ಇಂಟರ್ನೆಟ್ ಸಂಪರ್ಕವು ದೇಶದ ಒಟ್ಟು ಆಂತರಿಕ ಉತ್ಪಾದನೆಯನ್ನು (ಜಿಡಿಪಿ) ಹೆಚ್ಚಿಸಲು ಪೂರಕವಾಗಿ ಕೆಲಸ ಮಾಡುತ್ತದೆ ಎಂದು ಹೇಳಲು ಅಧ್ಯಯನಗಳ ಆಧಾರವು ಈಗಾಗಲೇ ಇದೆ. ಕೊರೊನಾ ವೈರಾಣು ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್‌ಡೌನ್ ಜಾರಿಗೊಳಿಸಿದ ಸಂದರ್ಭದಲ್ಲಿ, ಸೇವಾ ವಲಯದ ಹತ್ತು ಹಲವು ಬಗೆಯ ಕೆಲಸಗಳು ಕೆಲವು ಹಳ್ಳಿಗಳಿಂದ, ಎರಡು ಹಾಗೂ ಮೂರನೆಯ ಹಂತದ ನಗರಗಳಿಂದ, ಬೆಂಗಳೂರಿನಂತಹ ದೊಡ್ಡ ನಗರಗಳ ಮನೆಮನೆಗಳಿಂದ ನಡೆದಿದ್ದನ್ನು ದೇಶ ಗಮನಿಸಿದೆ. ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಇಲ್ಲದ ಊರುಗಳಿಂದ ಈ ಬಗೆಯ ಕೆಲಸ ಸಾಧ್ಯವಾಗದೇ ಇದ್ದಿದ್ದು ಕೂಡ ಅನುಭವಕ್ಕೆ ಬಂದಿದೆ.
ಈಗ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವ ‘ಪ್ರೈಮ್ ಮಿನಿಸ್ಟರ್– ವೈಫೈ ಆಕ್ಸೆಸ್ ನೆಟ್‌ವರ್ಕ್ ಇಂಟರ್‌ಫೇಸ್’ (ಪಿಎಂ–ವಾಣಿ) ಯೋಜನೆಯನ್ನು ಕೊರೊನಾ ಸಂದರ್ಭ ಹಾಗೂ ಸೇವಾ ವಲಯದ ಚಟುವಟಿಕೆಗಳನ್ನು ದೇಶದ ಬೇರೆ ಬೇರೆ ಮೂಲೆಗಳಿಂದ ನಡೆಸುವುದರ ಪ್ರಯೋಜನಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಯತ್ನಿಸಬಹುದು. ಹಾಗೆ ಮಾಡಿದಾಗ, ಈ ಯೋಜನೆಯ ಅಗಾಧ ಸಾಧ್ಯತೆಗಳು ಮೇಲ್ನೋಟಕ್ಕೇ ಕಾಣುತ್ತವೆ. ದೇಶದಲ್ಲಿ ಈ ಹಿಂದೆ ಸಾರ್ವಜನಿಕರಿಗೆ ಸ್ಥಿರ ದೂರವಾಣಿ ಸೇವೆಗಳನ್ನು ನೀಡುತ್ತಿದ್ದ ಎಸ್‌ಟಿಡಿ ಬೂತ್‌ಗಳ ಮಾದರಿಯಲ್ಲೇ, ಇಂಟರ್ನೆಟ್ ಸೌಲಭ್ಯ ಕಲ್ಪಿಸುವ ಸ್ವಾಗತಾರ್ಹ ಯೋಜನೆ ಇದು. ಸಣ್ಣ ಅಂಗಡಿಗಳ ಮಾಲೀಕರೂ ವೈ–ಫೈ ಹಾಟ್‌ಸ್ಪಾಟ್ ಮೂಲಕ ಇಂಟರ್ನೆಟ್ ಸೇವೆಗಳನ್ನು ನಿಗದಿತ ಶುಲ್ಕ ಪಡೆದು, ಇತರರಿಗೆ ನೀಡುವುದು ಈ ಯೋಜನೆಯ ಅಡಿಯಲ್ಲಿ ಸಾಧ್ಯವಾಗಲಿದೆ. ಇದು ಸಣ್ಣ ಸಣ್ಣ ಅಂಗಡಿಗಳ ಮಾಲೀಕರಿಗೂ ಹೆಚ್ಚುವರಿ ಆದಾಯ ಮೂಲವೊಂದನ್ನು ಕಂಡುಕೊಳ್ಳಲು ನೆರವಾಗುವ ನಿರೀಕ್ಷೆ ಇದೆ.
ದೇಶದಲ್ಲಿ ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ನೀಡುವ ಪ್ರಮಾಣದಲ್ಲಿ ಈಚಿನ ವರ್ಷಗಳಲ್ಲಿ ಭಾರಿ ಹೆಚ್ಚಳ ಆಗಿದ್ದರೂ, ಇಂಟರ್ನೆಟ್ ಸೇವೆಗಳು ಅಗ್ಗದ ದರಕ್ಕೆ ಲಭಿಸುವಂತೆ ಆಗಿದ್ದರೂ, ದೇಶದ ಗ್ರಾಮಾಂತರ ಪ್ರದೇಶಗಳಲ್ಲಿ ಬ್ರಾಡ್‌ಬ್ಯಾಂಡ್ ಸೇವೆಗಳು ಈಗಲೂ ಲಭ್ಯವಾಗುತ್ತಿಲ್ಲ. ಇದೇ ಕಾರಣದಿಂದಾಗಿ, ಅಂತಹ ಪ್ರದೇಶಗಳಲ್ಲಿ ಇಂಟರ್ನೆಟ್ ಆಧರಿಸಿ ಪಡೆಯಬಹುದಾದ ಡಿಜಿಟಲ್ ಪಾವತಿ ಸೇರಿದಂತೆ ಯಾವ ಸೇವೆಗಳನ್ನೂ ಲಭ್ಯವಾಗಿಸಲು ಆಗುತ್ತಿಲ್ಲ. ಕೋವಿಡ್–19 ಸಂದರ್ಭದಲ್ಲಿ ವ್ಯಾಪಕವಾಗಿರುವ ಆನ್‌ಲೈನ್ ಶಿಕ್ಷಣ ಕೂಡ ದೇಶದ ಗ್ರಾಮೀಣ ಪ್ರದೇಶಗಳ ಹಲವರಿಗೆ ಮರೀಚಿಕೆಯಾಗಿ ಉಳಿದಿದೆ.
ಪುಟಾಣಿಗಳಿಗೆ ಆನ್‌ಲೈನ್ ಮೂಲಕ ಶಿಕ್ಷಣ ನೀಡುವುದು ಎಷ್ಟು ಸರಿ, ಎಷ್ಟು ತಪ್ಪು ಎಂಬುದರ ಬಗ್ಗೆ ವಿಸ್ತೃತ ಚರ್ಚೆ ಇದೆಯಾದರೂ, ಉನ್ನತ ಶಿಕ್ಷಣದ ವಿಚಾರದಲ್ಲಿ ಆನ್‌ಲೈನ್ ಜಗತ್ತು ದೊಡ್ಡ ಕೊಡುಗೆಯನ್ನು ನೀಡಬಲ್ಲದು. ಪಿಎಂ–ವಾಣಿ ಯೋಜನೆಯು ಈ ದಿಸೆಯಲ್ಲಿ ದೊಡ್ಡ ಸನ್ನೆಗೋಲಾಗಿ ಬಳಕೆಗೆ ಬರಬಹುದು. ಕೆಲವು ಆರೋಗ್ಯ ಸೇವೆಗಳನ್ನು ಕೂಡ ಆನ್‌ಲೈನ್ ಮೂಲಕವೇ ನೀಡುವ ಸಾಧ್ಯತೆಗಳು ವ್ಯಾಪಕವಾಗುತ್ತಿರುವ ಈ ಸಂದರ್ಭದಲ್ಲಿ, ದೂರದ ಪ್ರದೇಶಗಳ ಜನರಿಗೆ ತಜ್ಞ ವೈದ್ಯರಿಂದ ಅಗತ್ಯ ಸಲಹೆಗಳನ್ನು ಒದಗಿಸುವ ವಿಚಾರದಲ್ಲಿಯೂ ಪಿಎಂ–ವಾಣಿ ನೆರವಿಗೆ ಬರಬಹುದು.
ಈ ಯೋಜನೆಯಡಿ ಸೇವೆಗಳನ್ನು ಆರಂಭಿಸುವ ಪ್ರಕ್ರಿಯೆಯು ಸರಳವಾಗಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಯಾವೆಲ್ಲ ಸೇವೆಗಳನ್ನು ದೇಶದ ಮೂಲೆ ಮೂಲೆಗಳಿಂದಲೇ ಪರಿಣಾಮಕಾರಿಯಾಗಿ ನೀಡುವ ಸಾಧ್ಯತೆಗಳು ಇವೆ ಎಂಬುದನ್ನು ಲಾಕ್‌ಡೌನ್ ಸಂದರ್ಭವು ತೋರಿಸಿಕೊಟ್ಟಿದೆ. ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿಯನ್ನು ಪರಿಣಾಮಕಾರಿಯಾಗಿ ವರ್ಷಗಳ ಹಿಂದೆಯೇ ಜಾರಿಗೆ ತಂದಿದ್ದ ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳು, ಲಾಕ್‌ಡೌನ್ ನಂತರದಲ್ಲಿ ‘ಎಲ್ಲಿಂದ ಬೇಕಿದ್ದರೂ ಕೆಲಸ ಮಾಡಿ’ ಎಂದು ತಮ್ಮ ನೌಕರರಿಗೆ ಹೇಳುತ್ತಿವೆ. ಅಂದರೆ, ಒಳ್ಳೆಯ ಇಂಟರ್ನೆಟ್ ಸಂಪರ್ಕ ಇದ್ದರೆ ನೌಕರ ಯಾವ ಸ್ಥಳದಿಂದ ಬೇಕಿದ್ದರೂ ಕಂಪನಿಯ ಅಗತ್ಯಗಳಿಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯ ಎಂಬುದನ್ನು ಕಂಪನಿಗಳೇ ಕಂಡುಕೊಂಡಿವೆ.
ಪಿಎಂ–ವಾಣಿ ಯೋಜನೆಯು ಎಲ್ಲಿಂದಲಾದರೂ ಕೆಲಸ ಮಾಡುವ ವ್ಯವಸ್ಥೆಯನ್ನು ಬಲಗೊಳಿಸಲು ನೆರವಿಗೆ ಬರಬಹುದು. ಅಕ್ಷರಗಳಲ್ಲಿ ಇರುವ ರೀತಿಯಲ್ಲೇ ಅನುಷ್ಠಾನಕ್ಕೆ ಬಂದರೆ ಹಲವು ಸಾಧ್ಯತೆಗಳನ್ನು ತೆರೆದಿರಿಸುವ ಶಕ್ತಿ ಈ ಯೋಜನೆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.