ವಿವಿಧ ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ ಆರೋಪಿಗಳ ಮೇಲೆ ನಡೆಯಬಹುದಾದ ದೈಹಿಕ ಹಲ್ಲೆ ಮತ್ತು ದೌರ್ಜನ್ಯ ತಡೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ. ದೇಶದ ಎಲ್ಲ ಪೊಲೀಸ್ ಠಾಣೆಗಳಲ್ಲೂ ಮೂಲೆ ಮೂಲೆಯಲ್ಲಿನ ದೃಶ್ಯಗಳೂ ದಾಖಲಾಗುವಂತೆ ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆಸುಪ್ರೀಂ ಕೋರ್ಟ್ ಮತ್ತೊಮ್ಮೆ ನಿರ್ದೇಶನ ನೀಡಿದೆ. ಸಿಬಿಐ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಜಾರಿ ನಿರ್ದೇಶನಾಲಯ, ಮಾದಕ ಪದಾರ್ಥ ನಿಯಂತ್ರಣ ಬ್ಯೂರೊ, ಕಂದಾಯ ಗುಪ್ತಚರ ನಿರ್ದೇಶನಾಲಯ, ಗಂಭೀರ ಅಪರಾಧಗಳ ತನಿಖಾ ಕಚೇರಿ ಸೇರಿದಂತೆ ತನಿಖೆ ಮತ್ತು ಬಂಧನದ ಅಧಿಕಾರ ಇರುವ ಎಲ್ಲ ಸಂಸ್ಥೆಗಳ ಕಚೇರಿಗಳಲ್ಲೂ ಈ ಮಾದರಿಯ ಕಣ್ಗಾವಲು ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಸೂಚಿಸಿದೆ. ಪೊಲೀಸ್ ಠಾಣೆಗಳನ್ನು ಸಂಪೂರ್ಣವಾಗಿ ಸಿ.ಸಿ. ಟಿ.ವಿ. ಕ್ಯಾಮೆರಾ ಕಣ್ಗಾವಲು ವ್ಯಾಪ್ತಿಗೆ ತರುವಂತೆ ಸುಪ್ರೀಂ ಕೋರ್ಟ್ 2018ರಲ್ಲೇ ಆದೇಶಿಸಿತ್ತು. ಆದರೆ, ಅದು ಈವರೆಗೂ ಸಮರ್ಪಕವಾಗಿ ಜಾರಿಯಾಗಿಲ್ಲ. 2018ರ ಆದೇಶದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರು ಸಲ್ಲಿಸಿರುವ ಪ್ರಮಾಣಪತ್ರಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಬುಧವಾರ ಮತ್ತಷ್ಟು ವಿಸ್ತೃತವಾದ ನಿರ್ದೇಶನಗಳನ್ನು ನೀಡಿದೆ. ‘ಪೊಲೀಸ್ ಠಾಣೆಗಳ ಪ್ರವೇಶ ದ್ವಾರದಿಂದ ಆರಂಭಿಸಿ ಲಾಕಪ್‌ವರೆಗಿನ ಸಂಪೂರ್ಣ ಪ್ರದೇಶವು ಸಿ.ಸಿ. ಟಿ.ವಿ. ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಇರಬೇಕು. ಈ ಕ್ಯಾಮೆರಾಗಳಲ್ಲಿ ಸೆರೆಯಾಗುವ ದೃಶ್ಯಾವಳಿಗಳನ್ನು 18 ತಿಂಗಳವರೆಗೆ ಸಂಗ್ರಹಿಸಿ ಇಡಬೇಕು’ ಎಂದೂ ನ್ಯಾಯಾಲಯ ತಾಕೀತು ಮಾಡಿದೆ. ಪೊಲೀಸ್ ದೌರ್ಜನ್ಯ ತಡೆಯುವುದಷ್ಟೇ ಅಲ್ಲದೆ, ದೌರ್ಜನ್ಯಕ್ಕೆ ಒಳಗಾದವರು ಮತ್ತು ದೌರ್ಜನ್ಯದಿಂದ ಮೃತರಾಗುವವರ ಕುಟುಂಬದವರು ನ್ಯಾಯ ಪಡೆಯುವುದಕ್ಕೆ ಪೂರಕವಾಗಿ ಸಾಕ್ಷ್ಯಗಳನ್ನು ಒದಗಿಸಲು ಅನುಕೂಲವಾಗಲೆಂದೇ ಸುಪ್ರೀಂ ಕೋರ್ಟ್ ಈ ನಿರ್ದೇಶನಗಳನ್ನು ನೀಡಿದೆ.
ಪೊಲೀಸ್ ಠಾಣೆಗಳನ್ನು ಸಂಪೂರ್ಣವಾಗಿ ಸಿ.ಸಿ. ಟಿ.ವಿ. ಕ್ಯಾಮೆರಾ ಕಣ್ಗಾವಲಿಗೆ ತರುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು 2006ರಲ್ಲೇ ಶಿಫಾರಸು ಮಾಡಿತ್ತು. 2018ರಲ್ಲಿ ಸುಪ್ರೀಂ ಕೋರ್ಟ್ ಕೂಡ ಆದೇಶ ಹೊರಡಿಸಿತ್ತು. ಆದರೆ, ಹೆಚ್ಚಿನ ಪೊಲೀಸ್ ಠಾಣೆಗಳಲ್ಲಿ ಈ ಆದೇಶದ ಪಾಲನೆಯೇ ಆಗಿಲ್ಲ. ದೇಶದಲ್ಲಿ ಪೊಲೀಸ್ ಕಸ್ಟಡಿ ಅಥವಾ ನ್ಯಾಯಾಂಗ ಬಂಧನದಲ್ಲಿದ್ದಾಗಲೇ ಪ್ರತಿದಿನ ಐವರು ಮೃತರಾಗುತ್ತಾರೆ ಎಂದು ‘ದೌರ್ಜನ್ಯಗಳ ವಿರುದ್ಧದ ರಾಷ್ಟ್ರೀಯ ಆಂದೋಲನ’ (ಎನ್‌ಸಿಎಟಿ) 2019ರಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ಹೇಳಿತ್ತು. 2005ರಿಂದ 2018ರ ಅವಧಿಯಲ್ಲಿ ಭಾರತದಲ್ಲಿ 1,200 ಲಾಕಪ್ ಸಾವುಗಳು ಸಂಭವಿಸಿದ್ದು, ಬರೀ ಏಳು ಪ್ರಕರಣಗಳಲ್ಲಿ ಪೊಲೀಸರಿಗೆ ಶಿಕ್ಷೆಯಾಗಿದೆ ಎಂಬ ಸಂಗತಿಯು ಎರಡು ಸ್ವಯಂ ಸೇವಾ ಸಂಸ್ಥೆಗಳು ನಡೆಸಿದ ಅಧ್ಯಯನದಲ್ಲಿ ಕಂಡುಬಂದಿತ್ತು. ಕಟ್ಟುನಿಟ್ಟಿನ ನಿಯಮಗಳು, ಕಣ್ಗಾವಲು ವ್ಯವಸ್ಥೆ ಇದ್ದ ಮಾತ್ರಕ್ಕೆ ಪೊಲೀಸ್ ದೌರ್ಜನ್ಯ ಪ್ರಕರಣಗಳು ಕೊನೆಯಾಗುತ್ತವೆ ಎಂದು ಹೇಳಲಾಗದು. ಕಣ್ಗಾವಲು ಕೊರತೆಯೊಂದೇ ಈ ಸಮಸ್ಯೆಗೆ ಕಾರಣ ಎನ್ನಲೂ ಆಗದು. ಪೊಲೀಸ್ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ನೇಮಕಾತಿಯಲ್ಲಿ ನಡೆಯುವ ಭ್ರಷ್ಟಾಚಾರ, ತರಬೇತಿಯ ಕೊರತೆ ಮತ್ತು ಸಂವೇದನಾಶೀಲತೆಯನ್ನು ರೂಢಿಸಿಕೊಳ್ಳದೇ ಇರುವುದು ಈ ಸಮಸ್ಯೆಯ ಹಿಂದಿರುವ ಬಹುಮುಖ್ಯ ಕಾರಣಗಳು. ದೊಡ್ಡ ಮೊತ್ತದ ಲಂಚ ನೀಡಿ ಇಲಾಖೆಗೆ ಸೇರುವವರು ಮತ್ತು ನಿರ್ದಿಷ್ಟ ಠಾಣೆಯೇ ಬೇಕೆಂದು ವರ್ಗಾವಣೆ ಮಾಡಿಸಿಕೊಂಡು ಬರುವವರು ನಿಯಮಗಳಿಗೆ ಬದ್ಧವಾಗಿ ಕೆಲಸ ಮಾಡುತ್ತಾರೆ ಎಂದು ನಿರೀಕ್ಷಿಸುವುದಾದರೂ ಹೇಗೆ? ನೇಮಕಾತಿ ಮತ್ತು
ವರ್ಗಾವಣೆಗಳನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಿ, ಪೊಲೀಸ್ ಮನೋಭಾವದಲ್ಲಿ ಆಮೂಲಾಗ್ರ ಬದಲಾವಣೆ ತಂದರೆ ಮಾತ್ರ ದೌರ್ಜನ್ಯಕ್ಕೆ ಕಡಿವಾಣ ಬೀಳಬಹುದು. ಜನರೊಂದಿಗೆ ಸಂವೇದನಾಶೀಲರಾಗಿ ನಡೆದುಕೊಳ್ಳುವ ಮತ್ತು ಸೂಕ್ಷ್ಮಮತಿಗಳಾಗಿ ವರ್ತಿಸುವುದರ ಕುರಿತು ಪೊಲೀಸರಿಗೆ ಸರಿಯಾದ ತರಬೇತಿ ನೀಡುವ ಅಗತ್ಯವೂ ಇದೆ. ಜನರ ಕುರಿತು ಪೊಲೀಸರಲ್ಲಿ ಇರುವ ಭಾವನೆ ಮತ್ತು ಪೊಲೀಸರ ಕುರಿತು ಅಧಿಕಾರಸ್ಥರಲ್ಲಿ ಇರುವ ಭಾವನೆಯನ್ನು ಬದಲಿಸಿದರೆ ಮಾತ್ರ ಪೊಲೀಸ್ ಠಾಣೆಗಳು ಹೆಚ್ಚು ಜನಸ್ನೇಹಿಯಾಗಲು ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.