ಮಾಲೆಗಾಂವ್ ಸ್ಫೋಟದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಭೋಪಾಲದಿಂದ ಕಣಕ್ಕಿಳಿಸುವ ಮೂಲಕ ತನ್ನದು ಕೋಮು ಧ್ರುವೀಕರಣದ ರಾಜಕಾರಣ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಿದೆ. ಪ್ರಜ್ಞಾ ಸಿಂಗ್ ಅವರನ್ನು ಮಹಾರಾಷ್ಟ್ರ ಸಂಘಟಿತ ಅಪರಾಧಗಳ ಕಾಯ್ದೆ (ಎಂಸಿಒಸಿಎ) ಅಡಿಯಲ್ಲಿ ಬಂಧಿಸಲಾಗಿತ್ತು. ಒಂಬತ್ತು ವರ್ಷಗಳ ಕಾಲ ಜೈಲು ವಾಸವನ್ನೂ ಅವರು ಅನುಭವಿಸಿದ್ದಾರೆ.
ಎಂಸಿಒಸಿಎ ಅನ್ವಯ ಮಾಡಲಾದ ಆರೋಪಗಳಿಂದ ಅವರು ಮುಕ್ತರಾಗಿದ್ದಾರೆ. ಹಾಗೆಂದು ಅವರು ಸಂಪೂರ್ಣ ಆರೋಪಮುಕ್ತರಲ್ಲ. ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅನ್ವಯ ಅವರ ಮೇಲಿರುವ ಆರೋಪಗಳು ಬಹಳ ಗಂಭೀರವಾದವು. ಇವುಗಳಿಂದ ಅವರಿನ್ನೂ ಮುಕ್ತರಾಗಿಲ್ಲ. ಸಾಧ್ವಿ ಪ್ರಜ್ಞಾ ಅವರ ಮೇಲೆ ಬಲವಾದ ಸಾಕ್ಷ್ಯಾಧಾರಗಳಿಲ್ಲ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಹೇಳಿತ್ತು. ಆದರೆ, ಅವರ ಮೇಲೆ ಆರೋಪಪಟ್ಟಿ ಸಲ್ಲಿಸುವುದಕ್ಕೆ ಅಗತ್ಯವಿರುವಷ್ಟು ಆಧಾರಗಳಿವೆ ಎಂದು ಮುಂಬೈಯಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಆರೋಪಿಗಳ ಬಗ್ಗೆ ಮೃದುವಾಗಿರಬೇಕೆಂದು ಪರೋಕ್ಷವಾಗಿ ಎನ್ಐಎ ಒತ್ತಡ ಹೇರುತ್ತಿದೆ ಎಂದು ಈ ಪ್ರಕರಣದ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಿಂಗ್ ಹೇಳಿದ ವಿಚಾರವೂ ಇಲ್ಲಿ ಮುಖ್ಯವಾಗುತ್ತದೆ.
ರಾಷ್ಟ್ರಭಕ್ತಿ, ದೇಶಪ್ರೇಮ ಮತ್ತು ಭಯೋತ್ಪಾದನೆ ತಡೆ ತಮ್ಮ ಪಕ್ಷದ ಆದ್ಯತೆ ಎಂದು ಸದಾ ಹೇಳಿಕೊಳ್ಳುವ ಬಿಜೆಪಿ, ಭಯೋತ್ಪಾದಕ ಕೃತ್ಯಗಳ ಆರೋಪಿಯೊಬ್ಬರನ್ನು ಅಭ್ಯರ್ಥಿಯನ್ನಾಗಿಸಿರುವುದು ಆ ಪಕ್ಷದ ಆಷಾಢಭೂತಿ ಧೋರಣೆಯನ್ನು ತೋರಿಸಿಕೊಡುತ್ತಿದೆ. ಪ್ರಜ್ಞಾ ಸಿಂಗ್ ಅವರ ಮೇಲಿನ ಆರೋಪಗಳು ಸಾಬೀತಾಗಿಲ್ಲ ಎಂಬುದು ನಿಜ. ಹಾಗೆಂದು ಅವರನ್ನು ಯಾವುದೇ ನ್ಯಾಯಾಲಯ ಈತನಕ ಸಂಪೂರ್ಣವಾಗಿ ಆರೋಪ ಮುಕ್ತಗೊಳಿಸಿಲ್ಲ ಎಂಬ ಅಂಶವನ್ನೂ ಮರೆಯುವಂತಿಲ್ಲ. ಕೋಮು ಧ್ರುವೀಕರಣದ ರಾಜಕಾರಣಕ್ಕೆ ಅನುಕೂಲಕರ ಎಂಬ ಏಕೈಕ ಕಾರಣದಿಂದ ಪ್ರಜ್ಞಾ ಸಿಂಗ್ ಅವರನ್ನು ಅಭ್ಯರ್ಥಿಯಾಗಿಸಲಾಗಿದೆ ಎಂಬುದರಲ್ಲಿ ಯಾವ ಸಂಶಯವೂ ಈಗ ಉಳಿದಿಲ್ಲ.
ಉತ್ತರ ಭಾರತ ಅಥವಾ ಹಿಂದಿ ಪ್ರದೇಶದಲ್ಲಿ ಕೊನೆ ಹಂತದವರೆಗೂ ಮತದಾನ ನಡೆಯಲಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನದಂಥ ರಾಜ್ಯಗಳಲ್ಲಿ ಕೋಮು ಧ್ರುವೀಕರಣ ಫಲ ನೀಡಲಿದೆ ಎಂದು ಬಿಜೆಪಿ ಭಾವಿಸಿರುವಂತಿದೆ. ಪ್ರಧಾನಿ ನರೇಂದ್ರ ಮೋದಿಯವರೂ ಸೇರಿದಂತೆ ಬಿಜೆಪಿಯ ಹಲವು ಪ್ರಮುಖ ನಾಯಕರು ಇತ್ತೀಚೆಗೆ ಆಡುತ್ತಿರುವ ಮಾತುಗಳೆಲ್ಲವೂ ಕೋಮು ಧ್ರುವೀಕರಣವನ್ನೇ ದೃಷ್ಟಿಯಲ್ಲಿಟ್ಟುಕೊಂಡಿವೆ. ಇದಕ್ಕೆ ಪುಟವಿಡುವಂತೆ ಸಾಧ್ವಿ ಪ್ರಜ್ಞಾಸಿಂಗ್ ಉಮೇದುವಾರಿಕೆಯ ಘೋಷಣೆಯೂ ಆಗಿದೆ. ಈ ಬೆಳವಣಿಗೆ ಮತ್ತೊಂದು ಅಂಶವನ್ನೂ ಸ್ಪಷ್ಟಪಡಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ತನ್ನ ಕೋಮು ಧ್ರುವೀಕರಣದ ರಾಜಕಾರಣವನ್ನು ಬಹುಮಟ್ಟಿಗೆ ಸುಪ್ತವಾಗಿಟ್ಟುಕೊಂಡಿತ್ತು.
ಅಭಿವೃದ್ಧಿ ಮತ್ತು ಬದಲಾವಣೆಯ ಭರವಸೆಗಳು ಹೆಚ್ಚು ಧ್ವನಿಸುವಂತೆ ನೋಡಿಕೊಂಡಿತ್ತು. ಆದರೆ, ಐದು ವರ್ಷಗಳ ಆಳ್ವಿಕೆಯ ನಂತರ ಚುನಾವಣೆಯನ್ನು ಎದುರಿಸುವ ಹೊತ್ತಿಗೆ ಬಿಜೆಪಿ ಮತ್ತೆ ತನ್ನ ಉಗ್ರ ರಾಷ್ಟ್ರೀಯವಾದ ಮತ್ತು ಕೋಮು ಧ್ರುವೀಕರಣದ ರಾಜಕಾರಣವನ್ನೇ ನೆಚ್ಚಿಕೊಳ್ಳುತ್ತಿದೆ. 1989ರಿಂದ ನಿರಂತರವಾಗಿ ಗೆಲ್ಲುತ್ತಾ ಬಂದಿರುವ ಭೋಪಾಲ್ ಕ್ಷೇತ್ರದಿಂದ ಸಾಧ್ವಿ ಪ್ರಜ್ಞಾ ಅವರನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ ಎಂದರೆ ಅದು ನಿರೀಕ್ಷಿಸುತ್ತಿರುವ ಕೋಮು ಧ್ರುವೀಕರಣದ ವ್ಯಾಪ್ತಿಯನ್ನು ಊಹಿಸಬಹುದು. ಅದರ ಮಟ್ಟಿಗೆ ಇದು ಒಂದು ಕ್ಷೇತ್ರದ ಪ್ರಶ್ನೆಯಲ್ಲ. ಇಡೀ ಹಿಂದಿ ಪ್ರದೇಶದಲ್ಲಿ ಹಿಂದುತ್ವದ ಭಾವನೆಗಳನ್ನು ಕೆರಳಿಸುವ ಉದ್ದೇಶ ಅದಕ್ಕೆ ಇರುವಂತಿದೆ. ಪ್ರಜ್ಞಾ ಸಿಂಗ್ ಅವರ ಸ್ಪರ್ಧೆಗೆ ಕಾನೂನಿನ ಅಡ್ಡಿಗಳೇನೂ ಇಲ್ಲ. ಆದರೆ, ಇಲ್ಲಿ ಅನೇಕ ನೈತಿಕ ಪ್ರಶ್ನೆಗಳಿವೆ. ಇವು, ಬಿಜೆಪಿಗೆ ಸೀಮಿತವಾಗಿ ಉಳಿಯುವ ಪ್ರಶ್ನೆಗಳಲ್ಲ. ಭಯೋತ್ಪಾದಕರನ್ನು ಪಾಕಿಸ್ತಾನದ ರಾಜಕೀಯ ಪಕ್ಷಗಳು ರಕ್ಷಿಸುತ್ತಿವೆ ಎಂದು ಭಾರತ ಹಲವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಆರೋಪಿಸಿದೆ.
ಈಗ ಭಾರತದ ರಾಜಕೀಯ ಪಕ್ಷವೊಂದು ಭಯೋತ್ಪಾದನೆಯ ಆರೋಪಿಯನ್ನು ತನ್ನ ಅಭ್ಯರ್ಥಿಯನ್ನಾಗಿಸಿರುವುದು ನಾಳೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚೆಗೆ ಬಾರದೆ ಇರುತ್ತದೆಯೇ? ತಾನು ಇತರ ರಾಜಕೀಯ ಪಕ್ಷಗಳಿಗಿಂತ ವಿಶಿಷ್ಟ ಎಂದು ಹೇಳಿಕೊಳ್ಳುವ ಬಿಜೆಪಿ ಅಭಿವೃದ್ಧಿಯ ರಾಜಕಾರಣ ಮಾಡುವುದಕ್ಕೆ ಸಿದ್ಧವಿಲ್ಲ ಎಂಬುದನ್ನೂ ಈ ಬೆಳವಣಿಗೆ ಪುಷ್ಟೀಕರಿಸುತ್ತಿದೆ. ಈ ಬಗೆಯ ಕೋಮುವಿಭಜನೆ ಬಿಜೆಪಿಗೆ ಕೆಲಮಟ್ಟಿಗಿನ ರಾಜಕೀಯ ಲಾಭ ತಂದುಕೊಡಬಹುದು. ಆದರೆ ದೂರಗಾಮಿಯಾಗಿ ಇದು ಸಾಂವಿಧಾನಿಕ ಮೌಲ್ಯಗಳಿಗೇ ದೊಡ್ಡ ಕುತ್ತಾಗಿ ಪರಿಣಮಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.