ADVERTISEMENT

ಸಂಪಾದಕೀಯ | ಆಹಾರಧಾನ್ಯ ಯೋಜನೆ ವಿಸ್ತರಣೆ: ಬಡತನ ತಗ್ಗಿಸಲು ವಿಫಲವಾದುದರ ಸಂಕೇತ

ಸಂಪಾದಕೀಯ
Published 8 ನವೆಂಬರ್ 2023, 23:30 IST
Last Updated 8 ನವೆಂಬರ್ 2023, 23:30 IST
   

ಬಡವರಿಗೆ ಉಚಿತವಾಗಿ ಆಹಾರಧಾನ್ಯ ಒದಗಿಸುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ) ವಿಸ್ತರಣೆ ಆಗುತ್ತದೆ ಎಂಬುದು ನಿರೀಕ್ಷಿತವಾಗಿತ್ತು. ಆದರೆ ಅದರ ವಿಸ್ತರಣೆಯನ್ನು ಘೋಷಿಸಿದ ಬಗೆಯು ಆಶ್ಚರ್ಯ ಮೂಡಿಸುವಂಥದ್ದು. ಯೋಜನೆಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲಾಗುತ್ತದೆ ಎಂಬ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸಗಢದಲ್ಲಿ
ಇತ್ತೀಚೆಗೆ ನಡೆದ ಚುನಾವಣಾ ರ್‍ಯಾಲಿಯೊಂದರಲ್ಲಿ ಮಾಡಿದರು. ಈ ಯೋಜನೆಯ ಅಡಿಯಲ್ಲಿ ದೇಶದ 81 ಕೋಟಿಗೂ ಹೆಚ್ಚು ಜನರಿಗೆ ತಿಂಗಳಿಗೆ ಉಚಿತವಾಗಿ 5 ಕೆ.ಜಿ.ಯಷ್ಟು ಆಹಾರಧಾನ್ಯವನ್ನು ನೀಡಲಾಗುತ್ತದೆ. ಆಹಾರಧಾನ್ಯವನ್ನು ಉಚಿತವಾಗಿ ಪಡೆಯುವ ಜನರ ಪ್ರಮಾಣವು ದೇಶದ ಗ್ರಾಮೀಣ ಪ್ರದೇಶಗಳ ಜನಸಂಖ್ಯೆಯಲ್ಲಿ ನಾಲ್ಕನೆಯ ಮೂರು ಭಾಗದಷ್ಟು ಇದೆ, ನಗರ ಪ್ರದೇಶಗಳ ಜನಸಂಖ್ಯೆಯಲ್ಲಿ ಅರ್ಧದಷ್ಟು ಇದೆ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು 2013ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಈ ಯೋಜನೆಯನ್ನು ಆರಂಭಿಸಿತ್ತು. ಬಡವರಿಗೆ ಸಬ್ಸಿಡಿ ದರದಲ್ಲಿ ಆಹಾರಧಾನ್ಯ ಒದಗಿಸುವುದು ಯೋಜನೆಯ ಉದ್ದೇಶ. 2020ರಲ್ಲಿ ಮೋದಿ ನೇತೃತ್ವದ ಸರ್ಕಾರವು ಪಿಎಂಜಿಕೆಎವೈ ಯೋಜನೆಯನ್ನು ಜಾರಿಗೆ ತಂದ ನಂತರದಲ್ಲಿ ಮೂಲ ಯೋಜನೆಯು ಬದಲಾವಣೆಗಳನ್ನು ಕಂಡಿದೆ. ಯೋಜನೆಯನ್ನು 2020ರ ಡಿಸೆಂಬರ್‌ನಲ್ಲಿ ಒಂದು ವರ್ಷದ ಅವಧಿಗೆ ವಿಸ್ತರಿಸಲಾಯಿತು. ಏಕೆಂದರೆ, ದೇಶವು ಕೋವಿಡ್‌ ಸಾಂಕ್ರಾಮಿಕದ ಕೆಟ್ಟ ಪರಿಣಾಮಗಳಿಂದ ಆಗಷ್ಟೇ ಹೊರಬರುತ್ತಿತ್ತು. ನಂತರದಲ್ಲಿ, ಈ ಯೋಜನೆಯು ಮತ್ತೆ ಮತ್ತೆ ವಿಸ್ತರಣೆ ಕಾಣುತ್ತಿದೆ.

ಈ ಬಾರಿ ಈ ಯೋಜನೆಯನ್ನು ಐದು ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ. ಯೋಜನೆಯ ವಿಸ್ತರಣೆಯ ಘೋಷಣೆಯನ್ನು ಚುನಾವಣಾ ರ್‍ಯಾಲಿಯೊಂದರಲ್ಲಿ ಮಾಡಿರುವುದು ಸರಿಯಾದ ನಡೆ ಅಲ್ಲ. ಏಕೆಂದರೆ, ಈ ರೀತಿ ಮಾಡುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ. ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ವಿವಿಧ ಭರವಸೆಗಳನ್ನು ನೀಡುವುದು ಸಹಜ. ಆದರೆ ಪ್ರಧಾನಿಯವರು ತಮ್ಮ ಸರ್ಕಾರದ ತೀರ್ಮಾನವೊಂದನ್ನು ರ್‍ಯಾಲಿಯಲ್ಲಿ ಘೋಷಿಸಿರುವುದು ಮತದಾರರ ಮೇಲೆ ಪ್ರಭಾವ ಬೀರಬಲ್ಲದು ಎಂದು ದೂರಲಾಗಿದೆ. ಇದನ್ನು ವಿರೋಧ ಪಕ್ಷಗಳು ಚುನಾವಣಾ ಆಯೋಗದ ಗಮನಕ್ಕೆ ತಂದಿವೆ. ಪ್ರಧಾನಿಯವರು ಈ ಯೋಜನೆಯನ್ನು ತಮ್ಮ ನೇತೃತ್ವದ ಸರ್ಕಾರದ ‘ಉಡುಗೊರೆ’ ಎಂಬಂತೆ ಚಿತ್ರಿಸಿರುವುದಕ್ಕೆ ಕೂಡ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಯುಪಿಎ ಸರ್ಕಾರವು ಆಹಾರ ಭದ್ರತಾ ಕಾಯ್ದೆಯನ್ನು ರೂಪಿಸಿದ್ದು ಸಾಮಾಜಿಕ ಭದ್ರತಾ ಯೋಜನೆಯ ರೂಪದಲ್ಲಿ. ಆಗ ಬಿಜೆಪಿಯು ಈ ಯೋಜನೆಯನ್ನು ವಿರೋಧಿಸಿತ್ತು. ಗುಜರಾತಿನ ಮುಖ್ಯಮಂತ್ರಿ ಆಗಿದ್ದ ಮೋದಿ ಅವರು, ಆಗ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದು, ಯೋಜನೆಯು ‘ಕಾರ್ಯರೂಪಕ್ಕೆ ತರಲು ಅಸಾಧ್ಯವಾದ ಶಾಸನಾತ್ಮಕ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರಕ್ಕೆ ವಹಿಸಿದೆ’ ಎಂದು ಹೇಳಿದ್ದರು. ವರ್ಷಗಳು ಉರುಳಿದ ನಂತರದಲ್ಲಿ ಇದು ಒಂದು ರಾಜಕೀಯ ಯೋಜನೆಯಾಗಿ ಬದಲಾಗಿದೆ. ಮೋದಿ ನೇತೃತ್ವದ ಸರ್ಕಾರವು ಈ ಯೋಜನೆಯನ್ನು ಒಪ್ಪಿಕೊಂಡಿದೆ, ಅದನ್ನು ವಿಸ್ತರಿಸಿದೆ, ಯೋಜನೆ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಇದನ್ನು ಈಗ ಚುನಾವಣಾ ಕಾಲದ ‘ಕೊಡುಗೆ’ ಎಂಬಂತೆ
ಬಳಸಿಕೊಳ್ಳಲಾಗುತ್ತಿದೆ.

ಯೋಜನೆ ವಿಸ್ತರಿಸುತ್ತಿರುವುದನ್ನು, ಹಿಂದಿನ ಒಂಬತ್ತು ವರ್ಷಗಳ ಅವಧಿಯಲ್ಲಿ ಬಡತನದ ಮಟ್ಟ ಕಡಿಮೆಯಾಗಿಲ್ಲ ಎಂಬುದನ್ನು ಪ್ರಧಾನಿ ಮೋದಿ ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ
ಎಂಬಂತೆ ಕಾಣಬೇಕಿದೆ. ದೇಶದ ಆರ್ಥಿಕ ಬೆಳವಣಿಗೆ ಕುರಿತ ಹೇಳಿಕೆಗಳ ಬಗ್ಗೆ ಇದು ಅನುಮಾನಗಳನ್ನು ಮೂಡಿಸುತ್ತದೆ. ಆಹಾರ ಭದ್ರತಾ ಯೋಜನೆಯನ್ನು ಜಾರಿಗೆ ತಂದಾಗ, ವರಮಾನದ ಮಟ್ಟ ಹೆಚ್ಚಿದಂತೆಲ್ಲ ಯೋಜನೆಯ ವ್ಯಾಪ್ತಿಯು ಕಡಿಮೆ ಆಗುತ್ತಾ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಯೋಜನೆಯ ಫಲಾನುಭವಿಗಳ ವರಮಾನವು ಹೆಚ್ಚಾಗಿಲ್ಲ, ಯೋಜನೆಗೆ ತೆಗೆದಿರಿಸುವ ಹಣದ ಮೊತ್ತವು ಹೆಚ್ಚಾಗಿದೆ. ಈಗ ಈ ಯೋಜನೆಗೆ ವರ್ಷಕ್ಕೆ ₹ 2 ಲಕ್ಷ ಕೋಟಿ ಅಗತ್ಯವಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ದೇಶದ ಸ್ಥಾನವು ಕುಸಿದಿರುವುದು ವಾಸ್ತವಕ್ಕೆ ದೂರವಾದ ಅಂಕಿ–ಅಂಶವನ್ನು ಆಧರಿಸಿದೆ ಎಂಬ ಟೀಕೆಗಳನ್ನೂ ಮಾಡುತ್ತಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.