ADVERTISEMENT

ಸಂಪಾದಕೀಯ: ನೆಲದಡಿಯಲ್ಲಿ ವಿದ್ಯುತ್‌ ಪರಿವರ್ತಕ ಸ್ವಾಗತಾರ್ಹ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 19:31 IST
Last Updated 5 ಜೂನ್ 2022, 19:31 IST
Edit 06062022
Edit 06062022   

ಬೆಂಗಳೂರು ನಗರದಲ್ಲಿ ರಸ್ತೆಬದಿಗಳಲ್ಲಿ, ರಾಜಕಾಲುವೆಗಳ ಬಳಿ, ಪಾದಚಾರಿ ಮಾರ್ಗಗಳಲ್ಲಿ ಎಲ್ಲೆಂದ ರಲ್ಲಿ ವಿದ್ಯುತ್‌ ಪರಿವರ್ತಕಗಳನ್ನುಅಳವಡಿಸಲಾಗಿದೆ. ಪ್ರಯಾಣಿಕರ ತಂಗುದಾಣಗಳ ಬಳಿಯೂ ಇವು ಗಳನ್ನು ಸ್ಥಾಪಿಸಲಾಗಿದೆ. ಅನೇಕ ಕಡೆ ಜನರ ಜೀವಕ್ಕೆ ಸಂಚಕಾರ ತರಬಲ್ಲ ಸ್ಥಿತಿಯಲ್ಲಿ ನೆಲಮಟ್ಟದಲ್ಲೇ ವಿದ್ಯುತ್‌ ಪರಿವರ್ತಕಗಳಿವೆ. ಕಂಬಗಳಲ್ಲಿ ಅಳವಡಿಸುವ ಹಳೆ ಮಾದರಿಯ ವಿದ್ಯುತ್‌ ಪರಿವರ್ತಕಗಳನ್ನು ಈಗಲೂ ಕೆಲವೆಡೆ ಕಾಣಬಹುದು. ಅವುಗಳಲ್ಲಿ ನೇತಾಡುವ ವಿದ್ಯುತ್ ತಂತಿಗಳು ಅಪಾಯಕ್ಕೆ ಆಹ್ವಾನ ನೀಡುವಂತಿರುತ್ತವೆ. ವಾಹನ ಸವಾರರು, ಪಾದಚಾರಿಗಳು ಇಂತಹ ವಿದ್ಯುತ್‌ ತಂತಿ ಸ್ಪರ್ಶಿಸುವ ಸಾಧ್ಯತೆಯೂ ಇದೆ.

ವಿದ್ಯುತ್‌ ಪರಿವರ್ತಕಗಳಿಂದ ಪದೇ ಪದೇ ಸಂಭವಿಸಿದ ಅವಘಡಗಳಿಂದ ಜನ ರೋಸಿಹೋಗಿದ್ದಾರೆ. ಜನರಿಗೆ ಅಪಾಯ ಉಂಟುಮಾಡುವ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಅಳ ವಡಿಸಿರುವ ವಿದ್ಯುತ್‌ ಪರಿವರ್ತಕಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ 2021ರ ಏಪ್ರಿಲ್‌ನಲ್ಲಿ ಬೆಸ್ಕಾಂಗೆ ಹೈಕೋರ್ಟ್‌ ಸೂಚನೆಯನ್ನೂ ನೀಡಿತ್ತು. ಆದರೂ ಈ ಕಾರ್ಯ ಆಮೆಗತಿಯಲ್ಲಿ ಸಾಗಿದೆ. ನಗರದ ಹೊರವಲಯದ ಮಂಗನಹಳ್ಳಿ ಎಂಬಲ್ಲಿ ಎರಡು ತಿಂಗಳ ಹಿಂದೆ ವಿದ್ಯುತ್‌ ಪರಿವರ್ತಕ ಸ್ಫೋಟಗೊಂಡು ತಂದೆ ಹಾಗೂ ಮಗಳು ಸಾವಿಗೀಡಾಗಿದ್ದರು. ಈ ಅವಘಡದ ಬಳಿಕವಂತೂ ಅಪಾಯಕಾರಿಸ್ಥಿತಿಯಲ್ಲಿರುವ ವಿದ್ಯುತ್‌ಪರಿವರ್ತಕಗಳನ್ನು ತೆರವುಗೊಳಿಸದ ಬೆಸ್ಕಾಂ ವಿರುದ್ಧ ಸಾರ್ವ ಜನಿಕರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು.

ಜಾಗದ ಕೊರತೆ ಇರುವುದರಿಂದ ಕೆಲವೆಡೆ ಪಾದಚಾರಿ ಮಾರ್ಗಗಳ ಮೇಲೆ ವಿದ್ಯುತ್‌ ಪರಿವರ್ತಕ ಗಳನ್ನು ಅನಿವಾರ್ಯವಾಗಿ ಅಳವಡಿಸಬೇಕಾಗುತ್ತದೆ ಎಂದು ಸಬೂಬು ಹೇಳುತ್ತಿದ್ದ ಬೆಸ್ಕಾಂ ಕೊನೆಗೂ ಎಚ್ಚೆತ್ತುಕೊಂಡಿದೆ. ಅಪಾಯಕಾರಿ ಟ್ರಾನ್ಸ್‌ಫಾರ್ಮರ್‌ಗಳ ಸಮಸ್ಯೆಗೆ ಮುಕ್ತಿ ನೀಡುವ ಹೊಸ ಮಾರ್ಗೋಪಾಯವನ್ನು ಕಂಡುಕೊಂಡಿರುವ ಬೆಸ್ಕಾಂ, ನೆಲದಡಿಯಲ್ಲಿ ವಿದ್ಯುತ್‌ ಪರಿವರ್ತಕ ಅಳ ವಡಿಸುವ ವಿನೂತನ ಯೋಜನೆಯನ್ನು ನಗರದಲ್ಲಿ ಜಾರಿಗೊಳಿಸಲು ಸಿದ್ಧತೆ ನಡೆಸಿದೆ. ವಿದ್ಯುತ್‌ ಪರಿವರ್ತಕಗಳಿಂದಾಗಿ ಎದುರಾಗಿದ್ದ ಆತಂಕಗಳನ್ನು ದೂರ ಮಾಡುವ ಹೊಸ ಭರವಸೆಯನ್ನು ಈ ಯೋಜನೆಯು ಮೂಡಿಸಿದೆ.

ADVERTISEMENT

ನಗರದ ಮಲ್ಲೇಶ್ವರದಲ್ಲಿ ಪಾದಚಾರಿ ಮಾರ್ಗದ ಅಡಿಯಲ್ಲಿ 500 ಕೆವಿಎ ಸಾಮರ್ಥ್ಯದ ವಿದ್ಯುತ್‌ ಪರಿವರ್ತಕವನ್ನು ಪ್ರಾಯೋಗಿಕವಾಗಿ ಅಳವಡಿಸಲಾಗುತ್ತಿದೆ. ಪಾದಚಾರಿ ಮಾರ್ಗದಲ್ಲಿ ನಾಲ್ಕು ಮೀಟರ್‌ ಆಳದಲ್ಲಿ ವಿದ್ಯುತ್‌ ಪರಿವರ್ತಕವನ್ನು ಅಳವಡಿಸುವುದಕ್ಕೆ ₹ 2 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ಹೆಚ್ಚಿನ ಜಾಗದ ಅಗತ್ಯವಿಲ್ಲ, ಕಡಿಮೆ ಜಾಗದಲ್ಲಿ ಸುರಕ್ಷಿತವಾಗಿ ಅಳವಡಿಸಬಹುದು, ವಿದ್ಯುತ್‌ ಅವಘಡ ತಡೆಯಲು ಇದು ಸಹಕಾರಿ, ನಿರಂತರ ವಿದ್ಯುತ್‌ ಪೂರೈಸಲು ಇರುವ ತೊಡಕುಗಳನ್ನೂ ನಿವಾರಿಸಬಹುದು ಎಂದು ಬೆಸ್ಕಾಂ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ಅಗ್ನಿ ದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದಾಗಿಯೂ ಬೆಸ್ಕಾಂ ಹೇಳಿಕೊಂಡಿದೆ.

ನೆಲದಡಿಯ ನೀರಿನ ತೊಟ್ಟಿಯ ಮಾದರಿಯಲ್ಲಿ ನೆಲದಡಿ ದಪ್ಪನೆಯ ಕಾಂಕ್ರೀಟ್‌ ಗೋಡೆಗಳನ್ನು ನಿರ್ಮಿಸಿ, ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ವಿದ್ಯುತ್‌ ಪರಿವರ್ತಕವನ್ನು ಅಳವಡಿಸಲಾಗುತ್ತದೆ. ತಾಪಮಾನ ನಿಯಂತ್ರಣ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಗಾಳಿಯಾಡು ವುದಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕಾಂಕ್ರೀಟ್‌ ಹಲಗೆಗಳಿಂದ ಈ ಸ್ಥಳವನ್ನು ಮುಚ್ಚುವುದರಿಂದ ಜನರಿಗೂ ಯಾವುದೇ ತೊಂದರೆ ಎದುರಾಗದು ಎಂದು ಬೆಸ್ಕಾಂ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಾಂಪ್ರದಾಯಿಕ ವಿಧಾನದಲ್ಲಿ ಅಳವಡಿಸುವ ವಿದ್ಯುತ್‌ ಪರಿವರ್ತಕಗಳಿಗಿಂತ ನೆಲದಡಿ ಅಳವಡಿಸುವಂತಹ ಪರಿವರ್ತಕಗಳು ಹೆಚ್ಚು ಸುರಕ್ಷಿತ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೂ, ಈ ವಿಚಾರದಲ್ಲಿ ಗರಿಷ್ಠ ಪ್ರಮಾಣದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ. ನಗರದಲ್ಲಿ ಭಾರಿ ಮಳೆಯಾದಾಗ ಕೆಲವು ತಗ್ಗು ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಯಾಗುತ್ತದೆ. ನೆಲದಡಿ ವಿದ್ಯುತ್‌ ಪರಿವರ್ತಕ ಅಳವಡಿಸುವುದಕ್ಕೆ ಸ್ಥಳಗಳನ್ನು ಆಯ್ಕೆ ಮಾಡುವಾಗ ಈ ದಿಸೆಯಲ್ಲೂ ಅಧಿಕಾರಿಗಳು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು.

ವಿದ್ಯುತ್‌ ಪರಿವರ್ತಕಗಳನ್ನು ನೆಲದಡಿ ಅಳವಡಿಸುವ ಯೋಜನೆ ಯಶಸ್ವಿಯಾದರೆ, ನಗರದ ಇತರ ಕಡೆಗಳಲ್ಲೂ ಇದೇ ಮಾದರಿಯನ್ನು ಅನುಸರಿಸಬೇಕು. ಬೆಂಗಳೂರಷ್ಟೇ ಅಲ್ಲ, ರಾಜ್ಯದ ಇತರ ಕಡೆಗಳಲ್ಲೂ ಹಂತಹಂತವಾಗಿ ಇದೇ ರೀತಿ ಸುರಕ್ಷಿತವಾದ ವಿಧಾನದಲ್ಲಿ ವಿದ್ಯುತ್‌ ಪರಿವರ್ತಕಗಳನ್ನು ಅಳಡಿಸಲು ಇಂಧನ ಇಲಾಖೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್‌ ಪರಿವರ್ತಕ ಗಳನ್ನು ಅಳವಡಿಸುವ ವಿಚಾರದಲ್ಲಿ ಬೆಸ್ಕಾಂ ಹಾಗೂಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಹಿಂದೆ ಪರಸ್ಪರ ದೂಷಿಸಿಕೊಳ್ಳುತ್ತಿದ್ದವು. ನೆಲದಡಿ ಟ್ರಾನ್ಸ್‌ಫಾರ್ಮರ್‌ ಅಳವಡಿಸುವಾಗ, ಎಲೆಕ್ಟ್ರಿಕಲ್‌ ಕಾಮಗಾರಿಗಳನ್ನು ಬೆಸ್ಕಾಂ ನಿರ್ವಹಿಸಿದರೆ, ಸಿವಿಲ್‌ ಕಾಮಗಾರಿಗಳನ್ನು ಬಿಬಿಎಂಪಿ ಅನುಷ್ಠಾನಗೊಳಿಸುತ್ತಿದೆ.‌ ಇವೆರಡೂ ಹೀಗೆ ಸಮನ್ವಯದಿಂದ ಕೆಲಸ ಮಾಡಲು ಮುಂದಾಗಿರುವುದು ಮತ್ತೊಂದು ಆಶಾದಾಯಕ ಬೆಳವಣಿಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.