ದೇಶದ ಉನ್ನತ ಸಾಂಸ್ಕೃತಿಕ ಸಂಸ್ಥೆಗಳು ಹಾಗೂ ಅಕಾಡೆಮಿಗಳ ಕಾರ್ಯವೈಖರಿಯಲ್ಲಿ ಪ್ರಮುಖ ಬದಲಾವಣೆಯನ್ನು ಸೂಚಿಸಿ ಸಂಸದೀಯ ಸಮಿತಿಯೊಂದು ನೀಡಿರುವ ವರದಿಯು ಸಾಂಸ್ಕೃತಿಕ ಕ್ಷೇತ್ರವನ್ನು ಸರ್ಕಾರದ ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಉದ್ದೇಶ ಹೊಂದಿರುವಂತಿದೆ. ವಿವಿಧ ಕಾರಣಗಳಿಂದಾಗಿ ಪ್ರಶಸ್ತಿಗಳನ್ನು ಮರಳಿಸುವ ಮನೋಭಾವದ ಬರಹಗಾರರನ್ನು ಸಾಂಸ್ಕೃತಿಕ ಅಕಾಡೆಮಿಗಳ ಪ್ರಶಸ್ತಿ– ಪುರಸ್ಕಾರಗಳಿಂದ ದೂರವಿಡುವುದಕ್ಕೆ ಅವಕಾಶ ಕಲ್ಪಿಸುವ ವರದಿಯಲ್ಲಿನ ಶಿಫಾರಸು, ಸಾಂಸ್ಕೃತಿಕ ವಲಯದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಕಲ್ಪಿಸಲಿದೆ. ಸಾರಿಗೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಕುರಿತ ಸ್ಥಾಯಿ ಸಮಿತಿ ನೀಡಿರುವ ವರದಿಯು ರಾಜಕೀಯ ಪ್ರತಿಭಟನೆಯ ಭಾಗವಾಗಿ ಪ್ರಶಸ್ತಿ ಹಿಂತಿರುಗಿಸುವುದನ್ನು ನಿರ್ಬಂಧಿಸಬೇಕೆಂದು ಹೇಳಿದೆ.
‘ರಾಷ್ಟ್ರೀಯ ಅಕಾಡೆಮಿಗಳು ಮತ್ತು ಇತರೆ ಸಾಂಸ್ಕೃತಿಕ ಸಂಸ್ಥೆಗಳ ಕಾರ್ಯನಿರ್ವಹಣೆ’ ಶೀರ್ಷಿಕೆಯ ವರದಿ, ಇನ್ನು ಮುಂದೆ ಪ್ರಶಸ್ತಿಗಳನ್ನು ಸ್ವೀಕರಿಸುವವರಿಂದ, ರಾಜಕೀಯ ಕಾರಣಕ್ಕಾಗಿ ಸಾಂಸ್ಕೃತಿಕ ಪ್ರಶಸ್ತಿಗಳನ್ನು ಹಿಂತಿರುಗಿಸುವುದಿಲ್ಲ ಹಾಗೂ ಪ್ರಶಸ್ತಿಗಳಿಗೆ ಅಗೌರವ ತೋರುವಂತೆ ವರ್ತಿಸುವುದಿಲ್ಲ ಎಂದು ಹೇಳಿಕೆ ಪಡೆಯುವಂತೆ ಶಿಫಾರಸು ಮಾಡಿದೆ. ಕನ್ನಡ ಲೇಖಕ ಎಂ.ಎಂ. ಕಲಬುರ್ಗಿ ಅವರ ಕೊಲೆಯ ನಂತರ ವಿವಿಧ ಭಾಷೆಗಳ 39 ಲೇಖಕರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಹಿಂತಿರುಗಿಸಿರುವುದನ್ನು ವರದಿ ನೆನಪಿಸಿದೆ. ಸಾಂಸ್ಕೃತಿಕ ಪುರಸ್ಕಾರಗಳ ಸಮಗ್ರತೆ ಹಾಗೂ ಘನತೆಯನ್ನು ಉಳಿಸುವ ದೃಷ್ಟಿಯಿಂದ ಪ್ರಶಸ್ತಿಗಳನ್ನು ರಾಜಕೀಯ ದಾಳಗಳಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಪುರಸ್ಕೃತರು ಭವಿಷ್ಯದಲ್ಲಿ ಯಾವುದೇ ಸಮಯದಲ್ಲಿ ಪ್ರಶಸ್ತಿಯನ್ನು ಅವಮಾನಿಸುವಂತಿಲ್ಲ ಹಾಗೂ ರಾಜಕೀಯ ಪ್ರತಿಭಟನೆಯ ಸಂಕೇತದ ರೂಪದಲ್ಲಿ ಪ್ರಶಸ್ತಿಗಳನ್ನು ಹಿಂತಿರುಗಿಸುವಂತಿಲ್ಲ ಎಂದು ಶಿಫಾರಸು ಮಾಡಿರುವ ವರದಿ, ಪ್ರಶಸ್ತಿ ಮರಳಿಸುವವರನ್ನು ಮುಂದಿನ ವರ್ಷಗಳಲ್ಲಿ ಯಾವುದೇ ಪ್ರಶಸ್ತಿಗೆ ಪರಿಗಣಿಸಬಾರದು ಎಂದೂ ಅಭಿಪ್ರಾಯಪಟ್ಟಿದೆ.
ಷರತ್ತು– ನಿರ್ಬಂಧಗಳ ಮೂಲಕ ಪ್ರಶಸ್ತಿಯ ಘನತೆಯನ್ನು ಸಂರಕ್ಷಿಸಲು ಮುಂದಾಗುವುದೇ ಪುರಸ್ಕಾರವೊಂದರ ವರ್ಚಸ್ಸನ್ನು ಕುಗ್ಗಿಸುವ ಮೊದಲ ಹಂತವಾಗಿದೆ ಎನ್ನುವುದನ್ನು ಸಮಿತಿ ಮರೆತಂತಿದೆ; ಈ ನಡವಳಿಕೆ ಪ್ರಜಾಪ್ರಭುತ್ವದ ಅಣಕವಾಗಿದೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವೂ ಆಗಿದೆ. ಪ್ರಶಸ್ತಿಗಳನ್ನು ಹಿಂತಿರುಗಿಸುವುದು ಕೂಡ ಪ್ರತಿಭಟನೆಯ ಒಂದು ರೂಪವಾಗಿದೆ ಹಾಗೂ ಅದು ಪ್ರಜಾಪ್ರಭುತ್ವ ನೀಡಿರುವ ಹಕ್ಕಾಗಿದೆ. ಆ ಹಕ್ಕನ್ನು ಮೊಟಕುಗೊಳಿಸುವ ಯಾವುದೇ ಪ್ರಯತ್ನಕ್ಕೆ ಕೈಹಾಕುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು. ಬರಹಗಾರರು ಹಾಗೂ ಕಲಾವಿದರು ನಿರಾಕರಿಸಲಾಗದಂತಹ ಘನತೆಯನ್ನು ಪ್ರಶಸ್ತಿಗಳು ಪಡೆಯಬೇಕೇ ಹೊರತು, ಸಲ್ಲದ ಷರತ್ತುಗಳನ್ನು ವಿಧಿಸಿ ಅವುಗಳ ಘನತೆಯನ್ನು ಕುಗ್ಗಿಸಬಾರದು. ಷರತ್ತುಬದ್ಧ ಪ್ರಶಸ್ತಿಗಳು ನೀಡುವವರಿಗೂ ಪಡೆಯುವವರಿಗೂ ಶೋಭೆ ತರುವುದಿಲ್ಲ. ಪ್ರಸ್ತುತ, ಪ್ರಶಸ್ತಿಗಳನ್ನು ಷರತ್ತುಗಳ ಚೌಕಟ್ಟಿನಲ್ಲಿ ಇರಿಸಲು ಹೊರಟಿರುವವರು, ರಾಜಕೀಯ ಅಭಿಪ್ರಾಯಗಳನ್ನು ಸಾಂಸ್ಕೃತಿಕ ಕ್ಷೇತ್ರದ ಸಾಧಕರು ಹೊಂದಿರಬಾರದು ಅಥವಾ ಅವರ ಅಭಿಪ್ರಾಯಗಳು ಸರ್ಕಾರದ ವಿರುದ್ಧ ಇರಬಾರದು ಎಂದು ಹೇಳಲು ಹೊರಟಂತಿದೆ. ಸ್ವಾಯತ್ತ ಸಂಸ್ಥೆಗಳಾದ ಅಕಾಡೆಮಿಗಳು ಸರ್ಕಾರದ ನಿಯಂತ್ರಣದಲ್ಲಿರಬೇಕು ಎನ್ನುವ ಅಪೇಕ್ಷೆ ಸರಿಯಾದುದಲ್ಲ. ಪ್ರಶಸ್ತಿ ಪಡೆಯುವ ವ್ಯಕ್ತಿ ಸರ್ಕಾರಕ್ಕೆ ನಿಷ್ಠನಾಗಿರಬೇಕೆಂದು ಬಯಸುವುದೂ ಸರಿಯಲ್ಲ. ಆರೋಗ್ಯಕರ ಸಮಾಜವು ಬರಹಗಾರರು ಮತ್ತು ಕಲಾವಿದರನ್ನು ವಿಮರ್ಶಕರ ರೂಪದಲ್ಲಿ ನೋಡಬೇಕೇ ಹೊರತು ಭಟ್ಟಂಗಿಗಳನ್ನಾಗಿ ಅಲ್ಲ.
ಲೇಖಕ ಅಥವಾ ಕಲಾವಿದನೊಬ್ಬ ಪ್ರಶಸ್ತಿಯನ್ನು ಮರಳಿಸಲು ನಿರ್ಧರಿಸಿದಾಗ, ಆ ಪರಿಸ್ಥಿತಿ ಸರ್ಕಾರದ ಆತ್ಮಾವಲೋಕನಕ್ಕೆ ಕಾರಣವಾಗಬೇಕೇ ಹೊರತು ಕೆರಳುವಿಕೆಗೆ ಅಲ್ಲ. ಆರೋಗ್ಯ, ಅಭಿರುಚಿ ಹಾಗೂ ಸೃಜನಶೀಲತೆಯನ್ನು ಸಮಾಜ ಹೊಂದುವಲ್ಲಿ ಮಹತ್ವದ ಕೊಡುಗೆ ನೀಡುವ ಬರಹಗಾರರು ಹಾಗೂ ಕಲಾವಿದರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವುದು ಅವರಿಗೆ ಮಾಡುತ್ತಿರುವ ಉಪಕಾರವೆಂದು ಸರ್ಕಾರ ಅಥವಾ ಸಾಂಸ್ಕೃತಿಕ ಸಂಸ್ಥೆಗಳು ಭಾವಿಸಲೂಬಾರದು. ಕಲೆ ಮತ್ತು ಸಂಸ್ಕೃತಿಯ ಪೋಷಣೆ ಸರ್ಕಾರದ ಕರ್ತವ್ಯವಾಗಿದೆ. ಗಣತಂತ್ರ ವ್ಯವಸ್ಥೆಯಲ್ಲಿ ಸರ್ಕಾರ ಸಾಂಸ್ಕೃತಿಕ ಪರಿಚಾರಿಕೆಯನ್ನು ಮಾಡಬಹುದೇ ಹೊರತು, ನಿಯಂತ್ರಣವನ್ನು ಮಾಡುವುದಕ್ಕೆ ಅವಕಾಶವಿಲ್ಲ. ಪ್ರಶಸ್ತಿ ಪುರಸ್ಕೃತರು ತಮ್ಮ ವೈಚಾರಿಕತೆ ಮತ್ತು ರಾಜಕೀಯ ಪ್ರಜ್ಞೆಯನ್ನು ಅಮಾನತ್ತಿನಲ್ಲಿಡಬೇಕೆಂದು ಬಯಸುವುದು ಯಾವುದೇ ಸರ್ಕಾರಕ್ಕೆ ಶೋಭಿಸುವುದಿಲ್ಲ. ಷರತ್ತುಬದ್ಧ ಪ್ರಶಸ್ತಿಗಳನ್ನು ನೀಡುವ ಬದಲು, ಅವುಗಳನ್ನು ನೀಡದಿರುವುದರಲ್ಲೇ ಸರ್ಕಾರಕ್ಕೆ ಗೌರವವಿದೆ, ಸಾಹಿತ್ಯಿಕ–ಸಾಂಸ್ಕೃತಿಕ ಕ್ಷೇತ್ರದ ಒಳಿತೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.