ADVERTISEMENT

ಗುಂಡಿ ಮುಚ್ಚಿಸಲು ಪ್ರಧಾನಿಯೇ ಬರಬೇಕೆ? ನಾಗರಿಕರಿಗೆ ಸ್ಪಂದಿಸದ ಬಿಬಿಎಂಪಿ ಆಡಳಿತ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 19:31 IST
Last Updated 11 ನವೆಂಬರ್ 2022, 19:31 IST
   

ರಸ್ತೆ ನಿರ್ವಹಣೆಯ ವಿಷಯದಲ್ಲಿ ಕುಂಭಕರ್ಣ ನಿದ್ರೆಗೆ ಜಾರಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಬಡಿದೆಬ್ಬಿಸಲು ಒಂದೋ ಹೈಕೋರ್ಟ್‌ ಆದೇಶದ ‘ಅಸ್ತ್ರ’ ಬೇಕು, ಇಲ್ಲದಿ ದ್ದರೆ ಈ ನಗರಕ್ಕೆ ಯಾರಾದರೂ ಅತಿಗಣ್ಯ ವ್ಯಕ್ತಿಗಳು ಬರಬೇಕು ಎನ್ನುವಂತಾಗಿದೆ. ರಸ್ತೆಗುಂಡಿಗಳ ಕಾರಣದಿಂದ ಹಲವರು ಜೀವ ಕಳೆದುಕೊಳ್ಳುತ್ತಿದ್ದರೂ ಬಿಬಿಎಂಪಿಯ ‘ಹೃದಯ’ವು ಕರಗದಷ್ಟು ಕಲ್ಲಾಗಿದೆ. ಆದ್ದರಿಂದಲೇ ‘ನಾಗರಿಕರ ಸಮಸ್ಯೆಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ’ ಎನ್ನುವಂತೆ ನಗರದ ಆಡಳಿತ ವ್ಯವಸ್ಥೆ ನಿರುಮ್ಮಳವಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ಕಾರಣಕ್ಕಾಗಿ ಬಿಬಿಎಂಪಿ ಹೇಗೆ ಮೈಕೊಡವಿಕೊಂಡು ಎದ್ದಿದೆ ಎಂದರೆ, ಪ್ರಧಾನಿ ಓಡಾಟದ ಎಲ್ಲ ಮಾರ್ಗಗಳಲ್ಲಿ ರಾತ್ರಿ ಕಳೆದು ಬೆಳಗಾಗುವ ಹೊತ್ತಿಗೆ ಗುಂಡಿಗಳೆಲ್ಲ ಕಣ್ಮರೆಯಾಗಿವೆ.

ರಸ್ತೆ ದುರಸ್ತಿಯ ಈ ಕಾಮಗಾರಿಯ ಗುಣಮಟ್ಟದ ಬಣ್ಣವು ಇನ್ನು ಕೆಲವೇ ದಿನಗಳಲ್ಲಿ ಬಯಲಾಗಬಹುದು. ಏಕೆಂದರೆ, ಈ ಹಿಂದೆ ಪ್ರಧಾನಿಯವರು ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನ ಹೊಸ ಕಟ್ಟಡ ಉದ್ಘಾಟಿಸಲು ಬರುವ ಮೊದಲೂ ರಸ್ತೆಯನ್ನು ಹೀಗೇ ರಾತ್ರೋರಾತ್ರಿ ದುರಸ್ತಿ ಮಾಡಲಾಗಿತ್ತು. ಮೋದಿ ಅವರು ಅತ್ತ ದೆಹಲಿ ತಲುಪುವ ಮೊದಲೇ ಇತ್ತ ದುರಸ್ತಿಯಾದ ರಸ್ತೆಯಲ್ಲಿ ಮತ್ತೆ ಗುಂಡಿ ಬಿದ್ದಿತ್ತು. ಬಿಬಿಎಂಪಿಯ ರಸ್ತೆ ನಿರ್ವಹಣೆ ಗುಣಮಟ್ಟ ಎಷ್ಟೊಂದು ಕಳಪೆ ಎಂಬುದಕ್ಕೆ ಕನ್ನಡಿ ಹಿಡಿಯಲು ಈ ಪ್ರಕರಣವೊಂದೇ ಸಾಕು. ಸಾರ್ವಜನಿಕರು, ವಾಹನ ಸವಾರರು ಬಾರಿ ಬಾರಿ ಗೋಗರೆದರೂ ಹೈಕೋರ್ಟ್‌ ತಿವಿದರೂ ಗುಂಡಿ ಮುಚ್ಚದೆ ಧಾರ್ಷ್ಟ್ಯ ಪ್ರದರ್ಶಿಸಿದ್ದ ಬಿಬಿಎಂಪಿ ಅಧಿಕಾರಿಗಳು, ಪ್ರಧಾನಿ ಬರುತ್ತಾರೆ ಎಂದೊಡನೆ ಅಷ್ಟೊಂದು ತರಾತುರಿಯಲ್ಲಿ ರಸ್ತೆ ದುರಸ್ತಿಯನ್ನು ಮಾಡಿಸಿದ್ದೇಕೆ? ಮೊದಲಿನ ಅಸಹಾಯಕತೆ ಏಕಾಏಕಿ ನೀಗಿ, ದುರಸ್ತಿಗೆ ಬೇಕಾದ ‘ಶಕ್ತಿ’ ಧುತ್ತೆಂದು ಸಿಕ್ಕಿದ್ದಾ ದರೂ ಎಲ್ಲಿಂದ?

ಯಾವುದೇ ರಸ್ತೆಯನ್ನು ಬಿಬಿಎಂಪಿಯಿಂದ ದುರಸ್ತಿ ಮಾಡಿಸಿದಾಗ, ಆ ಕಾಮಗಾರಿ ನಡೆಸಿದ ಗುತ್ತಿಗೆದಾರರು ಇಂತಿಷ್ಟು ಅವಧಿಗೆ (ಸಾಮಾನ್ಯವಾಗಿ ಎರಡು ವರ್ಷ) ಆ ರಸ್ತೆಯನ್ನು ನಿರ್ವಹಣೆ ಮಾಡಬೇಕು ಎಂಬ ಷರತ್ತನ್ನೂ ವಿಧಿಸಲಾಗಿರು ತ್ತದೆ. ಗುತ್ತಿಗೆದಾರರಿಂದ ರಸ್ತೆಗಳ ನಿರ್ವಹಣೆ ಸರಿಯಾಗಿ ನಡೆದಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದು ಪಾಲಿಕೆ ಎಂಜಿನಿಯರ್‌ಗಳ ಹೊಣೆ. ರಸ್ತೆಗಳ ಇಂದಿನ ದುಃಸ್ಥಿತಿಗೆ ಇವರಿಬ್ಬರ ನಡುವಿನ ಅಪವಿತ್ರ ಮೈತ್ರಿಯೇ ಕಾರಣ ಎನ್ನದೆ ವಿಧಿಯಿಲ್ಲ. ಇಲ್ಲದಿದ್ದರೆ ಹತ್ತು ವರ್ಷಗಳಲ್ಲಿ ಪಾಲಿಕೆ ಮಾಡಿರುವ ಖರ್ಚನ್ನು ಒಟ್ಟು ಲೆಕ್ಕ ಹಾಕಿದರೆ ಬೆಂಗಳೂರಿನ ಎಲ್ಲ ರಸ್ತೆಗಳ ಮೇಲ್ಮೈ ಫಳ ಫಳ ಹೊಳೆಯಬೇಕಿತ್ತು. ಪ್ರತೀ ರಸ್ತೆಯೂ ಗುಂಡಿಮಯ ಆಗಿರುವುದು ಎದ್ದು ಕಾಣುತ್ತಿರುವಾಗ ಅಧಿಕಾರಿಗಳು ಮಾತ್ರ, ‘ನಗರದಲ್ಲಿ ಇರುವುದು ನೂರಾರು ಗುಂಡಿಗಳಷ್ಟೆ’ ಎಂದು ಪ್ರತಿಪಾದಿಸುವುದು ಹಾಸ್ಯಾಸ್ಪದ.

ADVERTISEMENT

ನಿಜ, ನಗರದ ರಸ್ತೆಗಳೆಂದರೆ ಅವುಗಳೇನು ರಾಷ್ಟ್ರೀಯ ಹೆದ್ದಾರಿಗಳಂತಲ್ಲ. ಒಡಲಾಳದಲ್ಲಿ ವಿದ್ಯುತ್‌, ದೂರವಾಣಿ ಕೇಬಲ್‌ಗಳನ್ನೂ ನೀರು ಸರಬರಾಜು, ಒಳಚರಂಡಿ ಮಾರ್ಗಗಳನ್ನೂ ಅವು ಹೊಂದಿರುತ್ತವೆ. ದುರಸ್ತಿ ಮಾಡಿದ ರಸ್ತೆಯನ್ನು ಸಮನ್ವಯದ ಕೊರತೆಯಿಂದ ಸರ್ಕಾರದ ಒಂದಿಲ್ಲೊಂದು ಇಲಾಖೆಯು ಅಗೆಯುತ್ತಲೇ ಇರುತ್ತದೆ. ಇವೆಲ್ಲದಕ್ಕೆ ಕಳಸ ಇಟ್ಟಂತೆ ಕಳಪೆ ಕಾಮಗಾರಿಯೂ ಗುಂಡಿಗಳು ಪದೇ ಪದೇ ಕಾಣಿಸಿಕೊಳ್ಳಲು ಕಾರಣವಾಗಿದೆ. ಭಾರತೀಯ ರಸ್ತೆ ಕಾಂಗ್ರೆಸ್‌ ಮಾರ್ಗಸೂಚಿಯ ಪ್ರಕಾರ, ಗುಂಡಿ ಮುಚ್ಚುವಾಗ ಅದನ್ನು ಮೊದಲು ಚೌಕಾಕಾರವಾಗಿ ಕೊರೆದುಕೊಳ್ಳಬೇಕು. ಒಳಗಿನ ದೂಳನ್ನು ಪೂರ್ಣ ತೆಗೆಯಬೇಕು. ರಸ್ತೆ ಮೇಲ್ಮೈಗೆ ಸಮತಟ್ಟಾಗಿರುವಂತೆ ಗುಣಮಟ್ಟದ ಟಾರನ್ನೂ ಹಾಕಬೇಕು. ಆದರೆ, ಈ ಯಾವ ನಿಯಮವೂ ಬೆಂಗಳೂರಿನಲ್ಲಿ ಪಾಲನೆಯಾಗುತ್ತಿಲ್ಲ.

ಭಾರತಕ್ಕೆ ಬೆಂಗಳೂರು ಇದ್ದಂತೆ ಚೀನಾಕ್ಕೆ ಸೆಂಜೆನ್‌ ನಗರ. ಆ ನಗರವನ್ನು ಚೀನಾದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂದೇ ಕರೆಯಲಾಗುತ್ತದೆ. ಸುವ್ಯವಸ್ಥಿತ ರಸ್ತೆ, ಸಿಗ್ನಲ್‌ಮುಕ್ತ ಸಂಚಾರ ವ್ಯವಸ್ಥೆ, ಪ್ರತಿಯೊಂದು ದೊಡ್ಡ ವೃತ್ತದಲ್ಲೂ ಮೇಲ್ಸೇತುವೆ, ಮಳೆನೀರು ಹರಿದುಹೋಗಲು ಚರಂಡಿಗಳ ಜಾಲ– ಎಲ್ಲವನ್ನೂ ಅಲ್ಲಿ ಸಮರ್ಪಕವಾಗಿ ರೂಪಿಸಲಾಗಿದೆ. ಸಂಚಾರಿ ದುರಸ್ತಿ ಘಟಕವೊಂದು ಸದಾ ಗಸ್ತು ತಿರುಗುತ್ತಿರುತ್ತದೆ. ಎಲ್ಲಿಯೇ ಸಣ್ಣ ಗುಂಡಿ ಕಾಣಿಸಿಕೊಂಡರೂ ತಕ್ಷಣ ರಿಪೇರಿ ಮಾಡಲಾಗುತ್ತದೆ. ಸಿಂಗಪುರದಲ್ಲೂ ಇಂತಹ ವ್ಯವಸ್ಥೆ ಇದೆ. ಜಾಗತಿಕ ಮಟ್ಟದಲ್ಲಿ ‘ಬ್ರ್ಯಾಂಡ್‌ ಬೆಂಗಳೂರು’ ಕುರಿತು ಪ್ರತಿಪಾದಿಸುವ ಆಡಳಿತಗಾರರು ಇಂತಹ ಅತ್ಯುತ್ತಮ ಮಾದರಿಗಳ ಕಡೆಗೆ ಕಣ್ತೆರೆದು ನೋಡಬೇಕು. ‘ತೇಪೆ ಹಚ್ಚುವುದೇ ನಿಮ್ಮ ಕೆಲಸವಲ್ಲ. ಗುಂಡಿಗಳೇ ಬೀಳದಂತೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸ ಬೇಕು’ ಎಂದು ಹೈಕೋರ್ಟ್‌, ಈ ಹಿಂದೆಯೇ ಬಿಬಿಎಂಪಿ ಅಧಿಕಾರಿಗಳನ್ನು ಕುಟುಕಿತ್ತು. ಈಗಿನ ವಿದ್ಯ ಮಾನ ನೋಡಿದರೆ ಬಿಬಿಎಂಪಿಯು ಯಾವ ಹಳೆಯ ತಪ್ಪಿನಿಂದಲೂ ಬುದ್ಧಿ ಕಲಿತಿಲ್ಲ ಎನ್ನುವುದು ವೇದ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.