ADVERTISEMENT

ಚಿದಂಬರಂ ಬಂಧನ: ಪ್ರಕ್ರಿಯೆಯೂ ನಿಯಮಬದ್ಧವಾಗಿಯೇ ಇರಬೇಕು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 20:00 IST
Last Updated 23 ಆಗಸ್ಟ್ 2019, 20:00 IST
.
.   

ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದಲ್ಲಿ ಹಣಕಾಸು, ಗೃಹದಂತಹ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದ ಪಿ. ಚಿದಂಬರಂ ಅವರನ್ನು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯವು ಆ. 26ರವರೆಗೆ ಸಿಬಿಐ ವಶಕ್ಕೆ ಒಪ್ಪಿಸಿದೆ. ಐಎನ್‌ಎಕ್ಸ್‌ ಮೀಡಿಯಾ ಕಂಪನಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದ ವಿಚಾರವಾಗಿ ನೀಡಿರುವ ಆದೇಶ ಇದು. ಚಿದಂಬರಂ ಅವರನ್ನು ನವದೆಹಲಿಯ ಅವರ ನಿವಾಸದಿಂದ ಬುಧವಾರ ರಾತ್ರಿ ನಾಟಕೀಯವಾಗಿ ಬಂಧಿಸಿ ಕರೆದೊಯ್ದ ರೀತಿಯು ಒಂದಿಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಬೆಳವಣಿಗೆಗಳನ್ನು ವಿಶ್ಲೇಷಿಸುವ ಮುನ್ನ ಭಾರತೀಯ ನ್ಯಾಯಶಾಸ್ತ್ರದಲ್ಲಿ ಇರುವ ಎರಡು ಪ್ರಮುಖ ಮಾತುಗಳನ್ನು ನೆನಪಿಗೆ ತಂದುಕೊಳ್ಳಬೇಕು. ಮೊದಲನೆಯದು, ಎಂತಹುದೇ ಸಂದರ್ಭದಲ್ಲೂ ನ್ಯಾಯ ತೀರ್ಮಾನ ಆಗಲೇಬೇಕು. ಪರಿಣಾಮಗಳು ಏನೇ ಇದ್ದರೂ ನ್ಯಾಯದಾನವು ನ್ಯಾಯಬದ್ಧವಾಗಿ ಆಗಬೇಕು. ಎರಡನೆಯ ಮಾತು, ನಿರ್ದಿಷ್ಟವಾಗಿ ಕ್ರಿಮಿನಲ್‌ ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದ್ದು. ಅದು, ‘ಅಪರಾಧ ಸಾಬೀತಾಗುವವರೆಗೂ ಆರೋಪಿಯು ನಿರ್ದೋಷಿ’ ಎಂದು ಹೇಳುತ್ತದೆ. ಇದರ ಅರ್ಥವನ್ನು ವಿಸ್ತರಿಸಿದಾಗ, ಅಪರಾಧ ಸಾಬೀತಾಗುವವರೆಗೆ ವ್ಯಕ್ತಿಯನ್ನು ಎಲ್ಲ ಸಂದರ್ಭಗಳಲ್ಲೂ ಜೈಲಿಗೆ ಕಳುಹಿಸಲೇಬೇಕೆಂದಿಲ್ಲ, ಆತನಿಗೆ ಜಾಮೀನು ಕೊಡಬಹುದು ಎನ್ನುವ ಹೊಳಹು ಸಿಗುತ್ತದೆ. ಈ ಎರಡು ಮೂಲಭೂತ ನ್ಯಾಯಿಕ ತತ್ವಗಳನ್ನು ಆಧಾರವಾಗಿ ಇರಿಸಿಕೊಂಡು ಚಿದಂಬರಂ ಬಂಧನ ಪ್ರಕರಣವನ್ನು ಅವಲೋಕಿಸಿದಾಗ ಕಳವಳ ಮೂಡಿ ಸುವ ಅಂಶಗಳು ಗೋಚರವಾಗುತ್ತವೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್‌ ತಿರಸ್ಕರಿಸಿದ ನಂತರ, ಚಿದಂಬರಂ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ‘ಭಾರಿ ಪ್ರಮಾಣದ’ ಭ್ರಷ್ಟಾಚಾರ ಈ ಪ್ರಕರಣದಲ್ಲಿ ನಡೆದಿದೆ ಎಂದು ಸಿಬಿಐ ಆರೋಪಿಸಿದೆ. ಆದರೆ, ಬಂಧನಕ್ಕೂ ಮೊದಲು, ಚಿದಂಬರಂ ಸಲ್ಲಿಸಿದ ಅರ್ಜಿಯ ವಿಚಾರ ವಾಗಿ ಸುಪ್ರೀಂ ಕೋರ್ಟ್‌ನ ತೀರ್ಮಾನ ಏನಿರುತ್ತದೆ ಎಂಬುದನ್ನು ಕಾದು ನೋಡಬಹುದಿತ್ತಲ್ಲವೇ?

ಚಿದಂಬರಂ ಅವರನ್ನು ಬಂಧಿಸಲು ಸಿಬಿಐ ಅಧಿಕಾರಿಗಳು ಅವರ ಮನೆಯ ಗೋಡೆ ಹಾರಿದ್ದು, ರಾತ್ರಿ ವೇಳೆ ಮನೆ ಬಾಗಿಲಿಗೆ ನೋಟಿಸ್‌ ಅಂಟಿಸಿ, ಎರಡು ತಾಸಿನೊಳಗೆ ಸಿಬಿಐ ಮುಂದೆ ಹಾಜರಾಗಬೇಕು ಎಂದು ತಾಕೀತು ಮಾಡಿದ್ದು... ಇವೆಲ್ಲವುಗಳ ಹಿಂದೆ ಇರುವುದು ದ್ವೇಷ ರಾಜಕಾರಣ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಅಷ್ಟಕ್ಕೂ, ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯ ವಿಚಾರದಲ್ಲಿ ಸಿಬಿಐ ಸಂಪೂರ್ಣವಾಗಿ ನಿಷ್ಪಕ್ಷಪಾತಿ ಎನ್ನುವ ಸ್ಥಿತಿ ಇಲ್ಲ. ಈ ತನಿಖಾ ಸಂಸ್ಥೆಯನ್ನು ‘ಪಂಜರದ ಗಿಣಿ’ ಎಂದು ಸುಪ್ರೀಂ ಕೋರ್ಟ್‌ 2013ರಲ್ಲಿ ಒಮ್ಮೆ ಹೇಳಿತ್ತು. ನಂತರದಲ್ಲಿ ಇದೇ ಮಾತನ್ನು ಬಿಜೆಪಿ ನಾಯಕರೂ ಹಲವಾರು ಬಾರಿ ಉಲ್ಲೇಖಿಸಿದ್ದರು, ರಾಜಕೀಯವಾಗಿಯೂ ಬಳಸಿಕೊಂಡಿದ್ದರು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರು ‘ಪ್ರಭಾವಿಗಳಿಗೆ ಸಂಬಂಧಿಸಿದ ಮತ್ತು ರಾಜಕೀಯವಾಗಿ ಸೂಕ್ಷ್ಮವಾಗಿರುವ ಹಲವು ಪ್ರಕರಣಗಳ ವಿಚಾರದಲ್ಲಿ ನ್ಯಾಯಿಕ ಮಾನದಂಡಗಳ ಎತ್ತರಕ್ಕೆ ಸಿಬಿಐ ಏರಿಲ್ಲ. ಇಂತಹ ಲೋಪ ಆಗೊಮ್ಮೆ ಈಗೊಮ್ಮೆ ಮಾತ್ರ ಆಗಿದ್ದಲ್ಲ...’ ಎಂದು ಇತ್ತೀಚೆಗಷ್ಟೇ ಹೇಳಿದ್ದಾರೆ. ದೇಶದ ಉನ್ನತ ತನಿಖಾ ಸಂಸ್ಥೆಯು ಅತ್ಯುನ್ನತ ನ್ಯಾಯಾಲಯದಿಂದ ಮತ್ತು ನ್ಯಾಯಾಂಗದ ಅತ್ಯುನ್ನತ ಹುದ್ದೆಯಲ್ಲಿ ಇರುವವರಿಂದ ಈ ರೀತಿ ಕರೆಸಿಕೊಂಡಿದ್ದರ ಪರಿಣಾಮವಾಗಿ, ಈ ತನಿಖಾ ಸಂಸ್ಥೆಯ ನಡೆಯನ್ನು ಎಲ್ಲ ಸಂದರ್ಭಗಳಲ್ಲೂ ಪ್ರಶ್ನಾತೀತ ಎಂದು ಭಾವಿಸಬೇಕಾಗಿಲ್ಲ. ಹಾಗಾಗಿಯೇ, ಈಗ ನಡೆದಿರುವ ಬಂಧನಕ್ಕೆ ಪ್ರತಿಕ್ರಿಯೆಯಾಗಿ ವ್ಯಕ್ತವಾಗಿರುವ, ‘ವಿರೋಧ ಪಕ್ಷದ ಪ್ರಮುಖ ನಾಯಕರೊಬ್ಬರನ್ನು ಭ್ರಷ್ಟ ಎಂದು ತೋರಿಸುವ ಬಯಕೆ ಸರ್ಕಾರಕ್ಕೆ ಇತ್ತು’ ಎಂಬ ಅಭಿಪ್ರಾಯವನ್ನು ಸಾರಾಸಗಟಾಗಿ ತಳ್ಳಿಹಾಕಲು ಆಗದು. ಚಿದಂಬರಂ ಅವರು ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಕಾನೂನು ಉಲ್ಲಂಘಿಸಿರಬಹುದು. ಪರಿಣಾಮಗಳು ಏನೇ ಇದ್ದರೂ, ವ್ಯಕ್ತಿ ಎಷ್ಟೇ ದೊಡ್ಡವನಾದರೂ ತಪ್ಪು ಎಸಗಿದ್ದರೆ ಕಾನೂನಿನ ಅನ್ವಯ ಶಿಕ್ಷೆಗೆ ಗುರಿಯಾಗಲೇಬೇಕು. ಆದರೆ, ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸುವ ಪ್ರಕ್ರಿಯೆ ಕೂಡ ಕಾನೂನಿಗೆ ಅನುಗುಣವಾಗಿ ನಡೆಯಬೇಕು, ನ್ಯಾಯಿಕ ತತ್ವಗಳ ಕಡ್ಡಾಯ ಪಾಲನೆ ಅಲ್ಲಿ ಆಗಬೇಕು. ವ್ಯಕ್ತಿಯೊಬ್ಬ ಆರೋಪಿ ಸ್ಥಾನದಲ್ಲಿದ್ದಾನೆ ಎಂದಮಾತ್ರಕ್ಕೆ ಅವನ ಹಕ್ಕುಗಳನ್ನು ನಿರಾಕರಿಸುವ ಕೆಲಸ ಆಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT