆ ಸಿದ್ಧರಾಗಲು ವಿದ್ಯಾರ್ಥಿಗಳು ಬಹಳಷ್ಟು ಸಮಯ, ಶಕ್ತಿ ಮತ್ತು ಹಣವನ್ನು ವ್ಯಯಿಸುತ್ತಾರೆ. ಕೆಲವು ವಿದ್ಯಾರ್ಥಿಗಳು ಯಾವುದೇ ಕೋಚಿಂಗ್ ಪಡೆಯದೆ ತಿಂಗಳುಗಳ ಕಾಲ ತಾವಾಗಿಯೇ ಅಧ್ಯಯನ ನಡೆಸಿರುತ್ತಾರೆ. ಅವರು ಎರಡನೆಯ ಬಾರಿ ಪರೀಕ್ಷೆ ಬರೆಯುವಂತಹ ಪರಿಸ್ಥಿತಿ ಸೃಷ್ಟಿಸುವುದು, ಅವರು ಮಾನಸಿಕವಾಗಿ ಸಂಕಟ ಅನುಭವಿಸುವಂತೆ ಮಾಡುವುದು ಎಷ್ಟರಮಟ್ಟಿಗೆ ಸರಿ? ಪರೀಕ್ಷೆ ನಡೆಸಲು ಅಗತ್ಯವಿರುವ ಅತ್ಯುತ್ತಮ ತಂತ್ರಜ್ಞಾನ ಲಭ್ಯವಿರುವಾಗ ಎನ್‌ಟಿಎ ಅಥವಾ ಇತರ ಯಾವುದೇ ಸಂಸ್ಥೆಗೆ ಲೋಪರಹಿತವಾದ ಪರೀಕ್ಷೆ ನಡೆಸಲು ಸಾಧ್ಯವಾಗಬೇಕು. ಲೋಪಗಳಿಗೆ ಕಾರಣರಾದವರನ್ನು ಶಿಕ್ಷೆಗೆ
ಗುರಿಪಡಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರಾದರೂ ಇದುವರೆಗೆ ಯಾರನ್ನೂ ಉತ್ತರದಾಯಿ ಆಗಿಸಿಲ್ಲ. ನೀಟ್ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ. ಹಾಗೆಯೇ, ಸಚಿವ ಪ್ರಧಾನ್ ಅವರ ರಾಜೀನಾಮೆಗೂ ಒತ್ತಾಯಿಸಿವೆ. ಅಲ್ಲದೆ, ಅವು ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರವಾಗಿ ತನಿಖೆ ನಡೆಸುವಂತೆಯೂ ಕೇಳಿವೆ. ಅವೆಲ್ಲ ಏನೇ ಇರಲಿ, ಲಕ್ಷಾಂತರ ಮಂದಿ ವಿದ್ಯಾರ್ಥಿಗಳ ಜೀವನದ ಮೇಲೆ ಪರಿಣಾಮ ಉಂಟುಮಾಡುವಂತಹ ಹಲವು ತಪ್ಪುಗಳನ್ನು ಮಾಡಿರುವ ಎನ್‌ಟಿಎ ನಾಯಕತ್ವವು ತಾಳಿರುವ ನಿಲುವಿಗೆ ಯಾವುದೇ ಬಗೆಯ ಸಮರ್ಥನೆ ಉಳಿದುಕೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.